ಈ ಅಧ್ಯಾದೇಶದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) ‘‘ಪ್ರಶಿಕ್ಷಣ ಪರಿಷತ್ತು (ಅಕೆಡೆಮಿಕ್ ಕೌನ್ಸಿಲ್)'' ಎಂದರೆ, 24ನೇ ಪ್ರಕರಣದಡಿಯಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯದ ಪ್ರಶಿಕ್ಷಣ ಪರಿಷತ್ತು;
(ಬಿ) ‘‘ಕಾರ್ಯಸೂಚಿ ವಿಷಯಗಳು'', ಎಂದರೆ, ಶಾಸನಗಳಲ್ಲಿ ಹೆಸರಿಸಬಹುದಾದ ಮತ್ತು ಒಂದು ಸಭೆಯಲ್ಲಿ ಆ ವಿಷಯಗಳನ್ನು ಮತ್ತು ಕಲಾಪಗಳನ್ನು ಅನುಮೋದಿಸಬಹುದೆಂದು ತಮ್ಮ ಸಮ್ಮತಿ ಸೂಚಿಸಿ ಕುಲಾಧಿಪತಿಯವರು ಮುಂಚಿತವಾಗಿಯೇ ಲಿಖಿತ ಅನುಮೋದನೆಯನ್ನು ಕೊಟ್ಟಿದ್ದಾಗ ಮಾತ್ರವೇ ಸಂದರ್ಭಾನುಸಾರ ಪ್ರಬಂಧಕರ ಮಂಡಳಿ ಅಥವಾ ಆಡಳಿತ ಮಂಡಳಿ ಅಥವಾ ಯಾವುದೇ ಸಮಿತಿಯವರು ಕಾರ್ಯಸೂಚಿಯಲ್ಲಿ ಸೇರಿಸಬಹುದಾದ ಅಥವಾ ಚರ್ಚೆಗೆ ತೆಗೆದುಕೊಂಡು ನಿರ್ಣಯವನ್ನು ಕೊಡಬಹುದಾದ ಎಲ್ಲಾ ವಿಷಯಗಳು ಮತ್ತು ಕಲಾಪಗಳು;
(ಸಿ) ‘‘ಪ್ರಬಂಧಕರ ಮಂಡಳಿ'' ಎಂದರೆ, 22ನೇ ಪ್ರಕರಣದಲ್ಲಿ ನಿರ್ದಿಷ್ಟವಾಗಿ ಹೇಳಿರುವ ವಿಶ್ವವಿದ್ಯಾಲಯದ ಪ್ರಬಂಧಕರ ಮಂಡಳಿ;
(ಡಿ) ‘‘ಆಡಳಿತ ಮಂಡಳಿ'' ಎಂದರೆ, 23ನೇ ಪ್ರಕರಣದಲ್ಲಿ ನಿರ್ದಿಷ್ಟ ಪಡಿಸಿದ ವಿಶ್ವವಿದ್ಯಾಲಯದ ಆಡಳಿತ ಮಂಡಳಿ;
(ಇ) ‘‘ಕುಲಾಧಿಪತಿ'', ‘‘ಕುಲಪತಿ'', ‘‘ಸಹಕುಲಪತಿ'' ಎಂದರೆ, ಅನುಕ್ರಮವಾಗಿ ವಿಶ್ವವಿದ್ಯಾಲಯದ ಕುಲಾಧಿಪತಿ, ಕುಲಪತಿ ಮತ್ತು ಸಹಕುಲಪತಿ;
(ಎಫ್) ‘‘ಕ್ಯಾಂಪಸ್'' ಎಂದರೆ, ಅದು ಎಲ್ಲಾದರೂ ಇರಲಿ ವಿಶ್ವವಿದ್ಯಾಲಯವು ಸ್ಥಾಪಿಸಿದ, ನಿರ್ವಹಿಸಿದ ಅಥವಾ ಮಾನ್ಯತೆ ನೀಡಿದ ಒಂದು ಕ್ಯಾಂಪಸ್;
(ಜಿ) ‘‘ಸಮಿತಿಗಳು'' ಎಂದರೆ, ಸಂದರ್ಭಾನುಸಾರ ವಿಶ್ವವಿದ್ಯಾಲಯದ ವಿವಿಧ ಕಾರ್ಯಕರ್ತರು ರಚಿಸಿರುವ ಸಮಿತಿಗಳು ಮತ್ತು ಅದರಲ್ಲಿ ನಾಮನಿರ್ದೇಶನ ಸಮಿತಿ, ಹಣಕಾಸು ಸಮಿತಿ, ದೂರಶಿಕ್ಷಣ ಸಮಿತಿ ಮತ್ತು ಇತರ ಯಾವುವೇ ಸಮಿತಿಗಳು ಒಳಗೊಳ್ಳುತ್ತವೆ;
