ಸಮ್ಮತಾಭಿಪ್ರಾಯದ ವ್ಯವಸ್ಥೆ ಅಥವಾ ಒಪ್ಪಂದವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕಾಗಿ, ಖಾಸಗಿ ಅನುದಾನಿತವಲ್ಲದ ವೃತ್ತಿ ಶಿಕ್ಷಣ ಸಂಸ್ಥೆಯಲ್ಲಿ ಸೀಟುಗಳನ್ನು ಈ ಮುಂದಿನ ರೀತಿಯಲ್ಲಿ ಭರ್ತಿ ಮಾಡತಕ್ಕದ್ದು, ಎಂದರೆ:-
(I) ಪ್ರವೇಶಾವಕಾಶವಿರುವ ಒಟ್ಟು ಸೀಟುಗಳ ಪೈಕಿ,-
(ಎ) ಅಲ್ಪಸಂಖ್ಯಾತರದಲ್ಲದ ಸಂಸ್ಥೆಗಳು ನಡೆಸುತ್ತಿರುವ ಇಂಜಿನಿಯರಿಂಗ್ ಕೋರ್ಸ್ಗಳಲ್ಲಿ ಒಟ್ಟು ಸೀಟುಗಳ ಶೇಕಡ ಐವತ್ತೈದರಷ್ಟಕ್ಕೆ ಕಡಿಮೆಯಲ್ಲದಷ್ಟನ್ನು; ಮತ್ತು
(ಬಿ) ಅಲ್ಪಸಂಖ್ಯಾತರ ಸಂಸ್ಥೆಗಳು ನಡೆಸುತ್ತಿರುವ ಇಂಜಿನಿಯರಿಂಗ್ ಕೋರ್ಸ್ಗಳಲ್ಲಿ ಒಟ್ಟು ಸೀಟುಗಳ ಶೇಕಡಾ ನಲವತ್ತೈದರಷ್ಟಕ್ಕೆ ಕಡಿಮೆಯಲ್ಲದಷ್ಟನ್ನು,
(ಸಿ) ಅಲ್ಪಸಂಖ್ಯಾತರದಲ್ಲದ ಸಂಸ್ಥೆಗಳು ನಡೆಸುತ್ತಿರುವ ವೈದ್ಯಕೀಯ ಕೋರ್ಸ್ಗಳಲ್ಲಿ ಒಟ್ಟು ಸೀಟುಗಳ ಶೇಕಡಾ ನಲವತ್ತರಷ್ಟಕ್ಕೆ ಕಡಿಮೆಯಲ್ಲದಷ್ಟನ್ನು; ಮತ್ತು
(ಡಿ) ಅಲ್ಪ ಸಂಖ್ಯಾತರ ಸಂಸ್ಥೆಗಳು ನಡೆಸುತ್ತಿರುವ ವೈದ್ಯಕೀಯ ಕೋರ್ಸ್ಗಳಲ್ಲಿ ಒಟ್ಟು ಸೀಟುಗಳ ಶೇಕಡಾ ಇಪ್ಪತ್ತೈದರಷ್ಟಕ್ಕೆ ಕಡಿಮೆಯಲ್ಲದಷ್ಟನ್ನು,
(ಇ) ಅಲ್ಪಸಂಖ್ಯಾತರದಲ್ಲದ ಸಂಸ್ಥೆಗಳು ನಡೆಸುತ್ತಿರುವ ದಂತವೈದ್ಯಕೀಯ ಕೋರ್ಸುಗಳಲ್ಲಿ ಒಟ್ಟು ಸೀಟುಗಳ ಶೇಕಡಾ ಮೂವತ್ತೈದರಷ್ಟಕ್ಕೆ ಕಡಿಮೆಯಲ್ಲದಷ್ಟನ್ನು;
(ಎಫ್) ಅಲ್ಪ ಸಂಖ್ಯಾತರ ಸಂಸ್ಥೆಗಳು ನಡೆಸುತ್ತಿರುವ ದಂತ ವೈದ್ಯಕೀಯ ಕೋರ್ಸುಗಳಲ್ಲಿ ಒಟ್ಟು ಸೀಟುಗಳ ಶೇಕಡಾ ಇಪ್ಪತ್ತೈದರಷ್ಟಕ್ಕೆ ಕಡಿಮೆಯಲ್ಲದಷ್ಟನ್ನು;
