(1) ಶಿಕ್ಷಣ ನಿರ್ದೇಶಕರು
(ಎ) ವಿಶ್ವವಿದ್ಯಾಲಯದ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸಲು ಜವಾಬ್ದಾರರಾಗಿರತಕ್ಕದ್ದು. ವಿಶ್ವವಿದ್ಯಾಲಯದಲ್ಲಿನ ಕಾರ್ಯನೀತಿ ವಿಷಯಗಳ ಮತ್ತು ನಿವಾಸಿ ಬೋಧನೆ ಬಗೆಗಿನ ಪದ್ದತಿಗೆ ಮತ್ತು ಶೈಕ್ಷಣಿಕ ತಂತ್ರಜ್ಞಾನ ಮತ್ತು ಅಧ್ಯಾಪಕರ ತರಬೇತಿ ಕಾರ್ಯಕ್ರಮಗಳ ಬಗ್ಗೆ ಕಾರ್ಯನಿರ್ವಹಿಸುತ್ತಾರೆ. ಅವರು ಪರೀಕ್ಷೆಯ ಮೇಲ್ವಿಚಾರಣೆಯನ್ನು ಮಾಡತಕ್ಕದ್ದು;
(ಬಿ) ವಿದ್ಯಾವಿಷಯಕ ಪರಿಷತ್ತು, ಪದವಿ ಕಾರ್ಯಕ್ರಮಗಳ ಅಧ್ಯಯನಗಳ ಮಂಡಳಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳ ಅಧ್ಯಯನ ಮಂಡಳಿಗಳ ಶಾಶ್ವತವಾದ ದಾಖಲೆಗಳನ್ನು ನಿರ್ವಹಿಸಲು ಮತ್ತು ವಿದ್ಯಾರ್ಥಿಗಳ ಶಿಸ್ತನ್ನು ಕಾಪಾಡಿಕೊಂಡು ಬರಲು ಜವಾಬ್ದಾರರಾಗಿರತಕ್ಕದ್ದು;
(ಸಿ) ವಿದ್ಯಾವಿಷಯಕ ಪರಿಷತ್ತಿನ ಸದಸ್ಯ ಕಾರ್ಯದರ್ಶಿಯಾಗಿ ಮತ್ತು ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳ ಅಧ್ಯಯನ ಮಂಡಳಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸತಕ್ಕದ್ದು;
(ಡಿ) ವಿಶ್ವವಿದ್ಯಾಲಯದಲ್ಲಿ ಎಲ್ಲಾ ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣ ಕಾರ್ಯಕ್ರಮಗಳ ಸಮನ್ವಯ ನಡೆಸತಕ್ಕದ್ದು ಮತ್ತು ಪುನರಾವಲೋಕಿಸತಕ್ಕದ್ದು;
(ಇ) ಮಾಹಿತಿ ಕೇಂದ್ರ ಮತ್ತು ವಿಶ್ವವಿದ್ಯಾಲಯದ ಪ್ರಕಟಣೆ ವಿಭಾಗದ ಚಟುವಟಿಕೆಗಳ ಮೇಲ್ವಿಚಾರಣೆ ಮಾಡತಕ್ಕದ್ದು.
(2) ಸಂಶೋಧನಾ ನಿರ್ದೇಶಕರು: 33ನೇ ಪ್ರಕರಣದಲ್ಲಿ ಹೇಳಿದಂತೆ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಕಾರ್ಯಕ್ರಮಗಳ ನಿರ್ದೇಶನ ಮತ್ತು ಸಮನ್ವಯ ಮತ್ತು ಸಂಶೋಧನೆ ಕೇಂದ್ರಗಳ ದಕ್ಷ ಕೆಲಸಗಳಿಗೆ ಜವಾಬ್ದಾರನಾಗಿರತಕ್ಕದ್ದು.
(3) ವಿಸ್ತರಣಾ ನಿರ್ದೇಶಕರು: 34ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದಂತೆ ಕೃಷಿ ವಿಸ್ತರಣಾ ಶಿಕ್ಷಣದ ಕಾರ್ಯನಿರ್ವಹಣೆಗೆ ಜವಾಬ್ದಾರರಾಗಿರತಕ್ಕದ್ದು.
(4) ಡೀನ್: ಕಾಲೇಜಿನ ಮುಖ್ಯಸ್ಥನಾಗಿರತಕ್ಕದ್ದು ಮತ್ತು ಕಾಲೇಜಿನಲ್ಲಿ ಕಲಿಸುವ, ಸಂಶೋಧನೆಯ ಮತ್ತು ವಿಸ್ತರಣಾ ಚಟುವಟಿಕೆಗಳ ಆಡಳಿತಕ್ಕೆ ಮತ್ತು ಅನುಷ್ಠಾನಕ್ಕೆ ಜವಾಬ್ದಾರನಾಗಿರತಕ್ಕದ್ದು.
(5) ಸ್ನಾತಕೋತ್ತರ ಅಧ್ಯಯನಗಳ ಡೀನ್: ಸ್ನಾತಕೋತ್ತರ ಅಧ್ಯಯನಗಳು ಮತ್ತು ಡಿಪ್ಲೊಮೊಗಳನ್ನೊಳಗೊಂಡಂತೆ ಇತರ ಶೈಕ್ಷಣಿಕ ಕಾರ್ಯಕ್ರಮಗಳ ಆಡಳಿತ ಮತ್ತು ಅನುಷ್ಠಾನಕ್ಕೆ ಜವಾಬ್ದಾರರಾಗಿರತಕ್ಕದ್ದು.
(6) ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್:
(ಎ) ವಿದ್ಯಾರ್ಥಿಗಳ ಸಲಹೆ ನೀಡಿಕೆ ಮತ್ತು ಕೌನ್ಸಿಲಿಂಗ್ ಕಾರ್ಯಕ್ರಮವನ್ನು ಯೋಜಿಸುವುದು ಮತ್ತು ನಿರ್ದೇಶನ ಮಾಡುವುದು ಮತ್ತು ವಿಶ್ವವಿದ್ಯಾಲಯದ ಪದವೀಧರರಿಗೆ ಉದ್ಯೋಗ ದೊರಕಿಸಿಕೊಡಲು ಸಹಾಯ ಮಾಡುವುದಕ್ಕಾಗಿ ಭಾವೀ ಉದ್ಯೋಗದಾತರು ಮತ್ತು ಉದ್ಯೋಗ ಏಜೆನ್ಸಿಗಳ ಸಹಕಾರವನ್ನು ಪಡೆದುಕೊಳ್ಳುವುದು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಪ್ರೊತ್ಸಾಹಿಸತಕ್ಕದ್ದು;
(ಬಿ) ಕ್ರೀಡೆಗಳು, ಸಾಂಸ್ಕೃತಿಕ ಮತ್ತು ಇತರ ಮನರಂಜನಾ ಚಟುವಟಿಕೆಗಳು, ರಾಷ್ಟ್ರೀಯ ಯುವಸೇನಾದಳ (ಎನ್.ಸಿ.ಸಿ.), ಎನ್ಎಸ್ಎಸ್, ಮಾತುಗಾರಿಕೆ ಕೌಶಲ್ಯ ಸುಧಾರಣೆ ಮುಂತಾದ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳು ಹಾಗೂ ಅದೇ ತರಹದ ಇತರ ಚಟುವಟಿಕೆಗಳನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಯೋಜಿಸುವುದು ಮತ್ತು ಏರ್ಪಡಿಸುವುದು.
(ಸಿ) ವಿದ್ಯಾರ್ಥಿ ನಿಲಯ, ಕೆಫ್ತೆರಿಯಾ ಹಾಗೂ ಮೇಲ್ವಿಚಾರಣೆ ಮತ್ತು ನಿರ್ವಹಣೆಯಲ್ಲಿ ಕ್ರೀಡೆಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಡೀನ್ಗಳಿಗೆ ಸಹಾಯ ಮಾಡತಕ್ಕದ್ದು;
(ಡಿ) ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳು ಮತ್ತು ಇತರ ಕ್ಷೇಮಾಭಿವೃದ್ಧಿ ಕ್ರಮಗಳ ಮೇಲ್ವಿಚಾರಣೆ ಮಾಡತಕ್ಕದ್ದು ಮತ್ತು ನಿಯಂತ್ರಿಸತಕ್ಕದ್ದು.
(7) ರಿಜಿಸ್ಟ್ರಾರ್:
(ಎ) ಇವರು ವಿಶ್ವವಿದ್ಯಾಲಯದ ಪ್ರೊಫೆಸರ್ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ಕೃಷಿ ವಿಜ್ಞಾನಗಳ ಕ್ಷೇತ್ರದಲ್ಲಿ ಒಬ್ಬ ವಿದ್ವಾಂಸರಾಗಿರತಕ್ಕದ್ದು ಅಥವಾ ಸರ್ಕಾರದ ಉಪ ಕಾರ್ಯದರ್ಶಿಯ ದರ್ಜೆಗಿಂತ ಕಡಿಮೆಯಲ್ಲದ ದರ್ಜೆಯ ರಾಜ್ಯ ಸರ್ಕಾರದ ಒಬ್ಬ ಅಧಿಕಾರಿಯಾಗಿರತಕ್ಕದ್ದು;
(ಬಿ) ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿರತಕ್ಕದ್ದು ಮತ್ತು ಎಲ್ಲಾ ಪರಿಷತ್ತುಗಳ ವ್ಯವಸ್ಥಾಪನ ಖಾಯಂ ಸದಸ್ಯರಾಗಿರತಕ್ಕದ್ದು.
