ವಿಶ್ವವಿದ್ಯಾಲಯವು ತನ್ನ ನೌಕರರ ಅಥವಾ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡ ಸಂದರ್ಭದಲ್ಲಿ ಬಾಧಿತ ನೌಕರ ಅಥವಾ ವಿದ್ಯಾರ್ಥಿಯು ಶಾಸನಗಳಲ್ಲಿ ನಿರ್ದಿಷ್ಟಪಡಿಸಬಹುದಾದಂತೆ ಮೇಲ್ಮನವಿ ಹಕ್ಕು ಹೊಂದಿರತಕ್ಕದ್ದು.
ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರ ಅಥವಾ ಇತರ ಸಂಸ್ಥೆಯ ಸದಸ್ಯನಾಗಿ ಯಾಮೊಬ್ಬ ವ್ಯಕ್ತಿಯು ಸೂಕ್ತವಾಗಿ ಆಯ್ಕೆಯಾಗಿದ್ದಾನೆಯೇ ಅಥವಾ ನೇಮಕಗೊಂಡಿದ್ದಾನೆಯೇ ಅಥವಾ ಅದಕ್ಕೆ ಅರ್ಹನಾಗಿದ್ದಾನೆಯೇ ಎಂಬ ಯಾವುದೇ ಪ್ರಶ್ನೆ ಉದ್ಭವಿಸಿದರೆ ಆ ವಿಷಯವನ್ನು ತೀರ್ಮಾನಕ್ಕಾಗಿ ಕುಲಾಧಿಪತಿಯವರಿಗೆ ಕಳುಹಿಸತಕ್ಕದ್ದು ಮತ್ತು ಅವರ ತೀರ್ಮಾನವು ಅಂತಿಮವಾಗಿರತಕ್ಕದ್ದು.
(1) ಪ್ರತಿಯೊಬ್ಬ ನೌಕರನು ಲಿಖಿತ ಕರಾರನ್ನು ಬರೆದುಕೊಟ್ಟು ನೇಮಕಗೊಳ್ಳತಕ್ಕದ್ದು ಮತ್ತು ಅದನ್ನು ವಿಶ್ವವಿದ್ಯಾಲಯದಲ್ಲಿ ಇಟ್ಟುಕೊಳ್ಳತಕ್ಕದ್ದು ಹಾಗೂ ಅದರ ಪ್ರತಿಯನ್ನು ಸಂಬಂಧಪಟ್ಟ ನೌಕರನಿಗೆ ನೀಡತಕ್ಕದ್ದು.
(2) ನೌಕರರ ವಿರುದ್ಧ ಶಿಸ್ತು ಕ್ರಮವನ್ನು ಶಾಸನಗಳಲ್ಲಿ ನಿರ್ದಿಷ್ಟಪಡಿಸಬಹುದಾದ ಕಾರ್ಯವಿಧಾನಗಳ ಅನುಸಾರವಾಗಿ ತೆಗೆದುಕೊಳ್ಳತಕ್ಕದ್ದು.
(3) ವಿಶ್ವವಿದ್ಯಾಲಯ ಮತ್ತು ನೌಕರನ ಮಧ್ಯದಲ್ಲಿಯ ಕರಾರನಿಂದ ಉದ್ಭವಿಸಬಹುದಾದ ಯಾವುದೇ ವಿವಾದವನ್ನು ಆ ಲಿಖಿತ ಕರಾರಿನಲ್ಲಿ ಉಪಬಂಧಿಸಿದ ವಿಧಾನದಲ್ಲಿ ಹಾಗೂ ಶಾಸನಗಳ ಅನುಸಾರವಾಗಿ ಪರಿಹರಿಸತಕ್ಕದ್ದು.
ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರ ಅಥವಾ ಸಂಸ್ಥೆಯ ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿ, ಸದಸ್ಯರ ಪೈಕಿ ಯಾವುದೇ ಸ್ಥಾನವು ಆಕಸ್ಮಿಕವಾಗಿ ಖಾಲಿಯಾದರೆ ಯಾರ ಸ್ಥಾನವು ಖಾಲಿಯಾಗಿ ತುಂಬಬೇಕಾಗಿ ಬಂದಿದೆಯೋ ಆ ಸದಸ್ಯನನ್ನು ಯಾವ ರೀತಿಯಲ್ಲಿ ಆರಿಸಲಾಗಿತ್ತೋ ಅದೇ ರೀತಿಯಲ್ಲಿ ಹೊಸ ಸದಸ್ಯನನ್ನು ಆರಿಸಿ ಭರ್ತಿ ಮಾಡತಕ್ಕದ್ದು ಮತ್ತು ಹಾಗೆ ಖಾಲಿ ಸ್ಥಾನವನ್ನು ಭರ್ತಿ ಮಾಡಿದ ವ್ಯಕ್ತಿಯು ಆತನು ಯಾವ ಸದಸ್ಯನ ಸ್ಥಾನದಲ್ಲಿ ಭರ್ತಿಯಾಗಿರುವನೋ ಆ ಸದಸ್ಯನು ಪ್ರಾಧಿಕಾರ ಅಥವಾ ಸಂಸ್ಥೆಯ ಸದಸ್ಯನಾಗಿ ಉಳಿಯುತ್ತಿದ್ದ ಬಾಕಿ ಅವಧಿಯವರೆಗೆ ಮಾತ್ರ ಸದಸ್ಯನಾಗಿರತಕ್ಕದ್ದು.
ಈ ಅಧ್ಯಾದೇಶ ಮತ್ತು ಶಾಸನಗಳ ಯಾವುದೇ ಇತರ ಉಪಬಂಧಗಳಲ್ಲಿ ಏನೇ ಇದ್ದರೂ,-
(i) ಮೊದಲ ಕುಲಪತಿಯವರನ್ನು ಮತ್ತು ಸಹಕುಲಪತಿಗಳು ಯಾರಾದರು ಇದ್ದರೆ ಅವರನ್ನು ಕುಲಾಧಿಪತಿಯವರು ನೇಮಕಮಾಡತಕ್ಕದ್ದು;
(ii) ಮೊದಲ ಕುಲಸಚಿವರನ್ನು ಮತ್ತು ಮೊದಲ ಹಣಕಾಸು ಅಧಿಕಾರಿಯವರನ್ನು ಕುಲಾಧಿಪತಿಯವರು ನೇಮಕಮಾಡತಕ್ಕದ್ದು; ಮತ್ತು
(iii) ಮೊದಲ ಆಡಳಿತ ಮಂಡಳಿ, ಮೊದಲ ಹಣಕಾಸು ಸಮಿತಿ, ಮೊದಲ ದೂರಶಿಕ್ಷಣ ಸಮಿತಿ, ಮೊದಲ ಸಂಶೋಧನಾ ಪರಿಷತ್ತು ಹಾಗೂ ಮೊದಲ ಪ್ರಶಿಕ್ಷಣ ಪರಿಷತ್ತನ್ನು ಕುಲಾಧಿಪತಿಯವರು ರಚಿಸತಕ್ಕದ್ದು.
(1) ವಿಶ್ವವಿದ್ಯಾಲಯವು ಕನಿಷ್ಠ ಇಪ್ಪತ್ತೈದು ಕೋಟಿ ರೂಪಾಯಿಗಳನ್ನುಳ್ಳ ಒಂದು ಶಾಶ್ವತ ಶಾಸನಬದ್ಧ ದತ್ತಿ ನಿಧಿಯನ್ನು ಸ್ಥಾಪಿಸತಕ್ಕದ್ದು ಮತ್ತು ಈ ನಿಧಿಯನ್ನು ಸ್ವಪ್ರೇರಣೆಯಿಂದ ಹೆಚ್ಚಿಸಬಹುದೇ ಹೊರತು ಅದಕ್ಕಿಂತ ಕಡಿಮೆ ಮಾಡತಕ್ಕದ್ದಲ್ಲ.
(2) ವಿಶ್ವವಿದ್ಯಾಲಯವು, ನಿಯಮಿಸಬಹುದಾದಂಥ ವಿಧಾನದಲ್ಲಿ ಶಾಶ್ವತ ಶಾಸನಬದ್ಧ ದತ್ತಿ ನಿಧಿಯ ಹಣವನ್ನು ಹೂಡಲು ಅಧಿಕಾರವನ್ನು ಹೊಂದಿರತಕ್ಕದ್ದು.
