ಈ ನಿಯಮಗಳಲ್ಲಿ ವಿಷಯಕ್ಕೆ ಅಥವಾ ಸಂದರ್ಭಕ್ಕೆ ಬೇರೆ ಅರ್ಥದ ಅಗತ್ಯ ಇರದಿದ್ದರೆ.-
(ಅ) "ಅಧಿನಿಯಮ" ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 (1993 ರ ಕರ್ನಾಟಕ ಅಧಿನಿಯಮ ಸಂಖ್ಯೆ:14);
(ಆ) ‘ಜೀವ ವೈವಿಧ್ಯತೆ' ಎಂದರೆ, ಸಮಗ್ರ ಜೀವಿಗಳೊಳಗಿನ ವೈವಿಧ್ಯತೆ, ಎಲ್ಲಾ ಮೂಲಗಳ ಭಾಗವಾಗಿರುವ ಪರಿಸರ ಸಂಕೀರ್ಣತೆ ಹಾಗೂ ಸಮಗ್ರ ಜೀವಿ ವರ್ಗಗಳೊಳಗಿನ, ಪರಿಸರ ವ್ಯವಸ್ಥೆಯಲ್ಲಿನ ವೈವಿಧ್ಯತೆ;
(ಇ) 'ಸಮಿತಿ' ಎಂದರೆ ಪ್ರತಿಯೊಂದು ಸ್ಥಳೀಯ ಸಂಸ್ಥೆಯು, ತನ್ನ ಪ್ರದೇಶದಲ್ಲಿ, ಆವಾಸ ಸ್ಥಾನಗಳ ಸಂರಕ್ಷಣೆ, ಸುಸ್ಥಿರ ಬಳಕೆ ಮತ್ತು ಜೀವವೈವಿಧ್ಯತೆ ದಾಖಲಾತಿ ಉದ್ದೇಶಕ್ಕಾಗಿ ನಿಯಮ 3 ರಡಿಯಲ್ಲಿ ರಚಿಸಲ್ಪಡುವ ಜೀವವೈವಿದ್ಯ ನಿರ್ವಹಣಾ ಸಮಿತಿ;
(ಈ) ಜನತಾ ಜೀವವೈವಿಧ್ಯ ದಾಖಲಾತಿ ಎಂದರೆ ಜೀವಿಗಳು (ಸಸ್ಯಗಳು ಹಾಗೂ ಪ್ರಾಣಿಗಳು) ಹಾಗೂ ಅವುಗಳ ಆವಾಸ ಸ್ಥಾನಗಳು, ಭೂಭಾಗಗಳು, ಪಾರಂಪರಿಕ ತಳಿಗಳ ವೈವಿಧ್ಯತೆ, ಸಾಕುಪ್ರಾಣಿಗಳು, ಕೃಷಿ ವೈವಿಧ್ಯತೆ, ಸೂಕ್ಷ್ಮಾಣು ಜೀವಿಗಳು, ಬೆಟ್ಟ, ನದಿ, ಕೆರೆ ಇತ್ಯಾದಿ ಎಲ್ಲಾ ಜೀವವೈವಿಧ್ಯತೆಗೆ ಸಂಬಂಧಿಸಿದ ದೀರ್ಘಕಾಲಿನ ಜ್ಞಾನವನ್ನು ಒಳಗೊಂಡ ದಾಖಲೆ.
(ಉ) ರಾಜ್ಯ “ನೋಡಲ್ ಅಧಿಕಾರಿ” ಎಂದರೆ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಜೀವವೈವಿಧ್ಯ ನಿರ್ವಹಣಾ ಸಮಿತಿಗಳ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುವ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು(ಅಭಿವೃದ್ಧಿ) ರವರು ; ಜಿಲ್ಲಾ “ನೋಡಲ್ ಅಧಿಕಾರಿ” ಎಂದರೆ ಜಿಲ್ಲೆಯ ವ್ಯಾಪ್ತಿಯೊಳಗೆ ಬರುವ ಎಲ್ಲಾ ಜೀವವೈವಿಧ್ಯ ನಿರ್ವಹಣಾ ಸಮಿತಿಗಳ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುವ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಮಾಜಿಕ ಅರಣ್ಯ ವಿಭಾಗದವರು.
