(1) ಈ ಅಧಿನಿಯಮದ ಮೇರೆಗೆ ಯಾವುದೇ ಸಾರ್ವಜನಿಕ ಆವರಣಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವಾಗ ಯಾವುದೇ ಅಡಚಣೆ ಉಂಟುಮಾಡಿದರೆ ಅಥವಾ ಅಡಚಣೆ ಉಂಟುಮಾಡುವ ಸಂಭವವಿದೆಯೆಂದು ಸಕ್ಷಮ ಅಧಿಕಾರಿಯು ಅಭಿಪ್ರಾಯಪಟ್ಟರೆ, ಆ ಸಕ್ಷಮ ಅಧಿಕಾರಿಯು ಅಥವಾ ಈ ಬಗ್ಗೆ ಅವನಿಂದ ಯುಕ್ತವಾಗಿ ಅಧಿಕಾರ ಪಡೆದ ಇತರ ಯಾರೇ ಅಧಿಕಾರಿಯು ಅಗತ್ಯವಾದ ಪೊಲೀಸು ನೆರವನ್ನು ಪಡೆದುಕೊಳ್ಳಬಹುದು.
(2) ಈ ಅಧಿನಿಯಮದ ಮೇರೆಗೆ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕಾಗಿರುವ ಯಾವುದೇ ಸಾರ್ವಜನಿಕ ಆವರಣಕ್ಕೆ ಬೀಗ ಹಾಕಿರುವುದು ಕಂಡುಬಂದರೆ, ಸಕ್ಷಮ ಅಧಿಕಾರಿಯು ಅಥವಾ ಈ ಬಗ್ಗೆ ಅವನಿಂದ ಯುಕ್ತವಾಗಿ ಅಧಿಕಾರ ಪಡೆದ ಇತರ ಯಾವನೇ ಅಧಿಕಾರಿಯು ಆ ಆವರಣವನ್ನು ಮೊಹರುಬಂದ್ ಮಾಡಬಹುದು ಅಥವಾ ಮೂವರು ಸಾಕ್ಷಿಗಳ ಸಮಕ್ಷಮದಲ್ಲಿ ಆ ಬೀಗಗಳನ್ನು ಮುರಿದು ತೆಗೆಯಬಹುದು ಅಥವಾ ಯಾವುದೇ ಬಾಗಿಲನ್ನು, ಗೇಟನ್ನು ಅಥವಾ ಇತರ ಅಡ್ಡಿಯನ್ನು ತೆರೆಯಬಹುದು ಅಥವಾ ತೆರೆಯುವಂತೆ ಮಾಡಬಹುದು ಮತ್ತು ಆ ಆವರಣವನ್ನು ಪ್ರವೇಶಿಸಬಹುದು: ಪರಂತು,
(1) ಸೂರ್ಯೋದಯಕ್ಕೆ ಮುಂಚೆ ಅಥವಾ ಸೂರ್ಯಾಸ್ತದ ತರುವಾಯ ಸಾರ್ವಜನಿಕ ಆವರಣದೊಳಕ್ಕೆ ಪ್ರವೇಶಿಸತಕ್ಕದ್ದಲ್ಲ ಅಥವಾ ಅದನ್ನು ಸ್ವಾಧೀನಕ್ಕೆ ತೆಗೆದುಕೊಳ್ಳತಕ್ಕದ್ದಲ್ಲ.
(2) ಯಾವುದೇ ಸಾರ್ವಜನಿಕ ಆವರಣವನ್ನು ಬಲವಂತವಾಗಿ ತೆರೆಸಿದ್ದರೆ, ಕೂಡಲೇ, ಆ ಆವರಣದಲ್ಲಿ ಕಂಡುಬಂದ ವಸ್ತುಗಳ ವಿವರಣಾ ಪಟ್ಟಿಯನ್ನು ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಸಿದ್ಧಪಡಿಸತಕ್ಕದ್ದು.
(3) 6ನೇ ನಿಯಮದ (1) ಮತ್ತು (2) ನೇ ಉಪನಿಯಮಗಳ ಮೇರೆಗೆ ಸ್ವಾಧೀನಕ್ಕೆ ತೆಗೆದುಕೊಂಡ ಆವರಣಗಳಲ್ಲಿ ಯಾವುದೇ ಸ್ವತ್ತು ಇದ್ದರೆ, ಅದನ್ನು ಸಕ್ಷಮ ಅಧಿಕಾರಿಯ ಅಥವಾ ಈ ಬಗ್ಗೆ ಅವನಿಂದ ಯುಕ್ತವಾಗಿ ಅಧಿಕಾರ ಪಡೆದ ಇತರ ಯಾವನೇ ಅಧಿಕಾರಿಯ ಅಭಿರಕ್ಷೆಯಲ್ಲಿ ಇಡತಕ್ಕದ್ದು ಮತ್ತು ತಾನು ಅವಶ್ಯವೆಂದು ಭಾವಿಸಬಹುದಾದಂತೆ ಯುಕ್ತ ಪ್ರಕಟಣೆಯನ್ನು ನೀಡಿದ ತರುವಾಯ, ಅದನ್ನು ವಿಲೆ ಮಾಡತಕ್ಕದ್ದು.