ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲುಗಳು) ನಿಯಮಗಳನ್ನು ಮತ್ತು ಗೃಹ ಇಲಾಖೆ ಸಂಖ್ಯೆ. ಎಫ್ 9-19-30 ಇಎಸ್ಟಿಎಸ್, ದಿನಾಂಕ ಫೆಬ್ರವರಿ 27, 1932 ರಲ್ಲಿನ ಭಾರತ ಸರ್ಕಾರದ ಅಧಿಸೂಚನೆಯಲ್ಲಿ ಒಳಗೊಂಡಿರುವ ನಿಯಮಗಳನ್ನು, ಹೈದರಾಬಾದು ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳನ್ನು, ಮುಂಬಯಿ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳನ್ನು, ಮದ್ರಾಸು ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳನ್ನು ಮತ್ತು ಸಾಮಾನ್ಯ ಸುತ್ತೋಲೆಗಳು ಮತ್ತು ಸ್ಥಾಯೀ ಆದೇಶಗಳ ಮೈಸೂರು ಕೈಪಿಡಿಯ Xನೇ ಅಧ್ಯಾಯದ ಭಾಗ-I ರಲ್ಲಿ ಒಳಗೊಂಡಿರುವ ನಿಯಮಗಳನ್ನು, 1955ರ ಮೈಸೂರು ಸಿವಿಲ್ ಸೇವಾ (ವರ್ಗೀಕರಣ) ನಿಯಮಗಳನ್ನು, ಮತ್ತು ಅಂಥ ಯಾವುವೇ ನಿಯಮಗಳ ಅಡಿಯಲ್ಲಿ ಅಥವಾ ಸಂವಿಧಾನದ 309ನೇ ಅನುಚ್ಛೇದದ ಪರಂತುಕದ ಮೇರೆಗೆ ಹೊರಡಿಸಲಾದ ಯಾವುವೇ ಅಧಿಸೂಚನೆಗಳನ್ನು ಮತ್ತು ನಿಯಮಗಳನ್ನು ಮತ್ತು ಮಾಡಲಾದ ಆದೇಶಗಳನ್ನು ಮತ್ತು ಯಾರೇ ಸಕ್ಷಮ ಪ್ರಾಧಿಕಾರಿಯು ಮಾಡಿದ ಇತರ ಎಲ್ಲ ನಿಯಮಗಳನ್ನು ಮತ್ತು ಆದೇಶಗಳನ್ನು, ಯಾರಿಗೆ ಈ ನಿಯಮಗಳು ಅನ್ವಯವಾಗುವುಮೋ ಆ ವ್ಯಕ್ತಿಗಳಿಗೆ ಅವು ಅನ್ವಯವಾಗುವಷ್ಟರ ಮಟ್ಟಿಗೆ ಮತ್ತು ಅನುಸೂಚಿಗಳಲ್ಲಿ ನಿರ್ದಿಷ್ಟಪಡಿಸಿದ ರಾಜ್ಯ ಸಿವಿಲ್ ಸೇವೆಯ ವರ್ಗೀಕರಣಕ್ಕೆ ಅವು ಸಂಬಂಧಪಡುವಷ್ಟರ ಮಟ್ಟಿಗೆ ಅಥವಾ ನೇಮಕಗಳನ್ನು ಮಾಡಲು, ದಂಡನೆಗಳನ್ನು ವಿಧಿಸಲು ಅಥವಾ ಅಪೀಲುಗಳನ್ನು ಅಂಗೀಕರಿಸಲು ಅಧಿಕಾರಗಳನ್ನು ಪ್ರದಾನ ಮಾಡುವಷ್ಟರ ಮಟ್ಟಿಗೆ, ಈ ಮೂಲಕ ನಿರಸನಗೊಳಿಸಲಾಗಿದೆ:
ಪರಂತು,-
(ಎ) ಅಂಥ ನಿರಸನಗಳು ಸದರಿ ನಿಯಮಗಳನ್ನು, ಅಧಿಸೂಚನೆಗಳನ್ನು ಮತ್ತು ಆದೇಶಗಳನ್ನು ಈ ಹಿಂದೆ ಜಾರಿಗೊಳಿಸಿರುವುದನ್ನು ಅಥವಾ ಆ ಮೇರೆಗೆ ಕೈಕೊಂಡ ಯಾವುದೇ ಕಾರ್ಯಕ್ಕೆ ಅಥವಾ ಕೈಗೊಂಡ ಯಾವುದೇ ಕ್ರಮಕ್ಕೆ ಬಾಧಕ ಉಂಟುಮಾಡತಕ್ಕದ್ದಲ್ಲ; (ಬಿ) ಈ ನಿಯಮಗಳ ಪ್ರಾರಂಭದಲ್ಲಿ ಇತ್ಯರ್ಥದಲ್ಲಿದ್ದ ಸದರಿ ನಿಯಮಗಳ, ಅಧಿಸೂಚನೆಗಳ ಅಥವಾ ಆದೇಶಗಳ ಮೇರೆಗಿನ ಯಾವುವೇ ವ್ಯವಹರಣೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಈ ನಿಯಮಗಳ ಉಪಬಂಧಗಳಿಗನುಸಾರವಾಗಿ ಮುಂದುವರಿಸತಕ್ಕದ್ದು ಮತ್ತು ವಿಲೆ ಮಾಡತಕ್ಕದ್ದು;
(2) ಈ ನಿಯಮಗಳು ಯಾವ ವ್ಯಕ್ತಿಗೆ ಅನ್ವಯವಾಗುತ್ತವೆಯೋ ಆ ಯಾರೇ ವ್ಯಕ್ತಿಯು, ಈ ನಿಯಮಗಳ ಪ್ರಾರಂಭಕ್ಕೆ ಮುಂಚೆ ಹೊರಡಿಸಿದ ಯಾವುದೇ ಆದೇಶಕ್ಕೆ ಸಂಬಂಧಪಟ್ಟಂತೆ (1)ನೇ ಉಪನಿಯಮದ ಮೂಲಕ ನಿರಸಿತಗೊಂಡ ನಿಯಮಗಳ, ಅಧಿಸೂಚನೆಗಳ ಅಥವಾ ಆದೇಶಗಳ ಮೇರೆಗೆ ಅವನಿಗೆ ಪ್ರಾಪ್ತವಾಗಿದ್ದ ಅಪೀಲು ಮಾಡಿಕೊಳ್ಳುವ ಯಾವುದೇ ಹಕ್ಕಿನಿಂದ ವಂಚಿತನಾಗುವಂತೆ ಈ ನಿಯಮದಲ್ಲಿರುವುದಾವುದೂ ಜಾರಿಯಾಗತಕ್ಕದ್ದಲ್ಲ.
(3) ಈ ನಿಯಮಗಳ ಪ್ರಾರಂಭಕ್ಕೆ ಮುಂಚೆ ಮಾಡಿದ ಆದೇಶದ ವಿರುದ್ಧ ಅಂಥ ಪ್ರಾರಂಭದಲ್ಲಿ ಇತ್ಯರ್ಥದಲ್ಲಿರುವ ಅಥವಾ ಆ ತರುವಾಯ ಸಲ್ಲಿಸಿದ ಅಪೀಲನ್ನು ಪರಿಶೀಲಿಸತಕ್ಕದ್ದು ಮತ್ತು ಅದರ ಮೇಲೆ ಆದೇಶಗಳನ್ನು ಈ ನಿಯಮಗಳಿಗನುಸಾರವಾಗಿ ಹೊರಡಿಸತಕ್ಕದ್ದು.