(ಊ) “ವಾಣಿಜ್ಯ ಬಳಕೆ” ಎಂದರೆ ಜೈವಿಕ ಸಂಪನ್ಮೂಲಗಳಿಂದ ದೊರಕುವ ಅಂತಿಮ ಪದಾರ್ಥಗಳನ್ನು ಬಳಸಿಕೊಂಡು ವಾಣಿಜ್ಯ ಉಪಯೋಗಗಳಾದ ಔಷಧಗಳು, ಕೈಗಾರಿಕಾ ಕಿಣ್ವಗಳು, ಆಹಾರ ರುಚಿಕಾರಕಗಳು, ಪರಿಮಳಗಳು, ಪ್ರಸಾದನಗಳು, ಹಾಲಂದಕಗಳು, ತೈಲರಾಳಗಳು, ಬಣ್ಣಗಳು, ಸಾರಗಳು ಮತ್ತು ಅನುವಂಶಿಕ ಮಧ್ಯಸ್ಥಿಕೆ ವಹಿಸಿ ತಳಿ ಸಂಕರದ ಮೂಲಕ ಕೃಷಿ ತಳಿಗಳನ್ನು ಮತ್ತು ಜಾನುವಾರು ತಳಿಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಬಳಸುವ ಅನುವಂಶಿಕ ಧಾತು ಇತ್ಯಾದಿ.
ಪರಂತು ಇದು ಕೃಷಿ, ತೋಟಗಾರಿಕೆ, ಕೋಳಿಸಾಕಾಣಿಕೆ, ಮೀನುಸಾಕಾಣಿಕೆ, ಹೈನುಗಾರಿಕೆ, ಪಶುಸಂಗೋಪನೆ ಅಥವಾ ಜೇನು ಸಾಕಾಣಿಕೆಯ ಬಳಕೆಯಲ್ಲಿರುವ ಸಾಂಪ್ರದಾಯಿಕ ತಳಿ ಅಭಿವೃದ್ದಿ ಅಥವಾ ರೂಢಿಗತ ಪದ್ಧತಿಗಳನ್ನು ಒಳಗೊಳ್ಳುವುದಿಲ್ಲ.
(ಋ) ‘ಸ್ಥಳೀಯ ಸಂಸ್ಥೆಗಳು' ಎಂದರೆ ಭಾರತ ಸಂವಿಧಾನದ ಅನುಚ್ಛೇದದ 243-B ಮತ್ತು 243-Q ಗಳ ಅರ್ಥವ್ಯಾಪ್ತಿಯೊಳಗೆ ಬರುವ ಯಾವುದೇ ಹೆಸರಿನಿಂದ ಕರೆಯಲ್ಪಡುವ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಎಂದು ಅರ್ಥ; ಮತ್ತು
(ಎ) ‘ಸುಸ್ಥಿರ ಬಳಕೆ' ಎಂದರೆ ಜೈವಿಕ ವೈವಿಧ್ಯತೆಯ ಘಟಕಗಳು ದೀರ್ಘಕಾಲದಲ್ಲಿಯೂ ಇಳಿಮುಖವಾಗಲು ಆಸ್ಪದ ನೀಡದಂತಹ ರೀತಿಯಲ್ಲಿ ಮತ್ತು ಅಂತಹ ಪ್ರಮಾಣದಲ್ಲಿ ಜೈವಿಕ ವೈವಿಧ್ಯತೆಯ ಘಟಕಾಂಶಗಳನ್ನು ಬಳಸುವ ಮೂಲಕ ಈಗಿನ ಮತ್ತು ಮುಂದಿನ ಪೀಳಿಗೆಗಳ ಅಗತ್ಯತೆಗಳನ್ನು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಅದರ ಸಾಮರ್ಥ್ಯವನ್ನು ಕಾಪಾಡುವುದು ಎಂದು ಅರ್ಥ.