ವಿಶ್ವವಿದ್ಯಾಲಯವು ಈ ಮುಂದಿನ ಅಧಿಕಾರಗಳು ಮತ್ತು ಪ್ರಕಾರ್ಯಗಳನ್ನು ಹೊಂದಿರತಕ್ಕದ್ದು, ಎಂದರೆ:-
(1) ಕೃಷಿ ಮತ್ತು ಸಂಬಂಧಿತ ಇತರ ಕಲಿಕೆಯ ವಿಭಾಗಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ಸೂಕ್ತ ಎಂದು ಭಾವಿಸಬಹುದಾದ ಶಿಕ್ಷಣವನ್ನು ಒದಗಿಸುವುದು;
(2) ಕೃಷಿ ಮತ್ತು ಸಂಬಂಧಿತ ಕಲಿಕೆಯ ವಿಭಾಗಗಳಲ್ಲಿ ಸಂಶೋಧನೆಯನ್ನು ನಡೆಸುವುದಕ್ಕೆ ಅವಕಾಶವನ್ನು ನೀಡುವುದು.
(3) ಸಂಶೋಧನೆಯಿಂದ ತಿಳಿದುಬಂದ ವಿಷಯಗಳನ್ನು ಮತ್ತು ತಾಂತ್ರಿಕ ಮಾಹಿತಿಗಳನ್ನು ವಿಸ್ತರಣಾ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಪ್ರಸಾರ ಮಾಡಲು ಅವಕಾಶ ಕಲ್ಪಿಸುವುದು;
(4) ಯಾವುದೇ ಇತರ ವಿಶ್ವವಿದ್ಯಾಲಯದಲ್ಲಿ ಅಥವಾ ಈ ಉದ್ದೇಶಕ್ಕಾಗಿ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಅರೆಕಾಲಿಕ ವ್ಯಾಸಂಗ ಕ್ರಮ ಮತ್ತು / ಅಥವಾ ಸಂಶೋಧನೆಯು ಸೇರಿದಂತೆ ವಿಶ್ವವಿದ್ಯಾಲಯದಲ್ಲಿ ನಿಯಮಿಸಿದ ವ್ಯಾಸಂಗ ಕ್ರಮ ಅಥವಾ ಸಂಶೋಧನೆ ಅಥವಾ ಅವರೆಡನ್ನೂ ಮಾಡಿರುವ ವ್ಯಕ್ತಿಗಳಿಗೆ ಪದವಿಗಳು, ಡಿಪ್ಲೊಮಗಳು ಮತ್ತು ಇತರ ಶೈಕ್ಷಣಿಕ ಪ್ರಶಸ್ತಿಗಳಿಗಾಗಿ ವ್ಯಾಸಂಗ ಕ್ರಮಗಳನ್ನು ಪ್ರಾರಂಭಿಸುವುದು ಮತ್ತು ಪರೀಕ್ಷೆಗಳನ್ನು ನಡೆಸುವುದು ಮತ್ತು ಪದವಿ, ಡಿಪ್ಲೋಮಾ ಮತ್ತಿತರ ಶೈಕ್ಷಣಿಕ ಪ್ರಶಸ್ತಿ ನೀಡುವುದು;
(5) ನಿಯಮಿಸಬಹುದಾದಂಥ ಗೌರವ ಪದವಿಗಳು ಮತ್ತು ಇತರ ಪ್ರಶಸ್ತಿಗಳನ್ನು ಪ್ರದಾನ ಮಾಡುವುದು;
(6) ರೈತರಿಗೆ, ಕ್ಷೇತ್ರ ಕೆಲಸಗಾರರಿಗೆ, ಗ್ರಾಮೀಣ ಯುವಕರಿಗೆ ಮತ್ತು ವಿಶ್ವವಿದ್ಯಾಲಯದಲ್ಲಿ ಕ್ರಮಬದ್ಧ ವಿದ್ಯಾರ್ಥಿಗಳಾಗಿ ಭರ್ತಿಯಾಗಿರದ ಇತರ ವ್ಯಕ್ತಿಗಳಿಗೆ ತರಬೇತಿಯನ್ನು ನೀಡುವುದು;
(7) 4ನೇ ಪ್ರಕರಣದಲ್ಲಿ ನಮೂದಿಸಿರುವ ಮಿತಿಗಳಿಗೊಳಪಟ್ಟು, ವಿಶ್ವವಿದ್ಯಾಲಯವು ನಿರ್ಧರಿಸಬಹುದಾದಂಥ ರೀತಿಯಲ್ಲಿ ಮತ್ತು ಅಂಥ ಉದ್ದೇಶಗಳಿಗಾಗಿ ಇತರ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳೊಡನೆ ಜೊತೆಗೂಡಿ ಕೆಲಸಮಾಡುವುದು;
(8) ಕೃಷಿ, ಗೃಹವಿಜ್ಞಾನ, ಕೃಷಿ ಇಂಜಿನಿಯರಿಂಗ್, ಅರಣ್ಯ ವಿಜ್ಞಾನ ಮತ್ತು ಸಂಬಂಧಿತ ವಿಜ್ಞಾನಗಳಿಗೆ ಸಂಬಂಧಿಸಿದ ಕಾಲೇಜುಗಳು ಮತ್ತು ಇತರ ಸಂಸ್ಥೆಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು;
