(1)ಗ್ರಾಮ ಸಭೆಯ ನಡವಳಿಗಳು ಕನ್ನಡದಲ್ಲಿರತಕ್ಕದ್ದು; ಒಂದು ವೇಳೆ ಭಾಷಾ ಅಲ್ಪಸಂಖ್ಯಾತರ ಜನಸಂಖ್ಯೆಯು ಶೇಕಡಾ 15 ಮೀರಿದ್ದಲ್ಲಿ ಅಲ್ಪಸಂಖ್ಯಾತರ ಭಾಷೆಯಲ್ಲೂ ಸಹ ಇರತಕ್ಕದ್ದು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಥವಾ ಸಭೆಯ ಸಂಚಾಲಕನೆಂದು ಗೊತ್ತುಪಡಿಸಿದ ಪಂಚಾಯಿತಿಯ ಅಂಥ ಅಧಿಕಾರಿ ಅದೇ ಕಾರಣಕ್ಕಾಗಿ ಒದಗಿಸಲಾದ ಪುಸ್ತಕದಲ್ಲಿ ಸದರಿ ನಡವಳಿಗಳನ್ನು ದಾಖಲಿಸಿ ಓದಿ ಹೇಳಿ ಅಧ್ಯಕ್ಷರಿಂದ ಸಹಿ ಪಡೆಯತಕ್ಕದ್ದು. ಗ್ರಾಮಸಭೆಯ ಸದಸ್ಯರುಗಳ ಹಾಜರಾತಿ ದಾಖಲೆ, ಗ್ರಾಮ ಪಂಚಾಯಿತಿ ಮತ್ತು ಅಧಿಕಾರಿಗಳ ಹಾಜರಾತಿ ದಾಖಲೆಗಳನ್ನು ನಡವಳಿ ಪುಸ್ತಕದಲ್ಲಿ ಇಡತಕ್ಕದ್ದು.
(2)ಗ್ರಾಮಸಭೆಯ ಅಭಿಪ್ರಾಯ, ಶಿಫಾರಸ್ಸು ಅಥವಾ ಸಲಹೆಗಳನ್ನು ಗ್ರಾಮ ಪಂಚಾಯಿತಿಗೆ 24 ಗಂಟೆಗಳಲ್ಲಿ ತಿಳಿಸತಕ್ಕದ್ದು. ಗ್ರಾಮ ಪಂಚಾಯಿತಿಯು ಜನವಸತಿ ಸಭೆಯ ಮತ್ತು ಅಗತ್ಯತೆಗಳನ್ನು ವಾರ್ಡ್ಸಭೆಯ ಶಿಫಾರಸ್ಸುಗಳನ್ನು ಮತ್ತು ಸಲಹೆಗಳನ್ನು ಅಗತ್ಯವಾಗಿ ಪರಿಶೀಲಿಸತಕ್ಕದ್ದು.