(1) ಶಾಶ್ವತ ಶಾಸನಬದ್ಧ ದತ್ತಿ ನಿಧಿಯನ್ನು, ನಿರ್ದೇಶಕರು, ಕಾಲೇಜು ಶಿಕ್ಷಣ, ಕರ್ನಾಟಕ ಇವರ ಹೆಸರಿನಲ್ಲಿ ಇಡತಕ್ಕದ್ದು, ಅವರು ಶಾಶ್ವತ ಶಾಸನಬದ್ಧ ದತ್ತಿ ನಿಧಿಗೆ ಸಂಬಂಧಿಸಿದ ಎಲ್ಲ ದಸ್ತಾವೇಜುಗಳು ಮತ್ತು ಲಿಖಿತ ಪತ್ರಗಳಿಗೆ ಮತ್ತು ಅಧಿನಿಯಮದ ಉಪಬಂಧಗಳಿಗನುಸಾರವಾಗಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಅದರ ಹೂಡಿಕೆಗಳಿಗೆ ಅಭಿರಕ್ಷಕರಾಗಿರತಕ್ಕದ್ದು.
(2) ವಿಶ್ವವಿದ್ಯಾಲಯ ಅಥವಾ ಪ್ರಾಯೋಜಕ ಸಂಸ್ಥೆ ಯಾವುದೇ ಅಧಿನಿಯಮ, ಪರಿನಿಯಮಗಳು, ಅಧ್ಯಾದೇಶ, ವಿನಿಯಮಗಳು ಅಥವಾ ಅದರ ಅಡಿಯಲ್ಲಿ ರಚಿಸಲಾದ ನಿಯಮಗಳ ಯಾವುದೇ ಉಪಬಂಧಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ, ದತ್ತಿ ನಿಧಿಯ ಒಂದು ಭಾಗ ಅಥವಾ ಸಂಪೂರ್ಣ ನಿಧಿಯನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಳ್ಳಬಹುದು. ಆದರೆ ಹಾಗೆ ಮುಟ್ಟುಗೋಲು ಹಾಕಿಕೊಳ್ಳುವ ಮೊದಲು, ಸರ್ಕಾರವು, ಸಂದರ್ಭಾನುಸಾರ ಪ್ರಾಯೋಜಕ ಸಂಸ್ಥೆ ಅಥವಾ ವಿಶ್ವವಿದ್ಯಾಲಯಕ್ಕೆ ಕಾರಣ ಕೇಳುವ ನೋಟೀಸನ್ನು ಜಾರಿ ಮಾಡತಕ್ಕದ್ದು;
(3) ಸರ್ಕಾರವು, ಇತರೆ ವಿಷಯಗಳಲ್ಲಿ ಪ್ರಾಯೋಜಕ ಸಂಸ್ಥೆ ಅಥವಾ ವಿಶ್ವವಿದ್ಯಾಲಯವು ನೀಡಿದ ಉತ್ತರವನ್ನು ಕ್ರಮಬದ್ಧವಾಗಿ ಪರಿಗಣಿಸತಕ್ಕದ್ದು.
(4) ಪ್ರಾಯೋಜಕ ಸಂಸ್ಥೆ ಅಥವಾ ವಿಶ್ವವಿದ್ಯಾಲಯವು (2ನೇ ಉಪ-ನಿಯಮದ ಮೇರೆಗೆ ನೀಡಲಾದ ಕಾರಣ ಕೇಳುವ ನೋಟೀಸಿಗೆ, ನೋಟೀಸನ್ನು ನೀಡಿದ 45 ದಿನಗಳೊಳಗಾಗಿ ಉತ್ತರವನ್ನು ನೀಡದಿದ್ದ ಸಂದರ್ಭದಲ್ಲಿ, ಸರ್ಕಾರವು, ಅಂಥ ಉತ್ತರಕ್ಕಾಗಿ ಕಾಯದೇ ಪ್ರಕರಣವನ್ನು ತೀರ್ಮಾನಿಸಬಹುದು.
(6). ಮುಟ್ಟುಗೋಲು ಹಾಕಿಕೊಂಡ ಶಾಶ್ವತ ದತ್ತಿ ನಿಧಿಯ ಮೊತ್ತವನ್ನು, ಸರ್ಕಾರದಲ್ಲಿ ನಿಹಿತಗೊಳಿಸತಕ್ಕದ್ದು ಮತ್ತು ಅದನ್ನು, ಮುಟ್ಟುಗೋಲು ಹಾಕಿಕೊಳ್ಳುವ ಸಮಯದಲ್ಲಿ ಸರ್ಕಾರವು ನಿರ್ಧಿಷ್ಟಪಡಿಸಬಹುದಾದ ರೀತಿಯಲ್ಲಿ ಬಳಸಿಕೊಳ್ಳತಕ್ಕದ್ದು.
(6) 50ನೇ ಪ್ರಕರಣದ ಮೇರೆಗೆ ಸಾಮಾನ್ಯ ನಿಧಿ ಮತ್ತು 51ನೇ ಪ್ರಕರಣದ ಮೇರೆಗೆ ಅಭಿವೃದ್ಧಿ ನಿಧಿಯೆಂದು ಕರೆಯಲಾಗುವ ಎಲ್ಲ ಇತರೆ ನಿಧಿಗಳನ್ನು ದ್ವಿಗುಣ ನಮೂದು ಲೆಕ್ಕವನ್ನು ಇಡುವ ವಿಧಾನದಲ್ಲಿ (Double entry book keeping method) ನಿರ್ವಹಿಸತಕ್ಕದ್ದು ಮತ್ತು ರಾಷ್ಟ್ರೀಕೃತ ಅಥವಾ ಅನುಸೂಚಿತ ಬ್ಯಾಂಕ್ನಲ್ಲಿ ಇಡತಕ್ಕದ್ದು.
(7) ಶಾಶ್ವತ ಶಾಸನಬದ್ಧ ನಿಧಿ, ಸಾಮಾನ್ಯ ನಿಧಿ ಮತ್ತು ಅಭಿವೃದ್ಧಿ ನಿಧಿಯನ್ನು, ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧನೆ ಮಾಡಿಸತಕ್ಕದ್ದು ಮತ್ತು ಲೆಕ್ಕಪರಿಶೋಧನಾ ವರದಿಯೊಂಧಿಗೆ ಲೆಕ್ಕಪತ್ರಗಳ ವಾರ್ಷಿಕ ವಿವರಣೆಪಟ್ಟಿ ಮತ್ತು ಅದರ ಅನುಸರಣೆಯನ್ನು ವಾರ್ಷಿಕವಾಗಿ ಕಾಲೇಜು ಶಿಕ್ಷಣ ನಿರ್ದೇಶಕರ ಮುಖಾಂತರ ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.