ಕರ್ನಾಟಕ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು, 2020ರ ನಿಯಮ 6ರ ನಂತರ ಈ ಮುಂದಿನ ನಿಯಮವನ್ನು ಸೇರಿಸತಕ್ಕದ್ದು, ಎಂದರೆ:–
“6ಎ. ವಿಶೇಷ ಕೌನ್ಸಿಲಿಂಗ್: ಸದರಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದಾಗ್ಯೂ ದಿನಾಂಕ 29/04/2021ರ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಅಧ್ಯಾದೇಶ 2021 (ಇಲ್ಲಿ ಇನ್ನು ಮುಂದೆ 2021 ಅಧ್ಯಾದೇಶ 4 ಎಂದು ಕರೆಯಲಾಗುತ್ತದೆ) ನಂತರದ ದಿನಾಂಕದಲ್ಲಿ ನಡೆಯುವ ಪ್ರಥಮ ವರ್ಗಾವಣೆಗಳಿಗೆ ಮೊದಲು ದಿನಾಂಕ:29/04/2021ರ ಅಧ್ಯಾದೇಶದಲ್ಲಿನ ಸೂಚನೆಗನುಸಾರ ವಿಶೇಷ ಕೌನ್ಸಿಲಿಂಗ್ ಅನ್ನು ಹಮ್ಮಿಕೊಂಡು 2019–20ನೇ ಸಾಲಿನಲ್ಲಿ ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆ ಅಥವಾ ಸಮರ್ಪಕ ಮರುಹಂಚಿಕೆಯ ಮೇರೆಗೆ ವರ್ಗಾವಣೆಗಳಲ್ಲಿ ಸ್ಥಳ ಆಯ್ಕೆ ಮಾಡಿಕೊಂಡು ಕರ್ತವ್ಯಕ್ಕೆ ಹಾಜರಾದ ಶಿಕ್ಷಕರಿಗೆ ವರ್ಗಾವಣೆ ಪೂರ್ವದಲ್ಲಿ ಎಲ್ಲಿ ಕೆಲಸ ನಿರ್ವಹಿಸುತ್ತಿದ್ದರೋ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಬಂಧಪಟ್ಟಂತೆ ಆ ಸಂಬಂಧಪಟ್ಟ ತಾಲ್ಲೂಕು ಅಥವಾ ಪ್ರೌಢಶಾಲಾ ಶಿಕ್ಷಕರಿಗೆ ಸಂಬಂಧಪಟ್ಟಂತೆ ಆ ಸಂಬಂಧಪಟ್ಟ ಜಿಲ್ಲೆಯ ಒಳಗೆ ಸ್ಥಳನಿಯುಕ್ತಿಯ ಪ್ರಯೋಜನವನ್ನು ನೀಡುವುದಕ್ಕಾಗಿ ಎಲ್ಲಾ ಇತರೆ ರೀತಿಯ ವರ್ಗಾವಣೆಗಳಿಗೆ ಪೂರ್ವದಲ್ಲಿ ಖಾಲಿ ಹುದ್ದೆಗಳ ಲಭ್ಯತೆಗೆ ಒಳಪಟ್ಟು ಅವರು ಕಾರ್ಯನಿರ್ವಹಿಸುತ್ತಿದ್ದ ತಾಲ್ಲೂಕು ಅಥವಾ ಜಿಲ್ಲೆಯ ಒಳಗೆ ಒಂದು ಸಲದ ಕ್ರಮವಾಗಿ ಕೆಳಗಿನ ಮಾದರಿಯಲ್ಲಿ ವರ್ಗಾವಣೆ ಸ್ಥಳವನ್ನು ಆಯ್ಕೆ ಮಾಡಲು ಅವಕಾಶವನ್ನು ಒದಗಿಸತಕ್ಕದ್ದು.
-
2019–20ರಲ್ಲಿ ಅಂತಹ ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆ ಅಥವಾ ಸಮರ್ಪಕ ಮರುಹಂಚಿಕೆಯ ಮೇರೆಗೆ ವರ್ಗಾವಣೆಗಳ ಕೌನ್ಸಿಲಿಂಗ್ ಅನ್ನು ಹಮ್ಮಿಕೊಂಡ ಪ್ರಾಧಿಕಾರಿಯವರ ಹಂತದಲ್ಲಿಯೇ ಪ್ರಸ್ತುತದ ಕೌನ್ಸಿಲಿಂಗ್ ಅನ್ನು ಹಮ್ಮಿಕೊಳ್ಳತಕ್ಕದ್ದು.
-
ಈ ಬಗ್ಗೆ ಕೌನ್ಸಿಲಿಂಗ್ ವೇಳಾ ಪಟ್ಟಿಯನ್ನು ಹಾಗೂ ಮಾರ್ಗಸೂಚಿ ಅಂಶಗಳನ್ನು ವರ್ಗಾವಣೆ ನಿಯಂತ್ರಣಾಧಿಕಾರಿಯವರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಅನುಮೋದನೆಯೊಂದಿಗೆ ಹೊರಡಿಸತಕ್ಕದ್ದು.