(3) ವಿಶ್ವವಿದ್ಯಾಲಯವು, ಸಾಮಾನ್ಯ ನಿಧಿ ಅಥವಾ ಅಭಿವೃದ್ಧಿ ನಿಧಿಯಿಂದ ಯಾವುದೇ ಮೊಬಲಗನ್ನು ಶಾಶ್ವತ ಶಾಸನಬದ್ಧ ದತ್ತಿ ನಿಧಿಗೆ ವರ್ಗಾವಣೆ ಮಾಡಬಹುದು. ವಿಶ್ವವಿದ್ಯಾಲಯವನ್ನು ಸಮಾಪಣೆಗೊಳಿಸುವ ಸಂದರ್ಭದಲ್ಲಿ ಹೊರತುಪಡಿಸಿ, ಇತರ ಯಾವ ಸಂದರ್ಭದಲ್ಲೂ ಶಾಶ್ವತ ಶಾಸನಬದ್ಧ ದತ್ತಿ ನಿಧಿಯಿಂದ ಯಾವ ಮೊಬಲಗನ್ನೂ ಇತರ ಉದ್ದೇಶಗಳಿಗಾಗಿ ವರ್ಗಾಯಿಸತಕ್ಕದ್ದಲ್ಲ.
(4) ಶಾಶ್ವತ ಶಾಸನಬದ್ಧ ದತ್ತಿ ನಿಧಿಯಿಂದ ಬರುವ ಆದಾಯದ ಶೇಕಡಾ ಎಪ್ಪತ್ತೈದರಷ್ಟನ್ನು ವಿಶ್ವವಿದ್ಯಾಲಯದ ಅಭಿವೃದ್ಧಿ ಅಥವಾ ಸಾಮಾನ್ಯ ಕೆಲಸಗಳ ಉದ್ದೇಶಗಳಿಗಾಗಿ ಬಳಸಿಕೊಳ್ಳತಕ್ಕದ್ದು. ಉಳಿದ ಶೇಕಡಾ ಇಪ್ಪತ್ತೈದರಷ್ಟನ್ನು ಶಾಶ್ವತ ಶಾಸನಬದ್ಧ ದತ್ತಿ ನಿಧಿಯಲ್ಲಿ ಪುನಃ ತೊಡಗಿಸತಕ್ಕದ್ದು.
(1) ವಿಶ್ವವಿದ್ಯಾಲಯವು, ಒಂದು ಸಾಮಾನ್ಯ ನಿಧಿಯನ್ನು ಸ್ಥಾಪಿಸತಕ್ಕದ್ದು. ಇದರಲ್ಲಿ ಈ ಮುಂದಿನ ಮೊಬಲಗುಗಳನ್ನು ಜಮಾ ಮಾಡತಕ್ಕದ್ದು, ಎಂದರೆ:-
(i) ವಿಶ್ವವಿದ್ಯಾಲಯವು ವಿಧಿಸಬಹುದಾದ ಎಲ್ಲಾ ಶುಲ್ಕಗಳು;
(ii) ಯಾವುದೇ ಇತರ ಮೂಲಗಳಿಂದ ಸ್ವೀಕರಿಸಬಹುದಾದ ಎಲ್ಲಾ ಮೊತ್ತ;
(iii) ವಿಶ್ವವಿದ್ಯಾಲಯವು ಮಾಡುವ ಎಲ್ಲಾ ದೇಣಿಗೆಗಳು;
(iv) ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೂಲಕ ನಿಷೇಧಿಸದೇ ಇರುವ ಯಾಮೊಬ್ಬ ಇತರ ವ್ಯಕ್ತಿ ಅಥವಾ ಸಂಸ್ಥೆಯು ಈ ಸಂಬಂಧದಲ್ಲಿ ಕೊಟ್ಟ ಎಲ್ಲಾ ದೇಣಿಗೆಗಳು/ವಂತಿಗೆಗಳು;
(2) ಸಾಮಾನ್ಯ ನಿಧಿಗೆ ಜಮಾ ಮಾಡುವ ನಿಧಿಗಳನ್ನು ವಿಶ್ವವಿದ್ಯಾಲಯದ ಎಲ್ಲಾ ಆವರ್ತಕ ವೆಚ್ಚಗಳನ್ನು ಭರಿಸಲು ಉಪಯೋಗಿಸಕೊಳ್ಳತಕ್ಕದ್ದು.
