(1) ಪ್ರಬಂಧಕ ಮಂಡಳಿಯು ಈ ಮುಂದಿನವರುಗಳನ್ನು ಒಳಗೊಂಡಿರತಕ್ಕದ್ದು, ಎಂದರೆ:-
(i) ಕುಲಾಧಿಪತಿಯವರು - ಅಧ್ಯಕ್ಷರು;
(ii) ಕುಲಪತಿಯವರು - ಸದಸ್ಯರು;
(iii) ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ;
(iv) ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ;
(v) ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ ನಾಮನಿರ್ದೇಶಿತರಾದ ಒಬ್ಬ ಖ್ಯಾತ ಶಿಕ್ಷಣ ತಜ್ಞ;
(vi) ಸಂದರ್ಶಕರು ಶಿಫಾರಸ್ಸು ಮಾಡಿದ ಹೆಸರುಗಳ ಪಟ್ಟಿಯಿಂದ, ಆದಷ್ಟೂ ಒಬ್ಬ ಮಹಿಳೆಗೇ ಆದ್ಯತೆ ನೀಡಿ, ಆಯ್ಕೆ ಮಾಡಿದ ಒಬ್ಬ ಖ್ಯಾತ ಶಿಕ್ಷಣ ತಜ್ಞರು ಮತ್ತು ವಿದ್ವಾಂಸರು;
(vii) ಪ್ರಾಯೋಜಕ ಸಂಸ್ಥೆಯು ನಾಮನಿರ್ದೇಶಿಸಿದ ಮೂರು ವ್ಯಕ್ತಿಗಳು;
(2) ಕುಲಸಚಿವರು ಮತ್ತು ಸಹ ಕುಲಪತಿಯವರು ಪ್ರಬಂಧಕ ಮಂಡಳಿಯ ಎಲ್ಲಾ ಸಭೆಗೂ ಮತ ನೀಡಿಕೆ ಹಕ್ಕಿರದ ಆಹ್ವಾನಿತರಾಗಿರತಕ್ಕದ್ದು.
(3) ಪ್ರಬಂಧಕ ಮಂಡಳಿಯ ಸದಸ್ಯರ ಪದಾವಧಿ, ಸರ್ಕಾರದಿಂದ ನಾಮನಿರ್ದೇಶಿತರಾದ ಇಬ್ಬರು ಸದಸ್ಯರನ್ನು ಹೊರತುಪಡಿಸಿ, ಸದಸ್ಯರ ನೇಮಕಾತಿ, ನವೀಕರಣ ಮತ್ತು ತೆಗೆದುಹಾಕುವುದು ಮುಂತಾದವುಗಳು ಶಾಸನಗಳ ಮೂಲಕ ನಿಯಮಿಸಬಹುದಾದಂತೆ ಇರತಕ್ಕದ್ದು.
(4) ಪ್ರಬಂಧಕ ಮಂಡಳಿಯ ಎಲ್ಲಾ ಸಭೆಗಳಲ್ಲಿ ಕುಲಾಧಿಪತಿಯವರು ಅಧ್ಯಕ್ಷತೆಯನ್ನು ವಹಿಸತಕ್ಕದ್ದು ಮತ್ತು ಅವರ ಅನುಪಸ್ಥಿತಿಯಲ್ಲಿ ಪ್ರಾಯೋಜಕ ಸಂಸ್ಥೆಯು ನಾಮನಿರ್ದೇಶನ ಮಾಡಿದ ಯಾರಾದರೂ ಒಬ್ಬರು ಹಾಗೂ ಪ್ರಾಯೋಜಕ ಸಂಸ್ಥೆಯು ಯಾರನ್ನೂ ನಾಮನಿರ್ದೇಶನ ಮಾಡಿರದ ಸಂದರ್ಭದಲ್ಲಿ, ಕುಲಪತಿಯವರು ಅಧ್ಯಕ್ಷತೆಯನ್ನು ವಹಿಸತಕ್ಕದ್ದು.
(5) ಪ್ರಬಂಧಕ ಮಂಡಳಿಯ ಎಲ್ಲಾ ಸಭೆಗಳಿಗೆ, ಅಂಥ ಸಭೆಯಲ್ಲಿ ಹಾಜರಾಗುವ ಮತ್ತು ಮತದಾನ ನೀಡುವ ಮೂರು ಜನ ಸದಸ್ಯರು ಗಣಪೂರ್ತಿ (ಕೋರಂ) ಆಗಿರತಕ್ಕದ್ದು:
ಪರಂತು, ಪ್ರಬಂಧಕ ಮಂಡಳಿಯ ಯಾವುದೇ ಸಭೆಯ ಕೋರಂ ಪೂರ್ಣವಾಗಬೇಕಾದರೆ ಕುಲಾಧಿಪತಿಯವರು ಅಥವಾ ಪ್ರಾಯೋಜಕ ಸಂಸ್ಥೆಯ ಒಬ್ಬ ನಾಮನಿರ್ದೇಶಿತರು ಹಾಜರಿರುವುದು ಮತ್ತು ಕುಲಾಧಿಪತಿಯವರು ಅಥವಾ ಪ್ರಾಯೋಜಕ ಸಂಸ್ಥೆಯ ನಾಮನಿರ್ದೇಶಿತರು ಹಾಜರಾಗದೇ ಇದ್ದಾಗ ಕುಲಪತಿಯವರು ಹಾಜರಿರುವುದು ಯಾವಾಗಲೂ ಅವಶ್ಯವಾಗಿರತಕ್ಕದ್ದು.
