(1) ನಿರ್ದಿಷ್ಟಪಡಿಸಿದ ಅಥವಾ ಸಂದರ್ಭಾನುಸಾರ ಕಡಿಮೆಮಾಡಿದ ಅಥವಾ ವಿಸ್ತರಿಸಿದ ಪ್ರೊಬೇಷನ್ ಅವಧಿಯ ಕೊನೆಯಲ್ಲಿ ನೇಮಕ ಪ್ರಾಧಿಕಾರವು, ಪ್ರೊಬೇಷನರ್ನನ್ನು ಯಾವ ಹುದ್ದೆಗೆ ನೇಮಕ ಮಾಡಲಾಗಿತ್ತೋ ಆ ಹುದ್ದೆಯನ್ನು ಹೊಂದಲು ಅವನ ಸೂಕ್ತತೆಯನ್ನು ಪರಿಗಣಿಸತಕ್ಕದ್ದು ಮತ್ತು,-
(ಎ) ಅದು, ಆತನನ್ನು ನೇಮಕ ಮಾಡಿರುವ ಹುದ್ದೆಯನ್ನು ಹೊಂದಲು ಪ್ರೊಬೇಷರನು ಸೂಕ್ತನಾಗಿದ್ದಾನೆ ಎಂದು ನಿರ್ಧರಿಸಿದರೆ ಮತ್ತು ಪ್ರೊಬೇಷನ್ ಅವಧಿಯಲ್ಲಿ ಉತ್ತೀರ್ಣನಾಗಬೇಕಿರುವ ವಿಶೇಷ ಪರೀಕ್ಷೆಗಳು ಅಥವಾ ಉಪ ಪರೀಕ್ಷೆಗಳು ಯಾವುವಾದರೂ ಇದ್ದರೆ ಅವುಗಳಲ್ಲಿ ಆತನು ಉತ್ತೀರ್ಣನಾಗಿದ್ದರೆ, ಅದು ಸಾಧ್ಯವಾದಷ್ಟು ಬೇಗನೆ ಪ್ರೊಬೇಷನರನು ತನ್ನ ಪ್ರೊಬೇಷನ್ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿದ್ದಾನೆಂದು ಘೋಷಿಸುವ ಆದೇಶವನ್ನು ಹೊರಡಿಸತಕ್ಕದ್ದು ಮತ್ತು ಅಂಥ ಆದೇಶವು, ನಿರ್ದಿಷ್ಟಪಡಿಸಿದ, ಕಡಿಮೆ ಮಾಡಿದ ಅಥವಾ ವಿಸ್ತರಿಸಿದ ಪ್ರೊಬೇಷನ್ ಅವಧಿಯು ಮುಕ್ತಾಯಗೊಂಡ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
(ಬಿ) ನೇಮಕ ಪ್ರಾಧಿಕಾರವು, ಆತನನ್ನು ನೇಮಕ ಮಾಡಿರುವ ಹುದ್ದೆಯನ್ನು ಹೊಂದಲು ಆತ ಸೂಕ್ತನಾಗಿರುವುದಿಲ್ಲವೆಂದು ನಿರ್ಧರಿಸಿದರೆ ಅಥವಾ ಪ್ರೊಬೇಷನ್ ಅವಧಿಯಲ್ಲಿ ಉತ್ತೀರ್ಣನಾಗಬೇಕಿರುವ ವಿಶೇಷ ಪರೀಕ್ಷೆಗಳು ಅಥವಾ ಉಪಪರೀಕ್ಷೆಗಳು ಯಾವುವಾದರೂ ಇದ್ದರೆ ಅವುಗಳಲ್ಲಿ ಆತನು ಉತ್ತೀರ್ಣನಾಗಿಲ್ಲದಿದ್ದರೆ ಅದು, 4ನೇ ನಿಯಮದ ಅಡಿಯಲ್ಲಿ ಪ್ರೊಬೇಷನ್ ಅವಧಿಯನ್ನು ವಿಸ್ತರಿಸದೇ ಇರುವಾಗ ಆತನನ್ನು ಆದೇಶದ ಮೂಲಕ ಸೇವೆಯಿಂದ ವಿಮುಕ್ತಗೊಳಿಸಬಹುದು.
(2) ಪ್ರೊಬೇಷನರನು ತೃಪ್ತಿಕರವಾಗಿ ಪ್ರೊಬೇಷನ್ ಅವಧಿಯನ್ನು ಪೂರ್ಣಗೊಳಿಸಿದ ಬಗ್ಗೆ ಒಂದು ಆದೇಶವನ್ನು ಹೊರಡಿಸದಿದ್ದಲ್ಲಿ, ಅದನ್ನು ಅವನು ಪೂರ್ಣಗೊಳಿಸಿರುವನೆಂದು ಪರಿಗಣಿಸತಕ್ಕದ್ದಲ್ಲ. (1)ನೇ ಉಪನಿಯಮದ ಅಡಿಯಲ್ಲಿ ಆದೇಶವನ್ನು ಹೊರಡಿಸುವುದರಲ್ಲಿ ಉಂಟಾಗುವ ಯಾವುದೇ ವಿಳಂಬವು, ಪ್ರೊಬೇಷನರನು ತೃಪ್ತಿಕರವಾಗಿ ತನ್ನ ಪ್ರೊಬೇಷನ್ ಅವಧಿಯನ್ನು ಪೂರ್ಣಗೊಳಿಸಿರುವನೆಂದು ಭಾವಿಸುವುದಕ್ಕೆ ಅವನನ್ನು ಹಕ್ಕುಳ್ಳವನನ್ನಾಗಿಸುವುದಿಲ್ಲ.
ಸೂಚನೆ:- ಈ ನಿಯಮದಲ್ಲಿ ಮತ್ತು 6ನೇ ನಿಯಮದಲ್ಲಿ, ಪ್ರೊಬೇಷನರ್ನನ್ನು ಮತ್ತೊಂದು ಸೇವೆ ಅಥವಾ ಹುದ್ದೆಯಿಂದ ನೇಮಕ ಮಾಡಿದ ಸಂದರ್ಭದಲ್ಲಿ, ‘ಸೇವೆಯಿಂದ ಬಿಡುಗಡೆ' ಎಂದರೆ ಆ ಸೇವೆ ಅಥವಾ ಹುದ್ದೆಗೆ ಹಿಂದಕ್ಕೆ ಕಳುಹಿಸುವುದು ಎಂದು ಅರ್ಥ.