(1)ಈ ನಿಯಮಗಳಲ್ಲಿ ಅಥವಾ ಯಾವುದೇ ಸೇವೆ ಅಥವಾ ಹುದ್ದೆಯ ಸಂಬಂಧದಲ್ಲಿ ವಿಶೇಷವಾಗಿ ರಚಿಸಿದ ನೇಮಕಾತಿಯ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಗ್ರೂಪ್-ಸಿಯಲ್ಲಿನ ಚಾಲಕರುಗಳ ಮತ್ತು ಗ್ರೂಪ್-ಡಿಯಲ್ಲಿನ ಹುದ್ದೆಗಳಿಗೆ ಸಂಬಂಧಿಸಿದಂತೆ, ನೇಮಕಾತಿ ಪ್ರಾಧಿಕಾರವು, ವ್ಯಾಪಕ ಪ್ರಚಾರ ಹೊಂದಿದಒಂದಕ್ಕಿಂತಹೆಚ್ಚಿನ ದಿನಪತ್ರಿಕೆಯಲ್ಲಿ ಮತ್ತು ನೇಮಕಾತಿ ಪ್ರಾಧಿಕಾರವು ನಿರ್ಧರಿಸಬಹುದಾದಂತಹ ರೀತಿಯ ಇತರ ಪ್ರಕಟಣೆಯಲ್ಲಿ ಮತ್ತು ಮಾಧ್ಯಮದಲ್ಲಿ, ಎಲ್ಲಾ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಮೂಲಕ, ಮೀಸಲಾತಿಗೆ ಸಂಬಂಧಪಟ್ಟಂತೆ ಜಾರಿಯಲ್ಲಿರುವ ಆದೇಶಗಳನ್ನು ಪರಿಗಣನೆಗೆ ತೆಗೆದುಕೊಂಡು, ನೇಮಕಾತಿಯ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಅರ್ಹತಾ ಪರೀಕ್ಷೆಯಲ್ಲಿ ಅಭ್ಯರ್ಥಿಯು ಗಳಿಸಿದ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ ನಿರ್ಧರಿಸಿದ ಅರ್ಹತೆಯ ಕ್ರಮದಲ್ಲಿ ನೇಮಕಾತಿಯನ್ನು ಮಾಡತಕ್ಕದ್ದು. ಒಂದು ವೇಳೆ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಸಮಾನ ಶೇಕಡಾವಾರು ಅಂಕಗಳನ್ನು ಗಳಿಸಿದ್ದರೆ, ಅಂತಹ ಅಭ್ಯರ್ಥಿಗಳ ಅರ್ಹತೆಯ ಕ್ರಮವನ್ನು ಅವರುಗಳ ವಯಸ್ಸಿನ ಆಧಾರದ ಮೇಲೆ ನಿಗದಿಪಡಿಸಿದ, ವಯಸ್ಸಿನಲ್ಲಿ ಹಿರಿಯವನಾದ ವ್ಯಕ್ತಿಯನ್ನು ಅರ್ಹತೆಯ ಕ್ರಮದಲ್ಲಿ ಮೇಲಿನ ಸ್ಥಾನದಲ್ಲಿ ಇರಿಸತಕ್ಕದ್ದು.
(2) ಅಧಿಸೂಚನೆಯಲ್ಲಿ ತಿಳಿಸಿದಂತೆ ಅರ್ಜಿಗಳನ್ನು ನಿರ್ದಿಷ್ಟಪಡಿಸಲಾದ ಅರ್ಜಿ ಶುಲ್ಕದೊಂದಿಗೆ ಸಲ್ಲಿಸುವುದಕ್ಕಾಗಿ ನೇಮಕಾತಿ ಪ್ರಾಧಿಕಾರವು ನಿರ್ದಿಷ್ಟಪಡಿಸಿದ ನಮೂನೆಯಲ್ಲಿ ದೊರೆಯುವಂತೆ ಮಾಡತಕ್ಕದ್ದು.
ಪರಂತು, ಪರಿಶಿಷ್ಟ ಜಾತಿಯ ಅಥವಾ ಪರಿಶಿಷ್ಟ ಪಂಗಡದ ಅಥವಾ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1ಕ್ಕೆ ಸೇರಿದ ಅಥವಾ ಅಂಗವೈಕಲ್ಯತೆಯುಳ್ಳ ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸತಕ್ಕದ್ದಲ್ಲ.