(6) ಒಂದು ಕಾರ್ಯಸೂಚಿ ವಿಷಯದ ಪರವಾಗಿ ಕುಲಾಧಿಪತಿಯವರು ತಮ್ಮ ಸಮ್ಮತಿ ಸೂಚಕ ಮತ ನೀಡಿದಾಗ ಅದಕ್ಕನುಸಾರವಾಗಿ ಹೊರತು, ಪ್ರಬಂಧಕ ಮಂಡಳಿಯು ತನ್ನ ಸಭೆಯಲ್ಲಿ ಯಾವುದೇ ಕಾರ್ಯಸೂಚಿ ವಿಷಯದ ಸಂಬಂಧದಲ್ಲಿ ಯಾವುದೇ ನಿರ್ಣಯವನ್ನು ಅಂಗೀಕರಿಸತಕ್ಕದ್ದಲ್ಲ ಅಥವಾ ತೀರ್ಮಾನವನ್ನು ತೆಗೆದುಕೊಳ್ಳತಕ್ಕದ್ದಲ್ಲ.
(7) ಪ್ರಬಂಧಕ ಮಂಡಳಿಯ ಸಭೆಯಲ್ಲಿ ಭಿನ್ನಾಭಿಪ್ರಾಯ ಉಂಟಾದಲ್ಲಿ ಆ ವಿಷಯವನ್ನು ತೀರ್ಮಾನಕ್ಕಾಗಿ ಪ್ರಾಯೋಜಕ ಸಂಸ್ಥೆಗೆ ಕಳುಹಿಸತಕ್ಕದ್ದು ಮತ್ತು ಸದರಿ ವಿಷಯದ ಬಗ್ಗೆ ಪ್ರಾಯೋಜಕ ಸಂಸ್ಥೆಯ ನಿರ್ಣಯವು ಅಂತಿಮವಾಗಿರತಕ್ಕದ್ದು ಮತ್ತು ಅದಕ್ಕೆ ವಿಶ್ವವಿದ್ಯಾಲಯವು ಬದ್ಧವಾಗಿರತಕ್ಕದ್ದು.
(8) ಪ್ರಬಂಧಕ ಮಂಡಳಿಯು ವಿಶ್ವವಿದ್ಯಾಲಯದ ಪ್ರಧಾನ ಪ್ರಬಂಧಕ ಸಂಸ್ಥೆಯಾಗಿರತಕ್ಕದ್ದು ಮತ್ತು ಅದು ಈ ಮುಂದಿನ ಅಧಿಕಾರಗಳನ್ನು ಹೊಂದಿರತಕ್ಕದ್ದು, ಎಂದರೆ:-
(i) ವಿಶ್ವವಿದ್ಯಾಲಯದ ಶಾಸನಬದ್ಧ ಲೆಕ್ಕಪರಿಶೋಧಕರನ್ನು ನೇಮಕಗೊಳಿಸುವುದು;
(ii) ವಿಶ್ವವಿದ್ಯಾಲಯವು ಅನುಸರಿಸಬೇಕಾದ ಕಾರ್ಯನೀತಿಗಳನ್ನು ರಚಿಸುವುದು;
(iii) ಈ ಅಧ್ಯಾದೇಶದ ಅಥವಾ ಶಾಸನಗಳ ಅಥವಾ ನಿಯಮಗಳ ಉಪಬಂಧಗಳಿಗೆ ಅನುಗುಣವಾಗಿ ಇರದ ವಿಶ್ವವಿದ್ಯಾಲಯದ ಇತರ ಪ್ರಾಧಿಕಾರಗಳ ತೀರ್ಮಾನಗಳನ್ನು ಪುನರೀಕ್ಷಿಸುವುದು;
(iv) ವಿಶ್ವವಿದ್ಯಾಲಯದ ಆಯವ್ಯಯ ಮತ್ತು ವಾರ್ಷಿಕ ವರದಿಗಳನ್ನು ಅನುಮೋದಿಸುವುದು;
(v) ಹೊಸ ಅಥವಾ ಹೆಚ್ಚುವರಿ ಶಾಸನಗಳನ್ನು ರಚಿಸುವುದು ಅಥವಾ ಈಗಾಗಲೇ ಇರುವ ಶಾಸನಗಳು ಮತ್ತು ನಿಯಮಗಳನ್ನು ತಿದ್ದುಪಡಿ ಮಾಡುವುದು ಅಥವಾ ನಿರಸನಗೊಳಿಸುವುದು;
(vi) ವಿಶ್ವವಿದ್ಯಾಲಯವನ್ನು ಸ್ವಯಂಸಮಾಪನಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳುವುದು;
(vii) ಸರ್ಕಾರಕ್ಕೆ ಸಲ್ಲಿಸುವ ಪ್ರಸ್ತಾವಗಳನ್ನು ಅನುಮೋದಿಸುವುದು;
(viii) ವಿಶ್ವವಿದ್ಯಾಲಯದ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕೆ ಅಪೇಕ್ಷಣೀಯವೆಂದು ಕಂಡುಬರುವಂಥ ತೀರ್ಮಾನಗಳನ್ನು ಮತ್ತು ಕ್ರಮಗಳನ್ನು ಕೈಗೊಳ್ಳುವುದು.
(9) ಪ್ರಬಂಧಕ ಮಂಡಳಿಯು ಶಾಸನಗಳಲ್ಲಿ ನಿಯಮಿಸಬಹುದಂಥ ಸಮಯ ಮತ್ತು ಸ್ಥಳದಲ್ಲಿ ಸಭೆ ಸೇರತಕ್ಕದ್ದು.