ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ಸಂಬಂಧಿಸಿದಂತೆ, ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುವುದಕ್ಕೆ ನಿರ್ಧರಿಸಿದ್ದಲ್ಲಿ, ಆಯ್ಕೆ ಪ್ರಾಧಿಕಾರವು ಈ ಕೆಳಕಂಡ ರೀತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸತಕ್ಕದ್ದು, ಎಂದರೆ:-
(ಎ) ಪರೀಕ್ಷೆಯು ತಲಾ 200 ಅಂಕಗಳ ಎರಡು ಲಿಖಿತ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದ್ದು ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ಇರತಕ್ಕದ್ದು, ಪ್ರತಿಯೊಂದು ಪ್ರಶ್ನೆಯು ಋಣಾತ್ಮಕ ಅಂಕದ ಸ್ವರೂಪದ್ದಾಗಿರತಕ್ಕದ್ದು ಮತ್ತು ಅಂಥ ಪ್ರಶ್ನೆಗಳಿಗೆ ಹಂಚಿಕೆ ಮಾಡಲಾದ ಅಂಕಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು(1/4) ಅಂಕಗಳನ್ನು ಪ್ರತಿಯೊಂದು ತಪ್ಪಾದ ಉತ್ತರಕ್ಕೆ ಕಡಿತಗೊಳಿಸತಕ್ಕದ್ದು.
(i) ಪತ್ರಿಕೆ-1 ಸಾಮಾನ್ಯ ಪತ್ರಿಕೆ:- ಪ್ರಚಲಿತ ವಿದ್ಯಮಾನಗಳು, ಸಾಮಾನ್ಯ ವಿಜ್ಞಾನ, ಕರ್ನಾಟಕ ಇತಿಹಾಸ ಮತ್ತು ಭೂಗೋಳ ಶಾಸ್ತ್ರ, ಭಾರತದ ಇತಿಹಾಸ, ಭಾರತದ ಭೂಗೋಳ ಶಾಸ್ತ್ರ, ಸಮಾಜ ವಿಜ್ಞಾನ, ಸಾಮಾನ್ಯ ಬೌದ್ಧಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ವಿಷಯಗಳನ್ನು,ದೈನಂದಿನ ಗ್ರಹಿಕೆಯ ವಿಷಯಗಳನ್ನು ಮತ್ತು ನಿಗದಿಪಡಿಸಲಾದ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವ ವ್ಯಕ್ತಿಯಿಂದ ನಿರೀಕ್ಷಿಸಬಹುದಾದ ಪ್ರಾಯೋಗಿಕ ಜ್ಞಾನವನ್ನು ಒಳಗೊಂಡಿರಬೇಕು.
(ii) ಪತ್ರಿಕೆ II.- ನಿರ್ದಿಷ್ಟ ಪತ್ರಿಕೆ:- ಈ ಪತ್ರಿಕೆ ವಿಷಯವನ್ನು ಆಯ್ಕೆ ಪ್ರಾಧಿಕಾರವು ಯಾವ ಉದ್ಯೋಗಕ್ಕಾಗಿ ಆಯ್ಕೆಯನ್ನು ಮಾಡಲಾಗುತ್ತಿದೆಯೋ ಅದರ ಸ್ವರೂಪವನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತು ಸಂಬಂಧಪಟ್ಟ ಕ್ಷೇತ್ರ ಇಲಾಖೆ ಅಥವಾ ನೇಮಕಾತಿ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ ಅರ್ಹತಾ ಪರೀಕ್ಷೆಯನ್ನು ನಿರ್ಧರಿಸತಕ್ಕದ್ದು.
(ಬಿ) ಈ ಪ್ರಶ್ನೆ ಪತ್ರಿಕೆಗಳನ್ನು ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಸಿದ್ಧಪಡಿಸತಕ್ಕದ್ದು.
(ಸಿ) ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯದ ಮೀಸಲಾತಿ ನೀತಿಗೆ ಒಳಪಟ್ಟು ಮೇಲ್ಕಂಡ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳುಗಳಿಸಿದ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ ನಿರ್ಧರಿಸಲಾದ ಅರ್ಹತಾ ಕ್ರಮದಲ್ಲಿ ಸಿದ್ಧಪಡಿಸತಕ್ಕದ್ದು.