(3) (ಎ) ನೇಮಕಾತಿ ಪ್ರಾಧಿಕಾರವು(1) ಉಪ-ನಿಯಮದ ಅನುಸಾರವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು. ಅಂತಹ ಪಟ್ಟಿಯಲ್ಲಿ ಒಳಗೊಂಡ ಅಭ್ಯರ್ಥಿಗಳ ಸಂಖ್ಯೆಯು ಅಧಿಸೂಚಿಸಿದ ಖಾಲಿ ಸ್ಥಾನಗಳ ಸಂಖ್ಯೆಗೆ ಸಮನಾಗಿ ಇರತಕ್ಕದ್ದು. ಅದನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಕರ್ನಾಟಕ ರಾಜ್ಯಪತ್ರದಲ್ಲಿ ಮತ್ತು ನೇಮಕಾತಿ ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಅಥವಾ ಅದು ಸೂಕ್ತವೆಂದು ಭಾವಿಸಬಹುದಾದಂಥ ಪ್ರಚಾರದ ಅಂತಹ ಇತರೆ ಮಾಧ್ಯಮದಲ್ಲಿ ಪ್ರಕಟಿಸತಕ್ಕದ್ದು. ನೇಮಕಾತಿ ಪ್ರಾಧಿಕಾರವು ನೋಂದಾಯಿತ ಅಂಚೆ, ಎಸ್.ಎಂ.ಎಸ್. ಇ-ಮೇಲ್, ಮತ್ತು ಇತರೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯ್ಕೆಯ ಸಂಗತಿಯನ್ನು ತಿಳಿಸತಕ್ಕದ್ದು. ಆಯ್ಕೆ ಪಟ್ಟಿಯಲ್ಲಿ ಹೆಸರುಗಳನ್ನು ಒಳಗೊಂಡಿರುವ ಅಭ್ಯರ್ಥಿಗಳನ್ನು, ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ)ನಿಯಮಗಳು, 1977ರಉಪಬಂಧಗಳಿಗೆ ಅನುಸಾರವಾಗಿ, ನೇಮಕಾತಿ ಪ್ರಾಧಿಕಾರವು ಪ್ರತಿಯೊಬ್ಬ ಅಂತಹ ಅಭ್ಯರ್ಥಿಯ ಪ್ರಮಾಣ ಪತ್ರಗಳ ಸತ್ಯಾಪನೆ ಮತ್ತು ಸೂಕ್ತತೆಯ ಮತ್ತು ದೇಹ ದಾರ್ಢ್ಯತೆಯ ಬಗ್ಗೆ ಸ್ವತಃ ಮನವರಿಕೆ ಮಾಡಿಕೊಂಡ ನಂತರ ಆಯ್ಕೆ ಪಟ್ಟಿಯಲ್ಲಿ ಅವರ ಹೆಸರುಗಳು ಇರುವ ಕ್ರಮದಲ್ಲಿ ನೇಮಕ ಮಾಡಬಹುದು.
(ಬಿ) (ಎ) ಖಂಡದ ಮೇರೆಗೆ ಸಿದ್ಧಪಡಿಸಿದ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯು ಅದರ ಪ್ರಕಟಣೆಯ ದಿನಾಂಕದಿಂದ ಆರು ತಿಂಗಳುಗಳ ಅವಧಿಯವರೆಗೆ ಅಥವಾ ಮುಂದಿನ ಆಯ್ಕೆಯ ಆಧಾರದ ಮೇಲೆ ಸಿದ್ಧಪಡಿಸಿದ ಪಟ್ಟಿಯ ಪ್ರಕಟಣೆಯ ದಿನಾಂಕದವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರತಕ್ಕದ್ದು.
(4) (ಎ) ನೇಮಕಾತಿ ಪ್ರಾಧಿಕಾರವು,(1) ನೇ ಉಪ-ನಿಯಮದ ಮೇರೆಗೆ ಸಿದ್ಧಪಡಿಸಿದ ಆಯ್ಕೆ ಪಟ್ಟಿಯ ಮಾದರಿಯಲ್ಲಿ,(3)ನೇ ಉಪ-ನಿಯಮದ ಮೇರೆಗೆ ಸಿದ್ಧಪಡಿಸಿದ ಪಟ್ಟಿಯಲ್ಲಿ ಒಳಗೊಂಡಿಲ್ಲದ ಅಭ್ಯರ್ಥಿಗಳ ಒಂದು ಹೆಚ್ಚುವರಿ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು. ನೇಮಕಾತಿ ಪ್ರಾಧಿಕಾರವು, ಸೇರಿಕೆ ಸಮಯವನ್ನು ನಿರ್ದಿಷ್ಟಪಡಿಸಿದ ಅಥವಾ ವಿಸ್ತರಿಸಿದ ಕಾಲಾವಧಿಯ ಒಳಗಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿರುವ ಅಂತಿಮ ಪಟ್ಟಿಯಲ್ಲಿ ಸೇರಿದ ಅಭ್ಯರ್ಥಿಗಳಿಗೆ ಅನ್ವಯವಾಗುವಂತೆ, ಅದು ಸಿದ್ಧಪಡಿಸಿದ ಹೆಚ್ಚುವರಿ ಪಟ್ಟಿಯಿಂದ ನಿಗದಿಪಡಿಸಿದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಗಳನ್ನು ನೀಡಬಹುದು. ಅಂತಹ ಪ್ರಕರಣದಲ್ಲಿ, ಹೆಚ್ಚುವರಿ ಪಟ್ಟಿಯಿಂದ ನೇಮಕಾತಿಯ ಆದೇಶವನ್ನು ಹೊರಡಿಸಿದ ಅಭ್ಯರ್ಥಿಯನ್ನು, ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿರುವ ಅಭ್ಯರ್ಥಿಗೆ ಸಂಬಂಧಿಸಿದ ಲಂಬವಾದ ಮತ್ತು ಸಮತಳವಾದ ಮೀಸಲಾತಿಯನ್ನು ಅದೇ ವರ್ಗದಿಂದ ಸೇರಿಸತಕ್ಕದ್ದು.
