(1) ಆಯ್ಕೆ ಪ್ರಾಧಿಕಾರವು, ಅಭ್ಯರ್ಥಿಗಳು ಸಂದರ್ಶನದಲ್ಲಿ ಅಥವಾ ಅರ್ಹತಾ ಪರೀಕ್ಷೆಯಲ್ಲಿ ಅಥವಾ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಅಥವಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಥವಾ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಭಾನುಸಾರ ಸಂದರ್ಶನದಲ್ಲಿ ಗಳಿಸಿದ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ, ನಿರ್ಧರಿಸಲಾದ ಅರ್ಹತೆಯ ಆಧಾರದ ಮೇಲೆ, ಮತ್ತು ರಾಜ್ಯದ ಮೀಸಲಾತಿ ನೀತಿಯನ್ನು ಪರಿಗಣನೆಗೆ ತೆಗೆದುಕೊಂಡು, ಅಧಿಸೂಚಿತ ಖಾಲಿಸ್ಥಾನಗಳ ಸಂಖ್ಯೆಗೆ ಸಮನಾಗಿ ನೇಮಕಾತಿಗೆ ಅರ್ಹವಾದ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸತಕ್ಕದ್ದು.
(2)(1)ನೇ ಉಪ-ನಿಯಮದ ಮೇರೆಗೆ ಸಿದ್ಧಪಡಿಸಿದ ಅಂತಿಮ ಆಯ್ಕೆ ಪಟ್ಟಿಯನ್ನು, ಕರ್ನಾಟಕ ರಾಜ್ಯಪತ್ರದಲ್ಲಿ ಮತ್ತು ಆಯ್ಕೆ ಪ್ರಾಧಿಕಾರವು ಸೂಕ್ತವೆಂದು ಭಾವಿಸಬಹುದಾದಂಥ ಇತರ ಸಮೂಹ ಮಾಧ್ಯಮದಲ್ಲಿ ಮತ್ತು ರಾಜ್ಯ ಸರ್ಕಾರವು ನಿರ್ದೇಶಿಸಬಹುದಾದಂಥ ರೀತಿಯಲ್ಲಿ ಪ್ರಕಟಿಸತಕ್ಕದ್ದು ಮತ್ತು ಅದರ ಒಂದು ಪ್ರತಿಯನ್ನು, ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಗೆ ಅಥವಾ ನೇಮಕಾತಿ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು. ಆಯ್ಕೆಯ ಸಂಗತಿಯನ್ನು ಆಯ್ಕೆ ಪ್ರಾಧಿಕಾರವು ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ತಿಳಿಸತಕ್ಕದ್ದು.
ಆಯ್ಕೆ ಪ್ರಾಧಿಕಾರವು, ಆಯ್ಕೆ ಪಟ್ಟಿಯ ಜೊತೆಗೆ, ಲಿಖಿತ ಪರೀಕ್ಷೆಯಲ್ಲಿ ಅಥವಾ ಸಂದರ್ಶನದಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯು ಗಳಿಸಿದ ಅಂಕಗಳನ್ನು ಮತ್ತು ಯಾರೇ ಅಭ್ಯರ್ಥಿಗೆ ಸಂದರ್ಶನದ ಗರಿಷ್ಠ ಅಂಕಗಳ ಪೈಕಿ ಶೇ.80 ಕ್ಕಿಂತ ಹೆಚ್ಚು ಅಥವಾ ಶೇ.40ಕ್ಕಿಂತ ಕಡಿಮೆ ನೀಡಲಾಗಿದ್ದರೆ, ಇದರ ಕಾರಣಗಳನ್ನು ಸಹ ದಾಖಲಿಸಿ ಇಲಾಖಾ ಮುಖ್ಯಸ್ಥರಿಗೆ ಅಥವಾ ನೇಮಕಾತಿ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು.
ಆಯ್ಕೆ ಪಟ್ಟಿಯು, ಅದರ ಪ್ರಕಟಣೆಯ ದಿನಾಂಕದಿಂದ ಎರಡು ವರ್ಷಗಳ ಅವಧಿಯವರೆಗೆ ಅಥವಾ ಮುಂದಿನ ಆಯ್ಕೆಯ ಆಧಾರದ ಮೇಲೆ ಸಿದ್ಧಪಡಿಸಿದ ಆಯ್ಕೆ ಪಟ್ಟಿಯ ಪ್ರಕಟಣೆಯ ದಿನಾಂಕದವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರತಕ್ಕದ್ದು.
