ಈ ಅಧಿನಿಯಮ ಕಲಂ 4 ರ ಉದ್ದೇಶಕ್ಕಾಗಿ ಈ ನಿಯಮಗಳು ಜಾರಿಗೆ ಬರುವ ಆ ದಿನಾಂಕದವರೆಗೂ ಮೀಸಲಾತಿಯ ಬಗ್ಗೆ ರಾಜ್ಯ ಸರ್ಕಾರದಿಂದ ನೀಡಲಾಗಿರುವ ಕಾರ್ಯನಿರ್ವಾಹಕ ಆದೇಶಗಳು ಈ ನಿಯಮಗಳ ಭಾಗಗಳೆಂದೇ ಪರಿಗಣಿಸತಕ್ಕದ್ದು ಮತ್ತು ರಾಜ್ಯ ಸರ್ಕಾರದಿಂದ ಮಾರ್ಪಾಡು ಮಾಡುವವರೆಗೆ ಅಥವಾ ಬದಲಾಯಿಸುವವರೆಗೆ ಜಾರಿಯಲ್ಲಿರತಕ್ಕದ್ದು.
1 [3 ಎ. ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳ ನೀಡಿಕೆ:- (1) 4-ಎ ಪ್ರಕರಣದ ಅಡಿಯಲ್ಲಿ ಜಾತಿ ಪ್ರಮಾಣ ಪತ್ರ ಅಥವಾ ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳಿಗಾಗಿನ ಪ್ರತಿಯೊಂದು ಅರ್ಜಿಯು, ಕ್ಲೇಮಿನ ಸಮರ್ಥನೆಗಾಗಿ ಅಂಥ ದಸ್ತಾವೇಜುಗಳು ಮತ್ತು ಅವಶ್ಯಕವಾದ ಇತರೆ ವಿಷಯಗಳೊಡನೆ, ಸೂಕ್ತವಾಗಬಹುದಾದಂತೆ ಎ,ಬಿ, ಅಥವಾ ಸಿ ನಮೂನೆಗಳಲ್ಲಿ ಇರತಕ್ಕದ್ದು.
(2) ಅರ್ಜಿಯನ್ನು ಸ್ವೀಕರಿಸಿದ ನಂತರ, ತಹಶೀಲ್ದಾರನು, ಅರ್ಜಿದಾರನು ಒದಗಿಸಿರುವ ಮಾಹಿತಿಯನ್ನು, ದಸ್ತಾವೇಜುಗಳನ್ನು ಮತ್ತು ಅಂಥ ಅವಶ್ಯಕವಾದ ಇತರ ವಿಷಯಗಳನ್ನು ಪರಿಶೀಲಿಸತಕ್ಕದ್ದು ಮತ್ತು ಅಂಥ ಪರಿಶೀಲನೆಯಿಂದ ಅರ್ಜಿದಾರನು ಒದಗಿಸಿರುವ ಮಾಹಿತಿ, ದಸ್ತಾವೇಜುಗಳು ಮತ್ತು ಸಾಕ್ಷ್ಯಗಳು ಸರಿಯಾಗಿವೆಯೆಂದು ಮನವರಿಕೆಯಾದ ನಂತರ, ಆತನು ಜಾತಿ ಪ್ರಮಾಣ ಪತ್ರವನ್ನು ಅಥವಾ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಸೂಕ್ತವಾಗಬಹುದಾದಂತೆ, ಡಿ, ಇ ಅಥವಾ ಎಫ್ ನಮೂನೆಗಳಲ್ಲಿ ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ ಎರಡು ತಿಂಗಳ ಒಳಗಾಗಿ ನೀಡತಕ್ಕದ್ದು.
