ಸದರಿ ನಿಯಮಗಳ ನಿಯಮ 9ರ ಉಪನಿಯಮ (1)ರ ಖಂಡ (1ಸಿ) ನಂತರ ಈ ಕೆಳಕಂಡಂತೆ ಸೇರಿಸತಕ್ಕದ್ದು:–
“(1ಡಿ) ಯಾವುದೇ ಸೇವೆಯ ಅಥವಾ ಹುದ್ದೆಯ ಸಂಬಂಧದಲ್ಲಿ ವಿಶೇಷವಾಗಿ ರಚಿಸಿದ ನೇಮಕಾತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸುವ ಸಾಮಾನ್ಯ ಸೂಚನೆಗಳಿಗೆ ಒಳಪಟ್ಟು ಅಂಥ ನೇಮಕಾತಿ ನಿಯಮಗಳಲ್ಲಿ ನೇರ ನೇಮಕಾತಿಯನ್ನು ಒಂದು ವಿಧಾನವನ್ನಾಗಿ ನಿಗದಿಪಡಿಸಿದ್ದಲ್ಲಿ ಅಂಥ ವಿಧಾನದ ಮೂಲಕ ನೇಮಕ ಮಾಡುವುದಕ್ಕಾಗಿ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ ಪ್ರತಿಯೊಂದು ಪ್ರವರ್ಗದಿಂದಲೂ ಶೇಕಡ ಒಂದರಷ್ಟು ಹುದ್ದೆಗಳನ್ನು ತೃತೀಯ ಲಿಂಗದ ಅಭ್ಯರ್ಥಿಗಳಿಗೆ ಮೀಸಲಿರಿಸತಕ್ಕದ್ದು;
ಪರಂತು, ಪ್ರತಿ ನೇಮಕಾತಿ ಪ್ರಾಧಿಕಾರವು ಗ್ರೂಪ್–ಎ, ಬಿ, ಸಿ ಮತ್ತು ಡಿ ವೃಂದಗಳ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಯ ಅರ್ಜಿಯಲ್ಲಿ ತೃತೀಯ ಲಿಂಗದ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪುರುಷ ಲಿಂಗ ಮತ್ತು ಸ್ತ್ರೀ ಲಿಂಗಗಳ ಜೊತೆಗೆ “ಇತರೆ” ಎಂಬ ಪ್ರತ್ಯೇಕ ಕಾಲಂ ಅನ್ನು ಕಲ್ಪಿಸತಕ್ಕದ್ದು. ಯಾವುದೇ ಆಯ್ಕೆ ಪ್ರಾಧಿಕಾರ ಅಥವಾ ನೇಮಕಾತಿ ಪ್ರಾಧಿಕಾರವು ಯಾವುದೇ ವರ್ಗದ ಹುದ್ದೆಗಳಿಗೆ ಮಾಡುವ ನೇಮಕಾತಿಯ ಆಯ್ಕೆ ಪ್ರಕ್ರಿಯೆಯಲ್ಲಿ ತೃತೀಯ ಲಿಂಗದ ಅಭ್ಯರ್ಥಿಗೆ ತಾರತಮ್ಯ ಮಾಡುವಂತಿಲ್ಲ.
ಮತ್ತೂ ಪರಂತು, ತೃತೀಯ ಲಿಂಗದ ಅಭ್ಯರ್ಥಿಗಳಿಗಾಗಿ ಮೀಸಲಿರಿಸಿದ ಒಂದು ಶೇಕಡಾವಾರು ಸಂಖ್ಯೆಗೆ ಸೂಕ್ತ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗದಿದ್ದಲ್ಲಿ, ಅಂಥ ರಿಕ್ತ ಸ್ಥಾನಗಳನ್ನು ಅದೇ ಪ್ರವರ್ಗಕ್ಕೆ ಸೇರಿದ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳಿಂದ ಭರ್ತಿ ಮಾಡತಕ್ಕದ್ದು.
ವಿವರಣೆ : ಈ ಉಪ–ನಿಯಮದ ಉದ್ದೇಶಕ್ಕಾಗಿ ತೃತೀಯ ಲಿಂಗದ ಅಭ್ಯರ್ಥಿ ಎಂಬ ಪದವು ತೃತೀಯ ಲಿಂಗ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಅಧಿನಿಯಮ 2019ರ (ಕೇಂದ್ರ ಅಧಿನಿಯಮ 2019ರ ಪ್ರಕರಣ 40) ಸೆಕ್ಷನ್ 2ರ ಖಂಡ (ಕೆ)ರಲ್ಲಿ ಪರಿಭಾಷಿಸಿರುವ ಅರ್ಥವನ್ನೇ ಒಳಗೊಂಡಿರುತ್ತದೆ.”