ಸದರಿ ನಿಯಮಗಳ ನಿಯಮ 144ರ ನಂತರ, ಈ ಕೆಳಗಿನ ನಿಯಮವನ್ನು 1ನೇ ಜನವರಿ 2022ರಿಂದ ಅನ್ವಯವಾಗುವಂತೆ ಸೇರಿಸತಕ್ಕದ್ದು, ಅವುಗಳೆಂದರೆ:-
“144ಎ.-ಸಾಗಾಣಿಕೆಯಲ್ಲಿರುವಾಗ ತಡೆಹಿಡಿದಿಟ್ಟ ಅಥವಾ ಸಂಚಾರದಲ್ಲಿರುವ ವಶಪಡಿಸಿಕೊಂಡಿರುವ ಅಥವಾ ಸರಕುಗಳ ಮಾರಾಟದಿಂದ ದಂಡವನ್ನು ವಸೂಲಿ.-
(1) ಯಾವುದೇ ಸರಕುಗಳನ್ನು ಸಾಗಿಸುತ್ತಿರುವ ವ್ಯಕ್ತಿ ಅಥವಾ ಅಂತಹ ಸರಕುಗಳ ಮಾಲೀಕರು ಪ್ರಕರಣ 129ರ ಉಪ ಪ್ರಕರಣ (1) ರ ಅಡಿಯಲ್ಲಿ ದಂಡದ ಮೊತ್ತವನ್ನು, ಸದರಿ ಪ್ರಕರಣ 129ರ ಉಪಪ್ರಕರಣ (3) ರ ಅಡಿಯಲ್ಲಿ ಹೊರಡಿಸಿದ ಆದೇಶದ ಪ್ರತಿಯನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ದಿನಗಳಲ್ಲಿ ಪಾವತಿಸಲು ವಿಫಲವಾದರೆ, ಯುಕ್ತ ಅಧಿಕಾರಿಯು ದಾಸ್ತಾನಿನ ತಪಶೀಲು ಪಟ್ಟಿಯನ್ನು ಸಿದ್ದಪಡಿಸುವ ಮೂಲಕ ಅಂತಹ ಸರಕುಗಳ ವಿಲೇವಾರಿ ಮಾಡಲು ಅಥವಾ ವಶಪಡಿಸಿಕೊಂಡ ಸಾಗಾಣಿಕೆ ವಾಹನದ ಅಥವಾ ವಶಪಡಿಸಿಕೊಂಡ ಸರಕುಗಳ ಮಾರುಕಟ್ಟೆ ಮೌಲ್ಯವನ್ನು ಅಂದಾಜು ಮಾಡುವ ಮೂಲಕ ವಿಲೇವಾರಿಗಾಗಿ ಮುಂದುವರಿಯಬೇಕು:
ಪರಂತು, ತಡೆಹಿಡಿದ ಅಥವಾ ವಶಕ್ಕೆ ತೆಗೆದುಕೊಂಡ ಸರಕುಗಳು ಕೆಟ್ಟು ಹೋಗುವ ಅಥವಾ ಅಪಾಯಕಾರಿ ಸ್ವರೂಪದ್ದಾಗಿದ್ದಲ್ಲಿ ಅಥವಾ ಕಾಲಾಂತರದಲ್ಲಿ ಮೌಲ್ಯವು ಕುಸಿಯುವ ಸಾಧ್ಯತೆ ಇದ್ದಲ್ಲಿ, ಸದರಿ ಹದಿನೈದು ದಿನಗಳ ಅವಧಿಯನ್ನು ಯುಕ್ತ ಅಧಿಕಾರಿಯು ಇಳಿಕೆ ಮಾಡಬಹುದು.
