(1) 4ನೇ ಪ್ರಕರಣದ (2)ನೇ ಉಪಪ್ರಕರಣದ ಅಡಿಯಲ್ಲಿ ಅಧಿಸೂಚಿಸಲಾದ ಯಾವುದೇ ಪ್ರದೇಶದಲ್ಲಿ ಬಾವಿಯನ್ನು ನಿರ್ಮಿಸಲು ಇಚ್ಫಿಸುವ ಯಾರೇ ವ್ಯಕ್ತಿಯು, ಸಂಬಂಧಪಟ್ಟ ಪ್ರದೇಶದಲ್ಲಿ ನೀರಾವರಿ ಕಾಮಗಾರಿಗಳ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಕಾರ್ಯನಿರ್ವಾಹಕ ಇಂಜಿನಿಯರ್ ಮುಖಾಂತರ ಮಂಜೂರಾತಿಗಾಗಿ ರಾಜ್ಯಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸತಕ್ಕದ್ದು. ಅಂಥ ಅರ್ಜಿಯು ಬಾವಿಯನ್ನು ನಿರ್ಮಿಸಬೇಕಾದ ಸ್ಥಳ, ಉದ್ದೇಶ ಮತ್ತು ಅದರ ಸಾಮಾನ್ಯ ಉದ್ದಳತೆ ಇವುಗಳ ವಿವರಗಳನ್ನು ಒಳಗೊಂಡಿರತಕ್ಕದ್ದು.
(2) (1)ನೇ ಉಪನಿಯಮದ ಅಡಿಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ರವರು ಸ್ವೀಕರಿಸಿದ ಪ್ರತಿಯೊಂದು ಅರ್ಜಿಯನ್ನು, ಅದನ್ನು ಸ್ವೀಕರಿಸಿದ ತರುವಾಯ ಸಾಧ್ಯವಾದಷ್ಟು ಬೇಗನೆ, ತಮ್ಮ ಶಿಫಾರಸುಗಳೊಡನೆ ರಾಜ್ಯ ಸರ್ಕಾರಕ್ಕೆ ಅಥವಾ 4ನೇ ಪ್ರಕರಣದ (2)ನೇ ಉಪಪ್ರಕರಣದ ಅಡಿಯಲ್ಲಿ ಅದು ಅಧಿಕಾರ ನೀಡಿದ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು.
(3) (2)ನೇ ಉಪನಿಯಮದ ಅಡಿಯಲ್ಲಿನ ಅರ್ಜಿಯನ್ನು ಸ್ವೀಕರಿಸಿದ ಮೇಲೆ ರಾಜ್ಯ ಸರ್ಕಾರ ಅಥವಾ ಅಧಿಕಾರ ಪಡೆದ ಪ್ರಾಧಿಕಾರಿಯು ಅರ್ಜಿದಾರನಿಗೆ ತನ್ನ ಅಹವಾಲನ್ನು ಹೇಳಿಕೊಳ್ಳಲು ಸೂಕ್ತ ಅವಕಾಶವನ್ನು ಕೊಟ್ಟ ತರುವಾಯ, ಆ ಬಗ್ಗೆ ತಾನು ಯುಕ್ತವೆಂದು ಭಾವಿಸುವಂಥ ಆದೇಶಗಳನ್ನು ಹೊರಡಿಸತಕ್ಕದ್ದು.