(1) ವಿಶ್ವವಿದ್ಯಾಲಯವು, ಒಂದು ಅಭಿವೃದ್ಧಿ ನಿಧಿಯನ್ನು ಸಹ ಸ್ಥಾಪಿಸತಕ್ಕದ್ದು. ಇದರಲ್ಲಿ ಈ ಮುಂದಿನ ಮೊಬಲಗುಗಳನ್ನು ಜಮಾ ಮಾಡತಕ್ಕದ್ದು, ಎಂದರೆ:-
(i) ವಿದ್ಯಾರ್ಥಿಗಳಿಗೆ ವಿಧಿಸಬಹುದಾದ ಅಭಿವೃದ್ಧಿ ಶುಲ್ಕ;
(ii) ವಿಶ್ವವಿದ್ಯಾಲಯದ ಅಭಿವೃದ್ಧಿಯ ಉದ್ದೇಶಕ್ಕಾಗಿ ಯಾವುದೇ ಇತರ ಮೂಲಗಳಿಂದ ಸ್ವೀಕರಿಸಿದ ಎಲ್ಲಾ ಮೊತ್ತ;
(iii) ವಿಶ್ವವಿದ್ಯಾಲಯವು ನೀಡಿದ ಎಲ್ಲಾ ವಂತಿಗೆಗಳು;
(iv) ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೂಲಕ ನಿಷೇಧಿಸದೇ ಇರುವ ಯಾಮೊಬ್ಬ ಇತರ ವ್ಯಕ್ತಿ ಅಥವಾ ಸಂಸ್ಥೆಯು ಈ ಸಂಬಂಧದಲ್ಲಿ ಕೊಟ್ಟ ಎಲ್ಲಾ ದೇಣಿಗೆಗಳು/ವಂತಿಗೆಗಳು;
(v) ಶಾಶ್ವತ ಶಾಸನಬದ್ಧ ದತ್ತಿ ನಿಧಿಯಿಂದ ಸ್ವೀಕರಿಸುವ ಎಲ್ಲಾ ಆದಾಯಗಳು
(2) ಅಭಿವೃದ್ಧಿ ನಿಧಿಗೆ ಕಾಲಕಾಲಕ್ಕೆ ಜಮಾ ಮಾಡಿದ ನಿಧಿಯನ್ನು ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಉಪಯೋಗಿಸಕೊಳ್ಳತಕ್ಕದ್ದು.
(1) ವಿಶ್ವವಿದ್ಯಾಲಯದ ವಾರ್ಷಿಕ ವರದಿಯನ್ನು ಆಡಳಿತ ಮಂಡಳಿಯ ನಿರ್ದೇಶನದಲ್ಲಿ ತಯಾರಿಸತಕ್ಕದ್ದು ಮತ್ತು ಅನುಮೋದನೆ ಕೋರಿ ಪ್ರಬಂಧಕ ಮಂಡಳಿಗೆ ಸಲ್ಲಿಸತಕ್ಕದ್ದು.
(2) ಪ್ರಬಂಧಕ ಮಂಡಳಿಯು ವಾರ್ಷಿಕ ವರದಿಯನ್ನು ತನ್ನ ಸಭೆಯಲ್ಲಿ ಪರಿಗಣಿಸತಕ್ಕದ್ದು ಹಾಗೂ ಅದನ್ನು ಮಾರ್ಪಾಡುಗಳೊಡನೆ ಅಥವಾ ಮಾರ್ಪಾಡುಗಳಿಲ್ಲದೆ ಅನುಮೋದಿಸಬಹುದು.
(3) ಪ್ರಬಂಧಕ ಮಂಡಳಿಯು ಸೂಕ್ತವಾಗಿ ಅನುಮೋದಿಸಿದ ವಾರ್ಷಿಕ ವರದಿಯ ಒಂದು ಪ್ರತಿಯನ್ನು ಸಂದರ್ಶಕರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರತಿವರ್ಷದ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದ ತರುವಾಯ ಬರುವ ಡಿಸೆಂಬರ್ 31ಕ್ಕೆ ಮೊದಲು ಸಲ್ಲಿಸತಕ್ಕದ್ದು.
ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರ ಅಥವಾ ಸಮಿತಿಯ ಯಾವುದೇ ರಶೀದಿ, ಅರ್ಜಿ, ಸೂಚನೆ, ಆದೇಶ, ವ್ಯವಹರಣೆ ಅಥವಾ ನಿರ್ಣಯಗಳು ಅಥವಾ ವಿಶ್ವವಿದ್ಯಾಲಯದ ಸ್ವಾಧೀನದಲ್ಲಿರುವ ಇತರ ದಾಖಲೆಗಳು ಅಥವಾ ವಿಶ್ವವಿದ್ಯಾಲಯವು ಸೂಕ್ತವಾಗಿ ನಿರ್ವಹಿಸುವ ಯಾವುದೇ ರಿಜಿಸ್ಟರ್ನಲ್ಲಿಯ ಯಾವುದೇ ನಮೂದುಗಳ ಪ್ರತಿಗಳನ್ನು ಅವುಗಳ ಮೇಲೆ ಕುಲಸಚಿವರು ಪ್ರಮಾಣೀಕರಿಸಿದ್ದರೆ, ಅವುಗಳನ್ನು ಅಂಥ ರಶೀದಿ, ಅರ್ಜಿ, ಸೂಚನೆ, ಆದೇಶ, ವ್ಯವಹರಣೆ, ನಿರ್ಣಯ ಅಥವಾ ದಾಖಲೆ ಅಥವಾ ರಿಜಿಸ್ಟರ್ನಲ್ಲಿ ಇರುವ ನಮೂದುಗಳು ಮೇಲ್ನೋಟದ ಸಾಕ್ಷ್ಯವೆಂಬುದಾಗಿ ಸ್ವೀಕರಿಸತಕ್ಕದ್ದು ಮತ್ತು ವಿಷಯಗಳ ಸಾಕ್ಷಿಯಾಗಿ ಅವುಗಳನ್ನು ಅಂಗೀಕರಿಸತಕ್ಕದ್ದು ಹಾಗೂ ಅವುಗಳ ಮೂಲ ದಾಖಲೆಗಳನ್ನೇ ಸಲ್ಲಿಸಿದ್ದರೆ ಹೇಗೆ ಅದನ್ನು ಅವುಗಳಲ್ಲಿ ದಾಖಲಿಸಿರುವ ವಿಷಯಗಳು ಮತ್ತು ವಹಿವಾಟುಗಳ ಸಾಕ್ಷ್ಯವಾಗಿ ಅಂಗೀಕರಿಸಲಾಗುತ್ತಿತ್ತೋ ಅದೇ ರೀತಿ ಇವನ್ನೂ ಸಾಕ್ಷ್ಯವಾಗಿ ಅಂಗೀಕರಿಸತಕ್ಕದ್ದು.
(1) ವಿಶ್ವವಿದ್ಯಾಲಯದ ವಾರ್ಷಿಕ ಲೆಕ್ಕ ಪತ್ರ ಮತ್ತು ಜಮಾ ಖರ್ಚು ಪಟ್ಟಿಯನ್ನು ಆಡಳಿತ ಮಂಡಳಿಯ ನಿರ್ದೇಶನದಲ್ಲಿ ತಯಾರಿಸತಕ್ಕದ್ದು ಮತ್ತು ವಿಶ್ವವಿದ್ಯಾಲಯಕ್ಕೆ ಎಲ್ಲಾ ಮೂಲಗಳಿಂದ ಪ್ರಾಪ್ತವಾಗುವ ಅಥವಾ ಅದು ಸ್ವೀಕರಿಸುವ ಎಲ್ಲಾ ನಿಧಿಗಳು ಹಾಗೂ ವಿತರಿಸಿದ ಅಥವಾ ಸಂದಾಯ ಮಾಡಿದ ಎಲ್ಲಾ ಮೊಬಲಗುಗಳನ್ನು ವಿಶ್ವವಿದ್ಯಾಲಯವು ನಿರ್ವಹಿಸುವ ಲೆಕ್ಕಪತ್ರದಲ್ಲಿ ನಮೂದಿಸತಕ್ಕದ್ದು.
