(1) ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ಮುಂದೆ ಯಾವುದೇ ಬಾಧಿತ ವ್ಯಕ್ತಿಯು ನಮೂನೆಯಲ್ಲಿ ದೂರನ್ನು ಅಥವಾ ಆಪಾದನೆಯನ್ನು ದಾಖಲು ಮಾಡಿ ಅಪೀಡವಿಟ್ನ ಸಮರ್ಥನೆಯೊಂದಿಗೆ ಸದರಿ ದೂರಿಗೆ ಅಥವಾ ಅಪಾದನೆಗೆ ಪೂರಕವಾಗಿರುವ ಎಲ್ಲಾ ದಾಖಲಾತಿಗಳನ್ನು ಛಾಯಾ ಪ್ರತಿಯಲ್ಲಿ ಸ್ವಯಂ ಧೃಡೀಕರಣಗೊಳಿಸಿ ಸಲ್ಲಿಸತಕ್ಕದ್ದು.
(2) ದೂರನ್ನು ಸ್ವೀಕರಿಸಿದ ತಕ್ಷಣ ಕುಂದು ಕೊರತೆ ನಿವಾರಣಾ ಪ್ರಾಧಿಕಾರವು ದೂರು ದಾಖಲಿಸಿದ ವ್ಯಕ್ತಿಗೆ ದೂರು ದಾಖಲಿಸಿದ ದಿನಾಂಕ ಮತ್ತು ಸ್ವೀಕೃತಿಯಾದ ದಾಖಲೆಗಳ ಬಗೆಗೆ ಸ್ವೀಕೃತಿಯನ್ನು ತಕ್ಷಣವೇ ನೀಡತಕ್ಕದ್ದು.
(3) ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯು ದೂರು ಸ್ವೀಕರಿಸಿದ ತಕ್ಷಣ ಯಾವ ಅಧಿಕಾರಿಯ ಅಥವಾ ವ್ಯಕ್ತಿಯ ವಿರುದ್ಧ ದೂರನ್ನು ದಾಖಲಿಸಲಾಗಿದೆಯೋ ಅಂಥ ಅಧಿಕಾರಿಗೆ ಅಥವಾ ವ್ಯಕ್ತಿಗೆ ಸದರಿ ದೂರಿನ ಪ್ರತಿಯನ್ನು ಕಳುಹಿಸಿ, ಆ ದೂರಿನ ಬಗ್ಗೆ ತನ್ನ ವಿವರಣೆಯನ್ನು ನೀಡಲು ಅಥವಾ ಅಹವಾಲನ್ನು ಹೇಳಿಕೊಳ್ಳಲು ಅವಕಾಶವನ್ನು ನೀಡಿದ ತರುವಾಯ ತನಿಖೆಯನ್ನು ನಡೆಸಬಹುದು ಮತ್ತು ತಾನು ಯುಕ್ತವೆಂದು ಭಾವಿಸಬಹುದಾದಂತೆ ಸಂದರ್ಭಾನುಸಾರ ಕ್ರಮ ತೆಗೆದುಕೊಳ್ಳಬಹುದು. ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯಿಂದ ಸ್ವೀಕೃತವಾದ ದೂರು ಒಂದು ವೇಳೆ ಅಂಥ ಅಧಿಕಾರಿಗೆ ಅಥವಾ ವ್ಯಕ್ತಿಗೆ ಸಂಬಂಧಿಸಿಲ್ಲದಿದ್ದರೆ ಅದನ್ನು ಸಂಬಂಧಿಸಿದ ಅಧಿಕಾರಿಗೆ ಅಥವಾ ವ್ಯಕ್ತಿಗೆ ಕಳುಹಿಸಿ, ಅದನ್ನು ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿ, ಅದರ ಪ್ರತಿಯನ್ನು ಕುಂದು ಕೊರತೆ ನಿವಾರಣಾ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು. ಆ ರೀತಿಯ ದೂರನ್ನು ಸ್ವೀಕರಿಸಿದ ಅಧಿಕಾರಿಯು ಸೂಕ್ತ ಕ್ರಮ ತೆಗೆದುಕೊಂಡು ಕುಂದು ಕೊರತೆ ನಿವಾರಣಾ ಪ್ರಾಧಿಕಾರಕ್ಕೆ ವಿವರಣೆ ಅಥವಾ ಅಹವಾಲನ್ನು ನೀಡತಕ್ಕದ್ದು.