ಆಯ್ಕೆ ಪ್ರಾಧಿಕಾರವು, ಅಂತಿಮ ಆಯ್ಕೆಪಟ್ಟಿಯ ಪ್ರಕಟಣೆಯ ನಂತರ, ಗ್ರೂಪ್-ಎ ಮತ್ತು ಗ್ರೂಪ್- ಬಿ ಹುದ್ದೆಗಳಿಗೆ ಸಂಬಂಧಿಸಿದಂತೆ ಪ್ರತಿ ಅಭ್ಯರ್ಥಿಯು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಹಾಗೂ ಗ್ರೂಪ್-ಸಿ ಹುದ್ದೆಗಳಿಗೆ ಸಂಬಂಧಿಸಿದಂತೆಪ್ರತಿ ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಘೋಷಿಸಬೇಕು.
(3) ಆಯ್ಕೆ ಪ್ರಾಧಿಕಾರವು, ಉಪ-ನಿಯಮ(1) ಮತ್ತು ಉಪ-ನಿಯಮ(2) ರ ಮೇರೆಗೆ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿದ ರೀತಿಯಲ್ಲಿ, ಉಪನಿಯಮ(1) ರ ಮೇರೆಗೆ ಸಿದ್ಧಪಡಿಸಿದ ಪಟ್ಟಿಯಲ್ಲಿ ಒಳಗೊಂಡಿರದ ಅಭ್ಯರ್ಥಿಗಳ ಒಂದು ಹೆಚ್ಚುವರಿ ಪಟ್ಟಿಯನ್ನು ಆಯ್ಕೆಗಾಗಿಸಿದ್ಧಪಡಿಸತಕ್ಕದ್ದು.
(4) ಹುದ್ದೆಗೆ ಆಯ್ಕೆ ಮಾಡುವುದಕ್ಕಾಗಿ, (3)ನೇ ಉಪ-ನಿಯಮದ ಮೇರೆಗೆ ಸಿದ್ಧಪಡಿಸಿದ ಹೆಚ್ಚುವರಿ ಪಟ್ಟಿಯಲ್ಲಿ ಒಳಗೊಂಡಿರಬೇಕಾದ ಅಭ್ಯರ್ಥಿಗಳ ಒಟ್ಟು ಸಂಖ್ಯೆಯು,(1)ನೇ ಉಪ-ನಿಯಮದ ಮೇರೆಗೆ ಸಿದ್ಧಪಡಿಸಿದ ಪಟ್ಟಿಯಲ್ಲಿ ಒಳಗೊಂಡ ಗ್ರೂಪ್-ಎ, ಗ್ರೂಪ್-ಬಿ ಹಾಗೂ ಗ್ರೂಪ್-ಸಿಅಭ್ಯರ್ಥಿಗಳ ಒಟ್ಟು ಸಂಖ್ಯೆಯ ಶೇಕಡಾ ಎಪ್ಪತ್ತೈದರಷ್ಟು ಮೀರತಕ್ಕದ್ದಲ್ಲ.
(5) (3),(4)ನೇ ಉಪನಿಯಮಗಳ ಮೇರೆಗೆ ಆಯ್ಕೆ ಪ್ರಾಧಿಕಾರವು ಸಿದ್ಧಪಡಿಸಿದ ಹೆಚ್ಚುವರಿ ಪಟ್ಟಿಯು, ಅದರ ಪ್ರಕಟಣೆಗಳ ದಿನಾಂಕದಿಂದ ಎರಡು ವರ್ಷಗಳ ಕಾಲಾವಧಿ ಅಥವಾ ಮುಂದಿನ ಆಯ್ಕೆಯ ಆಧಾರದ ಮೇಲೆ ಸಿದ್ಧಪಡಿಸಿದ ಪಟ್ಟಿಯ ಪ್ರಕಟಣೆಯ ದಿನಾಂಕದಂದು ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಚಾಲ್ತಿಯಲ್ಲಿರತಕ್ಕದ್ದು.