(2) ವಿಶ್ವವಿದ್ಯಾಲಯದ ವಾರ್ಷಿಕ ಲೆಕ್ಕಪತ್ರಗಳನ್ನು ಪ್ರತಿ ವರ್ಷವೂ ಭಾರತದ ಚಾರ್ಟೆಡ್ ಅಕೌಟೆಂಟ್ಗಳ ಸಂಸ್ಥೆಯ ಸದಸ್ಯರಾಗಿರುವ ಒಬ್ಬ ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧನೆ ಮಾಡಿಸತಕ್ಕದ್ದು.
(3) ವಾರ್ಷಿಕ ಲೆಕ್ಕಪತ್ರಗಳು ಮತ್ತು ಜಮಾ ಖರ್ಚು ಪಟ್ಟಿಯನ್ನು ಲೆಕ್ಕಪರಿಶೋಧನಾ ವರದಿಯೊಡನೆ ಪ್ರಬಂಧಕ ಮಂಡಳಿಗೆ ಪ್ರತಿ ವರ್ಷದ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದ ತರುವಾಯ ಬರುವ ನವೆಂಬರ್ 30ಕ್ಕೆ ಮೊದಲು ಸಲ್ಲಿಸತಕ್ಕದ್ದು.
(4) ವಾರ್ಷಿಕ ವರದಿಗಳು, ಜಮಾಖರ್ಚು ಪಟ್ಟಿ ಮತ್ತು ಲೆಕ್ಕಪರಿಶೋಧಕ ವರದಿಯನ್ನು ಪ್ರಬಂಧಕ ಮಂಡಳಿಯು ತನ್ನ ಸಭೆಯಲ್ಲಿ ಪರ್ಯಾಲೋಚಿಸತಕ್ಕದ್ದು ಮತ್ತು ಪ್ರಬಂಧಕ ಮಂಡಳಿಯು ಅದನ್ನು ತನ್ನ ಅಭಿಪ್ರಾಯಗಳೊಡನೆ ಸಂದರ್ಶಕರಿಗೆ ಹಾಗೂ ಸರ್ಕಾರಕ್ಕೆ ಪ್ರತಿ ವರ್ಷದ ಡಿಸೆಂಬರ್ 31ಕ್ಕೆ ಮುಂಚೆ ಕಳುಹಿಸತಕ್ಕದ್ದು.
(5) ಲೆಕ್ಕಪರಿಶೋಧಕರ ವರದಿಯಲ್ಲಿ ಯಾವುದಾದರೂ ಗಮನಾರ್ಹ ಮಾರ್ಪಾಟು ಕಂಡುಬಂದಲ್ಲಿ ರಾಜ್ಯ ಸರ್ಕಾರವು ವಿಶ್ವವಿದ್ಯಾಲಯಕ್ಕೆ ನಿರ್ದೇಶನಗಳನ್ನು ನೀಡತಕ್ಕದ್ದು ಮತ್ತು ಅಂಥ ನಿರ್ದೇಶನಗಳಿಗ ವಿಶ್ವವಿದ್ಯಾಲಯವು ಬದ್ಧವಾಗಿರತಕ್ಕದ್ದು.
(1) ವಿಶ್ವವಿದ್ಯಾಲಯವು, ಪ್ರಾಯೋಜಕ ಸಂಸ್ಥೆಯು ನಿರ್ಧರಿಸಬಹುದಾದಂಥ ನಿಧಿಗಳನ್ನು ಒಳಗೊಂಡ ವಿಶ್ವವಿದ್ಯಾಲಯದ ದತ್ತಿ ನಿಧಿಯನ್ನು ಸ್ಥಾಪಿಸತಕ್ಕದ್ದು. ಇದರಲ್ಲಿ ಕಾಲಕಾಲಕ್ಕೆ ಸ್ವೀಕರಿಸಬಹುದಾದ ದೇಣಿಗೆಗಳು ಮತ್ತು ಇತರ ನಿಧಿಗಳೂ ಒಳಗೊಂಡಿರಬಹುದು.
