(1) ಈ ಅಧ್ಯಾದೇಶದ ಉದ್ದೇಶಗಳಿಗಾಗಿ ಬಳಸಲು ರಾಜ್ಯ ಸರ್ಕಾರವು ಯುಕ್ತವೆಂದು ಭಾವಿಸುವಂಥ ಹಣದ ಮೊತ್ತವನ್ನು ಈ ಸಂಬಂಧದಲ್ಲಿ ಕಾನೂನಿನ ಮೂಲಕ ರಾಜ್ಯ ವಿಧಾನ ಮಂಡಲವು ಸೂಕ್ತ ಧನವಿನಿಯೋಗ ಮಾಡಿದ ನಂತರ ಅನುದಾನಗಳ ಮೂಲಕ ಆಯೋಗಕ್ಕೆ ನೀಡತಕ್ಕದ್ದು.
(2) ಆಯೋಗವು ಈ ಅಧ್ಯಾದೇಶದ ಅಡಿಯಲ್ಲಿನ ಪ್ರಕಾರ್ಯಗಳನ್ನು ನೆರವೇರಿಸಲು ತಾನು ಸೂಕ್ತವೆಂದು ಭಾವಿಸುವ ಅಂಥ ಮೊತ್ತವನ್ನು ಖರ್ಚುಮಾಡಬಹುದು ಮತ್ತು ಅಂಥ ಮೊತ್ತಗಳನ್ನು (1)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಿರುವ ಅನುದಾನಗಳಿಂದ ಸಂದಾಯಮಾಡಬಹುದಾದ ವೆಚ್ಚವೆಂದು ಪರಿಗಣಿಸತಕ್ಕದ್ದು.
12 ಲೆಕ್ಕ ಪತ್ರಗಳು ಮತ್ತು ಲೆಕ್ಕ ಪರಿಶೋಧನೆ.- (1) ಆಯೋಗದ ಆದಾಯ ಮತ್ತು ವೆಚ್ಚಗಳನ್ನು ನಿಯಮಿಸಬಹುದಾದ ಅಂಥ ನಿಯಮಗಳಿಗೆ ಅನುಸಾರವಾಗಿ ಇಡತಕ್ಕದ್ದು.
(2) ಆಯೋಗವು, ನಿಯಮಿಸಬಹುದಾದ ಅಂಥ ನಮೂನೆಯಲ್ಲಿ ಲೆಕ್ಕ ಪತ್ರಗಳ ವಾರ್ಷಿಕ ವಿವರವನ್ನು ತಯಾರಿಸತಕ್ಕದ್ದು.
(3) ಆಯೋಗದ ಲೆಕ್ಕ ಪತ್ರಗಳನ್ನು ರಾಜ್ಯ ಸರ್ಕಾರವು ನೇಮಕ ಮಾಡಬಹುದಾದ ಅಂಥ ಲೆಕ್ಕ ಪರಿಶೋಧಕನು ವಾರ್ಷಿಕವಾಗಿ ಲೆಕ್ಕ ಪರಿಶೋಧನೆ ಮಾಡತಕ್ಕದ್ದು.
(4) ಲೆಕ್ಕ ಪರಿಶೋಧಕನಿಗೆ, ಲೆಕ್ಕ ಪರಿಶೋಧನೆಯ ಉದ್ದೇಶಕ್ಕಾಗಿ ಆಯೋಗದ ಎಲ್ಲ ಲೆಕ್ಕ ಪತ್ರಗಳನ್ನು ಮತ್ತು ಇತರ ದಾಖಲೆಗಳನ್ನು ಪಡೆಯಲು ಅವಕಾಶವಿರತಕ್ಕದ್ದು.
(59) ಆಯೋಗವು ತನ್ನ ಅನುದಾನದಿಂದ ನಿಯಮಿಸಬಹುದಾದಂತೆ ಲೆಕ್ಕ ಪರಿಶೋಧನೆಯ ಅಂಥ ವೆಚ್ಚಗಳನ್ನು ಸಂದಾಯಮಾಡತಕ್ಕದ್ದು.
(6) ಲೆಕ್ಕ ಪರಿಶೋಧಕನ ವರದಿಯನ್ನು ಸ್ವೀಕರಿಸಿದ ನಂತರ ಆದಷ್ಟು ಬೇಗನೆ, ಆಯೋಗವು, ಲೆಕ್ಕ ಪತ್ರಗಳ ವಾರ್ಷಿಕ ವಿವರವನ್ನು ಲೆಕ್ಕ ಪರಿಶೋಧಕನ ವರದಿಯ ಒಂದು ಪ್ರತಿಯೊಂದಿಗೆ ರಾಜ್ಯ ಸರ್ಕಾರಕ್ಕೆ ಕಳುಹಿಸತಕ್ಕದ್ದು ಮತ್ತು ಲೆಕ್ಕ ಪತ್ರಗಳ ವಾರ್ಷಿಕ ವಿವರಗಳನ್ನು ನಿಯಮಿಸಬಹುದಾದ ಅಂಥ ರೀತಿಯಲ್ಲಿ ಪ್ರಕಟಿಸುವಂತೆ ಮಾಡತಕ್ಕದ್ದು.
(7) ರಾಜ್ಯಸರ್ಕಾರವು, ಲೆಕ್ಕ ಪರಿಶೋಧನಾ ವರದಿಯನ್ನು ತಾನು ಸ್ವೀಕರಿಸಿದ ತರುವಾಯ ಆದಷ್ಟು ಬೇಗನೆ ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ ಮಂಡಿಸತಕ್ಕದ್ದು.
(8) ರಾಜ್ಯ ಸರ್ಕಾರವು ಲೆಕ್ಕ ಪರಿಶೋಧಕನ ವರದಿಯನ್ನು ಅವಗಾಹಿಸಿದ ನಂತರ ತಾನು ಉಚಿತವೆಂದು ಭಾವಿಸುವಂಥ ನಿರ್ದೇಶನಗಳನ್ನು ಆಯೋಗಕ್ಕೆ ನೀಡಬಹುದು ಮತ್ತು ಆಯೋಗವು ಅಂಥ ನಿರ್ದೇಶನಗಳನ್ನು ಪಾಲಿಸತಕ್ಕದ್ದು