(1) ರಾಜ್ಯ ಸರ್ಕಾರವು, ಪರಿಶೋಧನಾ ಸಮಿತಿಯು ಮಾಡಿದ ಶಿಫಾರಸ್ಸುಗಳನ್ನು ಪರಿಶೀಲಿಸಿದ ತರುವಾಯ ಮತ್ತು ತಾನು ಅವಶ್ಯವೆಂದು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ತರುವಾಯ, ಪ್ರತಿಷ್ಠಾನವು 3ನೇ ಪ್ರಕರಣದ (3)ನೇ ಉಪ-ಪ್ರಕರಣದಲ್ಲಿ ಅಗತ್ಯಪಡಿಸಲಾದ ವಿವರಗಳನ್ನು ಒದಗಿಸಿದೆ ಎಂದು ಮನಗಂಡರೆ, ಅದು 46ನೇ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿರುವ ಶಾಶ್ವತ ಶಾಸನಬದ್ಧ ದತ್ತಿ ನಿಧಿಯನ್ನು ಸ್ಥಾಪಿಸಬೇಕೆಂದು ಪ್ರತಿಷ್ಠಾನಕ್ಕೆ ನಿರ್ದೇಶನ ನೀಡಬಹುದು.
(2) ಶಾಶ್ವತ ಶಾಸನಬದ್ಧ ದತ್ತಿ ನಿಧಿಯ ಸ್ಥಾಪನೆಯ ತರುವಾಯ, ರಾಜ್ಯಸರ್ಕಾರವು, ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ, ರಾಜ್ಯದಲ್ಲಿ “ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ” ಎಂಬ ಹೆಸರಿನ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಕ್ಕೆ ಮಂಜೂರಾತಿಯನ್ನು ನೀಡಬಹುದು.
(3) ಪ್ರಾಯೋಜಕ ಸಂಸ್ಥೆಯು ರಾಜ್ಯದಲ್ಲಿ ನಿರ್ಧರಿಸಬಹುದಾದಂಥ ಸ್ಥಳದಲ್ಲಿ ವಿಶ್ವವಿದ್ಯಾಲಯದ ಕೇಂದ್ರಕಾರ್ಯಸ್ಥಾನವು ಇರತಕ್ಕದ್ದು. ವಿಶ್ವವಿದ್ಯಾಲಯವು ತನ್ನ ಕ್ಯಾಂಪಸ್ಸುಗಳನ್ನು ಅಥವಾ ಪ್ರಾದೇಶಿಕ ಕೇಂದ್ರಗಳನ್ನು, ಅಧ್ಯಯನ ಕೇಂದ್ರಗಳನ್ನು, ಭಾರತದಲ್ಲಿ ಅಥವಾ ವಿದೇಶಗಳಲ್ಲಿ, ಆ ಬಗ್ಗೆ ಸಂಬಂಧಪಟ್ಟ ಸರ್ಕಾರಗಳ ಅನುಮತಿಯನ್ನು ಪಡೆದುಕೊಳ್ಳಬೇಕಾಗಿದ್ದಲ್ಲಿ, ಹಾಗೆ ಪಡೆದುಕೊಳ್ಳುವುದಕ್ಕೊಳಪಟ್ಟು, ಹೊಂದಿರತಕ್ಕದ್ದು.
(4) ಹಾಗೆ ಸ್ಥಾಪಿತವಾದ ವಿಶ್ವವಿದ್ಯಾಲಯವು ಅದರಲ್ಲಿನ ಕುಲಾಧಿಪತಿಯವರು, ಕುಲಪತಿಯವರು, ಪ್ರಬಂಧಕ ಮಂಡಳಿಯ ಸದಸ್ಯರುಗಳು ಆಡಳಿತ ಮಂಡಳಿಯ ಹಾಗೂ ಪ್ರಶಿಕ್ಷಣ ಪರಿಷತ್ತಿನ ಸದಸ್ಯರುಗಳಾಗಿ ತತ್ಕಾಲದಲ್ಲಿ ಹುದ್ದೆಯನ್ನು ಹೊಂದಿರುವವರು ಇವರೆಲ್ಲರೂ ಕೂಡಿ ಒಂದು ನಿಗಮಿತ ನಿಕಾಯವಾಗಿರತಕ್ಕದ್ದು. ಮತ್ತು ಅದು ವಿಶ್ವವಿದ್ಯಾಲಯದ ಹೆಸರಿನಲ್ಲಿ ದಾವೆ ಹೂಡಬಹುದು ಮತ್ತು ದಾವೆಗೊಳಗಾಗಬಹುದು.
(5) (2)ನೇ ಉಪ-ಪ್ರಕರಣದಡಿಯಲ್ಲಿ ವಿಶ್ವವಿದ್ಯಾಲಯವು ಸ್ಥಾಪನೆಯಾದ ಮೇಲೆ, ವಿಶ್ವವಿದ್ಯಾಲಯದ ಉದ್ದೇಶಕ್ಕಾಗಿ, ವಿಶ್ವವಿದ್ಯಾಲಯವು ಆರ್ಜಿಸಿದ, ರಚಿಸಿದ, ಏರ್ಪಾಟು ಮಾಡಿಕೊಂಡ ಅಥವಾ ಕಟ್ಟಲ್ಪಟ್ಟ ಭೂಮಿ ಮತ್ತಿತರ ಸ್ಥಿರ ಮತ್ತು ಚರ ಆಸ್ತಿಗಳು, ಅವು ಎಲ್ಲೇ ಇರಲಿ, ವಿಶ್ವವಿದ್ಯಾಲಯದಲ್ಲಿ ನಿಹಿತವಾಗಿರತಕ್ಕದ್ದು.
(6) ವಿಶ್ವವಿದ್ಯಾಲಯವು ಹೂಡಿದ ಅಥವಾ ಅದರ ವಿರುದ್ಧ ಹೂಡಲಾದ ಎಲ್ಲಾ ದಾವೆಗಳಲ್ಲಿ ಮತ್ತು ಇತರ ಕಾನೂನು ವ್ಯವಹರಣೆಗಳಲ್ಲಿ ವಾದ ಪತ್ರಗಳಿಗೆ ಕುಲಸಚಿವರು ಸಹಿ ಮಾಡಿ ಸತ್ಯಾಪನೆ ಮಾಡತಕ್ಕದ್ದು ಮತ್ತು ಅಂಥ ದಾವೆಗಳಲ್ಲಿನ ಮತ್ತು ವ್ಯವಹರಣೆಗಳಲ್ಲಿನ ಎಲ್ಲಾ ಆದೇಶಿಕೆಗಳನ್ನು ಕುಲಸಚಿವರಿಗೆ ನೀಡತಕ್ಕದ್ದು ಮತ್ತು ಅವರಿಗೆ ಜಾರಿ ಮಾಡತಕ್ಕದ್ದು.
(7) ವಿಶ್ವವಿದ್ಯಾಲಯದಲ್ಲಿನ ಭೂಮಿ, ಕಟ್ಟಡ ಮತ್ತು ಇತರ ಆಸ್ತಿಗಳನ್ನು ಇತರ ಯಾವುದೇ ಉದ್ದೇಶಕ್ಕಾಗಿ ಬಳಸತಕ್ಕದ್ದಲ್ಲ.