(1) ಕರ್ನಾಟಕ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಅಧಿನಿಯಮ, 1963ರ (1963ರ ಕರ್ನಾಟಕ ಅಧಿನಿಯಮ 22) 3ನೇ ಪ್ರಕರಣದಡಿಯಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯಗಳು ಈ ಮುಂದಿನಂತೆ ಉಪಬಂಧ ಕಲ್ಪಿಸಿರುವಂತೆ ತಮ್ಮ ಪ್ರಾದೇಶಿಕ ಅಧಿಕಾರ ಕ್ಷೇತ್ರ ವ್ಯಾಪ್ತಿಯೊಡನೆ ಈ ಅಧ್ಯಾದೇಶದಡಿಯಲ್ಲಿ ಸ್ಥಾಪನೆಯಾಗಿವೆ ಎಂದು ಭಾವಿಸತಕ್ಕದ್ದು ಎಂದರೆ:-
(ಎ) ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ರಾಮನಗರಂ, ಮಂಡ್ಯ, ತುಮಕೂರು, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಿಗೆ ವಿಸ್ತರಿಸಿದ ಅಧಿಕಾರ ಕ್ಷೇತ್ರ ವ್ಯಾಪ್ತಿಯೊಂದಿಗೆ ಬೆಂಗಳೂರಿನಲ್ಲಿ ಕೇಂದ್ರ ಕಾರ್ಯಸ್ಥಾನವನ್ನು ಹೊಂದಿರುವ ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ;
(ಬಿ) ಬಾಗಲಕೋಟೆ, ಬೆಳಗಾಂ, ಬಳ್ಳಾರಿ, ಬೀದರ್, ಬಿಜಾಪುರ, ಧಾರವಾಡ, ಗದಗ, ಗುಲ್ಬರ್ಗಾ, ಹಾವೇರಿ, ಕೊಪ್ಪಳ, ರಾಯಚೂರು ಮತ್ತು ಉತ್ತರಕನ್ನಡ ಜಿಲ್ಲೆಗಳಿಗೆ ವಿಸ್ತರಿಸಿದ ಅಧಿಕಾರ ಕ್ಷೇತ್ರ ವ್ಯಾಪ್ತಿಯೊಂದಿಗೆ ಧಾರವಾಡದಲ್ಲಿ ಕೇಂದ್ರ ಕಾರ್ಯಸ್ಥಾನವನ್ನು ಹೊಂದಿರುವ ಧಾರವಾಡದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ;
(2) ಈ ಅಧ್ಯಾದೇಶವು ಪ್ರಾರಂಭವಾದ ದಿನದಂದು, (1)ನೇ ಉಪಪ್ರಕರಣದಲ್ಲಿ ಏನೇ ಇದ್ದರೂ, ಗುಲ್ಬರ್ಗಾ, ಬೀದರ್, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಿಗೆ ವಿಸ್ತರಿಸಲಾದ ಅಧಿಕಾರ ಕ್ಷೇತ್ರ ವ್ಯಾಪ್ತಿಯೊಂದಿಗೆ ರಾಯಚೂರಿನಲ್ಲಿ ಕೇಂದ್ರ ಕಾರ್ಯಸ್ಥಾನದೊಂದಿಗೆ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಸ್ಥಾಪನೆಯಾಗತಕ್ಕದ್ದು ಮತ್ತು (1)ನೇ ಉಪಪ್ರಕರಣದ (ಬಿ) ಖಂಡದಡಿಯಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾಲಯವು ಹೊಂದಿದ್ದ ಆ ಪ್ರದೇಶದ ಮೇಲಿನ ಅಧಿಕಾರ ಕ್ಷೇತ್ರ ವ್ಯಾಪ್ತಿಯು ರದ್ದಾಗತಕ್ಕದ್ದು.
(3) ಕುಲಾಧಿಪತಿ, ಸಹ ಕುಲಾಧಿಪತಿ, ಪ್ರತಿಯೊಂದು ವಿಶ್ವವಿದ್ಯಾಲಯದ ಕುಲಪತಿ, ವ್ಯವಸ್ಥಾಪನಾ ಮಂಡಳಿ, ವಿದ್ಯಾವಿಷಯಕ ಪರಿಷತ್ತು ಮತ್ತು ಇತರ ಪ್ರಾಧಿಕಾರಗಳು ಹಾಗೂ ಅಧಿಕಾರಿಗಳು ಸೇರಿ (1)ನೇ ಉಪ-ಪ್ರಕರಣದಲ್ಲಿ ನಿರ್ದಿಷ್ಟಪಡಿಸಲಾದ, ವಿಶ್ವವಿದ್ಯಾಲಯದ ಹೆಸರಿನ ಒಂದು ನಿಗಮಿತ ನಿಕಾಯವು ರಚನೆಯಾಗತಕ್ಕದ್ದು.
