(ಎ) ಈ ನಿಯಮಗಳನ್ನು ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957 ಎಂದು ಕರೆಯತಕ್ಕದ್ದು.
(ಬಿ) ಅವು ಕೂಡಲೇ ಜಾರಿಗೆ ಬರತಕ್ಕದ್ದು.
ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957, Department of Personnel & Administrative Reforms
1957 · PDF page 7
Hover any section to copy its link or text, ask Copilot about it, or bookmark it.
ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) ಸರ್ಕಾರಿ ನೌಕರನಿಗೆ ಸಂಬಂಧಿಸಿದಂತೆ "ನೇಮಕ ಪ್ರಾಧಿಕಾರಿ" ಎಂದರೆ:-
(i) ಯಾವ ಸೇವೆಯಲ್ಲಿ ಸರ್ಕಾರಿ ನೌಕರನು ತತ್ಕಾಲದಲ್ಲಿ ಸದಸ್ಯನಾಗಿರುವನೋ ಆ ಸೇವೆಗೆ ಅಥವಾ ಸೇವೆಯ ಯಾವ ಶ್ರೇಣಿಯಲ್ಲಿ ಆ ಸರ್ಕಾರಿ ನೌಕರನನ್ನು ತತ್ಕಾಲದಲ್ಲಿ ಸೇರಿಸಲಾಗಿದೆಯೋ ಆ ಶ್ರೇಣಿಗೆ ನೇಮಕಗಳನ್ನು ಮಾಡಲು ಅಧಿಕಾರ ಹೊಂದಿರುವ ಪ್ರಾಧಿಕಾರಿ, ಅಥವಾ
(ii) ಸರ್ಕಾರಿ ನೌಕರನು ತತ್ಕಾಲದಲ್ಲಿ ಯಾವ ಹುದ್ದೆಯನ್ನು ಧಾರಣ ಮಾಡಿರುವನೋ ಆ ಹುದ್ದೆಗೆ ನೇಮಕಗಳನ್ನು ಮಾಡಲು ಅಧಿಕಾರ ಹೊಂದಿರುವ ಪ್ರಾಧಿಕಾರಿ, ಅಥವಾ
(iii) ಸರ್ಕಾರಿ ನೌಕರನನ್ನು ಸಂದರ್ಭಾನುಸಾರ, ಅಂಥ ಸೇವೆಗೆ, ಹುದ್ದೆಯ ಶ್ರೇಣಿಗೆ ಅಥವಾ ಹುದ್ದೆಗೆ ನೇಮಕ ಮಾಡಿದ ಪ್ರಾಧಿಕಾರಿ - ಇವರುಗಳಲ್ಲಿ ಯಾರು ಉನ್ನತ ಪ್ರಾಧಿಕಾರಿಯೋ ಆ ಪ್ರಾಧಿಕಾರಿ ಎಂದು ಅರ್ಥ;
(ಬಿ) ‘ಆಯೋಗ' ಎಂದರೆ ಕರ್ನಾಟಕ ಲೋಕಸೇವಾ ಆಯೋಗ ಎಂದು ಅರ್ಥ;
(ಸಿ) ಸರ್ಕಾರಿ ನೌಕರನಿಗೆ ದಂಡನೆಯನ್ನು ವಿಧಿಸುವುದಕ್ಕೆ ಸಂಬಂಧಿಸಿದಂತೆ ‘ಶಿಸ್ತು ಪ್ರಾಧಿಕಾರಿ‘ ಎಂದರೆ ಅವನಿಗೆ ಆ ದಂಡನೆಯನ್ನು ವಿಧಿಸಲು ಈ ನಿಯಮಗಳ ಮೇರೆಗೆ ಸಕ್ಷಮನಾದ ಪ್ರಾಧಿಕಾರಿ ಎಂದು ಅರ್ಥ;
(ಡಿ) ‘ಸರ್ಕಾರಿ ನೌಕರ’ ಎಂದರೆ ಕರ್ನಾಟಕ ರಾಜ್ಯದ ಸಿವಿಲ್ ಸೇವೆಯ ಸದಸ್ಯನಾಗಿರುವ ಅಥವಾ ಕರ್ನಾಟಕ ರಾಜ್ಯದ ವ್ಯವಹಾರಗಳ ಸಂಬಂಧದಲ್ಲಿ ಸಿವಿಲ್ ಹುದ್ದೆಯನ್ನು ಧಾರಣ ಮಾಡಿರುವ ವ್ಯಕ್ತಿ ಎಂದು ಅರ್ಥ ಮತ್ತು ಅದರಲ್ಲಿ ಯಾರ ಸೇವೆಗಳನ್ನು ತಾತ್ಕಾಲಿಕವಾಗಿ ಭಾರತ ಸರ್ಕಾರದ, ಬೇರೆ ರಾಜ್ಯ ಸರ್ಕಾರದ, ಸ್ಧಳೀಯ ಪ್ರಾಧಿಕಾರದ, ನಿಗಮಿತವಾಗಿರುವ ಅಥವಾ ಆಗಿಲ್ಲದಿರುವ ಯಾರೇ ವ್ಯಕ್ತಿಯ ಅಥವಾ ವ್ಯಕ್ತಿಗಳ ವಶಕ್ಕೆ ವಹಿಸಿಕೊಡಲಾಗಿದೆಯೋ ಆ ಯಾರೇ ವ್ಯಕ್ತಿಯನ್ನು ಮತ್ತು ಕೇಂದ್ರ ಸರ್ಕಾರದ ಅಥವಾ ಬೇರೆ ರಾಜ್ಯ ಸರ್ಕಾರದ ಅಥವಾ ಸ್ಧಳೀಯ ಪ್ರಾಧಿಕಾರದ ಅಥವಾ ಇತರ ಪ್ರಾಧಿಕಾರದ ಸೇವೆಯಲ್ಲಿರುವ ಯಾರ ಸೇವೆಗಳನ್ನು ತಾತ್ಕಾಲಿಕವಾಗಿ ಕರ್ನಾಟಕ ಸರ್ಕಾರದ ವಶಕ್ಕೆ ವಹಿಸಿಕೊಡಲಾಗಿದೆಯೋ ಆ ಯಾರೇ ವ್ಯಕ್ತಿಯನ್ನು ಸಹ ಒಳಗೊಳ್ಳುತ್ತದೆ;
(ಇ) ‘ರಾಜ್ಯಪಾಲರು' ಎಂದರೆ ಕರ್ನಾಟಕ ರಾಜ್ಯಪಾಲರು ಎಂದು ಅರ್ಥ;
1 [XXX 1. ಅಧಿಸೂಚನೆ ಸಂಖ್ಯೆ ಜಿಎಡಿ 28 ಎಸ್ಎನ್ 69, ದಿನಾಂಕ 12-12-1973ರ ಮೂಲಕ ಬಿಟ್ಟುಬಿಡಲಾಗಿದೆ. ಕೆಯುಡಿ 24-1-74.
(ಎಫ್) ‘ಅನುಸೂಚಿ’ ಎಂದರೆ ಈ ನಿಯಮಗಳ ಅನುಸೂಚಿ ಎಂದು ಅರ್ಥ;
(ಜಿ) ‘ಸೇವೆ’ ಎಂದರೆ ರಾಜ್ಯದ ಸಿವಿಲ್ ಸೇವೆ ಎಂದು ಅರ್ಥ.
(1) ಈ ನಿಯಮಗಳು,-
1 [(ಎ) ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು ಮತ್ತು ಇತರ ವಿಭಾಗೀಯ, ಜಿಲ್ಲಾ ಮುದ್ರಣಾಲಯಗಳು, ಲೇಖನ ಸಾಮಗ್ರಿ ಮಳಿಗೆಗಳು ಮತ್ತು ಪುಸ್ತಕ ಮಳಿಗೆಗಳು - ಇವುಗಳನ್ನು ಬಿಟ್ಟು ಔದ್ಯಮಿಕ ನಿಯೋಜನೆ (ಸ್ಧಾಯೀ ಆದೇಶಗಳ) ಅಧಿನಿಯಮ, 1946ರ (ಕೇಂದ್ರ ಅಧಿನಿಯಮ 1946ರ xx) ಉಪಬಂಧಗಳು ಸರ್ಕಾರದ ಔದ್ಯಮಿಕ ಉದ್ಯಮಗಳಲ್ಲಿ ನಿಯೋಜಿತರಾಗಿರುವ ಯಾವ ವ್ಯಕ್ತಿಗಳಿಗೆ ಅನ್ವಯವಾಗುವಮೋ ಆ ವ್ಯಕ್ತಿಗಳನ್ನು ;
(ಸಿ) ಒಂದು ತಿಂಗಳಿಗಿಂತ ಕಡಿಮೆ ನೋಟೀಸಿನ ಮೇಲೆ ಸೇವೆಯಿಂದ ಬಿಡುಗಡೆಗೆ ಒಳಪಡುವ ವ್ಯಕ್ತಿಗಳನ್ನು;
(ಡಿ) ಯಾರ ನೇಮಕಕ್ಕಾಗಿ ಮತ್ತು ಈ ನಿಯಮಗಳ ವ್ಯಾಪ್ತಿಗೊಳಪಡುವ ಇತರೆ ವಿಷಯಗಳ ಬಗ್ಗೆ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ಅಥವಾ ಯಾವುದೇ ಕರಾರಿನಲ್ಲಿ, ಅಂಥ ಕಾನೂನಿನ ಅಥವಾ ಅಂಥ ಕರಾರಿನ ವ್ಯಾಪ್ತಿಗೊಳಪಡುವ ವಿಷಯಗಳ ಬಗ್ಗೆ ವಿಶೇಷ ಉಪಬಂಧಗಳನ್ನು ಮಾಡಲಾಗಿದೆಯೋ ಆ ವ್ಯಕ್ತಿಗಳನ್ನು; ಮತ್ತು
(ಇ) ಅಖಿಲ ಭಾರತ ಸೇವೆಯ ಸದಸ್ಯರನ್ನು - ಹೊರತುಪಡಿಸಿ ಎಲ್ಲ ಸರ್ಕಾರಿ ನೌಕರರಿಗೆ ಅನ್ವಯವಾಗುತ್ತವೆ.
