(ಎ) ಈ ವಿನಿಯಮನಗಳ ಅನುಬಂಧ-1 ರಲ್ಲಿ ನಿರ್ದಿಷ್ಟಪಡಿಸಿದ ಸೇವೆಗಳ ಮತ್ತು ಹುದ್ದೆಗಳ ಸಂದರ್ಭದಲ್ಲಿ ಸಂವಿಧಾನದ 320ನೇ ಅನುಚ್ಛೇದದ (3)ನೇ ಖಂಡದ (ಎ)ಯಿಂದ (ಇ)ವರೆಗಿನ ಉಪ-ಖಂಡಗಳಲ್ಲಿ ನಮೂದಿಸಿದ ಯಾವುವೇ ವಿಷಯಗಳಿಗೆ ಸಂಬಂಧಪಟ್ಟಂತೆ;
(ಬಿ) ಈ ವಿನಿಯಮನಗಳ ಅನುಬಂಧ-II ರಲ್ಲಿ ನಿರ್ದಿಷ್ಟಪಡಿಸಿದ ಸೇವೆಗಳ ಮತ್ತು ಹುದ್ದೆಗಳ ಸಂದರ್ಭದಲ್ಲಿ, ಸಂವಿಧಾನದ 320ನೇ ಅನುಚ್ಛೇದದ (3)ನೇ ಖಂಡದ (ಎ) ಮತ್ತು (ಬಿ) ಉಪಖಂಡಗಳಲ್ಲಿ ನಮೂದಿಸಿದ ಯಾವುವೇ ವಿಷಯಗಳಿಗೆ ಸಂಬಂಧಪಟ್ಟಂತೆ;
(ಸಿ) ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಬಡ್ತಿ, ವೇತನ ಮತ್ತು ನಿವೃತ್ತಿ ವೇತನ ವಿನಿಯಮನಗಳು) ಅಧಿನಿಯಮ, 1973 ಮತ್ತು ಅದರ ಮೇರೆಗೆ ರಚಿಸಿದ ನಿಯಮಗಳ ಉಪಬಂಧಗಳಿಗನುಸಾರವಾದ ಬಡ್ತಿಯ ಹೊರತು ಯಾವುವೇ ಹುದ್ದೆಗಳು ಅಥವಾ ಸೇವೆಗಳಿಗೆ ಬಡ್ತಿ ನೀಡಲು ಅಥವಾ ಯಾವುದೇ ಹುದ್ದೆಗೆ ಅಥವಾ ಸೇವೆಗೆ ವರ್ಗಾವಣೆಯ ಮೂಲಕ ನೇಮಕ ಮಾಡಲು ಸರ್ಕಾರಿ ನೌಕರರ ಸೂಕ್ತತೆಗೆ ಸಂಬಂಧಪಟ್ಟಂತೆ;
(ಡಿ) ರಾಜ್ಯ ಸಿವಿಲ್ ಸೇವೆಗಳಿಗೆ ಮತ್ತು ರಾಜ್ಯ ವ್ಯವಹಾರಗಳಿಗೆ ಸಂಬಂಧಿಸಿದ ಸಿವಿಲ್ ಹುದ್ದೆಗಳಿಗೆ ನೇಮಕಾತಿಯನ್ನು ವಿನಿಯಮಿಸುವ ನಿಯಮಗಳನ್ನು ರಚಿಸುವುದಕ್ಕೆ ಸಂಬಂಧಪಟ್ಟಂತೆ;
(ಇ) ಯಾವ ಹುದ್ದೆಯ ನಿಬಂಧನೆಗಳು ಕರಾರಿನ ಮೂಲಕ ನಿಯಂತ್ರಿತವಾಗುತ್ತವೆಯೋ ಆ ಯಾವುದೇ ಹುದ್ದೆಗೆ ಯಾವುವೇ ನೇಮಕಗಳನ್ನು ಮಾಡುವುದಕ್ಕೆ ಸಂಬಂಧಪಟ್ಟಂತೆ:
ಪರಂತು, ಯಾವ ಕರಾರಿನ ನೇಮಕವು ಐದು ವರ್ಷಗಳನ್ನು ಮೀರುವ ಕರಾರಿನ ಮೇಲಿನ ಒಟ್ಟು ಸೇವಾ ಅವಧಿಯನ್ನು ಒಳಗೊಂಡಿರಬಹುದೋ ಆ ನೇಮಕದ ಪ್ರತಿಯೊಂದು ಸಂದರ್ಭದಲ್ಲಿ, ಮತ್ತು ಆಯೋಗದೊಂದಿಗೆ ಸಮಾಲೋಚನೆ ಮಾಡುವ ಮೂಲಕ ಮಾತ್ರವೇ ಯಾವ ಹುದ್ದೆಗೆ ನೇಮಕಾತಿಯನ್ನು ಮಾಡಿಕೊಳ್ಳಬಹುದೋ ಆ ಹುದ್ದೆಗೆ ನೇಮಕಾತಿಯನ್ನು ಮಾಡಬೇಕಾದಾಗ ಆ ಕರಾರನ್ನು ಮಾಡಿಕೊಳ್ಳುವ ಅಥವಾ ನವೀಕರಿಸುವ ಮೊದಲು ಆಯೋಗದೊಂದಿಗೆ ಸಮಾಲೋಚಿಸತಕ್ಕದ್ದು.