(2) ಮಾರಾಟ ಮಾಡಲಿರುವ ಸರಕುಗಳು ಅಥವಾ ಸಾಗಾಣಿಕೆ ವಾಹನ ಮತ್ತು ಮಾರಾಟದ ಉದ್ದೇಶವನ್ನು ಸ್ಟಷ್ಟವಾಗಿ ನಮೂದಿಸಿ ಸೂಚನಾ ಪತ್ರ ನಮೂನೆ ಜಿಎಸ್ಟಿ ಡಿಆರ್ಸಿ-10 ಅನ್ನು ನೀಡುವ ಮೂಲಕ, ಸದರಿ ಸರಕುಗಳು ಅಥವಾ ಸಾಗಾಣಿಕೆ ವಾಹನವನ್ನು ಇ-ಹರಾಜು ಒಳಗೊಂಡಂತೆ ಹರಾಜಿನ ಪ್ರಕ್ರಿಯೆಯ ಮೂಲಕ, ಮಾರಾಟ ಮಾಡತಕ್ಕದ್ದು:
ಪರಂತು, ಸದರಿ ಸರಕನ್ನು ಸಾಗಾಣಿಕೆ ಮಾಡುವ ವ್ಯಕ್ತಿ ಅಥವಾ ಸರಕಿನ ಮಾಲೀಕನು, ಉಪ-ಪ್ರಕರಣ (1)ರ ಪ್ರಕರಣ 129ರಡಿ ದಂಡದ ಮೊತ್ತವನ್ನು, ಸದರಿ ಸರಕಿನ ಅಥವಾ ಸಾಗಾಣಿಕೆ ವಾಹನದ ಸುರಕ್ಷಿತ ಪಾಲನೆಗೆ ಮತ್ತು ನಿರ್ವಹಣೆಗೆ ಭರಿಸಿದ ವೆಚ್ಚವನ್ನು ಸೇರಿಸಿ ಉಪ-ನಿಯಮ (1) ರಡಿ ಉಲ್ಲೇಖಿಸಿದ ಸಮಯಾವಕಾಶದ ನಂತರ ಆದರೆ ಈ ಉಪನಿಯಮದಡಿ ನೋಟೀಸು ನೀಡುವ ಒಳಗಾಗಿ ಪಾವತಿಸಿದ್ದಲ್ಲಿ, ಯುಕ್ತ ಅಧಿಕಾರಿಯು ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸತಕ್ಕದ್ದು ಮತ್ತು ಸದರಿ ಸರಕು ಅಥವಾ ಸಾಗಾಣಿಕೆ ವಾಹನವನ್ನು ಬಿಡುಗಡೆ ಮಾಡತಕ್ಕದ್ದು.
(3) ಬಿಡ್ ಸಲ್ಲಿಸಲು ಕೊನೆಯ ದಿನಾಂಕವು ಅಥವಾ ಹರಾಜಿನ ದಿನಾಂಕವು ಉಪನಿಯಮ (2)ರಡಿ ಉಲ್ಲೇಖಿಸಲಾದ ನೋಟೀಸು ನೀಡುವ ದಿನದಿಂದ ಹದಿನೈದು ದಿನಗಳಿಗಿಂತ ಮುಂಚೆ ಇರತಕ್ಕದ್ದಲ್ಲ:
ಪರಂತು, ತಡೆಹಿಡಿದಿಟ್ಟ ಅಥವಾ ವಶಕ್ಕೆ ತೆಗೆದುಕೊಂಡ ಸರಕುಗಳು ಕೆಟ್ಟು ಹೋಗುವ ಅಥವಾ ಅಪಾಯಕಾರಿ ಸ್ವರೂಪದ್ದಾಗಿದ್ದಲ್ಲಿ ಅಥವಾ ಕಾಲಾಂತರದಲ್ಲಿ ಮೌಲ್ಯವು ಕುಸಿಯುವ ಸಾಧ್ಯತೆ ಇದ್ದಲ್ಲಿ, ಸದರಿ ಹದಿನೈದು ದಿನಗಳ ಅವಧಿಯನ್ನು ಯುಕ್ತ ಅಧಿಕಾರಿಯು ಇಳಿಕೆ ಮಾಡಬಹುದು.
(4) ಯುಕ್ತ ಅಧಿಕಾರಿಯು ಬಿಡ್ದಾರರು ಹರಾಜಿನಲ್ಲಿ ಭಾಗವಹಿಸಲು ಅರ್ಹರಾಗಲು ಸಾಧ್ಯವಾಗುವಂತೆ, ಬಿಡ್ ಪೂರ್ವ ಠೇವಣಿ ಮೊತ್ತವನ್ನು ಯುಕ್ತ ಅಧಿಕಾರಿಯು ನಿರ್ದಿಷ್ಟಪಡಿಸಿದ ವಿಧಾನದಲ್ಲಿ, ಲಗತ್ತಿಸಬೇಕಾದ ಬಿಡ್ ಪೂರ್ವ ಠೇವಣಿ ಮೊತ್ತವನ್ನು ನಿರ್ದಿಷ್ಟಪಡಿಸತಕ್ಕದ್ದು, ಸದರಿ ಮೊತ್ತವನ್ನು ಸಂದರ್ಭಾನುಸಾರ ಯಶಸ್ವಿಯಾಗದ ಬಿಡ್ದಾರರಿಗೆ ಹಿಂದಿರುಗಿಸಬೇಕಾಗುತ್ತದೆ, ಯಶಸ್ವಿ ಬಿಡ್ದಾರರು ಬಿಡ್ನ ಪೂರ್ತಿ ಮೊತ್ತವನ್ನು ಪಾವತಿಸದ ಸಂದರ್ಭದಲ್ಲಿ, ಪಾವತಿಸಿದ ಠೇವಣಿ ಮೊತ್ತವನ್ನು ಮುಟ್ಟುಗೋಲು ಮಾಡಿಕೊಳ್ಳತಕ್ಕದ್ದು.
