ಅಧಿನಿಯಮದ 8ನೇ ಪ್ರಕರಣದ (2)ನೇ ಉಪ ಪ್ರಕರಣದ ಮೇರೆಗೆ ಗೊತ್ತುಪಡಿಸಿದ ಪ್ರಕಾರ್ಯಗಳ ಜೊತೆಗೆ ಈ ಮುಂದಿನ ಪ್ರಕಾರ್ಯಗಳನ್ನು ನೆರವೇರಿಸುವುದು ಆಯುಕ್ತರ ಕರ್ತವ್ಯವಾಗಿರತಕ್ಕದ್ದು, ಎಂದರೆ:-
(1) ಪ್ರಾಧಿಕಾರದ ಸಭೆಗಳನ್ನು ಕರೆಯುವುದು ಮತ್ತು ಅವುಗಳನ್ನು ನಡೆಸುವುದು ಮತ್ತು ಸಭೆಗಳ ನಡವಳಿಗಳನ್ನು ಸಿದ್ಧಪಡಿಸುವುದು ಮತ್ತು ಪ್ರಾಧಿಕಾರದ ನಿರ್ಣಯಗಳನ್ನು ಕಾರ್ಯಗತಗೊಳಿಸುವುದು;
ಪರಂತು, ಪ್ರಾಧಿಕಾರದ ಯಾವುದೇ ನಿರ್ಣಯವು ಅಧಿನಿಯಮದ ಅಥವಾ ಯಾವುದೇ ಇತರ ಅಧಿನಿಯಮದ ಯಾವುದೇ ಉಪಬಂಧವನ್ನು ಅಥವಾ ಅಧಿನಿಯಮದ ಅಥವಾ ಇತರ ಯಾವುದೇ ಅಧಿನಿಯಮದ ಮೇರೆಗೆ ರಚಿಸಿದ ಅಥವಾ ಹೊರಡಿಸಿದ ಯಾವುದೇ ನಿಯಮ, ಅಧಿಸೂಚನೆ, ವಿನಿಯಮ ಅಥವಾ ಉಪ-ವಿಧಿಯನ್ನು ಅಥವಾ ಸರ್ಕಾರವು ಹೊರಡಿಸಿದ ಯಾವುದೇ ಆದೇಶವನ್ನು ಉಲ್ಲಂಘಿಸುತ್ತದೆಯೆಂದು ಅಥವಾ ಪ್ರಾಧಿಕಾರದ ಹಾಗೂ ಪರಂಪರೆಯ ಹಿತಾಸಕ್ತಿಗೆ ಪ್ರತಿಕೂಲವಾಗಿದೆಯೆಂದು ಅಥವಾ ಬಾಧಕ ಉಂಟು ಮಾಡುತ್ತಿದೆಯೆಂದು ಆಯುಕ್ತರು ಅಭಿಪ್ರಾಯಪಟ್ಟರೆ, ಅವರು ನಿರ್ಣಯವನ್ನು ಅಂಗೀಕರಿಸಿದ ಹದಿನೈದು ದಿನಗಳ ಒಳಗಾಗಿ, ವಿಷಯವನ್ನು ಆದೇಶಗಳಿಗಾಗಿ ಸರ್ಕಾರಕ್ಕೆ ಉಲ್ಲೇಖಿಸತಕ್ಕದ್ದು ಮತ್ತು ತಾನು ತೆಗೆದುಕೊಂಡ ಕ್ರಮದ ಬಗ್ಗೆ ಪ್ರಾಧಿಕಾರದ ಮುಂದಿನ ಸಭೆಯಲ್ಲಿ ತಿಳಿಸತಕ್ಕದ್ದು ಮತ್ತು ಅಂಥ ಉಲ್ಲೇಖದ ಮೇಲೆ ಸರ್ಕಾರದ ಆದೇಶಗಳನ್ನು ಸ್ವೀಕರಿಸುವವರೆಗೆ, ಆಯುಕ್ತರು ನಿರ್ಣಯವನ್ನು ಕಾರ್ಯಗತಗೊಳಿಸಲು ಬದ್ಧರಾಗಿರತಕ್ಕದ್ದಲ್ಲ;
