ಈ ಅಧ್ಯಾದೇಶದ ಉಪಬಂಧಗಳಿಗೆ ಒಳಪಟ್ಟು, ಶಾಸನಗಳು ವಿಶ್ವವಿದ್ಯಾಲಯಕ್ಕೆ ಹಾಗೂ ಸಿಬ್ಬಂದಿಗೆ ಸಂಬಂಧಪಟ್ಟ ಯಾವುವೇ ವಿಷಯಗಳಿಗೆ ಸಂಬಂಧಪಟ್ಟಂತೆ ಈ ಮುಂದಿನಂತೆ ಉಪಬಂಧ ಕಲ್ಪಿಸಬಹುದು, ಎಂದರೆ:-
(i) ವಿಶ್ವವಿದ್ಯಾಲಯದ ಪ್ರಾಧಿಕಾರಗಳ ಕಾರ್ಯಕಲಾಪಗಳನ್ನು ನಡೆಸುವ ಮತ್ತು ಈ ಅಧ್ಯಾದೇಶದಲ್ಲಿ ನಿರ್ದಿಷ್ಟಪಡಿಸದಿರುವ ಸಂಸ್ಥೆಗಳ ರಚನೆಯ ಕಾರ್ಯವಿಧಾನ;
(ii) ಶಾಶ್ವತ ಶಾಸನಬದ್ಧ ದತ್ತಿ ನಿಧಿ, ವಿಶ್ವವಿದ್ಯಾಲಯ ದತ್ತಿ ನಿಧಿ, ಸಾಮಾನ್ಯ ನಿಧಿ ಹಾಗೂ ಅಭಿವೃದ್ಧಿ ನಿಧಿಗಳ ನಿರ್ವಹಣೆ;
(iii) ಕುಲಪತಿಗಳು, ಕುಲಸಚಿವರು ಹಾಗೂ ಹಣಕಾಸು ಅಧಿಕಾರಿ ಇವರ ನೇಮಕಾತಿಯ ನಿಬಂಧನೆಗಳು ಹಾಗೂ ಷರತ್ತುಗಳು ಹಾಗೂ ಅವರ ಅಧಿಕಾರಗಳು ಮತ್ತು ಪ್ರಕಾರ್ಯಗಳು;
(iv) ವಿಶ್ವವಿದ್ಯಾಲಯದ ಇತರ ಅಧಿಕಾರಿಗಳ, ಶಿಕ್ಷಕರ ಮತ್ತು ನೌಕರರ ನೇಮಕಾತಿ ವಿಧಾನ ಹಾಗೂ ಸೇವಾ ನಿಬಂಧನೆಗಳು ಮತ್ತು ಷರತ್ತುಗಳು;
(v) ವಿಶ್ವವಿದ್ಯಾಲಯ ಹಾಗೂ ಅದರ ಅಧಿಕಾರಿಗಳು, ವಿದ್ಯಾವಿಭಾಗದ (ಫ್ಯಾಕಲ್ಟಿ) ಸದಸ್ಯರು, ನೌಕರರು ಹಾಗೂ ವಿದ್ಯಾರ್ಥಿಗಳ ನಡುವೆ ಉಂಟಾದ ವಿವಾದಗಳನ್ನು ಪರಿಹರಿಸುವ ವಿಧಾನ;
(vi) ವಿಭಾಗಗಳು ಮತ್ತು ವಿದ್ಯಾವಿಭಾಗಗಳ (ಫ್ಯಾಕಲ್ಟಿಗಳ) ಸೃಜನೆ, ರದ್ಧತಿ ಅಥವಾ ಪುನಾರಚನೆ;
(vii) ಇತರ ವಿಶ್ವವಿದ್ಯಾಲಯಗಳು ಅಥವಾ ಉನ್ನತ ಶಿಕ್ಷಣ ಸಂಸ್ಥೆಗಳ ಜೊತೆಯಲ್ಲಿ ಸಹಕರಿಸಬೇಕಾದ ರೀತಿ;
(viii) ಗೌರವ ಪದವಿಗಳ ನೀಡಿಕೆಯ ಕಾರ್ಯವಿಧಾನ;
(ix) ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನ ಮಂಜೂರಾತಿಗೆ ಸಂಬಂಧಿಸಿದ ಉಪಬಂಧಗಳು;
(x) ವಿವಿಧ ವ್ಯಾಸಂಗ ಕ್ರಮಗಳಲ್ಲಿನ ಸೀಟುಗಳ ಸಂಖ್ಯೆ ಮತ್ತು ಅಂಥ ವ್ಯಾಸಂಗ ಕ್ರಮಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಕಾರ್ಯವಿಧಾನ;
(xi) ವಿವಿಧ ವ್ಯಾಸಂಗ ಕ್ರಮಗಳಿಗೆ ವಿದ್ಯಾರ್ಥಿಗಳಿಗೆ ವಿಧಿಸಬಹುದಾದ ಶುಲ್ಕ;
(xii) ಸಂಶೋಧನಾ ವೇತನಗಳು (ಫೆಲೋಶಿಪ್ಗಳು), ವಿದ್ಯಾರ್ಥಿವೇತನಗಳು, ಶಿಷ್ಯವೇತನಗಳು, ಉಚಿತ ಶಿಕ್ಷಣ, ಪದಕಗಳು ಹಾಗೂ ಬಹುಮಾನಗಳನ್ನು ಪ್ರಾರಂಭಿಸುವುದು;
(xiii) ಹುದ್ದೆಗಳ ಸೃಜನೆ ಮತ್ತು ರದ್ಧತಿಯ ಕಾರ್ಯವಿಧಾನ;
(xiv) ನಿರ್ದಿಷ್ಟಪಡಿಸಬಹುದಾದ ಇತರ ವಿಷಯಗಳು.