ಪ್ರತಿಯೊಂದು ಇಲಾಖೆಯ ಇಲಾಖಾ ಮುಖ್ಯಸ್ಥರು ಅಥವಾ ನೇಮಕಾತಿ ಪ್ರಾಧಿಕಾರವು, ಕಾಲಕಾಲಕ್ಕೆ ನೇಮಕಾತಿಗಳು ಅಥವಾ ಹುದ್ದೆಗಳ ಮೀಸಲಾತಿಗೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಆದೇಶಗಳಿಗನುಸಾರವಾಗಿ ಅವುಗಳ ವರ್ಗೀಕರಣ ಮಾಡಿ ಗ್ರೂಪ್-ಎ, ಗ್ರೂಪ್-ಬಿ ಮತ್ತು ಗ್ರೂಪ್-ಸಿ ವರ್ಗದಲ್ಲಿ ಗ್ರೂಪ್-ಸಿ ಯಲ್ಲಿನ ವಾಹನ ಚಾಲಕರ ಹುದ್ದೆಗಳನ್ನು ಹೊರತುಪಡಿಸಿ, ಭರ್ತಿ ಮಾಡಬೇಕಾದ ನೇರನೇಮಕಾತಿಯ ಖಾಲಿ ಹುದ್ದೆಗಳ ತಾತ್ಕಾಲಿಕ ಸಂಖ್ಯೆಯನ್ನು ಆಯ್ಕೆ ಪ್ರಾಧಿಕಾರಕ್ಕೆ ತಿಳಿಸತಕ್ಕದ್ದು. ಇಲಾಖಾ ಮುಖ್ಯಸ್ಥರು ಅಥವಾ ನೇಮಕಾತಿ ಪ್ರಾಧಿಕಾರವು, ಲಿಖಿತದಲ್ಲಿ ದಾಖಲಿಸಬಹುದಾದ ಕಾರಣಗಳಿಗಾಗಿ,ಅಧಿಸೂಚನೆಯನ್ನು ಪ್ರಕಟಿಸುವುದಕ್ಕಿಂತ ಮೊದಲು ಯಾವುದೇ ಸಮಯದಲ್ಲಿ ಸರ್ಕಾರವು ನಿರ್ದಿಷ್ಟಪಡಿಸಿದ ಆಯ್ಕೆ ಪ್ರಾಧಿಕಾರಕ್ಕೆ ನೇಮಕಾತಿಗೆ ಮಾಹಿತಿ ನೀಡಿದ ಖಾಲಿ ಹುದ್ದೆಗಳ ಸಂಖ್ಯೆಯನ್ನು ಮಾರ್ಪಾಡು ಮಾಡಬಹುದು.
ಖಾಲಿ ಹುದ್ದೆಗಳ ಬಗ್ಗೆ ಮಾಹಿತಿಯನ್ನು ತಿಳಿಸುವಾಗ, ಅರ್ಹತಾ ಪರೀಕ್ಷೆಗಾಗಿ ತತ್ಸಮಾನ ವಿದ್ಯಾರ್ಹತೆಗಳನ್ನು ಸಂಬಂಧಿಸಿದ ನೇಮಕಾತಿ ನಿಯಮಗಳಲ್ಲಿ ಒದಗಿಸಿದ್ದರೆ ಮತ್ತು ತತ್ಸಮಾನ ವಿದ್ಯಾರ್ಹತೆಗಳನ್ನು ನೇಮಕಾತಿ ನಿಯಮಗಳಲ್ಲಿ ನಿರ್ದಿಷ್ಟಪಡಿಸಿಲ್ಲದಿದ್ದರೆ, ಆಗ ನೇಮಕಾತಿ ಪ್ರಾಧಿಕಾರವು, ತತ್ಸಮಾನ ವಿದ್ಯಾರ್ಹತೆಗಳು/ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಬಗ್ಗೆ, ಈ ಪ್ರಮಾಣ ಪತ್ರಗಳನ್ನು ಯಾವ ಸಂಸ್ಥೆಯಿಂದ ಪಡೆದುಕೊಳ್ಳಬೇಕು ಎಂಬ ಬಗ್ಗೆ ಯಾವುದಾದರೂ ಇದ್ದಲ್ಲಿ, ಆ ಬಗ್ಗೆ ಆಯ್ಕೆ ಪ್ರಾಧಿಕಾರಕ್ಕೂ ಸಹ ತಿಳಿಸತಕ್ಕದ್ದು.