(ಎಫ್) ಯಾವ ವ್ಯಕ್ತಿಯು, ಸಿವಿಲ್ ನಿವೃತ್ತಿ ವೇತನ ಅಥವಾ ಉಪದಾನದ ಮೇಲೆ ನಿವೃತ್ತಿ ಹೊಂದಿರುವನೋ ಆ ವ್ಯಕ್ತಿಯ ಅಥವಾ ಯಾವ ವ್ಯಕ್ತಿಯು ಸೇವೆಯಲ್ಲಿರುವಾಗ ವಂತಿಗೆ ಭವಿಷ್ಯ ನಿಧಿಗೆ ವಂತಿಗೆದಾರನಾಗಿರುವನೋ ಆ ವ್ಯಕ್ತಿಯನ್ನು ಯಾವುದೇ ಸೇವೆಗೆ ಅಥವಾ ಹುದ್ದೆಗೆ ಮರುನೇಮಕ ಮಾಡುವುದಕ್ಕೆ ಸಂಬಂಧಪಟ್ಟಂತೆ:
ಪರಂತು, ಮರುನೇಮಕದ ಅವಧಿಯು ಐದು ವರ್ಷಗಳನ್ನು ಮೀರುವ ಮತ್ತು ಯಾವ ಸೇವೆ ಅಥವಾ ಹುದ್ದೆಗೆ ನೇಮಕವನ್ನು ಆಯೋಗದೊಂದಿಗೆ ಸಮಾಲೋಚಿಸಿ ಮಾತ್ರ ಮಾಡಬಹುದೋ ಆ ಸೇವೆಯಲ್ಲಿ ಅಥವಾ ಹುದ್ದೆಯಲ್ಲಿನ ಮರುನೇಮಕದ ಪ್ರತಿಯೊಂದು ಸಂದರ್ಭದಲ್ಲಿ ಆಯೋಗದೊಂದಿಗೆ ಸಮಾಲೋಚಿಸತಕ್ಕದ್ದು.
(ಜಿ) ಕರ್ನಾಟಕ ಸಿವಿಲ್ ಸೇವೆಗಳ (ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ನಿಯಮಗಳು, 1974ರ ಮೇರೆಗೆ ನಡೆಯುವ ಯಾವುದೇ ಪರೀಕ್ಷೆಯನ್ನು ಗೊತ್ತುಪಡಿಸುವುದಕ್ಕೆ ಅಥವಾ ಮಾರ್ಪಾಡು ಮಾಡುವುದಕ್ಕೆ ಅಥವಾ ಬಿಟ್ಟುಬಿಡುವುದಕ್ಕೆ ಸಂಬಂಧಪಟ್ಟಂತೆ - ಸಮಾಲೋಚಿಸುವ ಅಗತ್ಯವಿರತಕ್ಕದ್ದಲ್ಲ. 4. ಯಾವ ಹುದ್ದೆಗೆ ಆಯೋಗದೊಂದಿಗೆ ಸಮಾಲೋಚಿಸಿ ನೇಮಕವನ್ನು ಮಾಡಬೇಕಾಗುವುದೋ ಆ ಹುದ್ದೆಗೆ ತಾತ್ಕಾಲಿಕವಾಗಿ ವ್ಯಕ್ತಿಯನ್ನು ನೇಮಕ ಮಾಡುವುದಕ್ಕೆ ಸಂಬಂಧಿಸಿದಂತೆ, ಆ ಖಾಲಿಸ್ಥಾನವು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಮುಂದುವರಿಯುವ ಸಂಭವವಿರುವುದಿಲ್ಲಮೋ ಆಗ ಆಯೋಗದೊಂದಿಗೆ ಸಮಾಲೋಚಿಸುವುದು ಅವಶ್ಯವಿರತಕ್ಕದ್ದಲ್ಲ. 5. (1) ರಾಜ್ಯದ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗೆ ಬಾಧಕವಾಗುವ ಯಾವುದೇ ಶಿಸ್ತು ವಿಷಯಗಳ ಬಗ್ಗೆ,- (ಎ) ರಾಜ್ಯ ಸರ್ಕಾರವು, ಒಂದು ಅಪೀಲಿನ ಬಗ್ಗೆ ಆದೇಶ ಮಾಡಲು ಅಥವಾ ಪುನರೀಕ್ಷಣೆಯಲ್ಲಿರುವ ಅಥವಾ ಪುನರವಲೋಕನದಲ್ಲಿರುವ ಆದೇಶವನ್ನು ಮಾರ್ಪಾಟು ಮಾಡಲು ಪ್ರಸ್ತಾಪಿಸಿರುವ; ಅಥವಾ
(ಬಿ) ರಾಜ್ಯ ಸರ್ಕಾರವು, ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ 8ನೇ ನಿಯಮದ (v) ರಿಂದ (viii) ರ ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ಯಾವುವೇ ದಂಡನೆಗಳನ್ನು ವಿಧಿಸಲು ಮೂಲ ಆದೇಶವನ್ನು ಮಾಡಲು ಪ್ರಸ್ತಾಪಿಸಿರುವ - ಹೊರತು ಆಯೋಗದೊಂದಿಗೆ ಸಮಾಲೋಚಿಸುವುದು ಅವಶ್ಯವಾಗಿರತಕ್ಕದಲ್ಲ:
ಪರಂತು, ವಿಚಾರಣೆಯನ್ನು ಲೋಕಾಯುಕ್ತ ಅಥವಾ ಉಪ-ಲೋಕಾಯುಕ್ತರು ನಡೆಸಿರುವಲ್ಲಿ ಅಥವಾ ಶಿಫಾರಸ್ಸುಗಳನ್ನು, ಸಂದರ್ಭಾನುಸಾರ ಲೋಕಾಯುಕ್ತ ಅಥವಾ ಉಪಲೋಕಾಯುಕ್ತರಿಂದ ಸ್ವೀಕರಿಸಿದ್ದಲ್ಲಿ ರಾಜ್ಯದ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗೆ ಬಾಧಕವಾಗುವ ಶಿಸ್ತು ವಿಷಯಗಳನ್ನೊಳಗೊಂಡಿರುವ ಯಾವುದೇ ಸಂದರ್ಭದಲ್ಲಿ ಆಯೋಗದೊಂದಿಗೆ ಸಮಾಲೋಚಿಸುವುದು ಅವಶ್ಯವಾಗಿರತಕ್ಕದ್ದಲ್ಲ.
1 [ಮತ್ತೂ ಪರಂತು, ಕರ್ನಾಟಕ ಸಿವಿಲ್ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ 8ನೇ ನಿಯಮದ (V) ರಿಂದ (VIII)ರ ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಲಾದ ಯಾವುದೇ ದಂಡನೆಗಳನ್ನು, ರಾಜ್ಯಸರ್ಕಾರವು ಅನಧಿಕೃತ ಗೈರುಹಾಜರಿಯು ರುಜುವಾತಾದ ಆರೋಪಕ್ಕಾಗಿ ಸಮೂಹ ‘ಎ' ಮತ್ತು ಸಮೂಹ ‘ಬಿ' ಹುದ್ದೆಗಳನ್ನು ಹೊಂದಿರುವ ಸರ್ಕಾರಿ ನೌಕರರ ಮೇಲೆ ವಿಧಿಸಲು ಪ್ರಸ್ತಾವಿಸಿದ್ದಲ್ಲಿ, ಅದನ್ನು ಆಯೋಗದೊಂದಿಗೆ ಸಮಾಲೋಚಿಸುವ ಅಗತ್ಯವಿರತಕ್ಕದ್ದಲ್ಲ.
- ಅಧಿಸೂಚನೆ ಸಂ. ಡಿಪಿಎಆರ್ 4 ಎಸ್ಸಿಸಿ 2002, ದಿನಾಂಕ 16.09.2002ರ ಮೂಲಕ ಸೇರಿಸಲಾಗಿದೆ. (2) (1)ನೇ ಖಂಡದಲ್ಲಿ ಒಳಗೊಂಡಿರುವುದು ಯಾವುದೂ,-
(ಎ) ದಂಡನೆಯಾಗಿಯಲ್ಲದೆ ಅನ್ಯಥಾ ಯಾರೇ ಸರ್ಕಾರಿ ನೌಕರನನ್ನು ಸೇವೆಯಿಂದ ಬಿಡುಗಡೆ ಮಾಡುವುದಕ್ಕೆ ಅಥವಾ ಕೆಳಹುದ್ದೆಗೆ ಹಿಂದಿರುಗಿಸುವುದಕ್ಕೆ ಸಂಬಂಧಿಸಿದ;
(ಬಿ) ದಂಡನೆಯಾಗಿಯಲ್ಲದೆ ಅನ್ಯಥಾ ಯಾರೇ ಸರ್ಕಾರಿ ನೌಕರನಿಗೆ ಸಂಬಂಧಿಸಿದಂತೆ ಮಾಡಿದ ಯಾವುದೇ ಇತರ ಆದೇಶಕ್ಕೆ ಸಂಬಂಧಿಸಿದ - ಯಾವುದೇ ಪ್ರಕರಣದಲ್ಲಿ ರಾಜ್ಯ ಸರ್ಕಾರವು ಆಯೋಗದೊಂದಿಗೆ ಸಮಾಲೋಚಿಸುವುದನ್ನು ಅವಶ್ಯಕಗೊಳಿಸುವುದೆಂದು ಭಾವಿಸತಕ್ಕದ್ದಲ್ಲ. 6. (ಎ) ಕರ್ನಾಟಕ ಸಿವಿಲ್ ಸೇವೆಗಳ (ಪ್ರೊಬೇಷನ್) ನಿಯಮಗಳು, 1977ರ ಅನುಸಾರವಾಗಿ ಪ್ರೊಬೇಷನರ್ನನ್ನು ಸೇವೆಯಿಂದ ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ; (ಬಿ) ಆತನ ನೇಮಕದ ಕರಾರಿನ ನಿಬಂಧನೆಗಳಿಗನುಸಾರವಾಗಿ ಯಾವನೇ ವ್ಯಕ್ತಿಯ ನೇಮಕವನ್ನು ಕೊನೆಗೊಳಿಸುವುದಕ್ಕೆ ಸಂಬಂಧಿಸಿದಂತೆ;
(ಸಿ) ಸರ್ಕಾರಿ ನೌಕರನಿಗೆ ಅನ್ವಯವಾಗಬಹುದಾದ ನಿಯಮಗಳ ಮೇರೆಗೆ,-
(i) ಆತನು, ಗೊತ್ತುಪಡಿಸಿದ ಸೇವಾ ವರ್ಷಗಳು ಪೂರ್ಣಗೊಂಡ ಮೇಲೆ ಅಥವಾ ಗೊತ್ತುಪಡಿಸಿದ ವಯಸ್ಸನ್ನು ತಲುಪಿದ ಮೇಲೆ ನಿವೃತ್ತಿ ಹೊಂದಬಹುದಾಗಿದ್ದರೆ, ಹಾಗೂ ಅವನು ಅಂಥ ಸೇವೆಯನ್ನು ಪೂರ್ಣಗೊಳಿಸಿದ್ದರೆ ಅಥವಾ ಅಂಥ ವಯಸ್ಸನ್ನು ತಲುಪಿದ್ದರೆ; ಅಥವಾ
