(1) ಪ್ರಾಧಿಕಾರದ ಭದ್ರತಾ ದಳವು, ಅಧ್ಯಕ್ಷರ ಅಧೀಕ್ಷಣೆ ಮತ್ತು ನಿಯಂತ್ರಣದ ಅಡಿಯಲ್ಲಿ ಅಧಿನಿಯಮದಲ್ಲಿ ಮತ್ತು ಈ ನಿಯಮಗಳಲ್ಲಿ ಹೇಳಿರುವ ಭದ್ರತಾ ವಿಷಯಗಳಿಗೆ ಸಂಬಂಧಪಡುವಷ್ಟರ ಮಟ್ಟಿಗೆ ಪ್ರಾಧಿಕಾರಕ್ಕೆ ನೆರವು ನೀಡತಕ್ಕದ್ದು.
(2) ಅಧಿನಿಯಮದ ಅಥವಾ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961ರ (1963ರ ಕರ್ನಾಟಕ ಅಧಿನಿಯಮ ಸಂಖ್ಯೆ 11) ಉಪಬಂಧಗಳನ್ನು ಅಥವಾ ಅದರ ಮೇರೆಗೆ ರಚಿಸಿದ ಯಾವುವೇ ನಿಯಮಗಳನ್ನು ಅಥವಾ ಉಪ-ವಿಧಿಗಳನ್ನು ಉಲ್ಲಂಘಿಸಿ ಯಾವುದೇ ಅಪರಾಧ ಎಸಗಲು ಮಾಡಿದ ಪ್ರಯತ್ನಗಳ ಬಗ್ಗೆ ಅಧ್ಯಕ್ಷರಿಗೆ ಕೂಡಲೇ ಮಾಹಿತಿ ನೀಡಿ ವರದಿಗಳನ್ನು ಕಳುಹಿಸುವುದು ಪ್ರಾಧಿಕಾರದ ಭದ್ರತಾ ದಳದ ಮುಖ್ಯಸ್ಥನ ಕರ್ತವ್ಯವಾಗಿರತಕ್ಕದ್ದು.
(3) ಈ ಮುಂದಿನವುಗಳು ಪ್ರಾಧಿಕಾರದ ಭದ್ರತಾ ದಳದ ಕರ್ತವ್ಯಗಳಾಗಿರತಕ್ಕದ್ದು, ಎಂದರೆ,-
(ಎ) ಪ್ರಾಧಿಕಾರಕ್ಕೆ ಸೇರಿದ ಯಾವುದೇ ಭೂಮಿಯ ಮೇಲಿನ ಅನಧಿಕೃತ ಅಧಿಭೋಗ ಅತಿಕ್ರಮಣವನ್ನು ತಡೆಗಟ್ಟುವುದನ್ನೂ ಒಳಗೊಂಡಂತೆ;
(ಬಿ) ಪ್ರಾಧಿಕಾರಕ್ಕೆ ಸೇರಿದ ಭೂಮಿಯಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಮತ್ತು ಲೇಔಟ್ ನಿರ್ಮಾಣ ತಡೆಗಟ್ಟುವುದು;
(ಸಿ) ವಿಭಾಗೀಯ ವಿನಿಯಮಗಳ ಉಪಬಂಧಗಳನ್ನು ಅಥವಾ ಪ್ರಾಧಿಕಾರವು ಅನುಮೋದಿಸಿದ ನಕ್ಷೆಯನ್ನು ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳನ್ನು ತಡೆಯುವುದು;
(ಡಿ) ಸ್ಥಳೀಯ ಯೋಜನಾ ಪ್ರದೇಶದೊಳಗೆ ಪ್ರಾಧಿಕಾರದ ಪೂರ್ವಾನುಮೋದನೆ ಪಡೆಯದೆ, ಈ ಅಧಿನಿಯಮದ ಮತ್ತು ಮುಂದಿನ ಅಧಿನಿಯಮಗಳ ಎಂದರೆ:-
(i) ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961 (1963 ರ ಕರ್ನಾಟಕ ಅಧಿನಿಯಮ ಸಂಖ್ಯೆ 11)
(ii) ಕರ್ನಾಟಕ ಪೌರಸಭೆಗಳ ಅಧಿನಿಯಮ, 1964 (1964 ರ ಕರ್ನಾಟಕ ಅಧಿನಿಯಮ ಸಂಖ್ಯೆ 22)
(iii) ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993 ರ ಕರ್ನಾಟಕ ಅಧಿನಿಯಮ ಸಂಖ್ಯೆ 14)
(iv) ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 (1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12) - ಇವುಗಳ ಮೇರೆಗೆ ಅಪರಾಧವೆನಿಸುವ ಭೂ ಬಳಕೆಯ ಬದಲಾವಣೆ ಎಂದು ಪರಿಗಣಿತವಾಗುವ ನಿರ್ಮಾಣಗಳಿಗೆ, ಸಂಬಂಧಪಟ್ಟಂಥ ಯಾವುದೇ ಅಪರಾಧ ಮಾಡುವುದನ್ನು ಅಥವಾ ಮಾಡಲು ಪ್ರಯತ್ನಿಸುವುದನ್ನು ಅಥವಾ ಅಪರಾಧ ಮಾಡಲು ಒಳಸಂಚು ಮಾಡುವುದನ್ನು ಪತ್ತೆ ಹಚ್ಚುವುದು ಮತ್ತು ಅಪರಾಧದಲ್ಲಿ ತೊಡಗಿರುವ ವ್ಯಕ್ತಿಗಳನ್ನು ಗುರುತಿಸುವುದು, ಅವರ ಬಗ್ಗೆ ತನಿಖೆ ನಡೆಸುವುದು ಮತ್ತು ಕ್ರಮ ಜರುಗಿಸುವುದು.
