(1) ಈ ಅಧಿನಿಯಮದ 10ನೇ ಪ್ರಕರಣದ ಮೇರೆಗೆ ಸಲ್ಲಿಸುವ ಅಪೀಲು ಬರಹ ರೂಪದಲ್ಲಿರತಕ್ಕದ್ದು ಮತ್ತು ಅದರಲ್ಲಿ ಯಾವ ಆದೇಶದ ವಿರುದ್ಧ ಅಪೀಲನ್ನು ಸಲ್ಲಿಸಲಾಗುತ್ತಿದೆಯೋ ಆ ಆದೇಶದ ಬಗ್ಗೆ ಆಕ್ಷೇಪದ ಕಾರಣಗಳನ್ನು ಸಂಕ್ಷಿಪ್ತವಾಗಿ ನಿರೂಪಿಸತಕ್ಕದ್ದು ಮತ್ತು ಅದಕ್ಕೆ ಅಂತಹ ಆದೇಶದ ಒಂದು ಪ್ರತಿಯನ್ನು ಲಗತ್ತಿಸಿರತಕ್ಕದ್ದು.
(2) ಅಪೀಲನ್ನು ಸ್ವೀಕರಿಸಿದ ಮೇಲೆ ಮತ್ತು ಸಕ್ಷಮ ಅಧಿಕಾರಿಯ ಮುಂದಿರತಕ್ಕ ವ್ಯವಹರಣೆಗಳ ದಾಖಲೆಗಳನ್ನು ತರಿಸಿಕೊಂಡು ಅವುಗಳನ್ನು ಪರಿಶೀಲಿಸಿದ ತರುವಾಯ, ಅಪೀಲು ಅಧಿಕಾರಿಯು ಆ ಅಪೀಲಿನ ವಿಚಾರಣೆಗೆ ಸ್ಥಳ ಮತ್ತು ಸಮಯವನ್ನು ಗೊತ್ತುಪಡಿಸತಕ್ಕದ್ದು ಮತ್ತು ಯಾರ ಆದೇಶದ ವಿರುದ್ದ ಅಪೀಲನ್ನು ಸಲ್ಲಿಸಲಾಗಿದೆಯೋ ಆ ಸಕ್ಷಮ ಅಧಿಕಾರಿಗೆ ಮತ್ತು ಅಪೀಲುದಾರನಿಗೆ ಅದರ ಬಗ್ಗೆ ನೋಟೀಸನ್ನು ನೀಡತಕ್ಕದ್ದು.