(1) ಕೌನ್ಸಲಿಂಗ್ ಪ್ರಕ್ರಿಯೆಯನ್ನು ಆರಂಭಿಸುವುದಕ್ಕಿಂತ ಮುಂಚೆ, ಎಲ್ಲಾ ಪ್ರಾಂಶುಪಾಲರುಗಳು ಮಂಜೂರಾದ ವಿಷಯವಾರು ಹುದ್ದೆಗಳ, ವಿಷಯವಾರು ಕಾರ್ಯಭಾರದ, ಕಾರ್ಯನಿರ್ವಹಣಾ ಸಂಖ್ಯಾಬಲದ ಮತ್ತು ಖಾಲಿ ಹುದ್ದೆಗಳ ಮತ್ತು ಇತರೆ ವಿವರಗಳನ್ನು ಸಕ್ಷಮ ಪ್ರಾಧಿಕಾರದಿಂದ ನಿರ್ದಿಷ್ಟಪಡಿಸಲಾದ ಪ್ರಪತ್ರದಲ್ಲಿ ಆನ್ಲೈನ್ ಮಾಹಿತಿ ವ್ಯವಸ್ಥೆಯ ಮುಖಾಂತರ ಸಲ್ಲಿಸತಕ್ಕದ್ದು.
(2) ಸಾರ್ವಜನಿಕ ಸೇವೆಯ ಹಿತಾಸಕ್ತಿಯಿಂದ ಕಡ್ಡಾಯ ವರ್ಗಾವಣೆಯನ್ನು ಕೌನ್ಸಲಿಂಗ್ ಮೂಲಕ ಭರ್ತಿಮಾಡಬೇಕಾದ ಬೋಧಕ ಸಿಬ್ಬಂದಿಯ ಹುದ್ದೆಗಳನ್ನು, ಖಾಲಿ ಇರುವ ಹುದ್ದೆಗಳ ಲಭ್ಯತೆಯ ಮತ್ತು ಸಾಕಷ್ಟು ಕಾರ್ಯಭಾರದ ಮತ್ತು ಶೈಕ್ಷಣಿಕ ಅವಶ್ಯಕತೆಯ ಮತ್ತು 5ನೇ ನಿಯಮದ (ಡಿ) ಖಂಡದ ಆಧಾರದ ಮೇಲೆ ಸಕ್ಷಮ ಪ್ರಾಧಿಕಾರವು ಅಧಿಸೂಚಿಸತಕ್ಕದ್ದು.
(3) 4ನೇ ನಿಯಮದ (3)ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಲಾದಂತೆ (2),(3),(4) ಮತ್ತು (5)ನೇ ಪ್ರವರ್ಗಗಳಿಗೆ ಸೇರಿದ ಬೋಧಕ ಸಿಬ್ಬಂದಿಯ ಕೋರಿಕೆಯ ಮೇಲೆ ವರ್ಗಾವಣೆಗಾಗಿ ಅರ್ಜಿಯನ್ನು ಸಕ್ಷಮ ಪ್ರಾಧಿಕಾರವು ನಿರ್ದಿಷ್ಟಪಡಿಸಲಾದ ದಿನಾಂಕದೊಳಗೆ ಮತ್ತು ಅಂಥ ಪ್ರಪತ್ರದಲ್ಲಿ ಸಲ್ಲಿಸತಕ್ಕದ್ದು.