(ಜಿ) ಅಲ್ಪ ಸಂಖ್ಯಾತರದಲ್ಲದ ಅಥವಾ ಅಲ್ಪಸಂಖ್ಯಾತರ ಸಂಸ್ಥೆಗಳು ನಡೆಸುತ್ತಿರುವ ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ ಕೋರ್ಸುಗಳಲ್ಲಿ ಒಟ್ಟು ಸೀಟುಗಳ ಶೇಕಡಾ ಇಪ್ಪತ್ತರಷ್ಟಕ್ಕೆ ಕಡಿಮೆಯಲ್ಲದಷ್ಟನ್ನು, - ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಸೀಟುಗಳಿಗೆ ಪ್ರವೇಶಕ್ಕಾಗಿ ವಿದ್ಯಾರ್ಥಿಗಳ ಆಯ್ಕೆ ನಿಯಮಗಳು, 2006ಕ್ಕೆ ಅನುಸಾರವಾಗಿ ಸರ್ಕಾರಿ ಸಾಮಾನ್ಯ ಪ್ರವೇಶ ಪರೀಕ್ಷೆ ಘಟಕದ ಮೂಲಕ ತುಂಬತಕ್ಕದ್ದು.
(II) ಸಮ್ಮತಾಭಿಪ್ರಾಯದ ಒಪ್ಪಂದದಲ್ಲಿ ಅನ್ಯಥಾ ನಿರ್ದಿಷ್ಟಪಡಿಸಿದಂತೆ ಹೊರತಾಗಿ, ಉಳಿದ ಸೀಟುಗಳನ್ನು ನಿಯಮಿಸಬಹುದಾದಂಥ ನಿಯಮಗಳಿಗೆ ಒಳಪಟ್ಟು ನಿರ್ಧರಿಸಲಾದ ಅರ್ಹತೆಯ ಆಧಾರದ ಮೇಲೆ ನ್ಯಾಯಯುತ ಹಾಗೂ ಪಾರದರ್ಶಕ ರೀತಿಯಲ್ಲಿ ಸಂದರ್ಭಾನುಸಾರ ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಸಂಘ ಅಥವಾ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಸಂಸ್ಥೆಗಳ ಸಂಘ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ ಹಾಗೂ ತರುವಾಯ ನಡೆಸಲಾಗುವ ಕೇಂದ್ರೀಯ ಕೌನ್ಸಿಲಿಂಗ್ ಮೂಲಕ ತುಂಬತಕ್ಕದ್ದು.
(2) ರಾಜ್ಯಸರ್ಕಾರದ ಮೀಸಲಾತಿ ನೀತಿ ಮತ್ತು ಸಮ್ಮತಾಭಿಪ್ರಾಯದ ಒಪ್ಪಂದಕ್ಕೆ ಒಳಪಟ್ಟು, ರಾಜ್ಯಸರ್ಕಾರವು ವಿವಿಧ ಪ್ರವರ್ಗದ ಸಂಸ್ಥೆಗಳ ಸಂಬಂಧದಲ್ಲಿ ವಿವಿಧ ಪ್ರವರ್ಗದ ವಿದ್ಯಾರ್ಥಿಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷಾ ಘಟಕದವರು ಹಾಗೂ ಆಡಳಿತ ಮಂಡಳಿಯವರು ತುಂಬಬೇಕಾದ ಸೀಟುಗಳ ಹಂಚಿಕೆ ಪ್ರಮಾಣವನ್ನು ಅಧಿಸೂಚನೆಯ ಮೂಲಕ ಪ್ರಕಟಿಸಬಹುದು.