(4) ಪ್ರಾಧಿಕಾರದ ಭದ್ರತಾ ದಳವು, ಪ್ರಾಧಿಕಾರವು ನಿರ್ಧರಿಸಿದಂತೆ ಅವಶ್ಯವಿರುವೆಡೆಗಳಲ್ಲೆಲ್ಲಾ ಸ್ಮಾರಕಗಳ ಸುತ್ತಮುತ್ತಲೂ ರಾತ್ರಿ ಗಸ್ತಿಗೆ ವ್ಯವಸ್ಥೆ ಮಾಡತಕ್ಕದ್ದು;
(5) ಭದ್ರತಾ ದಳವು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಭದ್ರತಾ ವಿಭಾಗದೊಂದಿಗೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯೊಂದಿಗೆ, ಸ್ಥಳೀಯ ಪ್ರಾಧಿಕಾರದೊಂದಿಗೆ ಮತ್ತು ಸಂಬಂಧಪಟ್ಟ ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸತಕ್ಕದ್ದು ಮತ್ತು ಸಹಕರಿಸತಕ್ಕದ್ದು;
(6) ಭದ್ರತಾ ದಳದ ಮುಖ್ಯಸ್ಥನು, ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974 (1974 ರ ಕರ್ನಾಟಕ ಅಧಿನಿಯಮ ಸಂಖ್ಯೆ: 32) ರ ಮೇರೆಗೆ ಕ್ರಮ ಕೈಗೊಳ್ಳುವುದಕ್ಕಾಗಿ ಅಧಿನಿಯಮದ ಪ್ರಕರಣ 31ರ ಉಪ-ಪ್ರಕರಣ (2)ರ ಮೇರೆಗೆ ಸಕ್ಷಮ ಪ್ರಾಧಿಕಾರಿಯೆಂದು ಘೋಷಿಸಲಾದ ಅಧಿಕಾರಿಯಾಗಿರತಕ್ಕದ್ದು;
(7) ಪ್ರಾಧಿಕಾರ ಭದ್ರತಾ ದಳವು, ಭದ್ರತಾ ವಿಷಯಗಳ ಮೇಲೆ ಕಾಲಕಾಲಕ್ಕೆ ತೆಗೆದುಕೊಳ್ಳುವ ತೀರ್ಮಾನಗಳನ್ನು ಜಾರಿಗೆ ತರಲು ಪ್ರಾಧಿಕಾರಕ್ಕೆ ನೆರವಾಗತಕ್ಕದ್ದು;
(8) ಪ್ರಾಧಿಕಾರ ಭದ್ರತಾ ದಳವು, ಸ್ಥಳೀಯ ಯೋಜನಾ ಪ್ರದೇಶದ ಗಡಿಗಳನ್ನು ಕಾಪಾಡಿಕೊಂಡು ಬರುವಲ್ಲಿ ಪ್ರಾಧಿಕಾರಕ್ಕೆ ನೆರವಾಗತಕ್ಕದ್ದು;
(9) ಪ್ರಾಧಿಕಾರಕ್ಕೆ ನಿಯತಕಾಲಿಕ ವಿವರ ಪತ್ರಗಳು ಅಥವಾ ಪ್ರಗತಿ ವರದಿಗಳನ್ನು ಕಳುಹಿಸುವುದು ಪ್ರಾಧಿಕಾರ ಭದ್ರತಾದಳದ ಮುಖ್ಯಸ್ಥನ ಕರ್ತವ್ಯವಾಗಿರತಕ್ಕದ್ದು; ಮತ್ತು
(10) ಅಧಿನಿಯಮದ ಮತ್ತು ಈ ನಿಯಮಗಳ ಉದ್ದೇಶಗಳನ್ನು ಸಾಧಿಸುವ ದೃಷ್ಟಿಯಿಂದ ಪ್ರಾಧಿಕಾರದ ಭದ್ರತಾ ದಳದ ಮುಖ್ಯಸ್ಥನು, ಭದ್ರತಾ ದಳವು ಸದಾ ಜಾಗೃತವಾಗಿದೆಯೇ ಮತ್ತು ಅದರ ಆರಕ್ಷಕರ ಮತ್ತು ಸಾಧನ ಸಾಮಗ್ರಿಗಳ ಸ್ಥಿತಿ ಉತ್ತಮವಾಗಿದೆಯೇ ಎಂಬುದನ್ನು ಗಮನಿಸತಕ್ಕದ್ದು.