ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) ‘‘ಅಧಿನಿಯಮ'' ಎಂದರೆ ಕರ್ನಾಟಕ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬದ ರಜಾದಿನಗಳು) ಅಧಿನಿಯಮ, 1963;
(ಬಿ) ‘‘ನಮೂನೆ ಎಂದರೆ ಈ ನಿಯಮಗಳಿಗೆ ಲಗತ್ತಿಸಿದ ನಮೂನೆ;
(ಸಿ) ‘‘ಪ್ರಕರಣ'' ಎಂದರೆ ಈ ಅಧಿನಿಯಮದ ಒಂದು ಪ್ರಕರಣ''
(ಡಿ) ಇದರಲ್ಲಿ ಬಳಸಿದ ಮತ್ತು ಪರಿಭಾಷಿಸಿಲ್ಲದ ಎಲ್ಲಾ ಇತರ ಪದಗಳು ಮತ್ತು ಪದಾವಳಿಗಳು ಅಧಿನಿಯಮದಲ್ಲಿ ಅನುಕ್ರಮವಾಗಿ ಅವುಗಳಿಗೆ ಕೊಟ್ಟಿರುವ ಅರ್ಥವನ್ನು ಹೊಂದಿರತಕ್ಕದ್ದು.
1 [4. ಕಾರ್ಮಿಕ ಸಂಘಗಳು ಮತ್ತು ಕೆಲಸಗಾರರೊಂದಿಗೆ ಸಮಾಲೋಚಿಸುವ ರೀತಿ.- (1) ನಿಯೋಜಕನು 3ನೇ ಪ್ರಕರಣದ ಉದ್ದೇಶಕ್ಕಾಗಿ, ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಲಾದ ರಜಾದಿನಗಳ ಪಟ್ಟಿಯಿಂದ, ರಜಾದಿನಗಳ ಒಂದು ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು ಮತ್ತು ಕಾರ್ಮಿಕ ಸಂಘಗಳಿಗೆ ಅಥವಾ ಯಾವುದೇ ಕಾರ್ಮಿಕ ಸಂಘ ಇಲ್ಲದಿದ್ದರೆ, ಉದ್ಯೋಗಿಗಳಿಗೆ ಅಥವಾ ಅವರ ಅಧಿಕೃತ ಪ್ರತಿನಿಧಿಗಳಿಗೆ, ಅದನ್ನು ಕಳುಹಿಸಿ ಅದು ಸ್ವೀಕೃತವಾದ ಹದಿನೈದು ದಿನಗಳೊಳಗಾಗಿ, ಅದಕ್ಕೆ ಸಂಬಂಧಪಟ್ಟಂತೆ ಅವರ ಆಕ್ಷೇಪಣಿಗಳು, ಸೂಚನೆಗಳು ಮತ್ತು ಸಲಹೆಗಳು ಏನಾದರೂ ಇದ್ದರೆ ಅದನ್ನು ಸಲ್ಲಿಸುವಂತೆ ತಿಳಿಸತಕ್ಕದ್ದು.
(2) (1)ನೇ ಉಪನಿಯಮದ ಮೇರೆಗೆ ತಿಳಿಸಿದ ಕಾಲಾವಧಿಯ ಒಳಗೆ ಆಕ್ಷೇಪಣೆಗಳನ್ನು ಅಥವಾ ಸಲಹೆಗಳನ್ನು ಸಲ್ಲಿಸದಿದ್ದರೆ ಅಥವಾ ಕಾರ್ಮಿಕ ಸಂಘಗಳು ಅಥವಾ ಯಾವುದೇ ಕಾರ್ಮಿಕ ಸಂಘವು ಇಲ್ಲದಿದ್ದರೆ ಉದ್ಯೋಗಿಗಳು ಅಥವಾ ಅವರ ಪ್ರತಿನಿಧಿಗಳು ಆ ತಾತ್ಕಾಲಿಕ ಪಟ್ಟಿಗೆ ಒಪ್ಪಿಗೆ ನೀಡಿದರೆ ನಿಯೋಜಕನು, 5ನೇ ನಿಯಮದ (1)ನೇ ಉಪನಿಯಮದ ಅನುಸಾರವಾಗಿ ಅದನ್ನು ಪ್ರದರ್ಶಿಸುವ ಮೂಲಕ ನಿರ್ದಿಷ್ಟಪಡಿಸುವುದಕ್ಕೆ ಕ್ರಮಕೈಗೊಳ್ಳತಕ್ಕದ್ದು, ಅದಕ್ಕೆ ಅಸಮ್ಮತಿ ಏನಾದರೂ ಇದ್ದಲ್ಲಿ 2ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗೆ ಅಗತ್ಯಪಡಿಸಲಾದಂತೆ ಅವನು ಕ್ರಮ ಕೈಗೊಳ್ಳತಕ್ಕದ್ದು.