(2) ವಿಶ್ವವಿದ್ಯಾಲಯವು, ಶಾಸನಗಳ ಮೂಲಕ ನಿರ್ದಿಷ್ಟಪಡಿಸಬಹುದಾದ ವಿಧಾನದಲ್ಲಿ ವಿಶ್ವವಿದ್ಯಾಲಯದ ದತ್ತಿನಿಧಿಯನ್ನು ಹೂಡುವ ಅಧಿಕಾರವನ್ನು ಹೊಂದಿರತಕ್ಕದ್ದು.
(3) ವಿಶ್ವವಿದ್ಯಾಲಯ ದತ್ತಿ ನಿಧಿಯು, ವಿಶ್ವವಿದ್ಯಾಲಯವು ತನ್ನ ಸಾಮಾಜಿಕ ಧ್ಯೇಯೋದ್ದೇಶಗಳನ್ನು ನೆರವೇರಿಸುವ ಸಂದರ್ಭದಲ್ಲಿ ಮತ್ತು/ಅಥವಾ ಮುಂಗಾಣದ ಸನ್ನಿವೇಶಗಳಲ್ಲಿ ಉದ್ಭವಿಸಬಹುದಾದ ಹಣಕಾಸು ಸವಾಲುಗಳಿಂದ ತನ್ನನ್ನು ರಕ್ಷಿಸಿಕೊಳ್ಳುವುದಕ್ಕಾಗಿ, ಸ್ವಇಚ್ಛೆಯಿಂದ ನಿರ್ವಹಿಸಿಕೊಂಡು ಬರಲು ಮತ್ತು ಜವಾಬ್ದಾರಿಯಿಂದ ಹಣ ಹೂಡಿಕೆ ಮಾಡಲು ಇಚ್ಛೆಯುಳ್ಳವರಾಗಿ ಸ್ವಯಂ ವಿಧಿಸಿಕೊಂಡ ನಿಧಿಯಾಗಿರತಕ್ಕದ್ದು.
(4) ವಿಶ್ವವಿದ್ಯಾಲಯವು, ಸಾಮಾನ್ಯ ನಿಧಿ ಅಥವಾ ಅಭಿವೃದ್ಧಿ ನಿಧಿಯಿಂದ ಯಾವುದೇ ಮೊಬಲಗನ್ನು ವಿಶ್ವವಿದ್ಯಾಲಯದ ದತ್ತಿ ನಿಧಿಗೆ ವರ್ಗಾಯಿಸಬಹುದು. ವಿಶ್ವವಿದ್ಯಾಲಯದ ಸಮಾಪಣೆಗೊಳಿಸುವ ಸಂದರ್ಭವನ್ನು ಹೊರತುಪಡಿಸಿ, ಇತರ ಯಾವ ಸಂದರ್ಭದಲ್ಲೂ ವಿಶ್ವವಿದ್ಯಾಲಯದ ದತ್ತಿ ನಿಧಿಯಿಂದ ಯಾವುದೇ ಮೊಬಲಗನ್ನು ಇತರ ಉದ್ದೇಶಗಳಿಗಾಗಿ ವರ್ಗಾಯಿಸತಕ್ಕದ್ದಲ್ಲ.
(5) ವಿಶ್ವವಿದ್ಯಾಲಯದ ದತ್ತಿ ನಿಧಿಯಿಂದ ಬರುವ ಆದಾಯದ ಶೇಕಡಾ ಎಂಭತ್ತರಷ್ಟನ್ನು ವಿಶ್ವವಿದ್ಯಾಲಯದ ಅಭಿವೃದ್ಧಿ ಅಥವಾ ಸಾಮಾನ್ಯ ಕೆಲಸಗಳ ಉದ್ದೇಶಗಳಿಗಾಗಿ ಬಳಸಿಕೊಳ್ಳತಕ್ಕದ್ದು. ಉಳಿದ ಶೇಕಡಾ ಇಪ್ಪತ್ತರಷ್ಟನ್ನು ವಿಶ್ವವಿದ್ಯಾಲಯದ ದತ್ತಿ ನಿಧಿಯಲ್ಲಿ ಪುನಃ ತೊಡಗಿಸತಕ್ಕದ್ದು.