(ii) ಅವನು, ತನ್ನ ಅಶಕ್ತ ನಿವೃತ್ತಿ ವೇತನದ ಮೇಲೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಗೊತ್ತುಪಡಿಸಲಾದ ಷರತ್ತುಗಳನ್ನು ಪೂರೈಸಿದ ಮೇಲೆ ನಿವೃತ್ತಿ ಹೊಂದಬಹುದಾಗಿದ್ದರೆ - ಆತನು ಸೇವಾ ನಿವೃತ್ತಿ ವಯಸ್ಸನ್ನು ತಲುಪುವುದಕ್ಕೆ ಮುಂಚೆ ಅವನು ನಿವೃತ್ತನಾಗುವುದಕ್ಕೆ ಸಂಬಂಧಿಸಿದಂತೆ;
(ಡಿ) ರಾಜ್ಯಪಾಲರು, ಸಂವಿಧಾನದ 311ನೇ ಅನುಚ್ಛೇದದ (2)ನೇ ಖಂಡದ ಎರಡನೇ ಪರಂತುಕದ (ಸಿ) ಬಾಬಿನ ಮೇರೆಗೆ ಯಾವ ಸರ್ಕಾರಿ ನೌಕರನಿಗೆ ಸಂಬಂಧಿಸಿದಂತೆ ಆದೇಶವನ್ನು ಹೊರಡಿಸಿರುವರೋ ಆ ಸರ್ಕಾರಿ ನೌಕರನಿಗೆ ಸಂಬಂಧಿಸಿದಂತೆ;
(ಇ) ಮಾಡಿದ್ದ ಆದೇಶಗಳಿಗೆ ಸಂಬಂಧಿಸಿದಂತೆ ಹಿಂದಿನದೊಂದು ಹಂತದಲ್ಲಿ ಆಯೋಗವನ್ನು ಸಮಾಲೋಚಿಸಬಹುದಾಗಿರುವಲ್ಲಿ ಹಾಗೂ ಆಯೋಗವು ತನ್ನ ಸಲಹೆಯನ್ನು ನೀಡಿರುವಲ್ಲಿ ಹಾಗೂ ಹೆಚ್ಚಿನ ಪರಿಗಣನೆ ಅಥವಾ ನಿರ್ಧಾರಕ್ಕಾಗಿ ಆ ತರುವಾಯ ಹೊಸ ವಿಷಯವು ಉದ್ಭವಿಸದಿರುವಲ್ಲಿ - ಆಯೋಗದೊಂದಿಗೆ ಸಮಾಲೋಚಿಸುವುದು ಅವಶ್ಯಕವಾಗಿರತಕ್ಕದ್ದಲ್ಲ:
ಪರಂತು, ಮಾಡಬೇಕಾದ ಆದೇಶವು ಸರ್ಕಾರದ ಹಿಂದಿನ ಆದೇಶಗಳ ಮಾರ್ಪಾಟಾಗಿರುವಲ್ಲಿ ಮತ್ತು ಅಂಥ ಪ್ರಕರಣದಲ್ಲಿ ಈ ಹಿಂದೆ ಆಯೋಗವು ನೀಡಿರಬಹುದಾದ ಸಲಹೆಗನುಸಾರವಾಗಿ ಇಲ್ಲದಿರುವಲ್ಲಿ, ಅಂಥ ಆದೇಶಗಳನ್ನು ಆಯೋಗದೊಂದಿಗೆ ಸಮಾಲೋಚಿಸಿದ ತರುವಾಯದ ಹೊರತು, ಹೊರಡಿಸತಕ್ಕದ್ದಲ್ಲ. 7. ಆರೋಪಗಳ ಬಗ್ಗೆ ವಿಚಾರಣೆಯು ಇತ್ಯರ್ಥದಲ್ಲಿರುವಾಗ ಅಮಾನತಿನ ಆದೇಶದ ವಿರುದ್ಧ ಸಲ್ಲಿಸಿದ ಅಪೀಲಿನ ಅಥವಾ ಮನವಿಯ ಬಗ್ಗೆ ಆಯೋಗದೊಂದಿಗೆ ಸಮಾಲೋಚಿಸುವ ಅಗತ್ಯವಿರತಕ್ಕದ್ದಲ್ಲ. 8. ನಿರಸನ ಮತ್ತು ಉಳಿಸುವಿಕೆಗಳು.- (1) ಕರ್ನಾಟಕ ಲೋಕಸೇವಾ ಆಯೋಗ (ಸಮಾಲೋಚನಾ) ವಿನಿಯಮನಗಳು, 1976ನ್ನು ಈ ಮೂಲಕ ನಿರಸನಗೊಳಿಸಲಾಗಿದೆ: ಪರಂತು, ಅಂಥ ನಿರಸನವು,-
(ಎ) ಸದರಿ ವಿನಿಯಮನಗಳ ಪೂರ್ವಪ್ರವರ್ತನೆಗೆ ಅಥವಾ ಅದರ ಮೇರೆಗೆ ಕ್ರಮಬದ್ಧವಾಗಿ ಮಾಡಿದ ಯಾವುದೇ ಕಾರ್ಯಕ್ಕೆ ಅಥವಾ ಕೈಗೊಂಡ ಯಾವುದೇ ಕ್ರಮಕ್ಕೆ; ಅಥವಾ
(ಬಿ) ಸದರಿ ವಿನಿಯಮನಗಳ ಮೇರೆಗೆ ಈಗಾಗಲೇ ಆರ್ಜಿಸಲಾದ ಅಥವಾ ಪ್ರಾಪ್ತವಾದ ಅಥವಾ ವಹಿಸಲಾದ ಯಾವುದೇ ಹಕ್ಕು, ಬಾದ್ಯತೆ ಅಥವಾ ಹೊಣೆಗಾರಿಕೆಗೆ - ಬಾಧಕ ಉಂಟುಮಾಡತಕ್ಕದ್ದಲ್ಲ.
(2) (ಎ) ಉಪ-ಖಂಡದಲ್ಲಿ ನಿರಸನಗೊಳಿಸಿದ ವಿನಿಯಮನಗಳಿಗೆ ಯಾವುದೇ ನಿಯಮದಲ್ಲಿ ಅಥವಾ ಆದೇಶದಲ್ಲಿ ಮಾಡಿದ ಯಾವುದೇ ಉಲ್ಲೇಖವನ್ನು ಈ ವಿನಿಯಮನಗಳಲ್ಲಿನ ಸಂವಾದಿ ವಿನಿಯಮನಕ್ಕೆ ಮಾಡಿದ ಉಲ್ಲೇಖವೆಂದು ಅರ್ಥೈಸತಕ್ಕದ್ದು.
(3) ನಿರಸಿತ ವಿನಿಯಮನಗಳ ಉದ್ದೇಶಕ್ಕಾಗಿ ಹೊರಡಿಸಿದ್ದ ಮತ್ತು ಜಾರಿಯಲ್ಲಿದ್ದ ಸರ್ಕಾರಿ ಆದೇಶಗಳನ್ನು, ಅಧಿಕೃತ ಜ್ಞಾಪನಪತ್ರಗಳನ್ನು ಮತ್ತು ಸುತ್ತೋಲೆಗಳನ್ನು ಈ ವಿನಿಯಮನಗಳ ಉಪಬಂಧಗಳಿಗೆ ಅವು ಅಸಂಗತವಾಗದಿರುವಷ್ಟರ ಮಟ್ಟಿಗೆ, ಅವು ಮಾರ್ಪಾಟಾಗುವವರೆಗೆ ಅಥವಾ ರದ್ದಾಗುವವರೆಗೆ ಈ ನಿಯಮಗಳ ಉದ್ದೇಶಕ್ಕಾಗಿ ಹೊರಡಿಸಲಾದುವೆಂದು ಅರ್ಥೈಸತಕ್ಕದ್ದು.
ಅನುಬಂಧ-I [ವಿನಿಯಮನ 3(ಎ)] 1. ಭಾರತೀಯ ಸಿವಿಲ್ ಆಡಳಿತ ಕೇಡರ್ ನಿಯಮಗಳು, 1950 ಮತ್ತು ಭಾರತೀಯ ಪೊಲೀಸ್ ಕೇಡರ್ ನಿಯಮಗಳು, 1950ರಲ್ಲಿ ಪರಿಭಾಷಿಸಿದಂತೆ "ಕೇಡರ್ ಅಧಿಕಾರಿಗಳ" ನೇಮಕಾತಿಯ ಮೂಲಕ ಭರ್ತಿ ಮಾಡಲಾದ ಎಲ್ಲಾ ಸೇವೆಗಳು ಮತ್ತು ಹುದ್ದೆಗಳು. 2. ರಾಜ್ಯಪಾಲರ ಆಪ್ತ ಮತ್ತು ಸಚಿವಾಲಯ ಸಿಬ್ಬಂದಿಯ ಎಲ್ಲಾ ಹುದ್ದೆಗಳು. 3. ಸಂವಿಧಾನದ 229ನೇ ಅನುಚ್ಛೇದದ ಮೇರೆಗೆ ಭರ್ತಿ ಮಾಡಲಾದ ಉಚ್ಚ ನ್ಯಾಯಾಲಯದ ಸಿಬ್ಬಂದಿಯ ಎಲ್ಲಾ ಹುದ್ದೆಗಳು. 4. ಒಕ್ಕೂಟದ ಸಶಸ್ತ್ರ ಬಲದ ಅಧಿಕಾರಿಗಳಿಂದ ಭರ್ತಿಯಾದ ಎಲ್ಲ ಹುದ್ದೆಗಳು. 5. ಅಖಿಲ ಭಾರತ ಸೇವೆಗಳ, ಕೇಂದ್ರ ಸೇವೆಗಳ ಅಥವಾ ಇತರ ಯಾವುದೇ ರಾಜ್ಯದ ಸೇವೆಗಳ ಅಧಿಕಾರಿಗಳಿಂದ ಭರ್ತಿಯಾದ ಎಲ್ಲಾ ಹುದ್ದೆಗಳು. 6. ಕರ್ನಾಟಕ ಲೋಕಾಯುಕ್ತ ಸಿಬ್ಬಂದಿಯ ಎಲ್ಲಾ ಹುದ್ದೆಗಳು. 7. ಕರ್ನಾಟಕ ವಿಧಾನಮಂಡಲ ಸಚಿವಾಲಯದ ಸಿಬ್ಬಂದಿಯ ಎಲ್ಲಾ ಹುದ್ದೆಗಳು. ಅನುಬಂಧ-II (ವಿನಿಯಮನ 3-ಬಿ) I. ಶಿಕ್ಷಣ ಇಲಾಖೆ 1. ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿರುವ ಪ್ರೌಢಶಾಲಾ ಸಹಾಯಕರ (ದರ್ಜೆ- II) ಹುದ್ದೆಗಳು ಮತ್ತು ದೈಹಿಕ ಶಿಕ್ಷಕರು (ದರ್ಜೆ- I). 2. ಸಂಗೀತ ಶಿಕ್ಷಣ ಸಲಹೆಗಾರ ಹುದ್ದೆಗಳು. 3. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ತಾಂತ್ರಿಕ ಸಹಾಯಕರ (ಗ್ರಂಥಪಾಲರು) ಹುದ್ದೆಗಳು. 4. ಪ್ರಾಥಮಿಕ ಶಾಲಾ ಸಹಾಯಕರ ಹುದ್ದೆಗಳು. II. ಅರಣ್ಯ, ಪರಿಸರ ಮತ್ತು ಜೀವಿ ಪರಿಸರ ವಿಜ್ಞಾನ ಇಲಾಖೆ:
- ಅರಣ್ಯ ಇಲಾಖೆಯ ಅರಣ್ಯ ವಲಯಾಧಿಕಾರಿಗಳ ಹುದ್ದೆಗಳು. III. ಗೃಹ ಮತ್ತು ಸಾರಿಗೆ ಇಲಾಖೆ:
- ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿರುವ ನಿರ್ದೇಶಕರ, ಉಪನಿರ್ದೇಶಕರ, ಸಹಾಯಕ ನಿರ್ದೇಶಕರ, ಪ್ರಥಮ ದರ್ಜೆ ಸಹಾಯಕರ, ದ್ವಿತೀಯ ದರ್ಜೆ ಸಹಾಯಕರ ಹುದ್ದೆ.
- ನಿರ್ದೇಶಕರ ಹುದ್ದೆ, ವಿಧಿ ವೈದ್ಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು.
- ಆರಕ್ಷಕ ಇಲಾಖೆಯಲ್ಲಿರುವ ರಿಸರ್ವ್ ಪೊಲೀಸ್ ಸಬ್ಇನ್ಸ್ಪೆಕ್ಟರುಗಳ ಮತ್ತು ಜಮೇದಾರರ, ಪೊಲೀಸ್ ಸಬ್ಇನ್ಸ್ಪೆಕ್ಟರುಗಳ, ಬ್ಯಾಂಡ್ ಮಾಸ್ಟರುಗಳ, ಸಹಾಯಕ ಬ್ಯಾಂಡ್ ಮಾಸ್ಟರುಗಳ, ಛಾಯಾಗ್ರಾಹಕರ, ಸಹಾಯಕ ಸಬ್ಇನ್ಸ್ಪೆಕ್ಟರುಗಳ (ವಿದ್ಯುತ್), ಸಹಾಯಕ ಸಬ್ಇನ್ಸ್ಪೆಕ್ಟರುಗಳ (ರೇಡಿಯೋ ಮೆಕ್ಯಾನಿಕ್) ಹುದ್ದೆ. IV. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ:
- ಭಾರತ ಜನಸಂಖ್ಯಾ ಯೋಜನೆಯಲ್ಲಿರುವ ಎಲ್ಲಾ ಹುದ್ದೆಗಳು. V. ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವಾ ಇಲಾಖೆ:
- ವಾರ್ತಾ ಮತ್ತು ಪ್ರಚಾರ ಇಲಾಖೆ ನಿರ್ದೇಶಕರ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆಯ ಜಂಟಿ ನಿರ್ದೇಶಕರ ಹುದ್ದೆಗಳು. VI ಕಾನೂನು ಇಲಾಖೆ:
- ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ಹೊರತುಪಡಿಸಿ, 234ನೇ ಅನುಚ್ಛೇದದ ಅಡಿಯಲ್ಲಿ ನೇಮಕಗೊಂಡ ನ್ಯಾಯಿಕ ಅಧಿಕಾರಿಗಳ ಹುದ್ದೆಗಳು.
- ಪ್ರಾಸಿಕ್ಯೂಷನ್ ನಿರ್ದೇಶಕರ, ಪ್ರಾಸಿಕ್ಯೂಷನ್ ಜಂಟಿ ನಿರ್ದೇಶಕರ, ಪಬ್ಲಿಕ್ ಪ್ರಾಸಿಕ್ಯೂಟರುಗಳ, ಪ್ರಾಸಿಕ್ಯೂಷನ್ ಉಪ ನಿರ್ದೇಶಕರ, ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರುಗಳ ಮತ್ತು ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರುಗಳ ಹುದ್ದೆಗಳು.
- ಕರ್ನಾಟಕ ಕಾನೂನು ವರದಿಗಳ ನಿಯಮಗಳು, 1983ರ ಮೇರೆಗೆ ರಚಿತವಾದ ಕರ್ನಾಟಕ ಕಾನೂನು ವರದಿ ಸೇವೆಯಲ್ಲಿರುವ ಎಲ್ಲಾ ಹುದ್ದೆಗಳು. VII. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ:
- ಭಾಷಾಂತರ ನಿರ್ದೇಶನಾಲಯದಲ್ಲಿರುವ ಪ್ರಥಮ ದರ್ಜೆ ಸಹಾಯಕರ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಹೊರತುಪಡಿಸಿ, ಎಲ್ಲಾ ಸಮೂಹ-ಎ, ಸಮೂಹ-ಬಿ ಮತ್ತು ಸಮೂಹ-ಸಿ ಹುದ್ದೆಗಳು. VIII. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ:
- ಸಂವಿಧಾನದ 233ನೇ ಅನುಚ್ಛೇದದ ಮೇರೆಗೆ ನೇಮಕಗೊಂಡ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಹುದ್ದೆಗಳು.
- ಸರ್ಕಾರದ ಕಾರ್ಯದರ್ಶಿಯವರ ಹುದ್ದೆ, ಕಾನೂನು ಇಲಾಖೆ.
- ಸರ್ಕಾರದ ಕಾರ್ಯದರ್ಶಿಯವರ ಹುದ್ದೆ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ.
- ಸರ್ಕಾರದ ಕಾರ್ಯದರ್ಶಿಯವರ ಹುದ್ದೆ, ಯೋಜನಾ ಇಲಾಖೆ.
- ಸರ್ಕಾರದ ಕಾರ್ಯದರ್ಶಿಯವರ ಹುದ್ದೆ, ಲೋಕೋಪಯೋಗಿ ಇಲಾಖೆ.
- ಸರ್ಕಾರದ ಕಾರ್ಯದರ್ಶಿಯವರ ಹುದ್ದೆ, ನೀರಾವರಿ ಇಲಾಖೆ.
- ಕರ್ನಾಟಕ ಸರ್ಕಾರಿ ಸಚಿವಾಲಯ ಸೇವೆಗಳ (ಯೋಜನೆ ಮತ್ತು ಆರ್ಥಿಕ ವಿಭಾಗ) ಆರ್ಥಿಕ ಸಲಹೆಗಾರರ, ನಿರ್ದೇಶಕರ, ಜಂಟಿ ನಿರ್ದೇಶಕರ, ಉಪ ನಿರ್ದೇಶಕರ, ಸಂಶೋಧನಾಧಿಕಾರಿಗಳ ಮತ್ತು ಸಹಾಯಕ ನಿರ್ದೇಶಕರ ಹುದ್ದೆಗಳು.
- ಕರ್ನಾಟಕ ಲೋಕಾಯುಕ್ತರ ಸಿಬ್ಬಂದಿಯಲ್ಲಿರುವ ಸಮೂಹ-ಸಿ ಹುದ್ದೆಗಳು.
- ನಿವಾಸಿ ಆಯುಕ್ತರ ಕಚೇರಿಯಲ್ಲಿರುವ ಮತ್ತು ಕರ್ನಾಟಕ ಭವನ, ನವದೆಹಲಿ - ಇಲ್ಲಿ ಇರುವ ಸಮೂಹ- ಸಿ ಹುದ್ದೆಗಳು.
- ಮುಖ್ಯಮಂತ್ರಿಗಳು ಮತ್ತು ಇತರ ಸಚಿವರ ಸಿಬ್ಬಂದಿಯ ಎಲ್ಲಾ ಹುದ್ದೆಗಳು.
- ಮಾಹಿತಿ ತಂತ್ರಜ್ಞಾನ ನಿರ್ದೇಶನಾಲಯದಲ್ಲಿರುವ ಕಿರಿಯ ಕನ್ಸೋಲ್ ಆಪರೇಟರ್ಗಳ ಮತ್ತು ಪಂಚ್/ ವೆರಿಫೈಯರ್ ಆಪರೇಟರ್ಗಳ ಹುದ್ದೆಗಳು (ದರ್ಜೆ- II), 12. ಕರ್ನಾಟಕ ಸಿವಿಲ್ ಸೇವಾ (ಕೆಲವು ಸಮೂಹ-ಎ ಮತ್ತು ಸಮೂಹ-ಬಿ ಹುದ್ದೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ವಿಶೇಷ ನೇಮಕಾತಿ) ನಿಯಮಗಳು, 1985ರ ಮೇರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನೇಮಕ ಮಾಡುವ ಮೂಲಕ ಭರ್ತಿಮಾಡಬಹುದಾದ ಸಮೂಹ-ಎ ಮತ್ತು ಸಮೂಹ-ಬಿ ಹುದ್ದೆಗಳು. IX ಸಾಮಾನ್ಯ 1. ಕಾಲಕಾಲಕ್ಕೆ ಪರಿಷ್ಕರಿಸಬಹುದಾದಂತೆ ಈ ಮುಂದಿನ ವೇತನ ಶ್ರೇಣಿಗಳನ್ನು ಅಥವಾ ಸಂವಾದಿ ವೇತನಶ್ರೇಣಿಗಳನ್ನು ಹೊಂದಿರುವ ಎಲ್ಲಾ ಇಲಾಖೆಗಳಲ್ಲಿರುವ ಸಹಾಯಕರ, ಪ್ರಥಮ ದರ್ಜೆ ಸಹಾಯಕರ, ಕಿರಿಯ ಸಹಾಯಕರ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಹೊರತುಪಡಿಸಿ ಸಿ ಸಮೂಹದ ಮತ್ತು ಡಿ ಸಮೂಹದ ಎಲ್ಲಾ ಹುದ್ದೆಗಳು, ಎಂದರೆ:-