(2) (1)ನೇ ಉಪನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಈ ನಿಯಮಗಳು (1)ನೇ ಉಪನಿಯಮದ (ಎ) ಅಥವಾ (ಡಿ) ವಿನಾಯಿತಿಯೊಳಗೆ ಬರುವ ಸೇವೆಗೆ ಅಥವಾ ಹುದ್ದೆಗೆ ತಾತ್ಕಾಲಿಕವಾಗಿ ವರ್ಗಾವಣೆಯಾದ ಯಾವ ಇತರ ಸರ್ಕಾರಿ ನೌಕರರಿಗೆ, ಅಂಥ ವರ್ಗಾವಣೆಯಾಗದಿದ್ದರೆ ಈ ನಿಯಮಗಳು ಹೇಗೆ ಅನ್ವಯವಾಗಬಹುದಿತ್ತೋ ಹಾಗೆ ಅವರಿಗೆ ಅನ್ವಯವಾಗತಕ್ಕದ್ದು.
(3) (1)ನೇ ಉಪನಿಯಮದಲ್ಲಿ ಏನೇ ಒಳಗೊಂಡಿದ್ದರೂ, ರಾಜ್ಯಪಾಲರು, ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ಅಧಿಸೂಚನೆಯ ಮೂಲಕ, ರಾಜ್ಯಪಾಲರು ಯಾರಿಗೆ ಈ ನಿಯಮಗಳನ್ನು ಸೂಕ್ತವಾಗಿ ಅನ್ವಯಿಸಲು ಸಾಧ್ಯವಾಗದೆಂದು ಘೋಷಿಸಬೇಕಾಗುತ್ತದೋ ಆ ಯಾವುದೇ ಹುದ್ದೆಯ ಧಾರಕನನ್ನು ಅಥವಾ ಹುದ್ದೆಗಳ ಯಾವುದೇ ವರ್ಗಗಳ ಧಾರಕರನ್ನು ಈ ಎಲ್ಲಾ ನಿಯಮಗಳ ಅಥವಾ ಈ ನಿಯಮಗಳ ಪೈಕಿ ಯಾವುದೇ ನಿಯಮದ ಜಾರಿಯಿಂದ ಹೊರತುಪಡಿಸಬಹುದು, ಮತ್ತು ಅಂಥ ನಿಯಮಗಳು ಆ ತರುವಾಯ ಹಾಗೆ ಹೊರತುಪಡಿಸಿರುವಷ್ಟರ ಮಟ್ಟಿಗೆ ಅನ್ವಯವಾಗುವುದು ನಿಂತುಹೋಗತಕ್ಕದ್ದು:
ಪರಂತು, ಅಂಥ ಯಾವುದೇ ಘೋಷಣೆಯನ್ನು ನಿವೃತ್ತಿ ವೇತನದ ಹುದ್ದೆಯ ಅಥವಾ ಪೂರ್ಣಕಾಲಿಕ ಖಾಯಂ ಹುದ್ದೆಯ ಧಾರಕನ ಸಂಬಂಧದಲ್ಲಿ ಮಾಡತಕ್ಕದ್ದಲ್ಲ.
(4) ಯಾವುದೇ ಸಂದೇಹವು, ಎಂದರೆ,-
(ಎ) ಈ ನಿಯಮಗಳು ಯಾರೇ ವ್ಯಕ್ತಿಗೆ ಅನ್ವಯವಾಗುತ್ತವೆಯೇ; ಮತ್ತು
(ಬಿ) ಈ ನಿಯಮಗಳು ಅನ್ವಯವಾಗುವ ಯಾರೇ ವ್ಯಕ್ತಿಯು ಒಂದು ನಿರ್ದಿಷ್ಟ ಸೇವೆಗೆ ಸೇರಿದವನೇ ಅಥವಾ ಎರಡು ಅಥವಾ ಹೆಚ್ಚು ಸೇವೆಗಳ ಪೈಕಿ ಅಂಥ ವ್ಯಕ್ತಿಯು ಯಾವ ಸೇವೆಗೆ ಸೇರಿದ್ದಾನೆ - ಎಂಬ ಬಗ್ಗೆ ಯಾವುದೇ ಸಂದೇಹ ಉಂಟಾದರೆ ಆ ವಿಷಯವನ್ನು ರಾಜ್ಯಪಾಲರಿಗೆ ಉಲ್ಲೇಖಿಸತಕ್ಕದ್ದು ಮತ್ತು ಆ ಬಗ್ಗೆ ಅವರ ತೀರ್ಮಾನವು ಅಂತಿಮವಾದುದಾಗಿರತಕ್ಕದ್ದು.