(1) ವಿಶ್ವವಿದ್ಯಾಲಯವು ತನ್ನ ರಚನೆ ಅಥವಾ ನಿಗಮನವನ್ನು ನಿಯಂತ್ರಿಸುವ ಕಾನೂನಿಗೆ ಅನುಸಾರವಾಗಿ ತನ್ನ ಸಮಾಪನವನ್ನು ಉದ್ದೇಶಿಸಿದ್ದಲ್ಲಿ ಅದು ಕನಿಷ್ಠ ಆರು ತಿಂಗಳ ಲಿಖಿತ ನೋಟಿಸನ್ನು ಸರ್ಕಾರಕ್ಕೆ ನೀಡತಕ್ಕದ್ದು.
(2) ದುವ್ರ್ಯವಹರಣೆ, ದುರಾಡಳಿತ ಮತ್ತು ಅಶಿಸ್ತು ಆಗಿದೆ ಎಂಬುದನ್ನು ಗುರುತಿಸಿದರೆ, ಸರ್ಕಾರವು ವಿಶ್ವವಿದ್ಯಾಲಯದ ಆಡಳಿತ ವರ್ಗದವರಿಗೆ ಆಡಳಿತ ಸರಿಪಡಿಸಬೇಕೆಂದು ನಿರ್ದೇಶನಗಳನ್ನು ನೀಡತಕ್ಕದ್ದು. ನಿಯಮಿಸಬಹುದಾದಂಥ ಅವಧಿಯೊಳಗೆ ಆ ನಿರ್ದೇಶನಗಳನ್ನು ಪಾಲಿಸದಿದ್ದಲ್ಲಿ ವಿಶ್ವವಿದ್ಯಾಲಯವನ್ನು ಸಮಾಪನಗೊಳಿಸುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳುವ ಅಧಿಕಾರವು ಸರ್ಕಾರದಲ್ಲಿ ನಿಹಿತವಾಗತಕ್ಕದ್ದು.
(3) ವಿಶ್ವವಿದ್ಯಾಲಯವನ್ನು ಸಮಾಪನಗೊಳಿಸುವ ವಿಧಾನವು, ಸರ್ಕಾರವು ಈ ಸಂಬಂಧದಲ್ಲಿ ನಿಯಮಿಸಬಹುದಾದಂತೆ ಇರತಕ್ಕದ್ದು. ಪರಂತು ವಿಶ್ವವಿದ್ಯಾಲಯವು ತನ್ನ ಕಾರಣಗಳನ್ನು ಹೇಳಿಕೊಳ್ಳಲು ಸಮಂಜಸ ಅವಕಾಶಗಳನ್ನು ನೀಡಿದ ಹೊರತು ಅಂಥ ಯಾವುದೇ ಕ್ರಮವನ್ನು ಕೈಗೊಳ್ಳತಕ್ಕದ್ದಲ್ಲ.
(4) (1)ನೇ ಉಪಪ್ರಕರಣದಲ್ಲಿ ಉಲ್ಲೇಖಿಸಲಾದ ನೋಟಿಸನ್ನು ಸ್ವೀಕರಿಸಿದ ಮೇಲೆ, ಸರ್ಕಾರವು ಸಂಬಂಧಿಸಿದ ನಿಯಂತ್ರಣಾ ಪ್ರಾಧಿಕಾರದೊಡನೆ ಸಮಾಲೋಚಿಸಿ, ವಿಶ್ವವಿದ್ಯಾಲಯವನ್ನು ಸಮಾಪನಗೊಳಿಸಲು ಉದ್ದೇಶಿಸಿದ ದಿನಾಂಕದಿಂದ, ವಿಶ್ವವಿದ್ಯಾಲಯದಲ್ಲಿ ನಿಯತ ವ್ಯಾಸಂಗ ಕ್ರಮಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಕೊನೆಯ ತಂಡ (ಬ್ಯಾಚ್) ತನ್ನ ವ್ಯಾಸಂಗ ಕ್ರಮ ಮುಗಿಸುವವರೆಗೆ ಶಾಸನಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ವಿಧಾನದಲ್ಲಿ ವಿಶ್ವವಿದ್ಯಾಲಯದ ಆಡಳಿತಕ್ಕೆ ಸೂಕ್ತ ವ್ಯವಸ್ಥೆಯನ್ನು ಮಾಡತಕ್ಕದ್ದು.