(1) ಕಾರ್ಯದರ್ಶಿಯವರು ಮುಂದೆ ಬರುವ ಏಪ್ರಿಲ್ ಒಂದನೇ ದಿನಾಂಕದಂದು ಪ್ರಾರಂಭಗೊಳ್ಳುವ ಹಣಕಾಸು ವರ್ಷದ ನಿರೀಕ್ಷಿತ ಸ್ವೀಕೃತಿಗಳು ಮತ್ತು ವೆಚ್ಚಗಳ ಒಂದು ಆಯವ್ಯಯ ಅಂದಾಜಿನೊಂದಿಗೆ ಮುಂಬರುವ ಹಣಕಾಸು ವರ್ಷದ ಮಾರ್ಚ್ ಮೂವತ್ತೊಂದನೇ ದಿನಾಂಕದಂದು ಕೊನೆಗೊಳ್ಳುವ ಹಣಕಾಸು ವರ್ಷ ವಾಸ್ತವಿಕ ಮತ್ತು ನಿರೀಕ್ಷಿತ ಸ್ವೀಕೃತಿಗಳು ಮತ್ತು ವೆಚ್ಚದ ಒಂದು ಪೂರ್ಣ ಲೆಕ್ಕಪತ್ರವನ್ನು ತಯಾರಿಸಿ ಉಪ ಸಮಿತಿ ಮುಂದೆ ವಿಷಯ ಮಂಡಿಸಿದ ತರುವಾಯ ನವೆಂಬರ್ ಒಂದನೇ ದಿನಾಂಕ ಮತ್ತು ಜನವರಿ ಒಂದನೇ ದಿನಾಂಕದ ನಡುವೆ ನಡೆಯುವ ಸಭೆಯ ಮುಂದೆ ಇಡುವಂತೆ ಮಾಡತಕ್ಕದ್ದು.
(2) ಆ ನಂತರ ಪ್ರಾಧಿಕಾರವು ಮುಂದೆ ಬರುವ ಏಪ್ರಿಲ್ ಒಂದನೇ ದಿನಾಂಕದಂದು ಪ್ರಾರಂಭಗೊಳ್ಳುವ ಹಣಕಾಸು ವರ್ಷದ ಆಯ–ವ್ಯಯದಲ್ಲಿ ಒಳಗೊಂಡಿರುವ ಧನವಿನಿಯೋಗಗಳನ್ನು ಮತ್ತು ಮಾರ್ಗೋಪಾಯಗಳನ್ನು ನಿರ್ಧರಿಸತಕ್ಕದ್ದು. ಪ್ರಾಧಿಕಾರವು ಅಂಗೀಕರಿಸಿದಂತೆ ಆಯ–ವ್ಯಯವನ್ನು ಸರ್ಕಾರವು ನಿಗಧಿಪಡಿಸಬಹುದಾದಂತ ದಿನಾಂಕಕ್ಕೆ ಮುಂಚೆ ಸರ್ಕಾರಕ್ಕೆ ಕಳುಹಿಸತಕ್ಕದ್ದು.
(3) ಅಂತ ಆಯ–ವ್ಯಯ ಅಂದಾಜಿನಲ್ಲಿ ಪ್ರಾಧಿಕಾರವು ಇತರ ವಿಷಯಗಳೊಂದಿಗೆ,–
(i) ಅಧಿನಿಯಮದಿಂದ ಅಥವಾ ಇತರ ಯಾವುದೇ ಕಾನೂನಿನಿಂದ ಪ್ರಾಧಿಕಾರದ ಮೇಲೆ ವಿಧಿಸಿದ ಹಲವಾರು ಕರ್ತವ್ಯಗಳನ್ನು ಪೂರೈಸಲು ಅಗತ್ಯವಿರಬಹುದಾದಂತ ಸೇವೆಗಳಿಗೆ ಸಾಕಷ್ಟು ಸೂಕ್ತ ಉಪ–ಬಂಧ ಕಲ್ಪಿಸತಕ್ಕದ್ದು;
(ii) ತಾನು ಒಪ್ಪಂದ ಮಾಡಿಕೊಂಡಿರುವ ಸಾಲಗಳ ಸಂಬಂಧದಲ್ಲಿ ಪ್ರಾಧಿಕಾರವು ಬದ್ದವಾಗಿರಬಹುದಾದ ಅಸಲು ಮತ್ತು ಅದರ ಮೇಲಿನ ಬಡ್ಡಿಯ ಎಲ್ಲಾ ಕಂತುಗಳು ಬಾಕಿ ಬಿದ್ದಂತೆಲ್ಲ ಸಂದಾಯ ಮಾಡತಕ್ಕದ್ದು;
(iii) ಸದರಿ ವರ್ಷದ ಅಂತ್ಯದಲ್ಲಿ ಸರ್ಕಾರವು ಆಗ್ಗಿಂದಾಗ್ಗೆ ನಿಗಧಿಪಡಿಸಬಹುದಾದಂತ ವರಮಾನದ ಮೊತ್ತ ಅಥವಾ ಶೇಕಡಾ ಪ್ರಮಾಣಕ್ಕಿಂತ ಕಡಿಮೆಯಿಲ್ಲದ ಒಂದು ಬಾಕಿಗೆ ಅವಕಾಶ ನೀಡತಕ್ಕದ್ದು; ಮತ್ತು
(iv) (1)ನೇ ಉಪ–ನಿಯಮದಲ್ಲಿ ಹೇಳಲಾದ ದಿನಾಂಕದಂದು ಅಥವಾ ಅದಕ್ಕೂ ಮುಂಚೆ ಪ್ರಾಧಿಕಾರವು ಆಯ–ವ್ಯಯ ಅಂದಾಜನ್ನು ಅನುಮೋದಿಸಲು ತಪ್ಪಿದರೆ, ಕಾರ್ಯದರ್ಶಿಯವರು ಆಯ–ವ್ಯಯ ಅಂದಾಜನ್ನು ಸರ್ಕಾರಕ್ಕೆ ಕಳುಹಿಸತಕ್ಕದ್ದು ಮತ್ತು ಸರ್ಕಾರವು ಅದನ್ನು ಮಾರ್ಪಾಡುಗಳೊಂದಿಗೆ ಅಥವಾ ಮಾರ್ಪಾಡುಗಳಿಲ್ಲದೆ ಅನುಮೋದಿಸತಕ್ಕದ್ದು, ಸರ್ಕಾರದಿಂದ ಹಾಗೇ ಅನುಮೋದಿತವಾದ ಆಯ–ವ್ಯಯವನ್ನು ಸರ್ಕಾರವು ಪ್ರಮಾಣಿಕರಿಸತಕ್ಕದ್ದು ಮತ್ತು ಆನಂತರ ಪ್ರಾಧಿಕಾರವು ಯುಕ್ತವಾಗಿ ಅನುಮೋದಿಸಿದೆಯೆಂದು ಭಾವಿಸತಕ್ಕದ್ದು.