(ಸಿ) ವಿಶ್ವವಿದ್ಯಾಲಯದ ದಾಖಲೆಗಳು ಮತ್ತು ಸಾಮಾನ್ಯ ಮೊಹರಿನ ಕ್ರಮಬದ್ಧ ಅಭಿರಕ್ಷೆಗೆ ಜವಾಬ್ದಾರರಾಗಿರತಕ್ಕದ್ದು;
(ಡಿ) ವಿಶ್ವವಿದ್ಯಾಲಯಕ್ಕೆ ಪ್ರವೇಶದ ಅರ್ಜಿಗಳನ್ನು ಸ್ವೀಕರಿಸತಕ್ಕದ್ದು ಮತ್ತು ಎಲ್ಲಾ ವ್ಯಾಸಂಗ ಕ್ರಮಗಳು, ಪಠ್ಯ ವಿಷಯಗಳು ಮತ್ತು ಅವಶ್ಯವಾಗಬಹುದಾದ ಇತರ ಮಾಹಿತಿಯ ಶಾಶ್ವತ ದಾಖಲೆಯನ್ನು ಇಟ್ಟುಕೊಂಡುಬರತಕ್ಕದ್ದು.
(ಇ) ನಿಯಮಿಸಲಾದಂತೆ ವಿಶ್ವವಿದ್ಯಾಲಯದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮಾನ್ಯ ಆಡಳಿತ ನಡೆಸಲು ಜವಾಬ್ದಾರರಾಗಿರತಕ್ಕದ್ದು.
(8) ವಿಶ್ವವಿದ್ಯಾಲಯದ ಗ್ರಂಥಪಾಲಕ.-
ವಿಶ್ವವಿದ್ಯಾಲಯದ ಗ್ರಂಥಾಲಯ ಮಾಹಿತಿ ಪದ್ದತಿಯ ನಿರ್ವಹಣೆ ಮತ್ತು ವ್ಯವಸ್ಥಾಪನೆಗೆ ಮತ್ತು ವಿಶ್ವವಿದ್ಯಾಲಯದ ಎಲ್ಲಾ ಘಟಕಗಳ ಗ್ರಂಥಾಲಯ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಲು ಮತ್ತು ಸಮನ್ವಯ ನಡೆಸುವುದಕ್ಕೆ ಇವರು ಜವಾಬ್ದಾರರಾಗಿರತಕ್ಕದ್ದು.
ಈ ಅಧ್ಯಾದೇಶದ ಉಪಬಂಧಗಳಿಗೊಳಪಟ್ಟು, 24ನೇ ಪ್ರಕರಣದ (iv) ರಿಂದ (ix)ನೇ ಖಂಡದಲ್ಲಿ ನಿರ್ದಿಷ್ಟಪಡಿಸಲಾದ ವಿಶ್ವವಿದ್ಯಾಲಯದ ಅಧಿಕಾರಿಗಳು, ಕುಲಪತಿಯವರು ಕಾಲಕಾಲಕ್ಕೆ ನಿಯಮಿಸಬಹುದಾದ ಅಥವಾ ಅವರಿಗೆ ವಹಿಸಿಕೊಡಬಹುದಾದಂತಹ ಇತರ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು.