(2) ಪ್ರಾಧಿಕಾರದ ಸಭೆಗಳ ನಡವಳಿಕೆಗಳ ಅಥವಾ ವ್ಯವಹರಣೆಗಳ ಒಂದು ಪ್ರತಿಯನ್ನು ಮತ್ತು ಸರ್ಕಾರವು ಕಾಲಕಾಲಕ್ಕೆ ಕೇಳಬಹುದಾದ ಯಾವುದೇ ವಿವರ ಪಟ್ಟಿಯನ್ನು ಅಥವಾ ಇತರ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸುವುದು;
(3) ಸರ್ಕಾರವು ನಿರ್ದೇಶಿಸಬಹುದಾದಂಥ ಯೋಜನೆಗಳು ಮತ್ತು ಕಾಮಗಾರಿಗಳನ್ನು ಕಾರ್ಯರೂಪಕ್ಕೆ ತರುವುದು ಮತ್ತು ಅನುಷ್ಠಾನಗೊಳಿಸುವುದು ಮತ್ತು ಅದರ ಅವಶ್ಯಕ ವೆಚ್ಚಗಳನ್ನು ಭರಿಸುವುದು;
(4) ಕಾರ್ಯನಿರ್ವಾಹಕ ಆಡಳಿತದ ವಿಷಯಗಳಲ್ಲಿ ಪ್ರಾಧಿಕಾರ ಭದ್ರತಾ ದಳವನ್ನು ಹೊರತುಪಡಿಸಿ, ಪ್ರಾಧಿಕಾರದ ಎಲ್ಲಾ ಅಧಿಕಾರಿಗಳು ಮತ್ತು ಉದ್ಯೋಗಿಗಳ ಮೇಲೆ ಮೇಲ್ವಿಚಾರಣೆ ನಡೆಸುವುದು ಮತ್ತು ನಿಯಂತ್ರಣ ಸಾಧಿಸುವುದು ಮತ್ತು ಅಂಥ ಅಧಿಕಾರಿಗಳ ಮತ್ತು ನೌಕರರ ಸೇವೆಗಳು ಮತ್ತು ಅವರ ವೇತನ, ವಿಶೇಷಾಧಿಕಾರಗಳು ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳನ್ನು ಪರಿಹರಿಸುವುದು;
(5) ಪ್ರಾಧಿಕಾರದ ಪತ್ರ ವ್ಯವಹಾರಗಳನ್ನು ನಡೆಸುವುದು ಮತ್ತು ನಿರ್ವಹಿಸುವುದು;
(6) ಪ್ರಾಧಿಕಾರದ ಎಲ್ಲಾ ಅನುಮತಿಗಳು, ಆದೇಶಗಳು, ತೀರ್ಮಾನಗಳು, ನೋಟೀಸುಗಳು ಮತ್ತು ಇತರ ದಸ್ತಾವೇಜುಗಳಿಗೆ ಮತ್ತು ಪ್ರಾಧಿಕಾರದ ಆದೇಶಗಳಿಗೆ ತನ್ನ ಸಹಿ ಹಾಕುವ ಮೂಲಕ ಅಧಿಪ್ರಮಾಣೀಕರಿಸುವುದು; ಮತ್ತು
(7) ಪ್ರಾಧಿಕಾರದ ಲೆಕ್ಕಪತ್ರಗಳು ಮತ್ತು ದಾಖಲೆಗಳ ಮೇಲ್ವಿಚಾರಣೆ ಮಾಡುವುದು ಮತ್ತು ಅವುಗಳ ಮೇಲೆ ನಿಯಂತ್ರಣ ಹೊಂದಿರುವುದು.