(1) 11 ನೇ ನಿಯಮದ (2)ನೇ ಉಪ-ನಿಯಮದ ಮೇರೆಗೆ ಆಯ್ಕೆ ಪ್ರಾಧಿಕಾರವು ಲಭ್ಯಗೊಳಿಸಿದಆಯ್ಕೆ ಪಟ್ಟಿಯಲ್ಲಿ ಹೆಸರುಗಳನ್ನು ಒಳಗೊಂಡಿರುವಂತಹ ಅಭ್ಯರ್ಥಿಗಳನ್ನು, ನೇಮಕಾತಿ ಪ್ರಾಧಿಕಾರವು, ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರ ಉಪಬಂಧಗಳ ಅನುಸಾರವಾಗಿ ಅಂತಹ ಪ್ರತಿಯೊಬ್ಬ ಅಭ್ಯರ್ಥಿಯ ಪ್ರಮಾಣ ಪತ್ರಗಳ ಸತ್ಯಾಪನೆಯನ್ನು ಮಾಡಿದ ತರುವಾಯ ಮತ್ತು ಅಭ್ಯರ್ಥಿಯ ಸೂಕ್ತತೆಯ ಮತ್ತು ದೇಹದಾರ್ಢ್ಯತೆಯ ಬಗ್ಗೆ ಸ್ವತಃ ಮನವರಿಕೆ ಮಾಡಿಕೊಂಡ ನಂತರ ಆಯ್ಕೆ ಪಟ್ಟಿಯಲ್ಲಿ ಅವರ ಹೆಸರುಗಳು ಇರುವ ಕ್ರಮದಲ್ಲಿ ನೇಮಕಾತಿ ಮಾಡಬಹುದು. ಸಲ್ಲಿಸಲಾದ ಅಂಕಪಟ್ಟಿಗಳ ಮೂಲ ಪರಿಶೀಲನೆಯನ್ನು ನೇಮಕಾತಿ ಪ್ರಾಧಿಕಾರಿಯು ಸಂಬಂಧಪಟ್ಟ ಮಂಡಳಿ, ವಿಶ್ವವಿದ್ಯಾಲಯ, ಪ್ರಾಧಿಕಾರಗಳೊಂದಿಗೆ ನಡೆಸತಕ್ಕದ್ದು.
(2) 11ನೇ ನಿಯಮದ (2)ನೇ ಉಪ-ನಿಯಮದ ಮೇರೆಗೆ ಪ್ರಕಟವಾದ ಯಾವುದೇ ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರಿನ ಸೇರ್ಪಡೆಯು, ಅಂಥ ಅಭ್ಯರ್ಥಿಗೆ ನೇಮಕಾತಿಯ ಯಾವುದೇ ಹಕ್ಕನ್ನು ಕೊಡತಕ್ಕದ್ದಲ್ಲ.
(3) ಸೇರಿಕೆ ಸಮಯವನ್ನು ನಿರ್ದಿಷ್ಟಪಡಿಸಿದ ಅಥವಾ ಸಂದರ್ಭಾನುಸಾರ ವಿಸ್ತರಿಸಿದ ಕಾಲಾವಧಿಯ ಒಳಗಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿರುವ ಅಂತಿಮ ಪಟ್ಟಿಯಲ್ಲಿ ಸೇರಿದ ಅಭ್ಯರ್ಥಿಗಳಿಗೆ ಅನ್ವಯವಾಗುವಂತೆ, ನೇಮಕಾತಿ ಪ್ರಾಧಿಕಾರವು, 11ನೇ ನಿಯಮದ (3) ನೇ ಉಪನಿಯಮದ ಮೇರೆಗೆ ಆಯ್ಕೆ ಪ್ರಾಧಿಕಾರವು ಸಿದ್ಧಪಡಿಸಿದ ಹೆಚ್ಚುವರಿ ಪಟ್ಟಿಯಿಂದ ಅಭ್ಯರ್ಥಿಗಳನ್ನು ನೇಮಕ ಮಾಡಬಹುದು.ಅಂತಹ ಸಂದರ್ಭದಲ್ಲಿ, ಹೆಚ್ಚುವರಿ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಯನ್ನು, ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿರುವ ಅಭ್ಯರ್ಥಿಯು ಆಯ್ಕೆಯಾಗಿದ್ದ ಲಂಬವಾದ ಮತ್ತು ಸಮತಳ ಮೀಸಲಾತಿಯ ಅದೇ ವರ್ಗಕ್ಕೆಸೇರಿಸತಕ್ಕದ್ದು.