(5) ಯುಕ್ತ ಅಧಿಕಾರಿಯು ಹರಾಜಿನ ದಿನಾಂಕದಿಂದ ಹದಿನೈದು ದಿನಗಳ ಒಳಗಾಗಿ ಪಾವತಿ ಮಾಡುವಂತೆ ಯಶಸ್ವಿ ಬಿಡ್ದಾರನಿಗೆ ನಮೂನೆ ಜಿಎಸ್ಟಿ ಡಿಆರ್ಸಿ-11 ರಲ್ಲಿ ನೋಟೀಸು ನೀಡತಕ್ಕದ್ದು:
ಪರಂತು, ತಡೆಹಿಡಿದಿಟ್ಟ ಅಥವಾ ವಶಕ್ಕೆ ತೆಗೆದುಕೊಂಡ ಸರಕುಗಳು ಕೆಟ್ಟು ಹೋಗುವ ಅಥವಾ ಅಪಾಯಕಾರಿ ಸ್ವರೂಪದ್ದಾಗಿದ್ದಲ್ಲಿ ಅಥವಾ ಕಾಲಾಂತರದಲ್ಲಿ ಮೌಲ್ಯವು ಕುಸಿಯುವ ಸಾಧ್ಯತೆ ಇದ್ದಲ್ಲಿ, ಸದರಿ ಹದಿನೈದು ದಿನಗಳ ಅವಧಿಯನ್ನು ಯುಕ್ತ ಅಧಿಕಾರಿಯು ಇಳಿಕೆ ಮಾಡಬಹುದು.
(6) ಪೂರ್ತಿ ಬಿಡ್ ಮೊತ್ತ ಪಾವತಿಯಾದ ಮೇಲೆ, ಯುಕ್ತ ಅಧಿಕಾರಿಯು ಸದರಿ ಸರಕು ಅಥವಾ ಸಾಗಾಣಿಕೆ ವಾಹನದ ಸ್ವಾಧೀನತೆಯನ್ನು ಮತ್ತು ಮಾಲೀಕತ್ವವನ್ನು ಯಶಸ್ವಿ ಬಿಡ್ದಾರನಿಗೆ ವರ್ಗಾಯಿಸತಕ್ಕದ್ದು ಮತ್ತು ಪ್ರಮಾಣಪತ್ರವನ್ನು ನಮೂನೆ ಜಿಎಸ್ಟಿ ಡಿಆರ್ಸಿ-12ರಲ್ಲಿ ನೀಡತಕ್ಕದ್ದು.
(7) ಯಾವುದೇ ಬಿಡ್ಡು ಸ್ವೀಕೃತವಾಗಿಲ್ಲದಿದ್ದಲ್ಲಿ ಅಥವಾ ಕಡಿಮೆ ಬಿಡ್ಡಿನಿಂದಾಗಿ ಸಮರ್ಪಕ ಭಾಗವಹಿಸುವಿಕೆಯ ಕೊರತೆಯಿಂದಾಗಿ ಬಿಡ್ಡು ಸ್ಪರ್ಧಾತ್ಮಕವಾಗಿಲ್ಲವೆಂದು ಕಂಡುಬಂದಲ್ಲಿ ಯುಕ್ತ ಅಧಿಕಾರಿಯು ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸತಕ್ಕದ್ದು ಮತ್ತು ಪುನರ್ ಹರಾಜಿಗೆ ಕ್ರಮ ಜರುಗಿಸತಕ್ಕದ್ದು.
(8) ಪ್ರಕರಣ 107ರ ಉಪ ಪ್ರಕರಣ (6) ರೊಡನೆ ಓದಲಾದಂತೆ ಉಪ ಪ್ರಕರಣ (1)ರ ಉಪಬಂಧಗಳಡಿ ಯಾವುದೇ ವ್ಯಕ್ತಿಯು ಅಪೀಲು ಅರ್ಜಿ ಸಲ್ಲಿಸಿದ್ದಲ್ಲಿ, ಸಾಗಾಣಿಕೆಯಲ್ಲಿರುವಾಗ ಸರಕುಗಳ ಅಥವಾ ಸಾಗಾಣಿಕೆ ವಾಹನದ ತಡೆಹಿಡಿಯುವಿಕೆ ಅಥವಾ ವಶಪಡಿಸಿಕೊಳ್ಳುವಿಕೆಯ ಮೂಲಕ ಮಾಡುವ ದಂಡದ ವಸೂಲಾತಿ ನಡಾವಳಿಯು ತಡೆಹಿಡಿಯಲ್ಪಟ್ಟಿದೆ ಎಂದು ಪರಿಭಾವಿಸತಕ್ಕದ್ದು.
ಪರಂತು, ಕೆಟ್ಟು ಹೋಗುವ ಅಥವಾ ಅಪಾಯಕಾರಿ ಸ್ವರೂಪದಲ್ಲಿರುವ ಸರಕುಗಳಿಗೆ ಈ ಉಪನಿಯಮವು ಅನ್ವಯವಾಗತಕ್ಕದ್ದಲ್ಲ.’’;