(4) ಕೊನೆಯ ದಿನಾಂಕದೊಳಗೆ ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸತಕ್ಕದ್ದು ಮತ್ತು ವರ್ಗಾವಣೆಯ ಅರ್ಜಿಗಳಲ್ಲಿ ಒದಗಿಸಿರುವ ಮಾಹಿತಿಯು ತಪ್ಪಾಗಿದೆ ಎಂದು ಕಂಡುಬಂದಲ್ಲಿ, ಇದನ್ನು ದುರ್ನಡತೆ ಎಂದು ಪರಿಗಣಿಸತಕ್ಕದ್ದು ಮತ್ತು ಕರ್ನಾಟಕ ಸಿವಿಲ್ ಸೇವೆಗಳ (ನಿಯಂತ್ರಣ, ವರ್ಗೀಕರಣ ಮತ್ತು ಅಪೀಲು) ನಿಯಮಗಳು, 1957 ಮತ್ತು ಕರ್ನಾಟಕ ಸಿವಿಲ್ ಸೇವೆಗಳ (ನಡತೆ) ನಿಯಮಗಳು, 1966 ರ ಮೇರೆಗೆ ಅರ್ಜಿದಾರನ ವಿರುದ್ಧ ಸೂಕ್ತ ಶಿಸ್ತು ಕ್ರಮವನ್ನು ಜರುಗಿಸತಕ್ಕದ್ದು.
(5) ಬೋಧಕ ಸಿಬ್ಬಂದಿ ಅಥವಾ ಅರ್ಜಿದಾರನು, ಸಕ್ಷಮ ಪ್ರಾಧಿಕಾರದಿಂದ ಸೂಚನೆಗಳನ್ನು ಸ್ವೀಕರಿಸಿದ ಮೇಲೆ, ಬೋಧಕ ಸಿಬ್ಬಂದಿಯು, 4ನೇ ನಿಯಮದ (5)ನೇ ಉಪ-ನಿಯಮದ ಮೇರೆಗೆ ಹಂಚಿಕೆ ಮಾಡಲಾದ ಸಮಯದೊಳಗೆ ಕೌನ್ಸಲಿಂಗ್ಗೆ ಹಾಜರಾಗತಕ್ಕದ್ದು ಮತ್ತು ಆ ವೇಳೆ ಪ್ರದರ್ಶಿಸಲಾದ ಯಾವುದೇ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು. ಕೋರಿಕೆಯ ಮೇಲೆ ಕೌನ್ಸಲಿಂಗ್ಗಾಗಿ ಹಾಜರಾಗಲು ನಿಗದಿಯಾಗಿರುವಂಥ ಬೋಧಕ ಸಿಬ್ಬಂದಿ ಅಥವಾ ಅರ್ಜಿದಾರನು, ಕೌನ್ಸಲಿಂಗ್ಗೆ ಹಾಜರಾಗಲು ವಿಫಲನಾದ ಪಕ್ಷದಲ್ಲಿ ಅಥವಾ ಕೌನ್ಸಿಲಿಂಗ್ಗೆ ಹಾಜರಾಗಿದ್ದು ಮತ್ತು ನಿಗದಿಪಡಿಸಿದ ಕಾಲಮಿತಿಯೊಳಗೆ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ವಿಫಲರಾದ ಪಕ್ಷದಲ್ಲಿ, ಕೌನ್ಸಲಿಂಗ್ನ ಮೂಲಕ ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಅನ್ಯಥಾ ಕಡ್ಡಾಯ ವರ್ಗಾವಣೆ ಮಾಡಿದ ಹೊರತು, ಆತನು ಪ್ರಸ್ತುತ ಕಾರ್ಯನಿರ್ವಹಿಸುವ ಸ್ಥಳದಲ್ಲಿ ಮುಂದುವರಿಯಬೇಕೆಂದು ಭಾವಿಸತಕ್ಕದ್ದು.
