ಸ್ಥಳೀಯ ಪ್ರಾಧಿಕಾರಗಳ ನೌಕರರ ನೇಮಕಾತಿ ಮತ್ತು ಸೇವಾ ಷರತ್ತುಗಳಿಗೆ ಸಂಬಂಧಪಟ್ಟ ಯಾವುದೇ ಕಾನೂನಿನಲ್ಲಿ ಏನೇ ಇದ್ದರೂ,
(ಎ) ಸ್ಥಳೀಯ ಪ್ರಾಧಿಕಾರಗಳ ಸೇವೆಗಳಿಗೆ ನೇಮಕಾತಿಗಳನ್ನು ಮಾಡುವುದಕ್ಕಾಗಿ ಪರೀಕ್ಷೆಗಳನ್ನು ನಡೆಸಲು ಆಯೋಗವು ಸಕ್ಷಮ ಪ್ರಾಧಿಕಾರವಾಗಿರತಕ್ಕದ್ದು ಮತ್ತು ಅಂಥ ಪರೀಕ್ಷೆಗಳನ್ನು ನಡೆಸುವುದು ಆಯೋಗದ ಕರ್ತವ್ಯವಾಗಿರತಕ್ಕದ್ದು;
(ಬಿ) ಈ ಕೆಳಗಿನ ವಿಷಯಗಳಲ್ಲಿ, ಎಂದರೆ,-
(i) ಸ್ಥಳೀಯ ಪ್ರಾಧಿಕಾರದ ಅಡಿಯಲ್ಲಿನ ಸೇವೆಗಳು ಮತ್ತು ಹುದ್ದೆಗಳಿಗೆ ಮಾಡುವ ನೇಮಕಾತಿ ವಿಧಾನಗಳಿಗೆ ಸಂಬಂಧಪಟ್ಟ ಎಲ್ಲ ವಿಷಯಗಳು;
(ii) ಸ್ಥಳೀಯ ಪ್ರಾಧಿಕಾರದ ಅಡಿಯಲ್ಲಿನ ಸೇವೆಗಳಿಗೆ ಮತ್ತು ಹುದ್ದೆಗಳಿಗೆ ನೇಮಕಾತಿ ಮಾಡಲು ಮತ್ತು ಒಂದು ಸೇವೆಯಿಂದ ಇನ್ನೊಂದು ಸೇವೆಗೆ ಬಡ್ತಿ ನೀಡಲು ಮತ್ತು ಅಂಥ ನೇಮಕಾತಿಗಳಿಗೆ ಅಥವಾ ಬಡ್ತಿಗಳಿಗೆ ಅಭ್ಯರ್ಥಿಗಳ ಸೂಕ್ತತೆಯನ್ನು ನಿರ್ಧರಿಸಲು ಅನುಸರಿಸಬೇಕಾದ ತತ್ವಗಳು;
(iii) ಶಿಸ್ತು ವಿಷಯಗಳಿಗೆ ಸಂಬಂಧಪಟ್ಟ ಕೋರಿಕೆ ಪತ್ರ ಮತ್ತು ಅರ್ಜಿಗಳೂ ಸೇರಿದಂತೆ ಸ್ಥಳೀಯ ಪ್ರಾಧಿಕಾರದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗೆ ಬಾಧಕವಾಗುವ ಎಲ್ಲ ಶಿಸ್ತಿನ ವಿಷಯಗಳು;
(iv) ಸ್ಥಳೀಯ ಪ್ರಾಧಿಕಾರದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಥವಾ ಸೇವೆ ಸಲ್ಲಿಸಿದ ವ್ಯಕ್ತಿಯು ಅಥವಾ ವ್ಯಕ್ತಿಯ ಸಂಬಂಧದಲ್ಲಿ, ಆ ವ್ಯಕ್ತಿಯು ಅವನ ಕರ್ತವ್ಯವನ್ನು ನಿರ್ವಹಿಸುವಲ್ಲಿ ಮಾಡಿದ ಅಥವಾ ಮಾಡಿದ್ದಾನೆಂದು ತಾತ್ಪರ್ಯವಾಗುವ ಕಾರ್ಯಗಳ ಸಂಬಂಧದಲ್ಲಿ, ಅವನ ವಿರುದ್ಧ ಹೂಡಲಾದ ಕಾನೂನು ವ್ಯವಹರಣೆಗಳ ಪ್ರತಿರಕ್ಷೆಯಲ್ಲಿ ಅವನು ವಹಿಸಿದ ಯಾವುದೇ ವೆಚ್ಚವನ್ನು ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದ ನಿಧಿಗಳಿಂದ ಸಂದಾಯ ಮಾಡಬೇಕೆಂದು ಕೋರುವ ಯಾವುದೇ ಕ್ಲೇಮು;
(v) ಒಂದು ಸ್ಥಳಿಯ ಪ್ರಾಧಿಕಾರದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಉಂಟಾದ ಗಾಯಗಳ ಸಂಬಂಧದಲ್ಲಿ ನಿವೃತ್ತಿವೇತನ ನೀಡುವಂತೆ ಕೋರಿ ಮಾಡಲಾದ ಕ್ಲೇಮು ಮತ್ತು ಅಂಥ ನೀಡಿಕೆಯ ಮೊತ್ತಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆ -ಇವುಗಳಿಗೆ ಸಂಬಂಧಿಸಿದಂತೆ ಆಯೋಗದೊಡನೆ ಸಮಾಲೋಚಿಸತಕ್ಕದ್ದು ಮತ್ತು ಆಯೋಗಕ್ಕೆ ಹಾಗೆ ಉಲ್ಲೇಖಿಸಿದ ಯಾವುದೇ ವಿಷಯದ ಮೇಲೆ ಮತ್ತು ಸರ್ಕಾರವು ಉಲ್ಲೇಖಿಸಬಹುದಾದ ಸ್ಥಳೀಯ ಪ್ರಾಧಿಕಾರಗಳ ನೌಕರರಿಗೆ ಸಂಬಂಧಪಟ್ಟ ಯಾವುದೇ ಇತರ ವಿಷಯದ ಮೇಲೆ ಸಲಹೆ ನೀಡುವುದು ಆಯೋಗದ ಕರ್ತವ್ಯವಾಗಿರತಕ್ಕದ್ದು :
