(1) ಕರ್ನಾಟಕ ಗೃಹ ನಿರ್ಮಾಣ ಮಂಡಲಿ (ನೇಮಕಾತಿ) ನಿಯಮಗಳಲ್ಲಿ ಮತ್ತು ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ಏನೇ ಒಳಗೊಂಡಿದ್ದರೂ, 1978ರ ಜುಲೈ 1ನೇ ದಿನಾಂಕಕ್ಕಿಂತ ಮುಂಚೆ ಕೆಲಸಕ್ಕೆ ತಕ್ಕ ಹಣ ಪಡೆಯುವ ಸಿಬ್ಬಂದಿಯಾಗಿ ನೇಮಕಗೊಂಡ ಮತ್ತು ಹತ್ತು ವರ್ಷಗಳಿಗಿಂತ ಕಡಿಮೆಯಿಲ್ಲದಂತೆ ನಿರಂತರ ಸೇವೆಯನ್ನು ಸಲ್ಲಿಸಿದ ಹಾಗೂ ನಿಯತ ಕಾಲಿಕ ವೇತನ ಶ್ರೇಣಿಯನ್ನು ಹೊಂದಿದ ಪೂರ್ಣಕಾಲಿಕ ನೌಕರನಾಗಿರುವ ಪ್ರತಿಯೊಬ್ಬ ಸದಸ್ಯನು, ಕರ್ನಾಟಕ ಗೃಹ ನಿರ್ಮಾಣ ಮಂಡಲಿಯ ಸೇವೆಯಲ್ಲಿ ರಾಜ್ಯ ಸರ್ಕಾರವು ಅಧಿಸೂಚಿಸಬಹುದಾದಂಥ ಹುದ್ದೆಗಳ ಪ್ರವರ್ಗದಲ್ಲಿ ಲೀನಗೊಳಿಸತಕ್ಕುದು: ಪರಂತು, ಅಂಥ ಸದಸ್ಯನು ಈ ನಿಯಮಗಳು ಜಾರಿಗೆ ಬಂದ ದಿನಾಂಕದಿಂದ 30 ದಿನಗಳ ಒಳಗಾಗಿ ಲಿಖಿತದಲ್ಲಿ ಅಂಥ ಲೀನಗೊಳಿಸುವಿಕೆಗಾಗಿ ತನ್ನ ಆಯ್ಕೆಯನ್ನು ಚಲಾಯಿಸಿದ ಮತ್ತು ಆಯ್ಕೆ ಸಮಿತಿಯಿಂದ ಅಂಥ ಲೀನಗೊಳಿಸುವಿಕೆಗೆ ಸೂಕ್ತವೆಂದು ಕಂಡುಬಂದ ಹಾಗೂ ಅವನು ದೈಹಿಕವಾಗಿ ಸಮರ್ಥನೆಂದು ಕಂಡು ಬಂದ ಹೊರತು ಅವನನ್ನು ಲೀನಗೊಳಿಸತಕ್ಕದ್ದಲ್ಲ.
(2) ಲೀನವನ್ನು, ನಿರಂತರ ಸೇವೆಯ ಅವಧಿಗನುಗುಣವಾಗಿ ಸರ್ಕಾರವು ನಿರ್ಧರಿಸಬಹುದಾದಂಥ ಸಂಖ್ಯೆಯ ಐದು ವಾರ್ಷಿಕ ಕಂತುಗಳಲ್ಲಿ ಮಾಡತಕ್ಕದ್ದು.
(3) ಆಯ್ಕೆ ಸಮಿತಿಯು,-
(1) ಗೃಹ ಮಂಡಲಿ ಆಯುಕ್ತರು, ಕರ್ನಾಟಕ ಗೃಹ ನಿರ್ಮಾಣ ಮಂಡಲಿ;
(2) ಮುಖ್ಯ ಇಂಜಿನಿಯರ್, ಕರ್ನಾಟಕ ಗೃಹ ನಿರ್ಮಾಣ ಮಂಡಲಿ;
(3) ಕಾರ್ಯದರ್ಶಿ, ಕರ್ನಾಟಕ ಗೃಹ ನಿರ್ಮಾಣ ಮಂಡಲಿ;
(4) ಸಂಬಂಧಪಟ್ಟ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ - ಇವರುಗಳನ್ನು ಒಳಗೊಂಡಿರತಕ್ಕುದು.