(1) ಆಯೋಗದ ಬಜೆಟ್ ಅನ್ನು, ಮುಂಬರುವ ವರ್ಷದ ನವೆಂಬರ್ 30ನೆ ದಿನಾಂಕಕ್ಕೆ ಮುಂಚೆ ಸಿದ್ದಪಡಿಸತಕ್ಕದ್ದು ಮತ್ತು ಸರ್ಕಾರದ ಅನುಮೋದನೆಗಾಗಿ ಅದನ್ನು ಪ್ರತಿ ವರ್ಷ ಡಿಸೆಂಬರ್ ಮೊದಲ ವಾರದ ಅವಧಿಯಲ್ಲಿ ದ್ವಿಪ್ರತಿಯಲ್ಲಿ ಸಲ್ಲಿಸತಕ್ಕದ್ದು.
-
ಪ್ರತಿಯೊಂದು ಹಣಕಾಸು ಬಜೆಟ್ ಅನುದಾನಗಳ ಸಂಬಂಧದಲ್ಲಿ ಮಾಡಿದ ವೆಚ್ಚದ ಲೆಕ್ಕಪತ್ರಗಳ ವಿವರಪತ್ರವನ್ನು ಮತ್ತು ಆಯೋಗದ ಎಲ್ಲ ಲೆಕ್ಕ ಪತ್ರಗಳನ್ನು ಕರ್ನಾಟಕ ಆರ್ಥಿಕ ಸಂಹಿತೆಗನುಸಾರವಾಗಿ ಮತ್ತು ಕಾಲಕಾಲಕ್ಕೆ ಸರ್ಕಾರವು ಹೊರಡಿಸುವ ಸೂಚನೆಗಳಿಗನುಸಾರವಾಗಿ ನಿರ್ವಹಿಸತಕ್ಕದ್ದು.
-
ಆಯೋಗದ ವಾರ್ಷಿಕ ಹಣಕಾಸು ಲೆಕ್ಕ ಪತ್ರಗಳು ಮತ್ತು ಲೆಕ್ಕ ಪರಿಶೋಧನಾ ವರದಿಗಳನ್ನು ಕರ್ನಾಟಕ ಮಹಾಲೇಖಪಾಲಕರಿಗೆ ಸಲ್ಲಿಸತಕ್ಕದ್ದು.
-
ಆಯೋಗವು, ಸರ್ಕಾರದ ಪೂರ್ವಾನುಮೋದನೆ ಪಡೆದು ಒಬ್ಬ ಚಾರ್ಟರ್ಡ್ ಅಕೌಂಟೆಂಟ್ರನ್ನು ಲೆಕ್ಕಪರಿಶೋಧಕರನ್ನಾಗಿ ನೇಮಕ ಮಾಡಿಕೊಳ್ಳತಕ್ಕದ್ದು ಮತ್ತು ಆಯೋಗವು ನಿರ್ಧರಿಸಬಹುದಾದಷ್ಟು ಲೆಕ್ಕ ಪರಿಶೋಧನಾ ವೆಚ್ಚಗಳನ್ನು ಸಂದಾಯ ಮಾಡತಕ್ಕದ್ದು.
-
ಆಯೋಗದ ಲೆಕ್ಕ ಪರಿಶೋಧನಾ ವರದಿಯನ್ನು ಅಧಿನಿಯಮದ 14ನೇ ಪ್ರಕರಣದ ಅಡಿಯಲ್ಲಿ ಅಗತ್ಯಪಡಿಸಲಾದಂತೆ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
-
ಸರ್ಕಾರವು, ಆಯೋಗದ ವಿಶೇಷ ಅಥವಾ ಸಾಮಾನ್ಯ ಲೆಕ್ಕ ಪರಿಶೋಧನೆ ಮಾಡುವುದು ಅಗತ್ಯವೆಂದು ಅಭಿಪ್ರಾಯಪಟ್ಟರೆ, ಆಯೋಗದ ವಿಶೇಷ ಅಥವಾ ಸಾಮಾನ್ಯ ಲೆಕ್ಕ ಪರಿಶೋಧನೆ ಮಾಡುವಂತೆ ಆದೇಶಿಸುವುದು.