ಪರಂತು, ಸರ್ಕಾರವು ಯಾವ ವಿಷಯಗಳ ಸಂಬಂಧದಲ್ಲಿ ಸಾಮಾನ್ಯವಾಗಿಯಾಗಲಿ ಅಥವಾ ಯಾವುದೇ ನಿರ್ದಿಷ್ಟ ವರ್ಗದ ಪ್ರಕರಣದ ಸಂದರ್ಭದಲ್ಲಾಗಲಿ ಅಥವಾ ಯಾವುದೇ ವಿಶಿಷ್ಟ ಸಂದರ್ಭಗಳಲ್ಲಾಗಲಿ ಆಯೋಗದೊಂದಿಗೆ ಸಮಾಲೋಚಿಸುವುದು ಅಗತ್ಯವಾಗಿರತಕ್ಕದ್ದಲ್ಲಮೋ ಆ ವಿಷಯಗಳನ್ನು ನಿರ್ದಿಷ್ಟಪಡಿಸುವ ಆದೇಶಗಳನ್ನು ಮಾಡಬಹುದು.
(2) ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ, ಆಯೋಗ ಮತ್ತು ಸ್ಥಳೀಯ ಪ್ರಾಧಿಕಾರದ ನಡುವೆ ಯಾವುದೇ ಅಭಿಪ್ರಾಯ ಭೇದ ಉಂಟಾದ ಸಂದರ್ಭದಲ್ಲಿ, ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರವು ಆ ವಿಷಯವನ್ನು ಸರ್ಕಾರಕ್ಕೆ ಉಲ್ಲೇಖಿಸತಕ್ಕದ್ದು ಮತ್ತು ಆ ಬಗೆಗಿನ ಸರ್ಕಾರದ ನಿರ್ಣಯವು ಅಂತಿಮವಾಗಿರತಕ್ಕದ್ದು.
(3) ಈ ಪ್ರಕರಣದ ಉದ್ದೇಶಕ್ಕಾಗಿ, ‘ಸ್ಥಳೀಯ ಪ್ರಾಧಿಕಾರ' ಎಂದರೆ, ಪುರಸಭಾ ಪರಿಷತ್ತು, ಪುರಸಭಾ ಸಮಿತಿ, ಪುರಸಭಾ ನಿಗಮ, ಪಟ್ಟಣ ಸಮಿತಿ, ಅಧಿಸೂಚಿತ ಪ್ರದೇಶ ಸಮಿತಿ, ಪಟ್ಟಣ ಮಂಡಲಿ, ನೈರ್ಮಲ್ಯ ಮಂಡಲಿ, ತಾಲೂಕು ಮಂಡಲಿ, ಗ್ರಾಮ ಪಂಚಾಯತಿ ಅಥವಾ ಸ್ಥಳೀಯ ಸ್ವಯಂಮಾಡಳಿತ ಸರ್ಕಾರ ಅಥವಾ ಗ್ರಾಮಾಡಳಿತದ ಉದ್ದೇಶಕ್ಕಾಗಿ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ರಚಿತವಾದ ಯಾವುದೇ ಹೆಸರಿನಿಂದ ಕರೆಯಲಾಗುವ ಇತರ ಪ್ರಾಧಿಕಾರ ಮತ್ತು ಇದರಲ್ಲಿ, ಮೈಸೂರು ನಗರಾಭಿವೃದ್ಧಿ ಅಧಿನಿಯಮ, 1903ರ (1903ರ ಮೈಸೂರು ಅಧಿನಿಯಮ III) ಮೇರೆಗೆ ರಚಿತವಾದ ಮಂಡಲಿಯ ಮತ್ತು ಬೆಂಗಳೂರು ನಗರಾಭಿವೃದ್ಧಿ ಅಧಿನಿಯಮ, 1945 (1945ರ ಮೈಸೂರು ಅಧಿನಿಯಮ v)ರ ಮೇರೆಗೆ ರಚಿತವಾದ ಮಂಡಲಿಯೂ ಒಳಗೊಳ್ಳುತ್ತದೆ.
1 [17ಎ. ಆಯೋಗವು ವಿವರಪಟ್ಟಿಕೆ, ಮುಂತಾದವುಗಳನ್ನು ಸರ್ಕಾರಕ್ಕೆ ಒದಗಿಸುವುದು.-ಸರ್ಕಾರವು ಅಗತ್ಯಪಡಿಸಬಹುದಾದ ವಿವರಪಟ್ಟಿಕೆಗಳು, ದಾಖಲೆಗಳು ಮತ್ತು ಮಾಹಿತಿಯನ್ನು ಆಯೋಗವು 1 ಸಲ್ಲಿಸತಕ್ಕದ್ದು.] 1. 1966ರ ಅಧಿನಿಯಮ ಸಂಖ್ಯೆ 25ರ ಮೂಲಕ 01.09.1966 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.