ಪರಂತು, ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಕಡ್ಡಾಯ ವರ್ಗಾವಣೆಯ ಕೌನ್ಸಲಿಂಗ್ಗೆ ಹಾಜರಾಗಲು ನಿಗದಿಪಡಿಸಿರುವಂಥ ಬೋಧಕ ಸಿಬ್ಬಂದಿಯು ಕೌನ್ಸಲಿಂಗ್ಗೆ ಹಾಜರಾಗಲು ವಿಫಲರಾದ ಪಕ್ಷದಲ್ಲಿ ಅಥವಾ ಕೌನ್ಸಲಿಂಗ್ಗೆ ಹಾಜರಾಗಿದ್ದು, ನಿಗದಿಪಡಿಸಿದ ಕಾಲಮಿತಿಯೊಳಗೆ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ವಿಫಲರಾದ ಪಕ್ಷದಲ್ಲಿ, ಆಗ ಸಕ್ಷಮ ಪ್ರಾಧಿಕಾರವು ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಕಡ್ಡಾಯ ವರ್ಗಾವಣೆಯ ಕೌನ್ಸಲಿಂಗ್ನ ಕೊನೆಯಲ್ಲಿ ಪ್ರದರ್ಶಿಸಲಾಗುವ ಖಾಲಿಹುದ್ದೆಗೆ ಸದರಿ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಮತ್ತು ಸ್ಥಳ ನಿಯುಕ್ತಿ ಮಾಡುವ ಅಧಿಕಾರವನ್ನು ಹೊಂದಿರುತ್ತದೆ.
ಮತ್ತೂ ಪರಂತು, ಬೋಧಕ ಸಿಬ್ಬಂದಿಯು ವರ್ಗಾವಣೆಯ ಮೂಲಕ ಸ್ಥಳ ನಿಯುಕ್ತಿಗೊಳಿಸಿದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದಲ್ಲಿ, ಅದನ್ನು ದುರ್ನಡತೆ ಎಂದು ಪರಿಗಣಿಸತಕ್ಕದ್ದು ಮತ್ತು ಸದರಿ ಸಿಬ್ಬಂದಿಯ ವಿರುದ್ಧ ಕರ್ನಾಟಕ ಸಿವಿಲ್ ಸೇವೆಗಳ (ನಿಯಂತ್ರಣ, ವರ್ಗೀಕರಣ ಮತ್ತು ಅಪೀಲುಗಳು) ನಿಯಮಗಳು, 1957 ಮತ್ತು ಕರ್ನಾಟಕ ಸಿವಿಲ್ ಸೇವೆಗಳ (ನಡತೆ) ನಿಯಮಗಳು, 1966ರ ಮೇರೆಗೆ ಸೂಕ್ತ ಶಿಸ್ತು ಕ್ರಮವನ್ನು ಜರುಗಿಸತಕ್ಕದ್ದು.
(6) ಕೌನ್ಸಲಿಂಗ್ ಮೂಲಕ ಭರ್ತಿಮಾಡಬೇಕಾದ 6ನೇ ನಿಯಮದ (2)ನೇ ಉಪ-ನಿಯಮದಲ್ಲಿ ಅಧಿಸೂಚಿಸಲಾದಂತೆ ಪ್ರದರ್ಶಿಸಲಾದ ಬೋಧಕ ಸಿಬ್ಬಂದಿಯ ಹುದ್ದೆಗಳು, 4ನೇ ನಿಯಮದ (1)ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಲಾದಂತೆ ಮತ್ತು ಕೌನ್ಸಿಲಿಂಗ್ ಮೂಲಕ 4ನೇ ನಿಯಮದ (3)ನೇ ಉಪ-ನಿಯಮದಲ್ಲಿ ನಿಯಮಿಸಲಾದ ಮಿತಿಗಳೊಳಗೆ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿರುವ ಬೋಧಕ ಸಿಬ್ಬಂದಿಯ ಕಡ್ಡಾಯ ವರ್ಗಾವಣೆಯ ಮೂಲಕ ಸೃಜಿಸಲಾಗುವ ಖಾಲಿ ಹುದ್ದೆಗಳನ್ನು ಒಳಗೊಂಡಿರತಕ್ಕದ್ದು. ಈ ಅಧಿಸೂಚಿತ ಮತ್ತು ಪ್ರದರ್ಶಿಸಲಾದ ಹುದ್ದೆಗಳಿಗೆ ಪ್ರತಿಯಾಗಿ 4ನೇ ನಿಯಮದ (3)ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಲಾದಂತೆ 2, 3, 4 ಮತ್ತು 5 ರ ಪ್ರವರ್ಗಗಳಿಗೆ ಸಂಬಂಧಿಸಿದ ಬೋಧಕ ಸಿಬ್ಬಂದಿಗೆ ಕೌನ್ಸಲಿಂಗ್ ಮೂಲಕ ಪ್ರದರ್ಶಿಸಲಾದ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಲು ಅನುಮತಿಸತಕ್ಕದ್ದು. ಸದರಿ ಬೋಧಕ ಸಿಬ್ಬಂದಿಯು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಮುಂದುವರೆಯುವುದನ್ನು ಆಯ್ಕೆಮಾಡಿಕೊಂಡಿದ್ದಲ್ಲಿ, ಕೌನ್ಸಲಿಂಗ್ನ ಮೂಲಕ ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಆತನನ್ನು ಕಡ್ಡಾಯ ವರ್ಗಾವಣೆ ಮಾಡಿದ ಹೊರತು, ಅವನು ಸದರಿ ಸ್ಥಳದಲ್ಲಿ ಮುಂದುವರಿಯತಕ್ಕದ್ದು. ಮುಂದುವರೆದು, ಕೌನ್ಸಲಿಂಗ್ ಮೂಲಕ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಅಥವಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಅಥವಾ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿ ಬೋಧಕ ಸಿಬ್ಬಂದಿಯು, ಪ್ರದರ್ಶಿಸಲಾದ ಹುದ್ದೆಯನ್ನು ಆಯ್ಕೆ ಮಾಡಿಕೊಂಡ ಮೇಲೆ, ಸದರಿ ಹುದ್ದೆಯನ್ನು ಮುಂದಿನ ಕೌನ್ಸಲಿಂಗ್ಗಾಗಿ ಪ್ರದರ್ಶಿಸಲಾಗುವ ಹುದ್ದೆಗಳ ಪಟ್ಟಿಯಿಂದ ತೆಗೆದುಹಾಕತಕ್ಕದ್ದು.
(7) 4ನೇ ನಿಯಮದ (3)ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಲಾದಂತೆ (2),(3),(4) ಮತ್ತು (5)ರ ಪ್ರವರ್ಗಗಳಿಗೆ ಸಂಬಂಧಿಸಿದ ಬೋಧಕ ಸಿಬ್ಬಂದಿಯ ಮೊದಲನೇ ಸುತ್ತಿನ ಕೌನ್ಸಲಿಂಗ್ ಪೂರ್ಣಗೊಂಡ ತರುವಾಯ, ಮುಂದಿನ ಕೌನ್ಸಲಿಂಗ್ ಮೂಲಕ ಭರ್ತಿಮಾಡಬೇಕಾದ ಬೋಧಕ ಸಿಬ್ಬಂದಿಯ ಹುದ್ದೆಗಳನ್ನು, ಮೊದಲನೇ ಸುತ್ತಿನ ಕೌನ್ಸಲಿಂಗ್ನಲ್ಲಿ ಸೃಜನೆಯಾದ ಖಾಲಿಹುದ್ದೆಗಳನ್ನು ಪರಿಗಣನೆಗೆ ತೆಗೆದುಕೊಂಡು ಮತ್ತು ಸಾಕಷ್ಟು ಕಾರ್ಯಭಾರದ ಲಭ್ಯತೆ ಮತ್ತು ಶೈಕ್ಷಣಿಕ ಅವಶ್ಯಕತೆಗಳ ಆಧಾರದ ಮೇಲೆ ಸಕ್ಷಮ ಪ್ರಾಧಿಕಾರವು ಅಧಿಸೂಚಿಸತಕ್ಕದ್ದು ಮತ್ತು ಪ್ರದರ್ಶಿಸತಕ್ಕದ್ದು. ನಂತರ, 4ನೇ ನಿಯಮದ (3)ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಲಾದಂತೆ (2), (3), (4) ಮತ್ತು (5) ರ ಪ್ರವರ್ಗಗಳಿಗೆ ಸಂಬಂಧಿಸಿದ ಬೋಧಕ ಸಿಬ್ಬಂದಿಗಾಗಿ ಎರಡನೇ ಸುತ್ತಿನ ಕೌನ್ಸಲಿಂಗ್ ಅನ್ನು ನಡೆಸತಕ್ಕದ್ದು.