ಪರಂತು, ಅಭ್ಯರ್ಥಿಯು ಅರ್ಹತೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಒಟ್ಟು ಅಂಕಗಳಲ್ಲಿ ಕನಿಷ್ಠ ಪಕ್ಷ ಶೇಕಡಾ ಮೂವತ್ತೈದರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿರತಕ್ಕದ್ದು.
ಪರಂತು, ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಮಾನವಾದ ಅಂಕಗಳನ್ನು ಗಳಿಸಿದ್ದರೆ, ಅಂತಹ ಅಭ್ಯರ್ಥಿಗಳಅರ್ಹತಾ ಕ್ರಮವನ್ನು ಅವರುಗಳ ವಯಸ್ಸಿನ ಆಧಾರದ ಮೇಲೆ ನಿಗದಿಪಡಿಸತಕ್ಕದ್ದು, ವಯಸ್ಸಿನಲ್ಲಿ ಹಿರಿಯವನಾದ ವ್ಯಕ್ತಿಯ ಅರ್ಹತಾ ಕ್ರಮದಲ್ಲಿ ಮೇಲಿನ ಸ್ಥಾನದಲ್ಲಿರಬೇಕು.
(2) ಗ್ರೂಪ್-ಸಿ ಹುದ್ದೆಗಳಿಗೆ ಸಂಬಂಧಿಸಿದಂತೆ:-
(ಎ) ಪದವಿಯ ವಿದ್ಯಾರ್ಹತೆಗಳು ಅಗತ್ಯವಿರುವ ಗ್ರೂಪ್-ಸಿ ಹುದ್ದೆಗಳಿಗೆ ನಡೆಸುವ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರತಕ್ಕದ್ದು, ಪ್ರತಿಯೊಂದು ಪತ್ರಿಕೆಯು 100 ಅಂಕಗಳನ್ನು ಒಳಗೊಂಡಿದ್ದು ಒಟ್ಟು 200 ಅಂಕಗಳದ್ದಾಗಿರಬೇಕು. ಈ ಎರಡು ಪತ್ರಿಕೆಗಳು ಕಡ್ಡಾಯವಾಗಿರುತ್ತವೆ. ಪತ್ರಿಕೆ1 ರ ಪಠ್ಯಕ್ರಮವು ಈ ಕೆಳಗೆ ನಿರ್ದಿಷ್ಟಪಡಿಸಿದಂತೆ ಇರತಕ್ಕದ್ದು. ಪತ್ರಿಕೆ 2 ಅನ್ನು ಈ ಕೆಳಗೆ ನಿರ್ದಿಷ್ಟಪಡಿಸಲಾದಂತೆ ಮೂರು ಭಾಗಗಳಾಗಿ ವಿಭಾಗಿಸಬೇಕು. ಈ ಎರಡೂ ಪತ್ರಿಕೆಗಳು, ನಕಾರಾತ್ಮಕ ಸ್ವರೂಪದ ಅಂಕಗಳನ್ನು ಒಳಗೊಂಡಿದ್ದು. ಸದರಿ ಪ್ರಶ್ನೆಗಳಿಗೆ ಹಂಚಿಕೆ ಮಾಡಲಾದ ಅಂಕಗಳ ನಾಲ್ಕನೇ ಒಂದು ಭಾಗದಷ್ಟು(1/4) ಅಂಕಗಳನ್ನು ಪ್ರತಿಯೊಂದು ತಪ್ಪಾದ ಉತ್ತರಕ್ಕೆ ಕಡಿತಗೊಳಿಸತಕ್ಕದ್ದು.
ಪತ್ರಿಕೆ-1 ಸಾಮಾನ್ಯ ಜ್ಞಾನ (ಗರಿಷ್ಠ ಅಂಕಗಳು-100)
(ಎ) ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಸಾಮಾನ್ಯ ಜ್ಞಾನ.
(ಬಿ) ಸಾಮಾನ್ಯ ವಿಜ್ಞಾನವಿಷಯಗಳು.
(ಸಿ) ಭೂಗೋಳ ಶಾಸ್ತ್ರ ವಿಷಯಗಳು.
(ಡಿ) ಸಮಾಜ ವಿಜ್ಞಾನ ವಿಷಯಗಳು.
(ಇ) ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆಗಳ ಇತಿಹಾಸದ ವಿಷಯಗಳು.
(ಎಫ್) ಭಾರತದ ಮತ್ತು ಕರ್ನಾಟಕದ ಇತಿಹಾಸ.
