(1)ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪಂಚಾಯಿತಿಯ ಎಲ್ಲಾ ಸ್ಥಾಯಿ ಸಮಿತಿಯ ಅಧ್ಯಕ್ಷರುಗಳು ಗ್ರಾಮ ಸಭೆಯ ಸಾಮಾನ್ಯ ಸಭೆಗಳಲ್ಲಿ ಹಾಜರಿರತಕ್ಕದ್ದು.
(2) ಗ್ರಾಮ ಸಭೆಯ ಎಲ್ಲಾ ಸಾಮಾನ್ಯ ಸಭೆಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಯು ಹಾಜರಿರತಕ್ಕದ್ದು. ಒಂದು ವೇಳೆ ಸಮಾವೇಶಕರಿಗೆ ಪಂಚಾಯಿತಿಯ ಇತರೆ ಯಾವುದಾದರೂ ಅಧಿಕಾರಿಯ ಹಾಜರಾತಿಯು ಅವಶ್ಯಕತೆ ಇದೆ ಎನಿಸಿದಲ್ಲಿ, ಸಮಾವೇಶಕನು ಅಂತಹ ಅಧಿಕಾರಿಗೆ ಪತ್ರ ಬರೆದು ಸಭೆಯಲ್ಲಿ ಅಂಥ ಅಧಿಕಾರಿಯು ಹಾಜರಿರುವಂತೆ ಕೋರತಕ್ಕದ್ದು ಮತ್ತು ಅಂಥ ಅಧಿಕಾರಿಯು ಆ ಸಭೆಯಲ್ಲಿ ಹಾಜರಿರತಕ್ಕದ್ದು. ಸಕಾರಣವಿಲ್ಲದೇ ಗೈರುಹಾಜರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಶಿಫಾರಸ್ಸು ಮಾಡಬಹುದು. ಆದರೆ ಪ್ರತಿ ಗ್ರಾಮಸಭೆಯಲ್ಲಿ ಈ ಕೆಳಕಂಡ ಅಧಿಕಾರಿಗಳು ಹಾಜರಿರುವುದು ಅವಶ್ಯಕವಾಗಿದೆ, ಅಂದರೆ.-
(ಎ) ಗ್ರಾಮದಲ್ಲಿನ ಪ್ರತಿ ಶಾಲೆಯಲ್ಲಿನ ಮುಖ್ಯೋಪಾದ್ಯಾಯರು;
(ಬಿ) ಗ್ರಾಮೀಣ ಶಿಕ್ಷಣ ಸಮಿತಿಯ ಅಧ್ಯಕ್ಷರು;
(ಸಿ) ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ;
(ಡಿ) ಸಂಬಂಧಿಸಿದ ಪಶು ಚಿಕಿತ್ಸಾಲಯದ ಪಶು ವೈದ್ಯ ಅಥವಾ ಸಹಾಯಕ;
(ಇ) ಸಂಬಂಧಿತ ವಾಣಿಜ್ಯ ಬ್ಯಾಂಕು ಅಥವಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಮ್ಯಾನೇಜರ್;
(ಎಫ್) ಸಂಬಂಧಿತ ಸಹಾಯಕ ಕೃಷಿ ಅಧಿಕಾರಿಯ ಕೃಷಿ ಸಹಾಯಕ;
(ಜಿ) ಸಂಬಂಧಿತ ಗ್ರಾಮ ಲೆಕ್ಕಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕ;
(ಹೆಚ್) ಅಂಗನವಾಡಿ ಕಾರ್ಯಕರ್ತರು;
(ಐ) ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷ;
(ಜೆ) ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಸಂಬಂಧಪಟ್ಟ ಅಭಿಯಂತರರು;
(ಕೆ) ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಕುಡಿಯುವ ನೀರಿನ ಯೋಜನೆಯ ಸಂಬಂಧಪಟ್ಟ ಅಭಿಯಂತರರು;
(ಎಲ್) ಸಂಬಂಧಿತ ತೋಟಗಾರಿಕೆ ಸಹಾಯಕ, ಮೀನುಗಾರಿಕೆ ಸಹಾಯಕ ಹಾಗೂ ರೇಷ್ಮೆ ಇಲಾಖೆಯ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿ ಮತ್ತು
(ಎಮ್) ಅಧ್ಯಕ್ಷರು ಸೂಚಿಸಬಹುದಾದ ಇನ್ನೀತರ ಅಧಿಕಾರಿಗಳು;