(8) 4ನೇ ನಿಯಮದ (3)ನೇ ಉಪ-ನಿಯಮದಲ್ಲಿ ನಿರ್ದಿಷ್ಟಪಡಿಸಲಾದಂತೆ (2),(3),(4) ಮತ್ತು (5)ರ ಪ್ರವರ್ಗಗಳಿಗೆ ಸಂಬಂಧಿಸಿದ ಬೋಧಕ ಸಿಬ್ಬಂದಿಗಾಗಿ ಎರಡನೆ ಸುತ್ತಿನ ಕೌನ್ಸಲಿಂಗ್ ಪೂರ್ಣಗೊಂಡ ನಂತರ, ಮುಂದಿನ ಕೌನ್ಸಲಿಂಗ್ ಮೂಲಕ ಭರ್ತಿಮಾಡಬೇಕಾದ ಬೋಧಕ ಸಿಬ್ಬಂದಿಯ ಹುದ್ದೆಗಳನ್ನು, ಮೊದಲ ಎರಡನೇ ಸುತ್ತಿನ ಕೌನ್ಸಲಿಂಗ್ನಲ್ಲಿ ಸೃಜನೆಯಾದ ಖಾಲಿಹುದ್ದೆಗಳ ಆಧಾರದ ಮೇಲೆ ಮತ್ತು ಸಾಕಷ್ಟು ಕಾರ್ಯಭಾರದ ಲಭ್ಯತೆಯ ಮತ್ತು ಶೈಕ್ಷಣಿಕ ಅವಶ್ಯಕತೆಗಳ ಆಧಾರದ ಮೇಲೆ ಸಕ್ಷಮ ಪ್ರಾಧಿಕಾರವು ಅಧಿಸೂಚಿಸತಕ್ಕದ್ದು ಮತ್ತು ಪ್ರದರ್ಶಿಸತ್ಕಕದ್ದು. ತದನಂತರ, ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಕಡ್ಡಾಯ ವರ್ಗಾವಣೆ ಮಾಡಬೇಕಾದ ಬೋಧಕ ಸಿಬ್ಬಂದಿಗಾಗಿ ಕೌನ್ಸಲಿಂಗ್ ಅನ್ನು ನಡೆಸತಕ್ಕದ್ದು. ಮುಂದುವರೆದು, ಕೌನ್ಸಲಿಂಗ್ ಮೂಲಕ ಸರ್ಕಾರಿ ಇಂಜಿನಿಯರಿಂಗ್ ಅಥವಾ ಸರ್ಕಾರಿ ಪಾಲಿಟೆಕ್ನಿಕ್ ಅಥವಾ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳಲ್ಲಿನ ಬೋಧಕ ಸಿಬ್ಬಂದಿಯು, ಪ್ರದರ್ಶಿಸಲಾದ ಹುದ್ದೆಯನ್ನು ಆಯ್ಕೆ ಮಾಡಿಕೊಂಡ ಮೇಲೆ, ಸದರಿ ಹುದ್ದೆಯನ್ನು ಮುಂದಿನ ಕೌನ್ಸಲಿಂಗ್ಗಾಗಿ ಪ್ರದರ್ಶಿಸಲಾಗುವ ಹುದ್ದೆಗಳ ಪಟ್ಟಿಯಿಂದ ತೆಗೆದು ಹಾಕತಕ್ಕದ್ದು.