(ಜಿ) ಭಾರತದ ಸಂವಿಧಾನದ ಮತ್ತು ಸಾರ್ವಜನಿಕ ಆಡಳಿತ (ಎಚ್) ಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯಗಳು.
(ಎಸ್ ಎಸ್ ಎಲ್ ಸಿ ಮಟ್ಟದ)
(ಐ) ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ವಿಷಯಗಳು.
(ಜೆ) ಸ್ವಾತಂತ್ರ್ಯಾ ನಂತರದಲ್ಲಿ ಕರ್ನಾಟಕದ ಭೂ ಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳ ವಿಷಯಗಳು.
(ಕೆ) ಕರ್ನಾಟಕದ ಅರ್ಥವ್ಯವಸ್ಥೆ: ಅದರ ಸಾಮರ್ಥ್ಯ ಮತ್ತು ದೌರ್ಬಲ್ಯತೆ: ಪ್ರಸ್ತುತ ಸ್ಥಿತಿಗತಿ ಕುರಿತ ವಿಷಯಗಳು.
(ಎಲ್) ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣಸಹಕಾರ ಸಂಸ್ಥೆಗಳ ವಿಷಯಗಳು.
(ಎಂ) ಕರ್ನಾಟಕ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಕುರಿತ ವಿಷಯಗಳು.
(ಎನ್) ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತವಿಷಯಗಳು.
(ಓ) ಬೌದ್ಧಿಕ ಸಾಮರ್ಥ್ಯದ ವಿಷಯಗಳು.
(ii) ಪತ್ರಿಕೆ-II (ಗರಿಷ್ಠ ಅಂಕಗಳು-100)
(ಎ) ಸಾಮಾನ್ಯ ಕನ್ನಡ (ಗರಿಷ್ಠ ಅಂಕಗಳು-35)
(ಬಿ) ಸಾಮಾನ್ಯ ಇಂಗ್ಲೀಷ್ (ಗರಿಷ್ಠ ಅಂಕಗಳು-35)
(ಸಿ) ಕಂಪ್ಯೂಟರ್ ಜ್ಞಾನ (ಗರಿಷ್ಠ ಅಂಕಗಳು-30)
(ಬಿ) ಡಿಪ್ಲೊಮಾ,ಪಿಯುಸಿ ,ಎಸ್ಎಸ್ಎಲ್ಸಿ ಮತ್ತು ತತ್ಸಮಾನ ವಿದ್ಯಾರ್ಹತೆ ಅಥವಾ ಪದವಿ ದರ್ಜೆಗಿಂತ ಕಡಿಮೆ ಇರುವ ಇನ್ನಾವುದೇ ವಿದ್ಯಾರ್ಹತೆಗಳುಅಗತ್ಯವಿರುವ ಹುದ್ದೆಗಳಿಗಾಗಿ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರತಕ್ಕದ್ದು, ಪ್ರತಿಯೊಂದುಪತ್ರಿಕೆಯು 100 ಅಂಕಗಳನ್ನು ಒಳಗೊಂಡಿದ್ದು, ಮತ್ತುಒಟ್ಟು200 ಅಂಕಗಳನ್ನು ಹೊಂದಿರತಕ್ಕದ್ದು. ಈ ಎರಡು ಪತ್ರಿಕೆಗಳುಕಡ್ಡಾಯವಾದವುಗಳಾಗಿರಬೇಕು. ಪತ್ರಿಕೆ 1ರ ಪಠ್ಯಕ್ರಮವುಈ ಕೆಳಗೆ ನಿರ್ದಿಷ್ಟಪಡಿಸಿದಂತೆ ಇರತಕ್ಕದ್ದು. ಪತ್ರಿಕೆ 2 ಅನ್ನುಈ ಕೆಳಗೆ ನಿರ್ದಿಷ್ಟಪಡಿಸಿದಂತೆ ಮೂರು ಭಾಗಗಳಾಗಿ ವಿಭಾಗಿಸಬೇಕು. ಈ ಎರಡೂ ಪತ್ರಿಕೆಗಳು ನಕಾರಾತ್ಮಕ ಸ್ವರೂಪದ ಅಂಕಗಳನ್ನು ಒಳಗೊಂಡಿರತಕ್ಕದ್ದು ಮತ್ತು ಸದರಿ ಪ್ರಶ್ನೆಗಳಿಗೆ ಹಂಚಿಕೆ ಮಾಡಲಾದ ಅಂಕಗಳ ನಾಲ್ಕನೇ ಒಂದು ಭಾಗದಷ್ಟು (1/4) ಅಂಕಗಳನ್ನು ಪ್ರತಿಯೊಂದು ತಪ್ಪಾದ ಉತ್ತರಕ್ಕಾಗಿ ಕಡಿತಗೊಳಿಸತಕ್ಕದ್ದು.