(4) ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯು ಸಂಬಂಧಿಸಿದ ಅಧಿಕಾರಿ ಅಥವಾ ವ್ಯಕ್ತಿಯ ಅಸಮರ್ಥತೆ, ನಿರ್ಲಕ್ಷ್ಯ ಅಥವಾ ದುಷ್ಕೃತ್ಯದ ಪರಿಣಾಮವಾಗಿ ದೂರನ್ನು ದಾಖಲಿಸಲಾಗಿದೆ ಎಂಬುದನ್ನು ಅಂಥ ಅಧಿಕಾರಿ ಅಥವಾ ವ್ಯಕ್ತಿಗೆ ಸಮರ್ಥನೆಗೆ ಅವಕಾಶ ನೀಡಿದ ತರುವಾಯ ಮನದಟ್ಟು ಮಾಡಿಕೊಂಡು ಸೂಕ್ತ ಆದೇಶದ ಮೂಲಕ ಸದರಿ ಅಧಿಕಾರಿಯ ಮೇಲೆ ಶಿಸ್ತು ಕ್ರಮವನ್ನು ನಡತೆ ನಿಯಮಗಳನ್ವಯ ಅಥವಾ ಇಲಾಖಾ ಪ್ರಕ್ರಿಯೆಯ ಅನುಸಾರ ನಡೆಸಲು ಸೂಕ್ತ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು. ಒಂದು ವೇಳೆ ಸರಕುಗಳ ಮತ್ತು ಸೇವೆಗಳನ್ನು ನೀಡಲು ಜವಾಬ್ದಾರನಾದ ವ್ಯಕ್ತಿಯು ಬೇಕಾಗಿಯೇ ಸರಕು ಅಥವಾ ಸೇವೆಯನ್ನು ಒದಗಿಸಲು ನಿರ್ಲಕ್ಷಿಸಿರುವ ಅಥವಾ ಭ್ರಷ್ಠಾಚಾರ ತಡೆಗಟ್ಟುವ ಅಧಿನಿಯಮ, 1988 ರ ಅಡಿಯಲ್ಲಿ ಪ್ರಕರಣದ ಮೇಲ್ನೋಟದಲ್ಲೇ ಆಧಾರಗಳು ಇದ್ದಾಗ ಆ ಮಟ್ಟಿಗೆ ವಿಧಿಸಬೇಕಾದ ದಂಡದ ಶಿಫಾರಸ್ಸಿನೊಂದಿಗೆ ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸುವುದು. ಈ ವರದಿಯ ಆಧಾರದ ಮೇಲೆ ಸಕ್ಷಮ ಪ್ರಾಧಿಕಾರವು ಸೂಕ್ತ ಕ್ರಮ ಕೈಗೊಳ್ಳತಕ್ಕದ್ದು.
(5) ಕುಂದು ಕೊರತೆ ನಿವಾರಣಾ ಪ್ರಾಧಿಕಾರವು ದೂರು ದಾಖಲು ಮಾಡಿದ ಬಾಧಿತ ನಾಗರೀಕರಿಗೆ ತನ್ನ ನಿರ್ಧಾರವನ್ನು ದೂರು ಸ್ವೀಕರಿಸಿದ ಅರವತ್ತು ದಿನಗಳೊಳಗಾಗಿ ತಿಳಿಸತಕ್ಕದ್ದು.