ಈ ಮುಂದಿನವರು ವಿಶ್ವವಿದ್ಯಾಲಯದ ಅಧಿಕಾರಿಗಳಾಗಿರತಕ್ಕದ್ದು, ಎಂದರೆ:-
(i) ಸಂದರ್ಶಕರು;
(ii) ಕುಲಾಧಿಪತಿಗಳು;
(iii) ಕುಲಪತಿಗಳು;
(iv) ಸಹಕುಲಪತಿಗಳು;
(v) ಕುಲಸಚಿವರು;
(vi) ಹಣಕಾಸು ಅಧಿಕಾರಿ; ಮತ್ತು
(vii) ಶಾಸನದ ಮೂಲಕ ವಿಶ್ವವಿದ್ಯಾಲಯದ ಅಧಿಕಾರಿಗಳೆಂದು ಘೋಷಿಸಬಹುದಾದಂಥ ಇತರ ಅಧಿಕಾರಿಗಳು.
(1) ಕರ್ನಾಟಕದ ರಾಜ್ಯಪಾಲರು ವಿಶ್ವವಿದ್ಯಾಲಯದ ಸಂದರ್ಶಕರಾಗಿರತಕ್ಕದ್ದು.
(2) ಸಂದರ್ಶಕರು ತಾವು ಹಾಜರಿದ್ದಾಗ ಪದವಿಗಳನ್ನು ಮತ್ತು ಡಿಪ್ಲೋಮಗಳನ್ನು ಪ್ರದಾನ ಮಾಡಲು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅಧ್ಯಕ್ಷತೆಯನ್ನು ವಹಿಸತಕ್ಕದ್ದು.
(3) ಸಂದರ್ಶಕರು ಈ ಮುಂದಿನ ಅಧಿಕಾರಗಳನ್ನು ಹೊಂದಿರತಕ್ಕದ್ದು, ಎಂದರೆ:-
(i) ವಿಶ್ವವಿದ್ಯಾಲಯದ ವ್ಯವಹಾರಗಳಿಗೆ ಸಂಬಂಧಿಸಿದಂತೆ, ಯಾವುದೇ ಪತ್ರ ಅಥವಾ ಮಾಹಿತಿಯನ್ನು ತರಿಸಿಕೊಳ್ಳುವುದು.
(ii) ಸಂದರ್ಶಕರು, ತಾವು ಸ್ವೀಕರಿಸಿದ ಮಾಹಿತಿಯ ಆಧಾರದ ಮೇಲೆ ವಿಶ್ವವಿದ್ಯಾಲಯದ ಯಾವುದೇ ಪ್ರಾಧಿಕಾರವು ಮಾಡಿದ ಯಾವುದೇ ಆದೇಶ, ನಡೆಸಿದ ವ್ಯವಹರಣೆಗಳು ಅಥವಾ ಕೈಗೊಂಡ ತೀರ್ಮಾನಗಳು ಈ ಅಧ್ಯಾದೇಶ, ವಿನಿಯಮಗಳು, ಪರ್ಯಾದೇಶಗಳು ಅಥವಾ ನಿಯಮಗಳಿಗೆ ಪೂರಕವಾಗಿಲ್ಲವೆಂದು ಮನಗಂಡರೆ ಅವರು ವಿಶ್ವವಿದ್ಯಾಲಯದ ಹಿತಾಸಕ್ತಿಯಿಂದ ತಾವು ಸೂಕ್ತವೆಂದು ಭಾವಿಸಬಹುದಾದಂಥ ನಿರ್ದೇಶನಗಳನ್ನು ಹೊರಡಿಸಬಹುದು ಮತ್ತು ಹಾಗೆ ಹೊರಡಿಸಿದ ನಿರ್ದೇಶನಗಳನ್ನು ಸಂಬಂಧಪಟ್ಟವರೆಲ್ಲರೂ ಪಾಲಿಸತಕ್ಕದ್ದು.