ಪತ್ರಿಕೆ-1 ಸಾಮಾನ್ಯ ಜ್ಞಾನ (ಗರಿಷ್ಠ ಅಂಕಗಳು-100)
(ಎ) ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ವಿಷಯಗಳು.
(ಬಿ) ದೈನಂದಿನಗ್ರಹಿಕೆಯ ವಿಷಯಗಳು.
(ಸಿ) ಭಾರತದ ಸಂವಿಧಾನದ ಸ್ಥೂಲ ನೋಟದ ವಿಷಯಗಳು.
(ಡಿ) ವಿಶೇಷವಾಗಿಕರ್ನಾಟಕಕ್ಕೆ ಸಂಬಂಧಿಸಿದಭಾರತದ ಇತಿಹಾಸ.
(ಇ) ಕರ್ನಾಟಕಕ್ಕೆ ಸಂಬಂಧಿಸಿದಂತೆ ಭಾರತದ ಭೂಗೋಳ ವಿಷಯಗಳು.
(ಎಫ್) ರಾಜ್ಯ ಮತ್ತು ಪ್ರಾದೇಶಿಕ ಆಡಳಿತ ಕುರಿತ ವಿಷಯಗಳು.
(ಜಿ) ಗ್ರಾಮೀಣಾಭಿವೃದ್ಧಿ,ಪಂಚಾಯತ್ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದ ಉಪಕ್ರಮಗಳನ್ನು ಒಳಗೊಂಡಂತೆ ಕರ್ನಾಟಕದ ಆರ್ಥಿಕತೆಯ ಅಭಿವೃದ್ಧಿ ಕುರಿತ ವಿಷಯಗಳು.
(ಎಚ್) ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು.
ಪತ್ರಿಕೆ-II (ಗರಿಷ್ಠ ಅಂಕಗಳು-100)
(ಎ) ಸಾಮಾನ್ಯ ಕನ್ನಡ (ಗರಿಷ್ಠ ಅಂಕಗಳು-35)
(ಬಿ) ಸಾಮಾನ್ಯ ಇಂಗ್ಲೀಷ್ (ಗರಿಷ್ಠ ಅಂಕಗಳು -35)
(ಸಿ) ಕಂಪ್ಯೂಟರ್ ಜ್ಞಾನ (ಗರಿಷ್ಠ ಅಂಕಗಳು-30)
(ಸಿ) ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯದ ಮೀಸಲಾತಿ ನೀತಿಗೆ ಒಳಪಟ್ಟು ಮೇಲ್ಕಂಡ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣದ ಆಧಾರದ ಮೇಲೆ ನಿರ್ಧರಿಸಲಾದ ಅರ್ಹತೆಯ ಕ್ರಮದಲ್ಲಿ ಸಿದ್ಧಪಡಿಸತಕ್ಕದ್ದು.
ಪರಂತು, ಅಭ್ಯರ್ಥಿಯು, ಅರ್ಹತೆಗಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಟ್ಟು ಅಂಕಗಳಲ್ಲಿ ಕನಿಷ್ಠ ಪಕ್ಷಶೇಕಡಾ ಮೂವತ್ತೈದರಷ್ಟು ಅಂಕಗಳನ್ನು ಕಡ್ಡಾಯವಾಗಿ ಗಳಿಸಬೇಕು.
ಪರಂತು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಸಮಾನವಾದ ಅಂಕಗಳನ್ನು ಗಳಿಸಿದ್ದರೆ, ಅಂತಹ ಅಭ್ಯರ್ಥಿಗಳ ಅರ್ಹತೆಯ ಕ್ರಮವನ್ನು ಅವರುಗಳ ವಯಸ್ಸಿನ ಆಧಾರದ ಮೇಲೆ ನಿಗದಿಪಡಿಸತಕ್ಕದ್ದು, ವಯಸ್ಸಿನಲ್ಲಿ ಹಿರಿಯವನಾದ ವ್ಯಕ್ತಿಯು ಅರ್ಹತಾ ಕ್ರಮದಲ್ಲಿ ಮೇಲಿನ ಸ್ಥಾನದಲ್ಲಿರಬೇಕು.