(1) ಈ ಅಧ್ಯಾದೇಶದ ಉಪಬಂಧಗಳಿಗೆ ಒಳಪಟ್ಟು ಮತ್ತು ಅದಕ್ಕನುಸಾರವಾಗಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಹಕ್ಕನ್ನು ಪ್ರತಿಷ್ಠಾನವು ಹೊಂದಿರತಕ್ಕದ್ದು.
(2) ಪ್ರತಿಷ್ಠಾನವು ರಾಜ್ಯ ಸರ್ಕಾರಕ್ಕೆ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಪ್ರಸ್ತಾವವನ್ನು ಸಲ್ಲಿಸತಕ್ಕದ್ದು.
(3) ಪ್ರಸ್ತಾವವು ಈ ಮುಂದಿನ ವಿವರಗಳನ್ನು ಒಳಗೊಂಡಿರತಕ್ಕದ್ದು, ಎಂದರೆ:-
(i) ಪ್ರತಿಷ್ಠಾನದ ವಿವರಗಳೊಂದಿಗೆ ವಿಶ್ವವಿದ್ಯಾಲಯದ ಧ್ಯೇಯೋದ್ದೇಶಗಳು;
(ii) ವಿಶ್ವವಿದ್ಯಾಲಯದ ವ್ಯಾಪ್ತಿ ಮತ್ತು ಸ್ಥಾನಮಾನ ಹಾಗೂ ಭೂಮಿಯ ಲಭ್ಯತೆ;
(iii) ಪ್ರಾರಂಭದ ದಿನಾಂಕದಿಂದ ನಿಕಟ ಐದು ಶೈಕ್ಷಣಿಕ ವರ್ಷಗಳ ಅವಧಿಯಲ್ಲಿ ವಿಶ್ವವಿದ್ಯಾಲಯವು ಕೈಗೊಳ್ಳಬೇಕೆಂದಿರುವ ಅಧ್ಯಯನ ಮತ್ತು ಸಂಶೋಧನಾ ಕಾರ್ಯಕ್ರಮಗಳ ಸ್ವರೂಪ ಮತ್ತು ಬಗೆಗಳು;
(iv) ಪ್ರಾರಂಭಿಸಬೇಕೆಂದು ಪ್ರಸ್ತಾಪಿಸಿರುವ ವಿದ್ಯಾ ವಿಭಾಗಗಳು (ಫ್ಯಾಕಲ್ಟಿಗಳು), ಅಧ್ಯಯನ ಕ್ರಮಗಳು ಮತ್ತು ಸಂಶೋಧನೆಗಳ ಸ್ವರೂಪ;
(v) ಕಟ್ಟಡಗಳು, ಸಲಕರಣೆಗಳು ಮತ್ತು ರಚನಾ ಸೌಕರ್ಯಗಳನ್ನು ಒದಗಿಸುವಂಥ ಕ್ಯಾಂಪಸ್ ಅಭಿವೃದ್ಧಿ;
(vi) ಪ್ರಾರಂಭದ ದಿನಾಂಕದ ನಿಕಟ ಐದು ಶೈಕ್ಷಣಿಕ ವರ್ಷಗಳ ಅವಧಿಯಲ್ಲಿ ಕೈಗೊಳ್ಳಲಿರುವ ಬಂಡವಾಳ ವೆಚ್ಚಕ್ಕೆ ಹಂತಹಂತವಾಗಿ ಒದಗಿಸಲಿರುವ ಹಣದ ಏರ್ಪಾಟು ವಿವರ;
(vii) ಬಾಬುವಾರು ಆವರ್ತಕ ವೆಚ್ಚ, ಆರ್ಥಿಕ ಮೂಲಗಳು ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಗೆ ತಗಲುವ ಅಂದಾಜು ವೆಚ್ಚ;
(viii) ಸಂಪನ್ಮೂಲ ಸಂಗ್ರಹಣೆಗಾಗಿ ಯೋಜನೆ ಮತ್ತು ಅದಕ್ಕೆ ಬಂಡವಾಳದಿಂದ ತಗಲುವ ವೆಚ್ಚ ಮತ್ತು ಪ್ರತಿಯೊಂದು ಮೂಲಕ್ಕೂ ಮರು ಸಂದಾಯ ಮಾಡುವ ರೀತಿ;