-
ವೇಳಾ ಪಟ್ಟಿಗನುಸಾರ ಮೊದಲು ವಿಶೇಷ ಕೌನ್ಸಿಲಿಂಗ್ಗಾಗಿ ಲಭ್ಯವಿರುವ ಖಾಲಿ ಹುದ್ದೆಗಳ ಪಟ್ಟಿಯನ್ನು ಪ್ರಕಟಿಸತಕ್ಕದ್ದು.
-
ನಂತರದಲ್ಲಿ 2019–20ನೇ ಸಾಲಿನಲ್ಲಿನ ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆ ಅಥವಾ ಸಮರ್ಪಕ ಮರುಹಂಚಿಕೆಯ ಮೇರೆಗೆ ವರ್ಗಾವಣೆಗಳಲ್ಲಿನ 2021ರ ಅಧ್ಯಾದೇಶ ಸಂಖ್ಯೆ 4ರಲ್ಲಿ ಹೇಳಿದಂತೆ ಬಾಧಿತ ಶಿಕ್ಷಕರಿಂದ ಆನ್–ಲೈನ್ನಲ್ಲಿ ವಿಶೇಷ ಕೌನ್ಸಿಲಿಂಗ್ ಅವಕಾಶವನ್ನು ಪಡೆಯಲನುವಾಗುವಂತೆ ಅರ್ಜಿಯನ್ನು ಆಹ್ವಾನಿಸತಕ್ಕದ್ದು.
-
ಸದರಿ ಬಾಧಿತ ಶಿಕ್ಷಕರು ಆನ್–ಲೈನ್ ನಲ್ಲಿ ವಿಶೇಷ ಕೌನ್ಸಿಲಿಂಗ್ಗೆ ಸಂಬಂಧಪಟ್ಟಂತೆ ಕೋರಿಕೆ ಅರ್ಜಿಯನ್ನು ಸಲ್ಲಿಸತಕ್ಕದ್ದು.
-
ಹಾಗೆ, ಆನ್–ಲೈನ್ ನಲ್ಲಿ ಸ್ವೀಕೃತವಾಗಿರುವ/ಸ್ವೀಕೃತವಾಗುವ ಎಲ್ಲಾ ಅರ್ಜಿಗಳನ್ನು 2019–20ರಲ್ಲಿ ಕೌನ್ಸಿಲಿಂಗ್ ಕ್ರಮಾಂಕವನ್ನು ನಿರ್ಧರಿಸುವ ಸಂಬಂಧ ಜಾರಿಯಲ್ಲಿದ್ದ ನಿಯಮಗಳಂತೆ ಕೌನ್ಸಿಲಿಂಗ್ ಜ್ಯೇಷ್ಠತಾ ಕ್ರಮಾಂಕವನ್ನು ಪ್ರಕಟಿಸಿ ಆಕ್ಷೇಪಣೆಗಳನ್ನು ಕರೆದು ಅಂತಿಮಗೊಳಿಸತಕ್ಕದ್ದು ಹಾಗೂ ಅದೇ ಜ್ಯೇಷ್ಠತಾ ಕ್ರಮಾಂಕದಲ್ಲಿಯೇ ಅಂತಹ ಎಲ್ಲಾ ಬಾಧಿತ ಶಿಕ್ಷಕರಿಗೆ ಕೌನ್ಸಿಲಿಂಗ್ ಅನ್ನು ಮಾಡತಕ್ಕದ್ದು.
-
ಹೆಚ್ಚುವರಿಗೊಂಡಿರುವ ಪ್ರಕರಣಗಳಲ್ಲಿ ವಲಯ ನಿರ್ಬಂಧ ಇರುವುದಿಲ್ಲ. ಆದರೆ, ಕಡ್ಡಾಯ ವರ್ಗಾವಣೆಗೊಂಡ ಶಿಕ್ಷಕರು ಬಿ ಅಥವಾ ಸಿ ವಲಯದ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರತಕ್ಕದ್ದು. ಆದರೆ, ಬಿ ಮತ್ತು ಸಿ ವಲಯಗಳಲ್ಲಿ ಯಾವುದೇ ಖಾಲಿ ಹುದ್ದೆ ಲಭ್ಯವಿಲ್ಲದೇ ಇದ್ದಲ್ಲಿ ಎ ವಲಯದ ಲಭ್ಯ ಶಾಲೆಗಳನ್ನು ಆಯ್ಕೆಗೆ ನೀಡಬಹುದಾಗಿರುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಹೆಚ್.ಎಸ್. ಶಿವಕುಮಾರ್)
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಾಥಮಿಕ)
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297
ಮುದ್ರಕರು ಹಾಗೂ ಪ್ರಕಾಶಕರು:– ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು