(1) ರಾಜ್ಯ ಮಟ್ಟದ ಸಲಹಾ ಸಮಿತಿಯ ಕಾರ್ಯಕಲಾಪ ನಿರ್ವಹಣೆಗಾಗಿ ಸಭೆಯನ್ನು, ಅಧ್ಯಕ್ಷನು ಅಥವಾ ಅಧ್ಯಕ್ಷನ ವ್ಯಕ್ತ ಅನುಮೋದನೆ ಪಡೆದು ಸದಸ್ಯ ಕಾರ್ಯದರ್ಶಿಯು ಕರೆಯತಕ್ಕದ್ದು.
(2) ಅಂಥ ಸಭೆಯ ದಿನಾಂಕ, ಸಮಯ ಮತ್ತು ಸ್ಥಳವನ್ನು ನಿರ್ದಿಷ್ಟಪಡಿಸುವ ಪೂರ್ಣ ಏಳು ದಿನಗಳ ಸೂಚನೆಯನ್ನು ಮತ್ತು ಅಲ್ಲಿ ನಡೆಸಬೇಕಾಗಿರುವ ಕಾರ್ಯಕಲಾಪಗಳ ಕಾರ್ಯಸೂಚಿಯನ್ನು, ಸದಸ್ಯ ಕಾರ್ಯದರ್ಶಿಯು ಸಂಬಂಧಪಟ್ಟವರಿಗೆ ನೀಡತಕ್ಕದ್ದು.
(3) ಕೋರಂನ ಪಾಲನೆಗಾಗಿ, ಸಭೆಯಲ್ಲಿ ಹಾಜರಿರುವ ಸದಸ್ಯರ ಸಂಖ್ಯೆಯು, ಒಟ್ಟು ಸಂಖ್ಯೆಯ ಮೂರನೇ ಒಂದಕ್ಕಿಂತ (1/3) ಕಡಿಮೆ ಇದ್ದರೆ, ಪೀಠಾಸೀನ ಅಧಿಕಾರಿಯು, 15 ನಿಮಿಷಗಳ ಕಾಲ ಕಾದುನೋಡಿ ಆ ತರುವಾಯ, ಆತನು ಯುಕ್ತವಾಗಿ ನಿಗದಿಪಡಿಸಬಹುದಾದಂಥ ಮುಂದಿನ ಸಮಯಕ್ಕೆ ಅಥವಾ ಇನ್ನಾವುದೇ ಮುಂದಿನ ದಿನಕ್ಕೆ ಸಭೆಯನ್ನು ಮುಂದೂಡತಕ್ಕದ್ದು ಮತ್ತು ಹಾಗೆ ಸಭೆಯನ್ನು ಮುಂದೂಡಿದ ಬಗ್ಗೆ ನೋಟೀಸನ್ನು ಆದಷ್ಟು ಬೇಗ ಸಂಬಂಧಪಟ್ಟ ಸದಸ್ಯರಿಗೆ ನೀಡತಕ್ಕದ್ದು ಮತ್ತು ಮೂಲ ಸಭೆಯಲ್ಲಿ ಕೋರಂ ಇದ್ದಿದ್ದರೆ, ಅದರ ಮುಂದೆ ಯಾವ ಕಾರ್ಯಕಲಾಪವನ್ನು ತರಬೇಕಾಗಿತ್ತೋ ಆ ಕಾರ್ಯಕಲಾಪವನ್ನು ಮುಂದೂಡಿದ ಸಭೆಯ ಮುಂದೆ ತರತಕ್ಕದ್ದು ಮತ್ತು ಅಂಥ ಸಭೆಯಲ್ಲಿ ಕೋರಂ ಇಲ್ಲದಿದ್ದಾಗ್ಯೂ ವಿಲೆ ಮಾಡಬಹುದು.
(4) ಅಧ್ಯಕ್ಷನು ಪ್ರತಿಯೊಂದು ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು. ಯಾವುದೇ ಕಾರಣಕ್ಕಾಗಿ ಅಧ್ಯಕ್ಷನು ಸಭೆಗೆ ಹಾಜರಾಗಲು ಸಾಧ್ಯವಾಗದಿದ್ದರೆ, ಸಭೆಯಲ್ಲಿ ಹಾಜರಿರುವ ಸಹ-ಅಧ್ಯಕ್ಷನು ರಾಜ್ಯ ಮಟ್ಟದ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು.
(5) ಸಲಹಾ ಸಮಿತಿಯ ಯಾರೇ ಸದಸ್ಯನು, ತಾನೇ ಸ್ವತಃ ಅಥವಾ ಆತನ ಪಾಲುದಾರನು ಅಥವಾ ಸಂಬಂಧಿಕರು ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಷೇರು ಅಥವಾ ಹಿತಾಸಕ್ತಿಯನ್ನು ಹೊಂದಿರುವ ವಿಷಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸತಕ್ಕದ್ದಲ್ಲ ಅಥವಾ ಮತ ನೀಡತಕ್ಕದ್ದಲ್ಲ.
(6) ರಾಜ್ಯಮಟ್ಟದ ಸಲಹಾ ಸಮಿತಿಯ ಸಭೆಯ ವ್ಯವಹರಣೆಗಳನ್ನು ದಾಖಲು ಮಾಡತಕ್ಕದ್ದು ಮತ್ತು ಅಧ್ಯಕ್ಷನ ಅನುಮೋದನೆ ಪಡೆದ ತರುವಾಯ, ಹದಿನೈದು ದಿನಗಳ ಅವಧಿಯೊಳಗೆ ಸದಸ್ಯ-ಕಾರ್ಯದರ್ಶಿಯು ಅದನ್ನು ಸಂಬಂಧಪಟ್ಟ ಸದಸ್ಯರಿಗೆ ಕಳುಹಿಸುವ ವ್ಯವಸ್ಥೆ ಮಾಡತಕ್ಕದ್ದು.
(7) ಯಾರೇ, ಸದಸ್ಯನು, ವ್ಯವಹರಣೆಗಳ ದಾಖಲೆಯ ಬಗ್ಗೆ ಅಥವಾ ಅದರ ಯಾವುದೇ ಭಾಗದ ಬಗ್ಗೆ, ಸಹಮತ ಹೊಂದಿರದಿದ್ದರೆ, ಆತನು, ಅದನ್ನು ಅಧ್ಯಕ್ಷರ ಗಮನಕ್ಕೆ ತರುವುದಕ್ಕಾಗಿ ಸದಸ್ಯ ಕಾರ್ಯದರ್ಶಿಗೆ ಏಳು ದಿನಗಳ ಒಳಗಾಗಿ ಅದನ್ನು ತಿಳಿಸತಕ್ಕದ್ದು ಮತ್ತು ಅದರ ಮೇಲಿನ ಅಧ್ಯಕ್ಷರ ತೀರ್ಮಾನವು ಅಂತಿಮವಾದುದಾಗಿರತಕ್ಕದ್ದು.
(8) ಸದಸ್ಯ ಕಾರ್ಯದರ್ಶಿಯು ವ್ಯವಹರಣೆಗಳ ದಾಖಲೆಗಳನ್ನು ಮತ್ತು ಆ ಸಂಬಂಧದಲ್ಲಿನ ತೀರ್ಮಾನಗಳನ್ನು ಆದಷ್ಟು ಬೇಗ ಸರ್ಕಾರದ ಮುಂದೆ ಮಂಡಿಸತಕ್ಕದ್ದು.
(9) ಅಧಿನಿಯಮದ 6ನೇ ಪ್ರಕರಣದ (2) ಮತ್ತು (3)ನೇ ಉಪ ಪ್ರಕರಣಗಳ ಮೇರೆಗಿನ ಸಭೆಗಾಗಿ ಆಹ್ವಾನಿಸಲಾದ ಸಹಯೋಜಿತ ಸದಸ್ಯರು ಮತ್ತು ತಜ್ಞರು ಕರ್ನಾಟಕ ಸಿವಿಲ್ ಸೇವಾ ನಿಯಮಗಳ ಅನುಬಂಧ-ಎ ಪ್ರಕಾರ ಚಾಲ್ತಿ ದರಗಳಲ್ಲಿ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ಪಡೆಯಲು ಅರ್ಹರಾಗಿರತಕ್ಕದ್ದು.
(10) ಅಧ್ಯಕ್ಷರು, ರಾಜ್ಯಮಟ್ಟದ ಸಲಹಾ ಸಮಿತಿಯ ವಿಶೇಷ ಅಥವಾ ತುರ್ತು ಸಭೆಯನ್ನು ಕರೆಯುವುದು ಅವಶ್ಯಕವೆಂದು ಭಾವಿಸಿದರೆ, ಅವರು ಮೂರು ದಿನಗಳ ನೋಟೀಸನ್ನು ನೀಡುವ ಮೂಲಕ ಹಾಗೆ ಅಂಥ ಸಭೆಯನ್ನು ಕರೆಯಬಹುದು. ವಿಶೇಷ ಅಥವಾ ತುರ್ತು ಸಭೆಯನ್ನು ಕರೆದಾಗ ನಿಯಮ 7ರ ಉಪಬಂಧಗಳನ್ನು ಅನುಸರಿಸತಕ್ಕದ್ದು.