ಎ. 3850-100-4450-125-5700-150-7050 ಬಿ. 3300-75-3450-100-4450-125-5700-150-6300 ಸಿ. 3000-75-3450-100-4450-125-5450 ಡಿ. 2775-75-3450-100-4450-125-4950 ಇ. 2600-50-2700-75-3450-100-4350 ಎಫ್. 2500-59-2700-75-3450-100-3850 2. ಎಲ್ಲಾ ಇಲಾಖೆಗಳಲ್ಲಿರುವ ಶೀಘ್ರಲಿಪಿಗಾರರ ಹುದ್ದೆಗಳು. 3. ಎಲ್ಲಾ ಇಲಾಖೆಗಳಲ್ಲಿರುವ ಎಲ್ಲಾ ಸಮೂಹ-ಡಿ ಹುದ್ದೆಗಳು. 4. ಕೇಂದ್ರ ಅಥವಾ ರಾಜ್ಯ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ರಚಿಸಲಾದ ಕರ್ನಾಟಕ ಅಪೀಲು ನ್ಯಾಯ ಮಂಡಳಿ, ರಾಜ್ಯ ಸಾರಿಗೆ ಅಪೀಲು ನ್ಯಾಯಮಂಡಳಿ ಅಥವಾ ಇತರ ಯಾವುದೇ ನ್ಯಾಯಮಂಡಳಿಯ ಅಥವಾ ಪ್ರಾಧಿಕಾರದ ಅಧ್ಯಕ್ಷರ ಮತ್ತು ಸದಸ್ಯರ ಹುದ್ದೆಗಳು. 5. ಸರ್ಕಾರಿ ಕೈಗಾರಿಕಾ ಸಂಸ್ಥೆಗಳ ಅಧ್ಯಕ್ಷರ ಮತ್ತು ವ್ಯವಸ್ಥಾಪಕ ನಿರ್ದೇಶಕರ ಮತ್ತು ಇತರ ನಿರ್ದೇಶಕರ ಹುದ್ದೆಗಳು. 6. ಸರ್ಕಾರಿ ಕೈಗಾರಿಕಾ ಸಂಸ್ಥೆಗಳ ಎಲ್ಲಾ ಹುದ್ದೆಗಳು. 7. ದೈಹಿಕ ಅಂಗವಿಕಲ ವ್ಯಕ್ತಿಗಳನ್ನು ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ 9ನೇ ನಿಯಮದ (1ಎ) ಉಪನಿಯಮದ ಮೂರನೇ ಪರಂತುಕದ ಅನುಸಾರವಾಗಿ ನೇಮಕ ಮಾಡುವುದರ ಮೂಲಕ ಭರ್ತಿ ಮಾಡಬಹುದಾದ ಖಾಲಿ ಹುದ್ದೆಗಳು. 1 [8. ಕರ್ನಾಟಕ ಲೋಕಸೇವಾ ಆಯೋಗವನ್ನು ಹೊರತುಪಡಿಸಿ, ನಿಯಮಿಸಿರುವ ಆಯ್ಕೆ ಪ್ರಾಧಿಕಾರವು ಯಾವ ನೇರ ನೇಮಕಾತಿಯ ಮೂಲಕ ಯಾವುದೇ ಸೇವೆ ಅಥವಾ ಹುದ್ದೆಯ ಸಂಬಂಧದಲ್ಲಿ ವಿಶೇಷವಾಗಿ ಮಾಡಲಾದ ನೇಮಕಾತಿ ನಿಯಮಗಳಲ್ಲಿ ಉಪಬಂಧವನ್ನು ಕಲ್ಪಿಸಲಾಗಿದೆಯೋ ಆ ನೇರ ನೇಮಕಾತಿಯ ಮೂಲಕ ಭರ್ತಿ ಮಾಡುವುದನ್ನು ಅಗತ್ಯಪಡಿಸಲಾದ ಹುದ್ದೆಗಳು.
- ಅಧಿಸೂಚನೆ ಸಂ. ಡಿಪಿಎಆರ್ 3, ಎಸ್ಸಿಸಿ, 2002, ದಿನಾಂಕ 08.04.2002ರ ಮೂಲಕ ಸೇರಿಸಲಾಗಿದೆ. ಕರ್ನಾಟಕ ರಾಜ್ಯಪಾಲರು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಸ್. ಚಂದ್ರಶೇಖರಪ್ಪ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ The above translation of the Karnataka Government Servant's (Seniority )Rules, 1957 shall be authoritative text in the Kannada Language under section 5A of the Karnataka Official Langauage Act, 1963 ಪಿ.ಆರ್. 81 Governor of Karnataka ಭಾರತ ಸರ್ಕಾರದ ರಾಷ್ಟ್ರಪತಿಯವರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಜಿ.ಕೆ. ಬೋರೇಗೌಡ ಸರ್ಕಾರದ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