ಅಧಿನಿಯಮದ ಉಪಬಂಧಗಳಿಗೆ ಒಳಪಟ್ಟು, ಪ್ರಾಧಿಕಾರವು ಈ ಮುಂದಿನ ಇತರ ಪ್ರಕಾರ್ಯಗಳನ್ನು ನೆರವೇರಿಸತಕ್ಕದ್ದು, ಎಂದರೆ.-
(1) ಪ್ರಾಧಿಕಾರವು, ಎಲ್ಲಾ ಪುರಾತತ್ವ ಸ್ಥಳಗಳು ಮತ್ತು ಸ್ಮಾರಕಗಳು, ಪ್ರಾಚೀನ ವಸ್ತುಗಳು ಮತ್ತು ಕುಶಲ ನಿರ್ಮಿತಿಗಳು, ಬಂಡೆಗಳು ಮತ್ತು ಜಲನಿಕಾಯಗಳು, ವನ್ಯಜೀವಿ, ಸಸ್ಯಸಂಕುಲ ಮತ್ತು ಪರಂಪರೆ ಪ್ರದೇಶದೊಳಗಿನ ಇತರ ಪರಿಸರದ ಸಮಗ್ರ ನಿರ್ವಹಣೆಗಾಗಿ ಉಪಬಂಧ ಕಲ್ಪಿಸುವ ಎಲ್ಲಾ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡ ನಂತರ ಸ್ಥಳ ನಿರ್ವಹಣಾ ಯೋಜನೆಯನ್ನು ಅಥವಾ ಪರಂಪರೆ ಪ್ರದೇಶದ ಸಂರಕ್ಷಣೆಯ ಮಹಾ ಯೋಜನೆಯನ್ನು ಸಿದ್ಧಪಡಿಸತಕ್ಕದ್ದು; ಮತ್ತು ಹಾಗೆ ಸಿದ್ಧಪಡಿಸಿದ ಯೋಜನೆಯನ್ನು ಕಾರ್ಯಗತಗೊಳಿಸುವುದಕ್ಕಾಗಿ ಹಾಗೂ ಕಾಲದಿಂದ ಕಾಲಕ್ಕೆ ಅದರ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದು ಹಾಗೂ ಅದರ ರೀತಿ ಮತ್ತು ಪ್ರಕ್ರಿಯೆಗಳ ಸ್ಥೂಲ ರೂಪರೇಷೆಗಳನ್ನು ಸಿದ್ಧಪಡಿಸತಕ್ಕದ್ದು;
(2) ಪ್ರಾಧಿಕಾರವು ಆ ಇಡೀ ಭೂವಿಸ್ತಾರವನ್ನು ಆ ಸ್ಥಳದ ಎಲ್ಲಾ ನೈಸರ್ಗಿಕ, ಪುರಾತತ್ವ ಮತ್ತು ಸಾಂಸ್ಕೃತಿಕ ಸಂಪನ್ಮೂಲಗಳು ಹಾಗೂ ಇನ್ನಿತರ ಪರಿಸರಗಳೊಂದಿಗೆ ಅದರ ನಿಸರ್ಗದತ್ತ ಸೌಂದರ್ಯವನ್ನು ಪುರಾತತ್ವ ಗಣನಾಂಶಗಳ ವ್ಯಾಪ್ತಿಯೊಳಗೆ ಹೆಚ್ಚಿಸುವ ಹಾಗೂ ಕಾಪಾಡಿಕೊಂಡು ಬರುವ ಉದ್ದೇಶದಿಂದ ಸಂರಕ್ಷಿಸುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳತಕ್ಕದ್ದು;
(3) ಪ್ರಾಧಿಕಾರವು ಪಾರಂಪರೆಯ ಪ್ರದೇಶವನ್ನು ನೋಡಲು ಬರುವವರು ಹಾಗೂ ಪ್ರವಾಸಿಗರಿಗೆ ಅಗತ್ಯವಾದ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿ ಸಾಕಷ್ಟು ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಪ್ರವಾಸೋದ್ಯಮವನ್ನು ಪೋಷಿಸುವ ದೃಷ್ಟಿಯಿಂದ ಹಾಗೆಯೇ ಪುರಾತತ್ವ ಗಣನಾಂಶಗಳ ಬಗ್ಗೆ ಗಮನ ನೀಡಿ ಆ ಪರಂಪರೆಯ ಪ್ರದೇಶದಲ್ಲಿರುವ ಸ್ಥಳೀಯರಿಗೆ ಅವರ ಮೂಲಭೂತ ನಾಗರಿಕ ಸೌಕರ್ಯಗಳನ್ನು ಒದಗಿಸಿ ಅವರ ಸಮಂಜಸ ಅಗತ್ಯತೆಗಳನ್ನು ಪೂರೈಸುವ ಮೂಲಕ ಅವರ ಕ್ಷೇಮಾಭಿವೃದ್ಧಿ ಮಾಡುವ ದೃಷ್ಟಿಯಿಂದ ಆ ಪಾರಂಪರೆ ಪ್ರದೇಶದ ಭೂವಿಸ್ತಾರದ ಅಭಿವೃದ್ಧಿಯನ್ನು ಮಾಡಿಸತಕ್ಕದ್ದು;
(4) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ತಮ್ಮ-ತಮ್ಮ ಅಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ ನಡೆಸುವ ಚಟುವಟಿಕೆಗಳಿಗೆ ಹಾಗೂ ಪುರಾತತ್ವ ಸ್ಥಳದ ನಿರ್ವಹಣೆ ಮತ್ತು ಕಾಪಾಡಿಕೊಂಡು ಬರುವ ಕೆಲಸಗಳಿಗೆ ಪ್ರಾಧಿಕಾರವು ಸಮನ್ವಯ ಸಹಕಾರವನ್ನು ನೀಡತಕ್ಕದ್ದು.