(3) ಅರ್ಜಿದಾರನು ಒದಗಿಸಿರುವ ಮಾಹಿತಿ, ದಸ್ತಾವೇಜುಗಳು ಅಥವಾ ಇತರ ದಾಖಲೆಗಳ ಸರಿತನದ ಬಗ್ಗೆ ತಹಶೀಲ್ದಾರನಿಗೆ ಮನವರಿಕೆಯಾಗದಿದ್ದಲ್ಲಿ, ಆತನು ಈ ಮುಂದಿನಂತೆ ವಿಚಾರಣೆಯನ್ನು ನಡೆಸಲು ಮುಂದುವರೆಯತಕ್ಕದ್ದು –
(ಎ) ತಹಶೀಲ್ದಾರನು ವಿಚಾರಣೆಯ ದಿನಾಂಕವನ್ನು ನಿಗದಿಪಡಿಸತಕ್ಕದ್ದು ಮತ್ತು ಹಾಗೆ ನಿಗದಿ ಮಾಡಿದ ದಿನಾಂಕದಂದು ಎಲ್ಲಾ ದಸ್ತಾವೇಜುಗಳು ಮತ್ತು ಅರ್ಜಿದಾರನು ಹಾಜರುಪಡಿಸಲು ಬಯಸುವ ಇತರ ಎಲ್ಲಾ ವಿಷಯಗಳೊಂದಿಗೆ ಹಾಜರಾಗುವಂತೆ ತಿಳಿಸಿ ಅವನಿಗೆ ನೋಟೀಸನ್ನು ನೀಡತಕ್ಕದ್ದು;
(ಬಿ) ವಿಚಾರಣೆಯ ಸಮಯದಲ್ಲಿ ಆತನು ಶಾಲಾ ದಾಖಲೆಗಳನ್ನು ಜನನ ನೋಂದಣಿ ಪ್ರಮಾಣ ಪತ್ರ,ಯಾವುದಾದರೂ ಇದ್ದರೆ, ಅದನ್ನು ಮತ್ತು ಸಂಬಂಧಪಟ್ಟ ಅಂಥ ಇತರ ದಾಖಲೆಗಳನ್ನು ಪರೀಕ್ಷಿಸತಕ್ಕದ್ದು. ಅರ್ಜಿದಾರನು ಹಾಜರಾಗಿದ್ದರೆ ಆತನನ್ನು ಪರೀಕ್ಷಿಸತಕ್ಕದ್ದು ಮತ್ತು ಅರ್ಜಿದಾರನ ತಂದೆತಾಯಿ / ಪಾಲಕರನ್ನು ಮತ್ತು ಅರ್ಜಿದಾರನ ಮತ್ತು ಅವನ ತಂದೆತಾಯಿ/ ಪಾಲಕರ ಸಾಮಾಜಿಕ ಸ್ಥಾನಮಾನಗಳನ್ನು ತಿಳಿದಿರುವ ಇತರ ಯಾಮೊಬ್ಬ ವ್ಯಕ್ತಿಯನ್ನು ಸಹ ಪರೀಕ್ಷಿಸಬಹುದು:
ಪರಂತು, ಅರ್ಜಿದಾರನು ಅನುಸೂಚಿತ ಬುಡಕಟ್ಟಿಗೆ ಸೇರಿದವನಾಗಿದ್ದ ಸಂಧರ್ಭದಲ್ಲಿ, ಮಾನವ ಶಾಸ್ತ್ರ ಮತ್ತು ಜನಾಂಗಕ್ಕೆ ಸಂಬಂಧಿಸಿದ ಗುಣಲಕ್ಷಣಗಳು, ದೇವತೆಗಳು, ಆಚರಣೆಗಳು, ಸಂಪ್ರದಾಯಗಳು, ವಿವಾಹ ಪದ್ದತಿ, ಉತ್ತರ ಕ್ರಿಯೆಗಳು, ಶವಗಳನ್ನು ಹೂಳುವ ವಿಧಾನಗಳು ಮತ್ತು ಅಂಥ ಇತರೆ ವಿಷಯಗಳ ಬಗ್ಗೆ ಕೂಡ ತಹಶೀಲ್ದಾರನು ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು.
