ನಿಯಮ 154ನ್ನು, 1ನೇ ಜನವರಿ 2022ರಿಂದ ಅನ್ವಯವಾಗುವಂತೆ ಈ ಕೆಳಗಿನ ನಿಯಮಗಳನ್ನು ಪ್ರತಿಯೋಜಿಸತಕ್ಕದ್ದು, ಅವುಗಳೆಂದರೆ:-
“154. ಸರಕು ಅಥವಾ ಸಾಗಣೆ ಮತ್ತು ಚರ ಅಥವಾ ಸ್ಥಿರ ಸ್ವತ್ತಿನ ಮಾರಾಟದಿಂದ ಉತ್ಪತಿಯಾದ ವರಮಾನದ ವಿಲೇವಾರಿ:-
(1) ಪ್ರಕರಣ 129ರ ಉಪಪ್ರಕರಣ (3)ರಡಿಯಲ್ಲಿ ಬಾಕಿದಾರರಿಂದ ಪಾವತಿಸಬೇಕಾದ ಬಾಕಿಯನ್ನು ಅಥವಾ ದಂಡವನ್ನು ವಸೂಲಿ ಮಾಡಲು, ಸರಕುಗಳ ಅಥವಾ ಸಾಗಣಿಕೆ ವಾಹನ ಮತ್ತು ಚರ ಅಥವಾ ಸ್ಥಿರ ಸ್ವತ್ತಿನ ಮಾರಾಟದಿಂದ ಹಾಗೆ ಪಡೆಯಲಾದ ಮೊತ್ತವನ್ನು, -
(ಎ) ಮೊದಲನೆಯದಾಗಿ, ವಸೂಲಾತಿ ಪ್ರಕ್ರಿಯೆಯ ಆಡಳಿತಾತ್ಮಕ ವೆಚ್ಚಕ್ಕೆ ಸಂಬಂಧಿಸಿದಂತೆ ವಿನಿಯೋಗಿಸತಕ್ಕದ್ದು;
(ಬಿ) ನಂತರ, ವಸೂಲಾತಿ ಮೊತ್ತಕ್ಕೆ ಸಂಬಂಧಿಸಿದಂತೆ ಅಥವಾ ಪ್ರಕರಣ 129ರ ಉಪಪ್ರಕರಣ (3)ರಡಿಯಲ್ಲಿ ಪಾವತಿಸಬೇಕಾದ ದಂಡದ ಮೊತ್ತಕ್ಕೆ, ಪ್ರಕರಣನುಸಾರ ವಿನಿಯೋಗಿಸತಕ್ಕದ್ದು;
(ಸಿ) ನಂತರ, ಈ ಕಾಯ್ದೆಯಡಿಯಲ್ಲಿ ಅಥವಾ ಕೇಂದ್ರ ಸರಕು ಮತ್ತು ಸೇವೆಗಳ ಅಧಿನಿಯಮ, 2017 ಅಥವಾ ಏಕೀಕೃತ ಸರಕು ಮತ್ತು ಸೇವೆಗಳ ಅಧಿನಿಯಮ, 2017 ಅಥವಾ ಕೇಂದ್ರಾಡಳಿತ ಪ್ರದೇಶ ಸರಕು ಮತ್ತು ಸೇವೆಗಳ ಅಧಿನಿಯಮ, 2017 ಅಥವಾ ಯಾವುದೇ ರಾಜ್ಯಗಳ ಸರಕು ಮತ್ತು ಸೇವೆಗಳ ಅಧಿನಿಯಮ, 2017ರ ಮತ್ತು ಅದರಡಿಯಲ್ಲಿ ಮಾಡಲಾದ ನಿಯಮಗಳಿಗನುಸಾರವಾಗಿ ಬಾಕಿದಾರರಿಂದ ಬಾಕಿಯಿರುವ ಯಾವುದೇ ಇತರೆ ಮೊತ್ತಕ್ಕೆ ಪ್ರತಿಯಾಗಿ ವಿನಿಯೋಗಿಸತಕ್ಕದ್ದು; ಮತ್ತು
(ಡಿ) ಯಾವುದೇ ಉಳಿಕೆಯನ್ನು, ಸರಕು ಅಥವಾ ಸಾಗಾಣಿಕೆ ವಾಹನದ ಮಾಲೀಕನು ಈ ಕಾಯ್ದೆಯಡಿ ನೋಂದಾಯಿತ ತೆರಿಗೆದಾಯಕ ವ್ಯಕ್ತಿಯಾಗಿದ್ದಲ್ಲಿ, ಮಾಲೀಕನ ವಿದ್ಯುನ್ಮಾನ ನಗದು ಖಾತೆಗೆ ಜಮೆ ಮಾಡತಕ್ಕದ್ದು, ಮತ್ತು ಸರಕು ಹಾಗೂ ಸಾಗಾಣಿಕೆ ವಾಹನದ ಮಾಲೀಕನು ಕಾಯ್ದೆಯಡಿಯಲ್ಲಿ ನೋಂದಣಿ ಪಡೆಯುವ ಅಗತ್ಯವಿಲ್ಲದಿದ್ದಲ್ಲಿ ಆ ಮೊತ್ತವನ್ನು ಸಂಬಂಧಿಸಿದ ವ್ಯಕ್ತಿಯ ಬ್ಯಾಂಕ್ ಖಾತೆಗೆ ಜಮೆ ಮಾಡತಕ್ಕದ್ದು.
(2) ಉಪನಿಯಮ (1)ರ ಖಂಡ (ಡಿ) ರಲ್ಲಿರುವಂತೆ ಮಾರಾಟವಾದ ದಿನಾಂಕದಿಂದ ಆರು ತಿಂಗಳೊಳಗೆ ಅಥವಾ ಯುಕ್ತ ಅಧಿಕಾರಿಯು ಒಪ್ಪಿಕೊಂಡಲ್ಲಿ ಅಂತಹ ಮುಂದುವರೆದ ಅವಧಿಯೊಳಗೆ ಮಾರಾಟದಲ್ಲಿನ ವರಮಾನದ ಉಳಿಕೆ ಮೊತ್ತವನ್ನು ಸಂಬಂಧಿಸಿದ ವ್ಯಕ್ತಿಗೆ ಪಾವತಿಸಲು ಅಸಾಧ್ಯವಾದಲ್ಲಿ ಅಂತಹ ಮಾರಾಟದ ಉಳಿಕೆ ಮೊತ್ತವನ್ನು ನಿಧಿಯಲ್ಲಿ ಠೇವಣಿ ಇಡತಕ್ಕದ್ದು.”