(1)ಆಯೋಗವು ಬೆಂಗಳೂರು ಅಥವಾ ಅವಶ್ಯವೆನಿಸಿದಾಗ ಅಧ್ಯಕ್ಷರು ಸೂಕ್ತವೆಂದು ಭಾವಿಸಬಹುದಾದ ರಾಜ್ಯದ ಇತರ ಸ್ಥಳಗಳಲ್ಲಿ ಸಭೆ ಸೇರತಕ್ಕದ್ದು, ಪರಂತು, ಆಯೋಗವು ತಿಂಗಳಲ್ಲಿ ಕನಿಷ್ಠ ಒಂದು ಬಾರಿಯಾದರೂ ಸಭೆ ಸೇರತಕ್ಕದ್ದು.
(2) ಆಯೋಗವು ತಾನು ಸೂಕ್ತ ಎಂದು ಭಾವಿಸಿದಾಗಲೆಲ್ಲಾ ತನ್ನದೇ ಕಾರ್ಯ ವಿಧಾನಗಳನ್ನು ವಿನಿಯಮಗೊಳಿಸಲು ಅಧಿಕಾರ ಹೊಂದಿರತಕ್ಕದ್ದು.
(3) ಆಯೋಗದ ಎಲ್ಲ ಆದೇಶಗಳು ಮತ್ತು ತೀರ್ಮಾನಗಳನ್ನು ಸದಸ್ಯ-ಕಾರ್ಯದರ್ಶಿಯು ಅಥವಾ ಈ ಸಂಬಂಧದಲ್ಲಿ ಯುಕ್ತವಾಗಿಸದಸ್ಯ-ಕಾರ್ಯದರ್ಶಿಯು ತನ್ನ ಪರವಾಗಿ ಅಧಿಕೃತಗೊಳಿಸಿದ ಆಯೋಗದ ಯಾಮೊಬ್ಬ ಇತರ ಅಧಿಕಾರಿಯ ಮೂಲಕ ಅಧಿಪ್ರಮಾಣಗೊಳಿಸತಕ್ಕದ್ದು.
(4) ಅಧ್ಯಕ್ಷರು ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಸಭೆ ನಡೆಸಲು ಉದ್ದೇಶಿಸಿರುವಾಗ ಕನಿಷ್ಠ ಮೂರು ಕೆಲಸದ ದಿನಗಳ ನೋಟೀಸನ್ನು ನೀಡತಕ್ಕದ್ದು ಮತ್ತು ಆಯೋಗದ ಸಭೆಗಳು ಬೆಂಗಳೂರಿನ ಹೊರ ಸ್ಥಳಗಳಲ್ಲಿ ನಡೆದರೆ ಕನಿಷ್ಠ ಏಳು ದಿನಗಳ ಮುಂಚಿತವಾಗಿ ಸದಸ್ಯರಿಗೆ ನೋಟೀಸನ್ನು ನೀಡತಕ್ಕದ್ದು. ಆಯೋಗವು ತುರ್ತಾಗಿ ಪರಿಗಣಿಸುವ ಪ್ರಮುಖ ವಿಷಯಗಳನ್ನು ವಿಲೆ ಮಾಡಲು ಅಧ್ಯಕ್ಷರು ಸ್ವತ: ಅಥವಾ ಸದಸ್ಯರ ಅಥವಾ ಸದಸ್ಯ ಕಾರ್ಯದರ್ಶಿಯವರ ಕೋರಿಕೆಯ ಮೇರೆಗೆ ತುರ್ತು ಸಭೆಗಳನ್ನುಸಹ ಕರೆಯಬಹುದು.
(5) ಆಯೋಗದ ಸಭೆಯ ಕೋರಂ ಅಧ್ಯಕ್ಷರೂ ಸೇರಿದಂತೆ ಎರಡು ಆಗಿರತಕ್ಕದ್ದು. ಪರಂತು ಹಾಗೆ ಗೊತ್ತುಪಡಿಸಿದ ಕೋರಂ ಆಯೋಗದಲ್ಲಿ ಖಾಲಿ ಸ್ಥಾನಗಳಿದ್ದಾಗ ಆಯೋಗದಲ್ಲಿರುವ ಅಂತಹ ಖಾಲಿ ಸ್ಥಾನಗಳ ಸಂಖ್ಯೆಯಷ್ಟು ಕಡಿಮೆಗೊಳಿಸತಕ್ಕದ್ದು.
(6) ಆಯೋಗದ ಪ್ರತಿಯೊಂದು ತೀರ್ಮಾನವು ಹಾಜರಿರುವ ಸದಸ್ಯರ ಬಹುಮತಕ್ಕೆ ಅನುಗುಣ ವಾಗಿರತಕ್ಕದ್ದು.
(7) ಆಯೋಗವು ವಿರುದ್ಧವಾದ ತೀರ್ಮಾನಗಳ ಸಂಬಂಧ, ಆಯೋಗದ ಸಭೆಯ ನಡವಳಿಯನ್ನು ಸದಸ್ಯ-ಕಾರ್ಯದರ್ಶಿಯು ದಾಖಲೆ ಮಾಡತಕ್ಕದ್ದು. ಮತ್ತು ಅವನು ಸದರಿ ನಡಾವಳಿಗಳ ಪ್ರತಿಗಳನ್ನು ತಯಾರಿಸತಕ್ಕದ್ದು. ಮತ್ತು ಅದನ್ನು ಸಭೆಯು ಮುಕ್ತಾಯವಾದ ಮೇಲೆ ಸಾಧ್ಯವಾದಷ್ಟು ಬೇಗನೆ ಅಧ್ಯಕ್ಷರು ಮತ್ತು ಸದಸ್ಯರಿಗೆ ತಿಳಿಸತಕ್ಕದ್ದು. ಅವನು ಮುಂದಿನ ಸಭೆಯಲ್ಲಿ ಅಧ್ಯಕ್ಷರ ಸಹಿಗಾಗಿ ನಡವಳಿಗಳನ್ನು ಹಾಜರುಪಡಿಸತಕ್ಕದ್ದು. ಅಧ್ಯಕ್ಷರು ಸಹಿ ಮಾಡಿದ ನಂತರ ಸಭೆಯ ನಡವಳಿಗಳು ಊರ್ಜಿತವಾಗತಕ್ಕದ್ದು.
(8) ಸಭೆಯ ನಡವಳಿಗಳನ್ನು ದಾಖಲಿಸಲು ಅದರ ಸರಿತನದ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದರೆ ಆಯೋಗದ ಮುಂದೆ ಸಭೆಯಲ್ಲಿ ಚರ್ಚೆ ಕೈಗೊಳ್ಳಬಹುದು. ಮತ್ತು ಆಯೋಗವು ಅದನ್ನು ತೀರ್ಮಾನಿಸತಕ್ಕದ್ದು.
(9) ಸದಸ್ಯ ಕಾರ್ಯದರ್ಶಿಯು ವ್ಯವಹಾರಗಳ ದಾಖಲೆಯನ್ನು ಇಟ್ಟುಕೊಳ್ಳತಕ್ಕದ್ದು. ಹಾಗೂ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ ಅವುಗಳ ಪ್ರಮಾಣೀಕರಿಸಿದ ಜೆರಾಕ್ಸ್ ಪ್ರತಿಯನ್ನು ಒದಗಿಸತಕ್ಕದ್ದು. ಅಧ್ಯಕ್ಷರು ತಮ್ಮ ವಿವೇಚಾನುಸಾರ ಆಯೋಗದ ಸಭೆಯ ಪೂರ್ಣ ವ್ಯವಹರಣೆಗಳನ್ನು ಪ್ರಕಟಿಸಲು ಲಿಖಿತದಲ್ಲಿ ಅಧಿಕೃತಗೊಳಿಸಿದ ಹೊರತು ಸಂಬಂಧಪಟ್ಟ ಎಲ್ಲರೂ ನಡಾವಳಿಗಳನ್ನು ರಹಸ್ಯವಾಗಿ ಇಟ್ಟಿರ ತಕ್ಕದ್ದು.