ನಿಯಮ 3 –ಎ ಇಂದ 3-ಸಿ ವರೆಗೆ ಅಧಿಸೂಚನೆ ಸಂಖ್ಯೆ : ಎಸ್ಡಬ್ಲ್ಯೂಡಿ 132 ಎಸ್ಎಡಿ 97 ರ ಮೂಲಕ ದಿನಾಂಕ : 8.02.2000 ರನ್ವಯ ಸೇರಿಸಲಾಗಿದೆ ಮತ್ತು ದಿನಾಂಕ : 28.02.2000ದಿಂದ ಜಾರಿಗೆ ಬಂದಿರುತ್ತದೆ.
(ಸಿ) ತಹಶೀಲ್ದಾರನು, ಅರ್ಜಿದಾರನು ಮತ್ತು ಆತನ ತಂದೆತಾಯಿಗಳು/ ಪಾಲಕರು ಅವರು ಯಾವ ಗ್ರಾಮ ಅಥವಾ ಪ್ರದೇಶಕ್ಕೆ ಸೇರಿರುವರೋ ಆಗ್ರಾಮ ಅಥವಾ ಪ್ರದೇಶದಲ್ಲಿ ತಮಟೆ ಬಾರಿಸುವ ಮೂಲಕ ಅಥವಾ ಇತರ ಯಾವುದೇ ಅನುಕೂಲಕರವಾದ ರೀತಿಯಲ್ಲಿ ಇತರ ಸಾರ್ವಜನಿಕ ನೋಟೀಸನ್ನು ನೀಡತಕ್ಕದ್ದು. ಅಂಥ ನೋಟೀಸಿಗೆ ಪ್ರತಿಕ್ರಿಯೆಯಾಗಿ ಅಥವಾ ಅನ್ಯಥಾ ಯಾಮೊಬ್ಬ ವ್ಯಕ್ತಿ ಅಥವಾ ಸಂಘವು ಅರ್ಜಿದಾರನ ಕ್ಲೇಮನ್ನು ವಿರೋಧಿಸಿದರೆ, ಅಂಥ ವ್ಯಕ್ತಿ ಅಥವಾ ಸಂಘಕ್ಕೆ ವಿಚಾರಣೆಯ ಸಮಯದಲ್ಲಿ ಸಾಕ್ಷ್ಯವನ್ನು ಒದಗಿಸಲು ಅವಕಾಶವನ್ನು ಕೂಡ ನೀಡತಕ್ಕದ್ದು;
(ಡಿ) ಅರ್ಜಿದಾರನು ಮಾಡಿದ ಕ್ಲೇಮಿನ ನೈಜತೆಗೆ ಸಂಬಂಧಿಸಿದಂತೆ ಮನವರಿಕೆ ಮಾಡಿಕೊಳ್ಳುವ ಉದ್ದೇಶಕ್ಕಾಗಿ ಯಾಮೊಬ್ಬ ಅಧಿಕಾರಿಯ ಸಹಾಯವನ್ನು ತಹಶೀಲ್ದಾರನು ಪಡೆಯಬಹುದು;
(ಇ) ಅರ್ಜಿದಾರರು ಅಥವಾ ಅವರ ತಂದೆ-ತಾಯಿ/ ಪೋಷಕರ ವಾಸ ಸ್ಥಳವು, ತಹಶೀಲ್ದಾರರ ಅಧಿಕಾರ ವ್ಯಾಪ್ತಿ ಪ್ರದೇಶದೊಳಗೆ ಇರದಿದ್ದ ಸಂದರ್ಭದಲ್ಲಿ, ಆತನು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಗಳ ಸಂದರ್ಭದಲ್ಲಿ ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗೆ ಅಥವಾ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಗಳ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿಗೆ, ಅವರಲ್ಲಿ ಲಭ್ಯವಿರುವ ವೃತ್ತಿ ಸಂಬಂಧದ ಸಹಾಯವನ್ನು ನೀಡುವಂತೆ ಉಲ್ಲೇಖದ ಮೂಲಕ ಕೇಳಬಹುದು;
