ಕರ್ನಾಟಕ ಸಚಿವರ ವೇತನಗಳು ಮತ್ತು ಭತ್ಯೆಗಳ ಅಧಿನಿಯಮ 1956 (1956ರ ಅಧಿನಿಯಮ ಸಂಖ್ಯೆ 5) ರ ಅನ್ವಯ ಪ್ರಾಧಿಕಾರದ ಅಧ್ಯಕ್ಷರಿಗೆ ವೇತನ/ಭತ್ಯೆಗಳನ್ನು ನೀಡತಕ್ಕದ್ದು.
ಅಧ್ಯಕ್ಷನಲ್ಲದ ಪ್ರಾಧಿಕಾರದ ಪ್ರತಿಯೊಬ್ಬ ಸರ್ಕಾರೇತರ ಸದಸ್ಯರಿಗೆ:-
(1) ಪ್ರಾಧಿಕಾರದ ಸಭೆ, ಉಪ ಸಮಿತಿ ಸಭೆಗಳಿಗೆ ಹಾಜರಾಗುವುದಕ್ಕೆ ಕರ್ನಾಟಕ ಸಿವಿಲ್ ಸೇವಾ ನಿಯಮಗಳು, 1957ರ ಅನುಬಂಧ-Aರ ಅನ್ವಯ ಗ್ರೂಪ್- ಎ ವರ್ಗದ ಅಧಿಕಾರಿಗಳಿಗೆ ಲಭ್ಯವಿರುವ ದರದಲ್ಲಿ ಪ್ರಯಾಣ ಭತ್ಯೆಯನ್ನು ಮತ್ತು ನಿಗದಿತ ದರದಲ್ಲಿ ಉಪಸ್ಥಿತಿ ಭತ್ಯೆಯನ್ನು ನೀಡತಕ್ಕದ್ದು.
(2) ಪ್ರಕರಣ 13ರ ಅನ್ವಯ ಪಡೆದುಕೊಂಡ ತಜ್ಞರ ಸೇವೆಗಾಗಿ ಅವರಿಗೆ ಸಂದಾಯ ಮಾಡತಕ್ಕ ಭತ್ಯೆಗಳು ಪ್ರಾಧಿಕಾರದ ಸದಸ್ಯರಿಗೆ ಸಂದಾಯ ಮಾಡತಕ್ಕಂಥ ದರದಲ್ಲಿರತಕ್ಕದ್ದು ಮತ್ತು ಅವರಿಗೆ ಸಂದಾಯವಾಗತಕ್ಕಂತಹ ಗೌರವಧನ ಆಗಿಂದಾಗ್ಗೆ ಪ್ರಾಧಿಕಾರವು ನಿಗಧಿಪಡಿಸಬಹುದಾದಂತಹ ದರದಲ್ಲಿರತಕ್ಕದ್ದು.
ಕಾರ್ಯದರ್ಶಿಯು ತತ್ಕಾಲದಲ್ಲಿ ಜಾರಿಯಲ್ಲಿರುವ ಅಧಿನಿಯಮ ಅಥವಾ ಯಾವುದೇ ಕಾನೂನಿನಿಂದ ಅಥವಾ ಮೇರೆಗೆ ತನಗೆ ಪ್ರದತ್ತವಾದ ಅಥವಾ ವಹಿಸಿಕೊಟ್ಟಂತಹ ಅಧಿಕಾರಗಳನ್ನು ಚಲಾಯಿಸುವುದರ ಜೊತೆಗೆ ಮತ್ತು ಅಂಥ ಕರ್ತವ್ಯಗಳನ್ನು ನಿರ್ವಹಿಸುವುದರ ಜೊತಗೆ,-
(ಎ) ಪ್ರಾಧಿಕಾರದ ಪ್ರತಿಯೊಂದು ಸಭೆ ಮತ್ತು ಉಪಸಮಿತಿ ಸಭೆಗೆ ಹಾಜರಾಗತಕ್ಕದ್ದು;
(ಬಿ) ಪ್ರಾಧಿಕಾರದ ಪ್ರತಿಯೊಂದು ಸಭೆಯ ನಡವಳಿಕೆಯನ್ನು ಸಂಕ್ಷಿಪ್ತವಾಗಿ ದಾಖಲು ಮಾಡತಕ್ಕದ್ದು ಅಥವಾ ದಾಖಲು ಮಾಡುವಂತೆ ಮಾಡತಕ್ಕದ್ದು,
(ಸಿ) ಸಭೆಯಲ್ಲಿ ಮಂಡಿಸಲಾದ ಅಥವಾ ಯಾವುದೇ ಗೊತ್ತುವಳಿ ಅಥವಾ ಎತ್ತಲಾದ ಪ್ರಶ್ನೆಗಳ ಸಂಬಂಧದಲ್ಲಿ ತನ್ನ ಅಭಿಪ್ರಾಯವನ್ನು ಅಥವಾ ಯಾವುದೇ ಸ್ಪಷ್ಟೀಕರಣವನ್ನು ಒದಗಿಸತಕ್ಕದ್ದು;
(ಡಿ) ಪ್ರಾಧಿಕಾರದ ಎಲ್ಲ ಗೊತ್ತುವಳಿಗಳು ಮತ್ತು ಆದೇಶಗಳನ್ನು ಜಾರಿಗೊಳಿಸತಕ್ಕದ್ದು;
ಆದರೆ ಗೊತ್ತುವಳಿಗಳು ಅಥವಾ ಆದೇಶಗಳನ್ನು ಜಾರಿಗೆ ತರುವಲ್ಲಿ ಎಲ್ಲಿ ತೊಂದರೆಗಳು ಇರುತ್ತವೆಯೋ ಅಲ್ಲಿ ಅದನ್ನು ಪ್ರಾಧಿಕಾರಕ್ಕೆ ಅದರ ಮುಂದಿನ ಸಭೆಯಲ್ಲಿ ವರದಿ ಮಾಡತಕ್ಕದ್ದು ಮತ್ತು ಪ್ರಾಧಿಕಾರದ ನಿರ್ದೇಶನಗಳಿಗನುಸಾರವಾಗಿ ನಡೆಯತಕ್ಕದ್ದು,
(ಇ) ಪ್ರಾಧಿಕಾರದ ಎಲ್ಲ ಅಧಿಕಾರಿಗಳ ಮತ್ತು ಸಿಬ್ಬಂದಿಯವರ ಮೇಲ್ವಿಚಾರಣೆ ಮತ್ತು ನಿಯಂತ್ರಣ ಹೊಂದಿರತಕ್ಕದ್ದು,
(ಎಫ್) ಪ್ರಾಧಿಕಾರದ ಸಭೆಯ ವ್ಯವಹರಣೆಗಳಿಗೆ ಸಂಬಂಧಿಸಿದ ಎಲ್ಲಾ ಕಾಗದ ಪತ್ರಗಳು ಮತ್ತು ಪ್ರಾಧಿಕಾರದ ಮೇರೆಗೆ ಅಥವಾ ತನ್ನ ಸ್ವಂತ ಅಧಿಕಾರದ ಮೇರೆಗೆ ನಡೆಸಿದ ಪತ್ರ ವ್ಯವಹಾರಗಳ ಅಭಿರಕ್ಷಣೆಯನ್ನು ಹೊಂದಿರತಕ್ಕದ್ದು.