(ix) ವಿದ್ಯಾರ್ಥಿಗಳಿಂದ ಶುಲ್ಕ ವಸೂಲು ಮಾಡಿ ಆಂತರಿಕವಾಗಿ ನಿಧಿ ಸಂಗ್ರಹಿಸುವ ಯೋಜನೆ, ಸಲಹಾ ಸೇವೆ ಮತ್ತು ವಿಶ್ವವಿದ್ಯಾಲಯದ ಧ್ಯೇಯೋದ್ದೇಶಗಳಿಗೆ ಸಂಬಂಧಿಸಿದ ಇತರ ಚಟುವಟಿಕೆಗಳಿಂದ ನಿರೀಕ್ಷಿತ ಆದಾಯಗಳು ಮತ್ತು ಇತರ ನಿರೀಕ್ಷಿತ ಆದಾಯಗಳು;
(x) ಘಟಕಮೊಂದಕ್ಕೆ ತಗಲುವ ವೆಚ್ಚದ ಶುಲ್ಕದಲ್ಲಿ ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಎಷ್ಟರವರೆಗೆ ರಿಯಾಯಿತಿ ಅಥವಾ ವಿನಾಯತಿ ಕೊಡಲಾಗುವುದು, ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನ ನೀಡಲಾಗುವುದು ಎಂಬುದರ ವಿವರಗಳನ್ನು ಮತ್ತು ಅನಿವಾಸಿ ಭಾರತೀಯರು ಅಥವಾ ಭಾರತೀಯ ಮೂಲದ ವ್ಯಕ್ತಿಗಳಿಗೆ ಅಥವಾ ಅನಿವಾಸಿ ಭಾರತೀಯರು ಅಥವಾ ಭಾರತೀಯ ಮೂಲದ ವ್ಯಕ್ತಿಗಳು ಪ್ರಾಯೋಜಿಸಿದ ವಿದ್ಯಾರ್ಥಿಗಳಿಗೆ ಮತ್ತು ಭಾರತವನ್ನುಳಿದು ಇತರ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ವಿಧಿಸತಕ್ಕ ಶುಲ್ಕದ ದರಗಳು ಬೇರೆ ಬೇರೆ ಇದ್ದಲ್ಲಿ ಅವುಗಳನ್ನು ಸೂಚಿಸುವ ಶುಲ್ಕ ರಚನೆಯ ವಿವರಗಳು;
(xi) ಸಂಬಂಧಪಟ್ಟ ವಿದ್ಯಾ ವಿಭಾಗದಲ್ಲಿ ಎಷ್ಟು ವರ್ಷಗಳ ಅನುಭವ ಮತ್ತು ಪರಿಣಿತಿ ಪ್ರತಿಷ್ಠಾನವು ದೊರಕಿಸಿಕೊಡಲಿದೆ ಹಾಗೂ ಅದರ ಹಣಕಾಸಿನ ಸಂಪನ್ಮೂಲಗಳು;
(xii) ವಿಶ್ವವಿದ್ಯಾಲಯದಲ್ಲಿರುವ ಅಧ್ಯಯನ ಕ್ರಮಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದಕ್ಕಾಗಿ ಇರುವ ವ್ಯವಸ್ಥೆ;
(xiii) ವಿಶ್ವವಿದ್ಯಾಲಯವು ಸ್ಥಾಪನೆಯಾಗುವುದಕ್ಕೆ ಮುಂಚೆ ನೆರವೇರಿಸಬೇಕೆಂದು ರಾಜ್ಯ ಸರ್ಕಾರವು ಅಗತ್ಯಪಡಿಸಬಹುದಾದಂಥ ಇತರ ಷರತ್ತುಗಳ ನೆರವೇರಿಕೆ ಯಾವ ಹಂತದಲ್ಲಿದ.
(4) ರಾಜ್ಯ ಸರ್ಕಾರವು, ಸ್ವೀಕೃತವಾದ ಪ್ರಸ್ತಾವಗಳನ್ನು ಪರೀಕ್ಷಿಸುವುದಕ್ಕಾಗಿ ಒಂದು ಪರಿಶೋಧನಾ ಸಮಿತಿಯನ್ನು ರಚಿಸತಕ್ಕದ್ದು. ಅದು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಮಾಡತಕ್ಕದ್ದು.