(ಎಚ್) ‘‘ಘಟಕ ಕಾಲೇಜು'' ಎಂದರೆ, ವಿಶ್ವವಿದ್ಯಾಲಯವು ನಿರ್ವಹಿಸುತ್ತಿರುವ ಒಂದು ಕಾಲೇಜು ಅಥವಾ ಸಂಸ್ಥೆ;
(ಐ) ‘‘ದೂರಶಿಕ್ಷಣ'' ಎಂದರೆ, ದೃಶ್ಯ ಸಂಪರ್ಕ, ಧ್ವನಿ ಸಂಪರ್ಕ, ಗಣಕಯಂತ್ರ, ಬಹುಮಾಧ್ಯಮ (ಮಲ್ಟಿ ಮಿಡಿಂii) ಪ್ರಸಾರ, ದೂರದರ್ಶನ ಪ್ರಸಾರ (ಟೆಲಿಕ್ಯಾಸ್ಟ್), ತಂತ್ರಜ್ಞಾನಗಳು ಮತ್ತು ಸಂಪರ್ಕ ಸಾಧನಗಳನ್ನು ಬಳಸಿಕೊಂಡು, ಒಂದು ತರಗತಿ, ಕಟ್ಟಡ ಅಥವಾ ನಿವೇಶನದಿಂದ ದೂರದಲ್ಲಿರುವ ಬೇರೊಂದು ತರಗತಿ, ಕಟ್ಟಡ ಅಥವಾ ನಿವೇಶನದಲ್ಲಿರುವವರಿಗೆ ಶಿಕ್ಷಣವನ್ನು ನೀಡುವ ಪ್ರಕ್ರಿಯೆ ಮತ್ತು ಇದು ಅಂಚೆ ಶಿಕ್ಷಣ, ವಿಚಾರಗೋಷ್ಠಿ, ಸಂಪರ್ಕ ಕಾರ್ಯಕ್ರಮ ಅಥವಾ ಅಂಥ ವಿಧಾನಗಳ ಯಾವುದೇ ಎರಡು ಅಥವಾ ಹೆಚ್ಚಿನ ಸಂಯೋಜನೆಗಳು ಮುಂತಾದವುಗಳನ್ನು ಒಳಗೊಳ್ಳುತ್ತದೆ;
(ಜೆ) ‘‘ದೂರ ಶಿಕ್ಷಣ ಸಮಿತಿ'' ಎಂದರೆ, 26ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿರುವಂಥ ವಿಶ್ವವಿದ್ಯಾಲಯದ ದೂರ ಶಿಕ್ಷಣ ಸಮಿತಿ;
(ಕೆ) ‘‘ಹಣಕಾಸು ಸಮಿತಿ'' ಎಂದರೆ, 27ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿರುವಂಥ ವಿಶ್ವವಿದ್ಯಾಲಯದ ಹಣಕಾಸು ಸಮಿತಿ;
(ಎಲ್) ‘‘ಪ್ರತಿಷ್ಠಾನ'' ಎಂದರೆ, ಕಂಪೆನಿಗಳ ಅಧಿನಿಯಮ, 1956ರ 25ನೇ ಪ್ರಕರಣದಡಿಯಲ್ಲಿ ನೋಂದಾಯಿತವಾದ ಒಂದು ಕಂಪೆನಿಯಾದ ಅಜೀಂ ಪ್ರೇಂಜೀ ಪ್ರತಿಷ್ಠಾನ ಅಥವಾ ಕಂಪೆನಿಗಳ ಅಧಿನಿಯಮ, 1956ರ 25ನೇ ಪ್ರಕರಣದಡಿಯಲ್ಲಿ ಶ್ರೀ ಅಜೀಂ ಪ್ರೇಂಜಿಯವರು ಈ ಉದ್ದೇಶಕ್ಕಾಗಿ ರಚಿಸಿ ನೋಂದಾಯಿಸಿರುವ ಯಾವುದೇ ಇತರ ಪ್ರತಿಷ್ಠಾನ;
(ಎಂ) ‘‘ಸರ್ಕಾರ'' ಎಂದರೆ, ಕರ್ನಾಟಕ ಸರ್ಕಾರ;
(ಎನ್) ‘‘ರಾಷ್ಟ್ರೀಯ ಅಧಿಮಾನ್ಯತಾ ಸಂಸ್ಥೆಗಳು'' ಎಂದರೆ, ವಿಶ್ವವಿದ್ಯಾಲಯ ಅನುದಾನ ಆಯೋಗ, ಅಖಿಲ ಭಾರತ ತಾಂತ್ರಿಕ ವಿದ್ಯಾಪರಿಷತ್ತು, ರಾಷ್ಟ್ರೀಯ ಬೋಧಕ ಶಿಕ್ಷಣ ಪರಿಷತ್ತು, ಭಾರತೀಯ ವೈದ್ಯಕೀಯ ಪರಿಷತ್ತು, ಭಾರತೀಯ ಔಷಧ ವಿಜ್ಞಾನ ಪರಿಷತ್ತು, ರಾಷ್ಟ್ರೀಯ ಮೌಲ್ಯಮಾಪನ ಮತ್ತು ಅಧಿಮಾನ್ಯತಾ ಪರಿಷತ್ತು, ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ದೂರಶಿಕ್ಷಣ ಪರಿಷತ್ತು, ಭಾರತೀಯ ವೈಜ್ಞಾನಿಕ ಮತ್ತು ಸಂಶೋಧನಾ ಪರಿಷತ್ತು ಮುಂತಾದ, ಉನ್ನತ ಶಿಕ್ಷಣದಲ್ಲಿ ಮಾನಕ ಗುಣಮಟ್ಟದ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದಕ್ಕಾಗಿ ಪ್ರಮಾಣಕಗಳು ಮತ್ತು ಷರತ್ತುಗಳನ್ನು ವಿಧಿಸುವುದಕ್ಕಾಗಿ, ಕೇಂದ್ರ ಸರ್ಕಾರವು ಸ್ಥಾಪಿಸಿರುವ ಒಂದು ಸಂಸ್ಥೆ ಮತ್ತು ಇದರಲ್ಲಿ ಸರ್ಕಾರವೂ ಸೇರಿರುತ್ತದೆ;
(ಒ) ‘‘ನಿಯಮಿಸಲಾದುದು'' ಎಂದರೆ, ಈ ಅಧ್ಯಾದೇಶದಡಿಯಲ್ಲಿ ರಚಿಸಲಾದ ನಿಯಮಗಳ ಮೂಲಕ ರಾಜ್ಯ ಸರ್ಕಾರದಿಂದ ನಿಯಮಿಸಲಾದುದು;
(ಪಿ) ‘‘ಒಂದು ಘಟಕ ಕಾಲೇಜಿಗೆ ಸಂಬಂಧಪಟ್ಟಂತೆ ಪ್ರಾಂಶುಪಾಲರು'' ಎಂದರೆ, ಘಟಕ ಕಾಲೇಜಿನ ಮುಖ್ಯಸ್ಥರು ಮತ್ತು ಪ್ರಾಂಶುಪಾಲರು ನೇಮಕವಾಗಿರದಿದ್ದಲ್ಲಿ ಅಥವಾ ನೇಮಕವಾದ ಪ್ರಾಂಶುಪಾಲರ ಗೈರುಹಾಜರಿಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಲು ತಾತ್ಕಾಲಿಕವಾಗಿ ನೇಮಕಗೊಂಡಿರುವ ಉಪಪ್ರಾಂಶುಪಾಲರು ಅಥವಾ ಇತರ ಯಾವುದೇ ವ್ಯಕ್ತಿಯೂ ಇದರಲ್ಲಿ ಒಳಗೊಳ್ಳುತ್ತಾರೆ;
(ಕ್ಯೂ) ‘‘ಕುಲಸಚಿವರು'' ಎಂದರೆ, ವಿಶ್ವವಿದ್ಯಾಲಯದ ಕುಲಸಚಿವರು;
(ಆರ್) ‘‘ಪ್ರಾದೇಶಿಕ ಕೇಂದ್ರ'' ಎಂದರೆ, ಯಾವುದೇ ಪ್ರದೇಶದಲ್ಲಿನ ಅಧ್ಯಯನ ಕೇಂದ್ರಗಳ ಕಾರ್ಯವನ್ನು ಸಮನ್ವಯಗೊಳಿಸುವ ಮತ್ತು ಮೇಲ್ವಿಚಾರಣೆ ಮಾಡುವ ಉದ್ದೇಶಕ್ಕಾಗಿ ಮತ್ತು ಅಂಥ ಕೇಂದ್ರಕ್ಕೆ ಆಡಳಿತ ಮಂಡಳಿಯು ವಹಿಸಿಕೊಡಬಹುದಾದ ಇತರ ಕರ್ತವ್ಯಗಳನ್ನು ನೆರವೇರಿಸುವುದಕ್ಕಾಗಿ ವಿಶ್ವವಿದ್ಯಾಲಯವು ಸ್ಥಾಪಿಸಿದ ಅಥವಾ ನಿರ್ವಹಿಸಿಕೊಂಡುಬರುವ ಒಂದು ಕೇಂದ್ರ;
(ಎಸ್) ಈ ಅಧ್ಯಾದೇಶಕ್ಕೆ ಸಂಬಂಧಿಸಿದಂತೆ ‘‘ಪ್ರಾಯೋಜಕ ಪ್ರಾಧಿಕಾರ'' ಅಥವಾ ‘‘ಪ್ರಾಯೋಜಕ ಸಂಸ್ಥೆ'' ಎಂದರೆ, ಪ್ರತಿಷ್ಠಾನ;
(ಟಿ) ‘‘ರಾಜ್ಯ'' ಎಂದರೆ, ಕರ್ನಾಟಕ ರಾಜ್ಯ;