(ಎಫ್) ತಹಶೀಲ್ದಾರನು, ಅವಶ್ಯವೆಂದು ಭಾವಿಸಿದರೆ ಹೆಚ್ಚಿನ ಮಾಹಿತಿ, ದಸ್ತಾವೇಜು ಅಥವಾ ವಿಷಯಗಳನ್ನು ತರಿಸಿಕೊಳ್ಳಬಹುದು;
(ಜಿ) ತಹಶೀಲ್ದಾರನು, ಮೇಲೆ ನಿರ್ದಿಷ್ಟಪಡಿಸಿದ ರೀತಿಯಲ್ಲಿ ವಿಚಾರಣೆಯನ್ನು ನಡೆಸಿದ ನಂತರ ಅರ್ಜಿಯನ್ನು ಸ್ವೀಕರಿಸಿದ ಎರಡು ತಿಂಗಳ ಒಳಗಾಗಿ, ಜಾತಿ ಪ್ರಮಾಣ ಪತ್ರವನ್ನು ಅಥವಾ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಡಿ, ಇ ಅಥವಾ ಎಫ್ ನಮೂನೆಯಲ್ಲಿ ನೀಡಬಹುದು ಅಥವಾ ಕ್ಲೇಮನ್ನು ತಿರಸ್ಕರಿಸಬಹುದು.
3-ಬಿ. 4-ಎ ಪ್ರಕರಣದ ಅಡಿಯಲ್ಲಿ ಆದೇಶದ ವಿರುದ್ಧ ಅಪೀಲು :- 4-ಬಿ ಪ್ರಕರಣದ ಅಡಿಯಲ್ಲಿಯ ಒಂದು ಅಪೀಲನ್ನು ಸ್ವೀಕರಿಸಿದ ನಂತರ, ಅಸಿಸ್ಟೆಂಟ್ ಕಮೀಷನರು, ತಹಶೀಲ್ದಾರರಿಂದ ದಾಖಲೆಗಳನ್ನು ಪಡೆದುಕೊಳ್ಳಬಹುದು ಮತ್ತು ಉಭಯ ಪಕ್ಷಕಾರರಿಗೂ ಸುನಾವಣೆಯ ಅವಕಾಶವನ್ನು ನೀಡಿದ ನಂತರ ಮತ್ತು ಅವಶ್ಯಕವಾದಲ್ಲಿ ಯಾವುದೇ ಸ್ಥಳೀಯ ವಿಚಾರಣೆ ನಡೆಸಿದ ನಂತರ, ಆ ಬಗ್ಗೆ ಕಾರಣಗಳನ್ನು ನೀಡಿ ಅಪೀಲನ್ನು ದಾಖಲು ಮಾಡಿದ ದಿನಾಂಕದಿಂದ ಒಂದು ತಿಂಗಳ ಅವಧಿಯೊಳಗೆ, ಆದೇಶವನ್ನು ಹೊರಡಿಸಬಹುದು.
3-ಸಿ. ತಹಶೀಲ್ದಾರನು ನೀಡಿದ ಪ್ರಮಾಣ ಪತ್ರದ ಸಿಂಧುತ್ವ – (1) 4-ಎ ಪ್ರಕರಣದ ಅಡಿಯಲ್ಲಿ ನೀಡಿದ ಜಾತಿ ಪ್ರಮಾಣ ಪತ್ರವು, ಅದನ್ನು ರದ್ದುಪಡಿಸುವವರೆಗೆ ಅದು ಸಿಂಧುವಾಗಿರತಕ್ಕದ್ದು.