(9) ಲೆಕ್ಕ ನಿಯಂತ್ರಕರು.-
(ಎ) ಲೆಕ್ಕ ನಿಯಂತ್ರಕರು, ವಿಶ್ವವಿದ್ಯಾಲಯದ ಒಬ್ಬ ಪೂರ್ಣಕಾಲಿಕ ಅಧಿಕಾರಿಯಾಗಿರತಕ್ಕದ್ದು. ಇವರು, ಕುಲಪತಿಯವರು, ವ್ಯವಸ್ಥಾಪನಾ ಮಂಡಳಿಗೆ ಶಿಫಾರಸು ಮಾಡಿದ ಲೆಕ್ಕ ಪರಿಶೋಧನೆ, ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ಆಡಳಿತದಲ್ಲಿ ಅನುಭವವುಳ್ಳ ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕರ ಕೇಡರ್ನ ಅಧಿಕಾರಿಗಳು ಅಥವಾ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಉಪಮಹಾಲೇಖಪಾಲರ ದರ್ಜೆಯ ಒಬ್ಬ ಅಧಿಕಾರಿ ಇವರ ಹೆಸರುಗಳ್ಳುಳ್ಳ ಮೂವರಿಗೆ ಕಡಿಮೆಯಿಲ್ಲದ ಒಂದು ಹೆಸರುಪಟ್ಟಿಯಿಂದ ವ್ಯವಸ್ಥಾಪನಾ ಮಂಡಳಿಯು ಅನುಮೋದಿಸಿದ ಮತ್ತು ಕುಲಪತಿಯವರು ನೇಮಿಸಿದ ಅಧಿಕಾರಿಯಾಗಿರತಕ್ಕದ್ದು. ಹೆಸರು ಪಟ್ಟಿಯಲ್ಲಿರುವ ಯಾರನ್ನೂ ವ್ಯವಸ್ಥಾಪನಾ ಮಂಡಳಿಯು ಮೂವತ್ತು ದಿನಗಳೊಳಗೆ ಅನುಮೋದಿಸದಿದ್ದಲ್ಲಿ, ಕುಲಾಧಿಪತಿಯವರು ಕುಲಪತಿಯವರೊಡನೆ ಸಮಾಲೋಚಿಸಿ, ಲೆಕ್ಕ ನಿಯಂತ್ರಕರಾಗಲು ಸೂಕ್ತ ವ್ಯಕ್ತಿಯೆಂದು ತಾವು ಭಾವಿಸುವಂಥ ಇತರ ವ್ಯಕ್ತಿಯನ್ನು ಲೆಕ್ಕ ನಿಯಂತ್ರಕರನ್ನಾಗಿ ನೇಮಿಸಬಹುದು.
(ಬಿ) ಲೆಕ್ಕ ನಿಯಂತ್ರಕರ ನೇಮಕಾತಿಯ ಅವಧಿಯು ನಾಲ್ಕು ವರ್ಷಗಳಾಗಿರತಕ್ಕದ್ದು.
(ಸಿ) ಲೆಕ್ಕ ನಿಯಂತ್ರಕರು, ಹಣಕಾಸು ಸಮಿತಿಯ ನಿಯಂತ್ರಣಕ್ಕೊಳಪಟ್ಟು, ಶಾಸನಗಳು ಮತ್ತು ವಿನಿಯಮಗಳಲ್ಲಿ ನಿಯಮಿಸಬಹುದಾದ ಅಥವಾ ಕುಲಪತಿಯವರು ಅಥವಾ ಕುಲಸಚಿವರು ಕಾಲದಿಂದ ಕಾಲಕ್ಕೆ ಅಗತ್ಯ ಪಡಿಸಬಹುದಾದಂಥ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಅಂತಹ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು. ಅವರು ವಿದ್ಯಾವಿಷಯಕ ಪರಿಷತ್ತಿನ ಪದನಿಮಿತ್ತ ಸದಸ್ಯರಾಗಿರತಕ್ಕದ್ದು ಮತ್ತು ಹಣಕಾಸು ಸಮಿತಿಯ ಪದನಿಮಿತ್ತ ಸದಸ್ಯ ಕಾರ್ಯದರ್ಶಿಯಾಗಿರತಕ್ಕದ್ದು.
(10) 24ನೇ ಪ್ರಕರಣದ (iv) ರಿಂದ (x)ನೇ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಅವರ ಸಂಬಳ, ಭತ್ಯೆಗಳು ಮತ್ತು ಇತರ ಸೇವಾ ಷರತ್ತುಗಳನ್ನು ನಿಯಂತ್ರಿಸುವ ಶಾಸನಗಳು ಅಥವಾ ಇತರ ಆದೇಶಗಳಲ್ಲಿ ಉಪಬಂಧ ಕಲ್ಪಿಸುವಂತಹವುಗಳನ್ನುಳಿದು ವಿಶ್ವವಿದ್ಯಾಲಯದಲ್ಲಿನ ಯಾವುದೇ ಕೆಲಸಕ್ಕೆ ಬೇರೆ ಯಾವುದೇ ಪರಿಶ್ರಮಧನವನ್ನು ನೀಡತಕ್ಕದ್ದಲ್ಲ ಮತ್ತು ಅವರು ಸ್ವೀಕರಿಸತಕ್ಕದ್ದಲ್ಲ.