(ಬಿ) (ಎ) ಖಂಡದ ಮೇರೆಗೆ ಸಿದ್ಧಪಡಿಸಿದ ಹೆಚ್ಚುವರಿ ಪಟ್ಟಿಯಲ್ಲಿ ಒಳಗೊಂಡ ಅಭ್ಯರ್ಥಿಗಳ ಒಟ್ಟು ಸಂಖ್ಯೆಯು (3)ನೇ ಉಪ-ನಿಯಮದ ಮೇರೆಗೆ ಸಿದ್ಧಪಡಿಸಿದ ಪಟ್ಟಿಯಲ್ಲಿ ಒಳಗೊಂಡ ಅಭ್ಯರ್ಥಿಗಳ ಒಟ್ಟು ಸಂಖ್ಯೆಯ ಶೇಕಡಾ ಇಪ್ಪತ್ತೈದರಷ್ಟು ಮೀರತಕ್ಕದ್ದಲ್ಲ.
(ಸಿ) (4) ನೇ ಉಪ-ನಿಯಮದ ಮೇರೆಗೆ ನೇಮಕಾತಿ ಪ್ರಾಧಿಕಾರವು ಸಿದ್ಧಪಡಿಸಿದ ಹೆಚ್ಚುವರಿ ಆಯ್ಕೆ ಪಟ್ಟಿಯು, ಅದರ ಪ್ರಕಟಣೆಯ ದಿನಾಂಕದಿಂದ ಆರು ತಿಂಗಳುಗಳ ಅವಧಿಯ ನಂತರ ಅಥವಾ ಮುಂದಿನ ಆಯ್ಕೆಯ ಆಧಾರದ ಮೇಲೆ ಸಿದ್ಧಪಡಿಸಿದ ಪಟ್ಟಿಯ ಪ್ರಕಟಣೆಯ ದಿನಾಂಕದಂದು ಅಥವಾ ಅದಕ್ಕೂ ಮೊದಲು ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಚಾಲ್ತಿಯಲ್ಲಿರತಕ್ಕದ್ದು.
(5) ಅಂತಿಮ ಪಟ್ಟಿಯಲ್ಲಿ ಹೆಸರುಗಳು ಒಳಗೊಂಡಿರುವ ಮತ್ತು ನೇಮಕಾತಿ ಆದೇಶವನ್ನು ನೀಡಲಾಗಿದ್ದು, ನಿಗದಿಪಡಿಸಿದ ಸೇರಿಕೆ ಕಾಲದೊಳಗೆ ನೇಮಕಾತಿ ಪ್ರಾಧಿಕಾರದಿಂದ ಅವರು ನೇಮಕಗೊಂಡ ಹುದ್ದೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡಿಲ್ಲದಿರುವ ಅಭ್ಯರ್ಥಿಗೆ ಸಂಬಂಧಿಸಿದಂತೆ ಮತ್ತು ಅವನಿಗೆ ಅನ್ವಯವಾಗುವಂತೆ ಮಾತ್ರವೆ (4) ನೇ ಉಪ-ನಿಯಮದ ಮೇರೆಗೆ ಸಿದ್ಧಪಡಿಸಿದ ಹೆಚ್ಚುವರಿ ಪಟ್ಟಿಯಲ್ಲಿ ಹೆಸರುಗಳು ಒಳಗೊಂಡಿರುವಂಥ ಅಭ್ಯರ್ಥಿಯನ್ನು ನೇಮಕ ಮಾಡಬಹುದು.