(4) ಅಂಥ ಪ್ರತಿಯೊಂದು ವಿಶ್ವವಿದ್ಯಾಲಯವು ಶಾಶ್ವತ ಉತ್ತರಾಧಿಕಾರವನ್ನು ಮತ್ತು ಸಾಮಾನ್ಯ ಮುದ್ರೆಯನ್ನು ಹೊಂದಿರತಕ್ಕದ್ದು ಹಾಗೂ ತನ್ನ ಹೆಸರಿನಿಂದ ದಾವೆ ಹೂಡಬಹುದು ಅಥವಾ ದಾವೆಗೆ ಗುರಿಯಾಗಬಹುದು.
(5) ವಿಶ್ವವಿದ್ಯಾಲಯವು ಚರ ಮತ್ತು ಸ್ಥಿರ ಸ್ವತ್ತುಗಳೆರಡೂ ಆರ್ಜಿಸಲು ಮತ್ತು ಧಾರಣ ಮಾಡಲು ಮತ್ತು ಕೇಂದ್ರ ಸರ್ಕಾರದಿಂದ, ರಾಜ್ಯ ಸರ್ಕಾರದಿಂದ ಅಥವಾ ಯಾವುದೇ ಇತರ ಅಂಗೀಕೃತ ಮೂಲಗಳಿಂದ ಸಾಲ ಪಡೆಯಲು ಮತ್ತು ಯಾವುದೇ ಕರಾರನ್ನು ಮಾಡಿಕೊಳ್ಳಲು ಮತ್ತು ಈ ಅಧ್ಯಾದೇಶದ ಉದ್ದೇಶಕ್ಕಾಗಿ ಅವಶ್ಯವಾದ ಎಲ್ಲಾ ಇತರ ಕಾರ್ಯಗಳನ್ನು ಮಾಡಲು ಸಕ್ಷಮವಾಗಿರತಕ್ಕದ್ದು.
(6) ವಿಶ್ವವಿದ್ಯಾಲಯವು, ತನ್ನಲ್ಲಿ ನಿಹಿತವಾಗಿದ್ದಿರಬಹುದಾದ ಅಥವಾ ತಾವು ಆರ್ಜಿಸಿರಬಹುದಾದ ಯಾವುದೇ ಸ್ಥಿರ ಸ್ವತ್ತನ್ನು ಸರ್ಕಾರದ ಪೂರ್ವಾನುಮೋದನೆಯನ್ನು ಪಡೆದುಕೊಳ್ಳದೇ ಗುತ್ತಿಗೆ ನೀಡತಕ್ಕದ್ದಲ್ಲ, ಮಾರಾಟ ಮಾಡತಕ್ಕದ್ದಲ್ಲ ಅಥವಾ ಅನ್ಯಥಾ ವರ್ಗಾವಣೆ ಮಾಡತಕ್ಕದ್ದಲ್ಲ.
(7) ವಿಶ್ವವಿದ್ಯಾಲಯವು ಹೂಡಿದ ಅಥವಾ ಅದರ ವಿರುದ್ಧ ಹೂಡಲಾದ ಎಲ್ಲಾ ದಾವೆಗಳಲ್ಲಿ ಮತ್ತು ಇತರ ಕಾನೂನು ವ್ಯವಹರಣೆಗಳಲ್ಲಿ, ವಾದ ಪ್ರತಿವಾದ ಪತ್ರಗಳಿಗೆ ಕುಲಸಚಿವರು ಸಹಿ ಮಾಡತಕ್ಕದ್ದು ಮತ್ತು ಸತ್ಯಾಪನೆ ಮಾಡತಕ್ಕದ್ದು ಮತ್ತು ಅಂಥ ದಾವೆಗಳು ಮತ್ತು ವ್ಯವಹರಣೆಗಳಲ್ಲಿನ ಎಲ್ಲಾ ಆದೇಶಿಕೆಗಳನ್ನು ವಿಶ್ವವಿದ್ಯಾಲಯದ ಕುಲಸಚಿವರು ಹೊರಡಿಸತಕ್ಕದ್ದು ಮತ್ತು ಅವರ ಮೇಲೆ ಜಾರಿ ಮಾಡತಕ್ಕದ್ದು.