(1)ಆಯೋಗದ ಸಿಬ್ಬಂದಿಯ ಹುದ್ದೆಗಳನ್ನು ರಾಜ್ಯ ನಾಗರಿಕ ಸೇವೆಗಳು ಅಥವಾ ವಿಶ್ವವಿದ್ಯಾಲಯಗಳು ಅಥವಾ ಸ್ಥಳೀಯ ಪ್ರಾಧಿಕಾರಗಳು ಅಥವಾ ಸಾರ್ವಜನಿಕ ವಲಯ ಉದ್ಯಮಗಳ ಅಥವಾ ಶಾಸನಬದ್ದ ಮಂಡಳಿಗಳು ಅಥವಾ ನಿಗಮಗಳು ಇವುಗಳಿಂದ ಸಮಾನ ವೇತನ ಶ್ರೇಣಿಗಳು ಮತ್ತು ದರ್ಜೆಯನ್ನು ಹೊಂದಿರುವ ಯಾವುದೇ ಅಧಿಕಾರಿಗಳು ಅಥವಾ ಸಿಬ್ಬಂದಿಯನ್ನು ನಿಯೋಜನೆ ಮಾಡುವ ಮೂಲಕ ಅಥವಾ ಮೇಲಿನ ಯಾವುದೇ ಸೇವೆಯಿಂದ ವಯೋನಿವೃತ್ತಿ ಹೊಂದಿರುವ ವ್ಯಕ್ತಿಗಳನ್ನು ಗುತ್ತಿಗೆಯ ಆಧಾರದ ಮೇಲೆ ನೇಮಕ ಮಾಡುವ ಮೂಲಕ ಭರ್ತಿಮಾಡಬಹುದು.
(2) ನಿಯೋಜನೆ ಮೇಲೆ ನೇಮಕಾತಿಗಳು ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಳು ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ಉಪಬಂಧಗಳ ಮತ್ತು ಕಾಲಕಾಲಕ್ಕೆ ಸರ್ಕಾರವು ಹೊರಡಿಸುವ ಯಾವುದೇ ಇತರ ಆದೇಶಗಳನ್ವಯವಾಗಿ ಇರತಕ್ಕದ್ದು.
(3) ಕಾರ್ಯದರ್ಶಿ, ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗ ಇವರು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಸದಸ್ಯ ಕಾರ್ಯದರ್ಶಿಯು ಆಯೋಗದ ಆಡಳಿತಾತ್ಮಕ ಮುಖ್ಯಸ್ಥನಾಗಿರತಕ್ಕದ್ದು ಮತ್ತು ಆಯೋಗದ ಸಿಬ್ಬಂದಿಯ ನೆರವಿನೊಂದಿಗೆ ಆಯೋಗವು ತನ್ನ ಪ್ರಕಾರ್ಯಗಳನ್ನು ನಿರ್ವಹಿಸುವಲ್ಲಿ ನೆರವಾಗತಕ್ಕದ್ದು.
(4) ಎಲ್ಲ ಪ್ರಮುಖ ಆಡಳಿತಾತ್ಮಕ ವಿಷಯಗಳನ್ನು ಸದಸ್ಯ ಕಾರ್ಯದರ್ಶಿಯ ಮುಂದೆ ಇಡತಕ್ಕದ್ದು. ಇವರು ಅಂತಹ ವಿಷಯಗಳ ಮೇಲೆ ಸಾಮಾನ್ಯ ಅಥವಾ ವಿಶೇಷ ಆದೇಶಗಳನ್ನು ಹೊರಡಿಸಬಹುದು.
(5) ಸದಸ್ಯ ಕಾರ್ಯದರ್ಶಿಯು ಆಯೋಗದ ಸಭೆಗಳಿಗಾಗಿ ಸೂಚಿಪಟ್ಟಿಯನ್ನು ತಯಾರಿಸುವ ಮತ್ತು ಸಂಕ್ಷಿಪ್ತ ವರದಿಯನ್ನು ಸುತ್ತಿಸುವ ಜವಾಬ್ದಾರಿಯನ್ನು ಹೊಂದಿರತಕ್ಕದ್ದು.
(6) ಸದಸ್ಯ ಕಾರ್ಯದರ್ಶಿಯು ವರದಿಗಳನ್ನು ಅಂತಿಮಗೊಳಿಸಲು ಆಯೋಗಕ್ಕೆ ನೆರವು ನೀಡತಕ್ಕದ್ದು.
(7) ಸದಸ್ಯ-ಕಾರ್ಯದರ್ಶಿಯು ತನ್ನ ವಿವೇಚನೆಯ ಅನುಸಾರ, ಆಯೋಗದ ಅಧೀನ ಸಿಬ್ಬಂದಿಗೆ ತನ್ನ ಯಾವುದೇ ಪ್ರಕಾರ್ಯಗಳ ಅಥವಾ ಪ್ರಾಧಿಕಾರವನ್ನು ಪ್ರತ್ಯಾಯೋಜಿಸಬಹುದು.