1 [(2) 4-ಎ ಪ್ರಕರಣದ ಮೇರೆಗೆ ನೀಡಲಾದ ಆದಾಯ ಮತ್ತು ಜಾತಿ ಪ್ರಮಾಣ ಪತ್ರವು ಐದು ವರ್ಷಗಳ ಅವಧಿಗೆ ಸಿಂಧುವಾಗಿರತಕ್ಕದ್ದು”.
- ಉಪನಿಯಮ(2) ನ್ನು ಅಧಿಸೂಚನೆ ಸಂಖ್ಯೆ : 155 ಬಿಸಿಎ 2011 ರ ಮೂಲಕ ದಿನಾಂಕ : 17.02.2012 ರನ್ವಯ ಪ್ರತಿಯೋಜಿಸಲಾಗಿದೆ. 1 [4. ಜಾತಿ ಪರಿಶೀಲನಾ ಸಮಿತಿ:-(1) ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳ ಸಂಬಂಧದಲ್ಲಿ ನೀಡಲಾದ ಜಾತಿ ಪ್ರಮಾಣಪತ್ರದ ಪರಿಶೀಲನೆಗೆ ಪ್ರತಿಯೊಂದು ಜಿಲ್ಲೆಯಲ್ಲೂ ಜಾತಿ ಪರಿಶೀಲನಾ ಸಮಿತಿ ಎಂಬ ಸಮಿತಿಯು ಇರತಕ್ಕದ್ದು. ಈ ಸಮಿತಿಯು ಮುಂದಿನ ಸದಸ್ಯರುಗಳನ್ನು ಒಳಗೊಂಡಿರತಕ್ಕದ್ದು, ಎಂದರೆ:-
(1) ಜಿಲ್ಲೆಯ ಜಿಲ್ಲಾಧಿಕಾರಿಯು ಅಧ್ಯಕ್ಷರಾಗಿರತಕ್ಕದ್ದು;
(2) ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ (ಆಡಳಿತ);
(3) ತಾಲ್ಲೂಕಿನ ತಹಶೀಲ್ದಾರ್;
(4) ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯು ಸದಸ್ಯ ಕಾರ್ಯದರ್ಶಿಯಾಗಿರತಕ್ಕದ್ದು;
ಪರಂತು, ರಾಜ್ಯ ಸರ್ಕಾರವು, ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಗಳಿಗೆ ಸಂಬಂಧಪಟ್ಟಂತೆ ನೀಡಲಾದ ಜಾತಿ ಪ್ರಮಾಣ ಪತ್ರದ ಸತ್ಯಾಪನೆಗಾಗಿ ಯಾವುದೇ ಜಿಲ್ಲೆಗೆ, ಈ ಮುಂದಿನ ಸದಸ್ಯರನ್ನು ಒಳಗೊಂಡ ಹೆಚ್ಚುವರಿ ಜಾತಿ ಪರಿಶೀಲನಾ ಸಮಿತಿಯೊಂದನ್ನು ರಚಿಸಬಹುದು, ಎಂದರೆ :-
(i) ಸ್ಪೆಷಲ್ ಡೆಪ್ಯುಟಿ ಕಮೀಷನರ್ ದರ್ಜೆಗೆ ಕಡಿಮೆಯಿಲ್ಲದ ರಾಜ್ಯ ಸರ್ಕಾರವು ನೇಮಕ ಮಾಡಿದ ಒಬ್ಬ ಅಧಿಕಾರಿ ಅಧ್ಯಕ್ಷರು
(ii) ಉಪ-ವಿಭಾಗದ ಅಸಿಸ್ಟೆಂಟ್ ಕಮೀಷನರ್ ಸದಸ್ಯರು
(iii) ತಾಲ್ಲೂಕಿನ ತಹಶೀಲ್ದಾರ್ ಸದಸ್ಯರು
(iv) ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಸದಸ್ಯರು]