(1) ವಲಯ-ಎ ಅಥವಾ ವಲಯ-ಬಿ ಅಥವಾ ವಲಯ-ಸಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವಂಥ ಯಾರೇ ಬೋಧಕ ಸಿಬ್ಬಂದಿಯ ವಿರುದ್ದ ಕರ್ನಾಟಕ ಸಿವಿಲ್ ಸೇವೆಗಳ (ವರ್ಗೀಕರಣ ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957 ಮತ್ತು ಕರ್ನಾಟಕ ಸಿವಿಲ್ ಸೇವೆಗಳ (ನಡತೆ) ನಿಯಮಗಳು, 1966 ರ ಅನುಸಾರ ಶಿಸ್ತು ಕ್ರಮವನ್ನು ಆರಂಭಿಸಿದ್ದರೆ ಮತ್ತು ಸದರಿ ನಿಯಮಗಳ ಅಡಿಯಲ್ಲಿ ವಿಧಿಸಲಾಗುವ ಯಾವುದೇ ದಂಡನೆಗೆ ಒಳಗಾಗಿದ್ದರೆ ಅಥವಾ ಕಾನೂನು ನ್ಯಾಯಾಲಯದಲ್ಲಿ ಯಾವುದೇ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದರೆ ಅಂಥ ಸಿಬ್ಬಂದಿಯನ್ನು ವಲಯ-ಡಿ ಗೆ ವರ್ಗಾವಣೆ ಮಾಡಬಹುದು.
(2) ವಲಯ-ಡಿ ರಲ್ಲಿ ಯಾವುದೇ ಖಾಲಿಹುದ್ದೆಗಳು ಇಲ್ಲದಿದ್ದರೆ, ಖಾಲಿಹುದ್ದೆಯನ್ನು 4ನೇ ನಿಯಮದ (1)ನೇ ಉಪ-ನಿಯಮದಲ್ಲಿ ನಿಯಮಿಸಲಾದಂತೆ ವರ್ಗಾವಣೆಗಾಗಿ ಕನಿಷ್ಠ ಸೇವಾವಧಿಯನ್ನು ಪೂರ್ಣಗೊಳಿಸಿರುವ ಬೋಧಕ ಸಿಬ್ಬಂದಿಯ ವರ್ಗಾವಣೆ ಮಾಡುವ ಮೂಲಕ ಸೃಜಿಸಬಹುದು ಮತ್ತು ಅಂಥ ಅರ್ಹ ಬೋಧಕ ಸಿಬ್ಬಂದಿಯು ಲಭ್ಯವಿಲ್ಲದಿದ್ದರೆ, ತರುವಾಯ ವಲಯ-ಡಿ ರಲ್ಲಿ 4ನೇ ನಿಯಮದ (1)ನೇ ಉಪ-ನಿಯಮದಲ್ಲಿ ನಿಯಮಿಸಲಾದಂತೆ ವರ್ಗಾವಣೆಗಾಗಿ ಕನಿಷ್ಠ ಸೇವಾವಧಿಗಿಂತ ಕಡಿಮೆ ಗರಿಷ್ಠ ಸಂಖ್ಯೆಯ ವರ್ಷಗಳನ್ನು ಪೂರ್ಣಗೊಳಿಸಿರುವ ಬೋಧಕ ಸಿಬ್ಬಂದಿಯನ್ನು ವರ್ಗಾವಣೆಗಾಗಿ ಪರಿಗಣಿಸಬಹುದು. ವರ್ಗಾವಣೆಯ ಪ್ರಕ್ರಿಯೆಯನ್ನು 5, 6 ಮತ್ತು 7ನೇ ನಿಯಮಗಳ ಪ್ರಕಾರ ಮಾಡತಕ್ಕದ್ದು;
ಪರಂತು, ವಲಯ-ಡಿ ಯಿಂದ ವರ್ಗಾವಣೆಯಾಗತಕ್ಕಂಥ ಬೋಧಕ ಸಿಬ್ಬಂದಿಗೆ ವಲಯ-ಸಿ ರಲ್ಲಿ ಪ್ರದರ್ಶಿಸಲಾದ ಯಾವುದೇ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅನುಮತಿಸತಕ್ಕದ್ದು.
ಮತ್ತೂ ಪರಂತು, ಅಂಥ ಬೋಧಕ ಸಿಬ್ಬಂದಿಯು ವಲಯ-ಡಿ ರಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದರೆ, ಆತನನ್ನು/ಆಕೆಯನ್ನು ಕಾರ್ಯನಿರ್ವಹಿಸುತ್ತಿರುವ ಸ್ಥಳದಿಂದ ಅದೇ ವಲಯದಲ್ಲಿ ಮತ್ತೊಂದು ಸ್ಥಳಕ್ಕೆ ವರ್ಗಾವಣೆ ಮಾಡಬಹುದು, ಆದರೆ ಆತನನ್ನು/ಆಕೆಯನ್ನು ಶಿಸ್ತುಬದ್ದ ವ್ಯವಹರಣೆಗಳು, ಕ್ರಿಮಿನಲ್ ವ್ಯವಹರಣೆ ಅಥವಾ ಸಂದರ್ಭಾನುಸಾರ ದಂಡನೆಯು ಪೂರ್ಣಗೊಳ್ಳುವವರೆಗೂ ವಲಯ-ಡಿ ಯಿಂದ ಹೊರಗೆ ವರ್ಗಾವಣೆ ಮಾಡತಕ್ಕದ್ದಲ್ಲ.