ಈ ಅಧ್ಯಾದೇಶದ ಉಪಬಂಧಗಳಿಗೊಳಪಟ್ಟು, ವಿಶ್ವವಿದ್ಯಾಲಯದ ಶಾಸನಗಳು, ವಿಶ್ವವಿದ್ಯಾಲಯದ ವ್ಯವಹಾರಗಳಿಗೆ ಸಂಬಂಧಪಟ್ಟ ಯಾವುದೇ ವಿಷಯಕ್ಕೆ ಉಪಬಂಧ ಕಲ್ಪಿಸಬಹುದು ಮತ್ತು ವಿಶೇಷವಾಗಿ, ಈ ಮುಂದಿನವುಗಳಿಗೆ ಉಪಬಂಧ ಕಲ್ಪಿಸತಕ್ಕದ್ದು, ಎಂದರೆ:-
(1) ಪ್ರಾಧಿಕಾರಗಳ ರಚನೆ, ಅಧಿಕಾರಗಳು ಮತ್ತು ಕರ್ತವ್ಯಗಳು;
(2) ವಿಶ್ವವಿದ್ಯಾಲಯದ ವಿದ್ಯಾವಿಷಯಕ ಜೀವನವನ್ನು ಉತ್ತಮಗೊಳಿಸಲು ಅವಶ್ಯವಾದ ಅಥವಾ ಅಪೇಕ್ಷಣೀಯವಾದ ಇತರ ನಿಕಾಯಗಳ ಅಥವಾ ಸಮಿತಿಗಳ ರಚನೆ, ಸಂಯೋಜನೆ ಮತ್ತು ಪ್ರಕಾರ್ಯಗಳು;
(3) ಕುಲಪತಿಯವರನ್ನು ಹೊರತುಪಡಿಸಿ ವಿಶ್ವವಿದ್ಯಾಲಯದ ಅಧಿಕಾರಿಗಳ ಪದನಾಮಗಳು, ಅಧಿಕಾರಗಳು, ಪ್ರಕಾರ್ಯಗಳು, ಕರ್ತವ್ಯಗಳು ಮತ್ತು ನೇಮಕಾತಿಯ ರೀತಿ ಮತ್ತು ಆಯ್ಕೆಗಳು ಮತ್ತು ಸೇವೆಯ ನಿಬಂಧನೆಗಳು ಮತ್ತು ಷರತ್ತುಗಳು;
(4) ವಿಶ್ವವಿದ್ಯಾಲಯದ ಬೋಧಕರ ಮತ್ತು ಇತರ ಸಿಬ್ಬಂದಿಗಳ ವರ್ಗೀಕರಣ, ವಿದ್ಯಾರ್ಹತೆ ಮತ್ತು ನೇಮಕಾತಿಯ ರೀತಿ, ಸೇವಾ ನಿಬಂಧನೆಗಳು ಮತ್ತು ಷರತ್ತುಗಳು ಹಾಗೂ ಕರ್ತವ್ಯಗಳು;
(5) ವಿಶ್ವವಿದ್ಯಾಲಯಗಳ ಫ್ಯಾಕಲ್ಟಿಗಳು, ಇಲಾಖೆಗಳು, ಸಂಶೋಧನಾ ಸಂಸ್ಥೆಗಳು, ಕೇಂದ್ರಗಳು ಮತ್ತು ಇತರ ಘಟಕಗಳ ಸ್ಥಾಪನೆ, ಸಮ್ಮಿಲನ, ಉಪವಿಭಜನ ಅಥವಾ ರದ್ಧತಿ;
(6) ವಿಶ್ವವಿದ್ಯಾಲಯದ ಅಧಿಕಾರಿಗಳು, ಬೋಧಕರು ಮತ್ತು ಇತರ ಸಿಬ್ಬಂದಿಗಳ ಪ್ರಯೋಜನಕ್ಕಾಗಿ ವಿಶ್ರಾಂತಿ ವೇತನ ಮತ್ತು ವಿಮಾ ಯೋಜನೆಗಳ ರಚನೆ ಮತ್ತು ಅಂಥ ಯೋಜನೆಗಳ ನಿಯಮಗಳು, ನಿಬಂಧನೆಗಳು ಮತ್ತು ಷರತ್ತುಗಳು;
(7) ಪದವಿ ಮತ್ತು ಡಿಪ್ಲೋಮಾಗಳನ್ನು ಪ್ರದಾನ ಮಾಡಲು ಘಟಕೋತ್ಸವಗಳನ್ನು ನಡೆಸುವುದು;
(8) ಗೌರವ ಪದವಿಗಳು ಮತ್ತು ವಿದ್ಯಾವಿಷಯಕ ಪ್ರಶಸ್ತಿಗಳನ್ನು ಪ್ರದಾನ ಮಾಡುವುದು ಮತ್ತು ಹಿಂಪಡೆಯುವುದು;
(9) ವಿಶ್ವವಿದ್ಯಾಲಯದಡಿಯಲ್ಲಿ, ನೇಮಕವಾದ ಅಧಿಕಾರಿಗಳು, ಬೋಧಕರು ಮತ್ತು ಇತರ ವ್ಯಕ್ತಿಗಳ ಸೇವಾಷರತ್ತುಗಳು ಸಂದಾಯಮಾಡಬೇಕಾದ ಪರಿಶ್ರಮಧನ ಮತ್ತು ಪ್ರಯಾಣ ಮತ್ತು ದಿನ ಭತ್ಯೆಗಳೂ ಸೇರಿದಂತೆ ಭತ್ಯೆಗಳು;
(10) ಪರೀಕ್ಷಾ ನಿಕಾಯಗಳು ಮತ್ತು ಪರೀಕ್ಷಕರ ನೇಮಕಾತಿಯ ಷರತ್ತುಗಳು ಮತ್ತು ವಿಧಾನ;
(11) ವಿಶ್ವವಿದ್ಯಾಲಯವು ಸ್ಥಾಪಿಸಿದ ಅಥವಾ ನಿರ್ವಹಿಸುವ ಕಾಲೇಜುಗಳು, ಕೇಂದ್ರಗಳು, ವಿಭಾಗಗಳು, ಇಲಾಖೆಗಳು, ವಲಯ ಮತ್ತು ಪ್ರಾದೇಶಿಕ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಇತರ ಸಂಸ್ಥೆಗಳ ನಿರ್ವಹಣೆ;
(12) ವಿಶ್ವವಿದ್ಯಾಲಯದ ಅಧಿಕಾರಿಗಳು, ಬೋಧಕರು ಮತ್ತು ಇತರ ಸಿಬ್ಬಂದಿಗಳ ನೇಮಕಾತಿಗಾಗಿ ಆಯ್ಕೆ ಸಮಿತಿಗಳ ರಚನೆ;
(13) ಈ ಅಧ್ಯಾದೇಶದ ಮೂಲಕ ಶಾಸನಗಳ ಉಪಬಂಧ ಕಲ್ಪಿಸಬೇಕಾದ ಇತರ ಎಲ್ಲಾ ವಿಷಯಗಳು.