(ಯು) ‘‘ಶಾಸನಗಳು'' ಮತ್ತು ‘‘ವಿನಿಯಮಗಳು'' ಎಂದರೆ, ವಿಶ್ವವಿದ್ಯಾಲಯದ ಸಂಬಂಧಿಸಿದ ಪ್ರಾಧಿಕಾರಗಳು ರಚಿಸಿದ ಅನುಕ್ರಮವಾಗಿ ವಿಶ್ವವಿದ್ಯಾಲಯದ ಶಾಸನಗಳು ಮತ್ತು ವಿನಿಯಮಗಳು;
(ವಿ) ‘‘ಅಧ್ಯಯನ ಕೇಂದ್ರ'' ಎಂದರೆ, ವಿದ್ಯಾರ್ಥಿಗಳಿಗೆ ಅಗತ್ಯವಾದ ಬುದ್ಧಿವಾದ, ಸಲಹೆಗಳನ್ನು ನೀಡುವ ಅಥವಾ ಇತರ ಯಾವುದೇ ನೆರವನ್ನು ನೀಡುವ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯವು ಸ್ಥಾಪಿಸಿದ, ನಿರ್ವಹಿಸಿಕೊಂಡುಬಂದ ಅಥವಾ ಮಾನ್ಯತೆ ನೀಡಿದ ಒಂದು ಕೇಂದ್ರ;
(ಡಬ್ಲ್ಯೂ) ‘‘ಅಧ್ಯಾಪಕರು'' ಎಂದರೆ, ಒಬ್ಬ ಪ್ರಾಧ್ಯಾಪಕರು, ಸಹಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ಪ್ರವಾಚಕರು ಅಥವಾ ಉಪನ್ಯಾಸಕರು ಅಥವಾ ವಿಶ್ವವಿದ್ಯಾಲಯದಲ್ಲಿ ಅಥವಾ ಒಂದು ಘಟಕ ಕಾಲೇಜಿನಲ್ಲಿ ಬೋಧಿಸುವುದಕ್ಕೆ ಅಥವಾ ಸಂಶೋಧನೆ ನಡೆಸುವುದಕ್ಕೆ ಅಥವಾ ಸಂಶೋಧನೆಗೆ ಮಾರ್ಗದರ್ಶನ ನೀಡುವುದಕ್ಕೆ ನೇಮಕವಾದಂಥ ಯಾವುದೇ ವ್ಯಕ್ತಿ ಎಂದರ್ಥ ಹಾಗೂ ಅವರನ್ನು ಒಳಗೊಳ್ಳುತ್ತದೆ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗವು ನಿಯಮಿಸಿದ ಗುಣಮಟ್ಟಗಳಿಗೆ ಅನುಸಾರವಾಗಿ ಇರುವ ಘಟಕ ಕಾಲೇಜಿನ ಪ್ರಾಂಶುಪಾಲರು ಇದರಲ್ಲಿ ಒಳಗೊಳ್ಳುತ್ತಾರೆ;
(ಎಕ್ಸ್) ‘‘ವಿಶ್ವವಿದ್ಯಾಲಯ ಅನುದಾನಗಳ ಆಯೋಗ'' ಎಂದರೆ, ವಿಶ್ವವಿದ್ಯಾಲಯ ಅನುದಾನಗಳ ಆಯೋಗ ಅಧಿನಿಯಮ, 1956ರ (1956ರ ಕೇಂದ್ರ ಅಧಿನಿಯಮ 3) 4ನೇ ಪ್ರಕರಣದಡಿಯಲ್ಲಿ ಸ್ಥಾಪಿತವಾದ ಆಯೋಗ;
(ವೈ) ‘‘ವಿಶ್ವವಿದ್ಯಾಲಯ'' ಎಂದರೆ, 4ನೇ ಪ್ರಕರಣದಡಿಯಲ್ಲಿ ಸ್ಥಾಪಿಸಿ ನಿಗಮಿತಗೊಳಿಸಲಾದ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ;
(ಜೆಡ್) ‘‘ಸಂದರ್ಶಕರು'' ಎಂದರೆ, 13ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ವಿಶ್ವವಿದ್ಯಾಲಯದ ಸಂದರ್ಶಕರು.