(1) ರಾಜ್ಯ ಸರ್ಕಾರದ ಇಚ್ಛೆಗೊಳಪಟ್ಟು ಅಧ್ಯಕ್ಷ ಮತ್ತು ಪ್ರತಿಯೊಬ್ಬ ಸದಸ್ಯನು, ಮೂರುವರ್ಷಗಳನ್ನು ಮೀರದ ಅಥವಾ ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹುದಾದ ಅವಧಿಯವರೆಗೆ ಪದಧಾರಣ ಮಾಡತಕ್ಕದ್ದು.
(2) ಆಯೋಗದ ಅಧ್ಯಕ್ಷನು ಅಥವಾ ಸದಸ್ಯನು ತನ್ನ ಸಹಿಯಿಂದ ಕೂಡಿದ ಪತ್ರವನ್ನು ರಾಜ್ಯಸರ್ಕಾರಕ್ಕೆ ಕಳುಹಿಸಿ ಯಾವುದೇ ಸಮಯದಲ್ಲಿ ತನ್ನ ಪದಕ್ಕೆ ರಾಜೀನಾಮೆ ನೀಡಬಹುದು.
(3) ಈ ಮುಂದಿನ ಸಂದರ್ಭಗಳಲ್ಲಿ ರಾಜ್ಯಸರ್ಕಾರವು ಒಬ್ಬ ವ್ಯಕ್ತಿಯನ್ನು ಅಧ್ಯಕ್ಷನ ಅಥವಾ ಸದಸ್ಯನ ಪದದಿಂದ ತೆಗೆದುಹಾಕತಕ್ಕದ್ದು,-
(ಎ) ಅವನು ಅವಿಮುಕ್ತ ದಿವಾಳಿಯಾದರೆ; ಅಥವಾ
(ಬಿ) ಅವನು ರಾಜ್ಯ ಸರ್ಕಾರದ ಅಭಿಪ್ರಾಯದಲ್ಲಿ ನೈತಿಕ ಅಧಃಪತನವನ್ನೊಳಗೊಳ್ಳುವ ಒಂದು ಅಪರಾಧಕ್ಕಾಗಿ ಅಪರಾಧಿ ಎಂದು ನಿರ್ಣೀತನಾಗಿದ್ದು ಕಾರಾವಾಸದ ಶಿಕ್ಷೆಗೆ ಒಳಗಾಗಿದ್ದರೆ; ಅಥವಾ
(ಸಿ) ಅವನು ಅಸ್ವಸ್ಥ ಚಿತ್ತದವನಾದರೆ ಮತ್ತು ಹಾಗೆಂದು ಸಕ್ಷಮ ನ್ಯಾಯಾಲಯದಿಂದ ಘೋಷಿಸಲಾಗಿದ್ದರೆ; ಅಥವಾ
(ಡಿ) ಅವನು ಕಾರ್ಯನಿರ್ವಹಿಸಲು ನಿರಾಕರಿಸಿದರೆ ಅಥವಾ ಕಾರ್ಯನಿರ್ವಹಿಸಲು ಅಸಮರ್ಥನಾದರೆ; ಅಥವಾ
(ಇ) ಅವನು ಆಯೋಗದಿಂದ ಗೈರು ಹಾಜರಾಗುವುದಕ್ಕೆ ಅನುಮತಿಯನ್ನು ಪಡೆದುಕೊಳ್ಳದೆ ಆಯೋಗದ ನಿರಂತರ ಮೂರು ಸಭೆಗಳಿಗೆ ಗೈರು ಹಾಜರಾದರೆ; ಅಥವಾ (ಎಫ್) ಅವನು ಪದದಲ್ಲಿ ಮುಂದುವರಿಯುವುದರಿಂದ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಹಿತಾಸಕ್ತಿಗೆ ಬಾಧಕವಾಗುವ ಅಂಥ ರೀತಿಯಲ್ಲಿ ಅಧ್ಯಕ್ಷನ ಅಥವಾ ಸದಸ್ಯನ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡಿರುವನೆಂದು ರಾಜ್ಯ ಸರ್ಕಾರವು ಅಭಿಪ್ರಾಯಪಟ್ಟರೆ:
ಪರಂತು, ಯಾವೊಬ್ಬ ವ್ಯಕ್ತಿಗೆ ಈ ವಿಚಾರದಲ್ಲಿ ಅಹವಾಲು ಹೇಳಿಕೊಳ್ಳಲು ಒಂದು ಸೂಕ್ತ ಅವಕಾಶಕೊಟ್ಟ ಹೊರತು ಈ ಖಂಡದ ಅಡಿಯಲ್ಲಿ ಅವನನ್ನು ತೆಗೆದು ಹಾಕತಕ್ಕದ್ದಲ್ಲ.
(4) (2)ನೇ ಉಪ-ಪ್ರಕರಣದ ಅಡಿಯಲ್ಲಿ ಅಥವಾ ಅನ್ಯಥಾ ರಿಕ್ತತೆಯುಂಟಾದಲ್ಲಿ ಹೊಸದಾಗಿ ನಾಮನಿರ್ದೇಶನ ಮಾಡುವ ಮೂಲಕ ಅದನ್ನು ತುಂಬತಕ್ಕದ್ದು.
(5) ಅಧ್ಯಕ್ಷನಿಗೆ ಸಂದಾಯ ಮಾಡಬಹುದಾದ ವೇತನಗಳು ಮತ್ತು ಭತ್ಯೆಗಳು ಮತ್ತು ಇತರ ಸೇವಾ ನಿಬಂಧನೆಗಳು ಮತ್ತು ಷರತ್ತುಗಳು ಮತ್ತು ಸದಸ್ಯರಿಗೆ ಸಂದಾಯ ಮಾಡಬಹುದಾದ ಭತ್ಯೆಗಳು ನಿಯಮಿಸಬಹುದಾದಂತೆ ಇರತಕ್ಕದ್ದು.