(9) ಬೋಧನೆ, ಸಂಶೋಧನೆ ನಡೆಸಲು ಮತ್ತು ವಿಸ್ತರಣಾ ಶಿಕ್ಷಣಕ್ಕಾಗಿ ಪ್ರಯೋಗಾಲಯಗಳು, ಗ್ರಂಥಾಲಯಗಳು, ಸಂಶೋಧನಾ ಕೇಂದ್ರಗಳು ಮತ್ತು ಸಂಸ್ಥೆಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು;
(10) ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣಕ್ಕಾಗಿ ಹುದ್ದೆಗಳನ್ನು ಸೃಜಿಸುವುದು ಮತ್ತು ಅಂಥ ಹುದ್ದೆಗಳಿಗೆ ವ್ಯಕ್ತಿಗಳನ್ನು ನೇಮಿಸುವುದು;
(11) ಆಡಳಿತಾತ್ಮಕವಾದ ಮತ್ತು ಇತರ ಹುದ್ದೆಗಳನ್ನು ಸೃಜಿಸುವುದು ಮತ್ತು ಅಂಥ ಹುದ್ದೆಗಳಿಗೆ ವ್ಯಕ್ತಿಗಳನ್ನು ನೇಮಕ ಮಾಡುವುದು;
(12) ಶಾಸನಗಳನ್ವಯ ಫೆಲೋಶಿಪ್, ವಿದ್ಯಾರ್ಥಿವೇತನಗಳು, ಸ್ಟೈಪೆಂಡುಗಳು ಮತ್ತು ಬಹುಮಾನಗಳನ್ನು ಸ್ಥಾಪಿಸುವುದು ಮತ್ತು ನೀಡುವುದು;
(13) ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ನಿವಾಸ ಗೃಹಗಳನ್ನು ನಿರ್ಮಿಸುವುದು ಮತ್ತು ನಿರ್ವಹಿಸಿಕೊಂಡು ಬರುವುದು;
(14) ನಿಯಮಿಸಲಾದಂಥ ಫೀಜು ಮತ್ತು ಇತರೆ ಚಾರ್ಜುಗಳನ್ನು ನಿಗದಿಪಡಿಸುವುದು, ಕೋರುವುದು ಮತ್ತು ಸ್ವೀಕರಿಸುವುದು;
(15) ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನಿವಾಸ ನಡತೆ ಮತ್ತು ಶಿಸ್ತನ್ನು ಮೇಲ್ವಿಚಾರಣೆ ಮಾಡುವುದು ಮತ್ತು ನಿಯಂತ್ರಿಸುವುದು ಹಾಗೂ ಅವರ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಯನ್ನು ವರ್ಧಿಸುವುದಕ್ಕಾಗಿ ಏರ್ಪಾಡುಗಳನ್ನು ಮಾಡುವುದು;
(16) ವಿದೇಶಗಳಿಂದ ಮತ್ತು ದೇಶದ ಒಳಗಿನಿಂದ ವಂತಿಗೆಗಳನ್ನು ಸ್ವೀಕರಿಸುವುದು:
ಪರಂತು, ಸರ್ಕಾರದ ಪೂರ್ವಾನುಮೋದನೆಯನ್ನು ಪಡೆದ ಹೊರತು ವಿಶ್ವವಿದ್ಯಾಲಯವು ವಿದೇಶದಿಂದ, ವಿದೇಶಿ ಪ್ರತಿಷ್ಠಾನಗಳು ಮತ್ತು ಅಂಥ ದೇಶದ ಯಾವುದೇ ವ್ಯಕ್ತಿಯಿಂದ ವಂತಿಗೆಗಳನ್ನು ಸ್ವೀಕರಿಸತಕ್ಕದ್ದಲ್ಲ.
(17) ಭಾರತದ ಹೊರಗೆ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ತನ್ನ ವಿಶೇಷಾಧಿಕಾರಕ್ಕೆ ಪ್ರವೇಶಾವಕಾಶವನ್ನು ನೀಡಲು ವಿಶ್ವವಿದ್ಯಾಲಯಕ್ಕೆ ಅನುಮತಿಸುವುದು;
(18) ವಿವಿಧ ಶಾಸನಗಳಡಿಯಲ್ಲಿ ನಿರ್ಧರಿಸಿದಂತೆ ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳಲ್ಲಿ ಕಲಿಕೆಯನ್ನು ನಡೆಸಲು ಖಾಸಗಿ ಕೃಷಿ ಸಂಸ್ಥೆಗಳಿಗೆ ಸಂಯೋಜನೆ ನೀಡುವುದು.
(19) ವಿಶ್ವವಿದ್ಯಾಲಯದ ಧ್ಯೇಯೋದ್ದೇಶಗಳ ಪುರೋಭಿವೃದ್ಧಿಗೆ ಅಗತ್ಯವಾಗಬಹುದಾದ ಎಲ್ಲಾ ಚಟುವಟಿಕೆಗಳ ಮತ್ತು ಕಾರ್ಯಗಳನ್ನು ಅವು ಮೇಲೆ ಹೇಳಿದ ಅಧಿಕಾರಗಳಿಗೆ ಪ್ರಾಸಂಗಿಕವಾಗಿರಲಿ ಇಲ್ಲದಿರಲಿ ಮಾಡುವುದು: